ಡಾ| ಹರ್ಷಕುಮಾರ್ ರೈ ಮಾಡಾವುರವರಿಗೆ ರಂಗತೇಜಸ್ವಿ ಪ್ರಶಸ್ತಿ ಪ್ರದಾನ
ಪುತ್ತೂರು: ತುಳುವೆರ ಉಡಲ್ ಜೋಡುಕಲ್ಲು ಇದರ ವತಿಯಿಂದ ಕಾಮಧೇನು ವಿವಿಧೋದ್ದೇಶ ಚಾರಿಟೇಬಲ್ ಟ್ರಸ್ಟ್ ಸಹಭಾಗಿತ್ವದಲ್ಲಿ ಉಚಿತ ನಾಟಕ ಪ್ರದರ್ಶನ ಮತ್ತು ಡಾ| ಹರ್ಷ ಕುಮಾರ್ ರೈ ಮಾಡಾವು ಅವರಿಗೆ ರಂಗ ತೇಜಸ್ವಿ ಪ್ರಶಸ್ತಿ ಪ್ರದಾನ ಸಮಾರಂಭವು ನ.6ರಂದು ಸಂಜೆ ಪುತ್ತೂರು ಪುರಭವನದಲ್ಲಿ ನಡೆಯಿತು.
ಸಂದೇಶ ಕೊಡುವ ನಾಟಕ ಅಗತ್ಯ: ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈಯವರು ಮಾತನಾಡಿ, ನಾಟಕದ ಕಲಾವಿದನಿಗೆ ಗೆಲುವು ಸಿಕ್ಕಾಗ ಆತ ಸಿನೇಮಾಕ್ಕೆ ಕಾಲಿಡುತ್ತಾನೆ. ಆಗ ನಾಟಕದ ತಂಡದಲ್ಲಿ ಕಲಾವಿದನ ಕೊರತೆ ಕಾಣುತ್ತದೆ. ಇಂತಹ ಪರಿಸ್ಥಿತಿಯನ್ನು ನಾನು ಅನುಭವಿಸಿದ್ದೇನೆ. ಆದರೆ ನಾಟಕ ಸಮಾಜಕ್ಕೆ ನೇರ ಸಂದೇಶ ಕೊಡುತ್ತದೆ. ಇವತ್ತು ತುಳುವೆರೆ ಉಡಲ್ನ ಸುರೇಶ್ ರೈ ಅವರೊಂದಿಗೆ ಪುತ್ತೂರಿನ ಜನರು ಸೇರಲಿದ್ದಾರೆ. ನಾಟಕ ಯಶಸ್ವಿ ಪ್ರದರ್ಶನ ಕಾಣಲಿ ಎಂದರು.
ಕಲಾ ಆಸಕ್ತಿಗೆ ಸದಾ ಪ್ರೋತ್ಸಾಹ ನೀಡುತ್ತೇನೆ: ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಗೌಡ ಚಿಲ್ತಡ್ಕರವರು ಮಾತನಾಡಿ, ನಾನು ತುಳುನಾಡಿನ ಸೊಸೆ. ತುಳು ನಾಟಕದ ಮೇಲೆ ನನಗೆ ಅಭಿಮಾನವಿದೆ. ನಮ್ಮ ಸಂಸ್ಕೃತಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟಕ್ಕೆ ತಲುಪಲು ಇಂತಹ ನಾಟಕಗಳು ಅಗತ್ಯವಿದೆ. ರಂಗಭೂಮಿಯ ಕಲಾವಿದರ ಕಷ್ಟ ನನಗೆ ಗೊತ್ತಿದೆ. ಕಲಾ ಆಸಕ್ತಿಗೆ ನಾನು ಸದಾ ಪ್ರೋತ್ಸಾಹ ನೀಡುತ್ತೇನೆ ಎಂದರು.
ಪ್ರೇಕ್ಷಕರಿಗೆ ನೇರ ಸಂದೇಶ ಮುಟ್ಟುವುದು ನಾಟಕದಿಂದ: ಚಲನಚಿತ್ರ ನಟ ಮತ್ತು ನಿರ್ಮಾಪಕ ಸುಂದರ ಹೆಗ್ಡೆ ಬಿ.ಇ.ಅವರು ಮಾತನಾಡಿ, ಕಲಾವಿದ ತನ್ನೊಳಗೆ ನೋವಿಟ್ಟುಕೊಂಡು ವೇದಿಕೆಯಲ್ಲಿ ಪರಕಾಯ ಪ್ರವೇಶ ಮಾಡುತ್ತಾನೆ. ಇಲ್ಲಿ ಸೀನೆಮಾದಂತಹ ರಿಟೇಕ್ ಇಲ್ಲ. ಏನಿದ್ದರೂ ಪ್ರೇಕ್ಷಕರಿಗೆ ನೇರವಾಗಿ ಮುಟ್ಟುವ ಸಂದೇಶ ಮಾತ್ರ. ಸುರೇಶ್ ಶೆಟ್ಟಿ ಜೋಡುಕಲ್ಲು ಅವರು ಕಲಾ ಕ್ಷೇತ್ರದಲ್ಲಿ ಪೆಟ್ಟು ತಿಂದರೂ ಮತ್ತೆ ಮೇಲೆ ಬಂದು ಕಲಾಕ್ಷೇತ್ರವನ್ನು ಪುನರಾರಂಭಿಸಿದ್ದಾರೆ. ಅವರಿಗೆ ಎಲ್ಲರ ಸಹಕಾರ ಅಗತ್ಯ ಎಂದರು.
ಕಲಾವಿದ ಟೆನ್ಷನ್ ಮಾಡಬೇಕಾಗಿಲ್ಲ: ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕರಾಗಿರುವ ವಿಜಯ ಕುಮಾರ್ ಕೋಡಿಯಾಲ್ಬೈಲ್ ಅವರು ಮಾತನಾಡಿ, ಕಲಾವಿದನಾದವ ಟೆನ್ಷನ್ ಮಾಡಬೇಕಾಗಿಲ್ಲ. ಸೋಲು ಗೆಲುವು ಇದ್ದದ್ದೆ. ನಾನೇ ಇದಕ್ಕೆ ಉದಾಹರಣೆ. ಸುರೇಶ್ ರೈ ಅವರ ನೇತೃತ್ವದ ತುಳುವರೆ ಉಡಲ್ ಜೋಡುಕಲ್ ಯಶಸ್ವಿಯಾಗಿ ಮುಂದುವರಿಯಲಿ ಎಂದು ಹಾರೈಸಿದರು.
ಎಲ್ಲಾ ನಾಟಕ ತಂಡಗಳು ಯಶಸ್ವಿಯಾಗಬೇಕು: ಚಲನಚಿತ್ರ ನಟ, ರಂಗಭೂಮಿ ಕಲಾವಿದ ಸುಂದರ ರೈ ಮಂದಾರ ಅವರು ಮಾತನಾಡಿ, ನಾಟಕದ ಕ್ಷೇತ್ರದಲ್ಲಿ ಎಷ್ಟು ನಾಟಕ ತಂಡಗಳಿವೆಯೋ ಅವೆಲ್ಲವೂ ಯಶಸ್ವಿಯಾಗಬೇಕು. ಆಗ ನಮ್ಮ ಸಂಸ್ಕೃತಿ ಉಳಿಯುತ್ತದೆ. ಸಿನಿಮಾ ಕ್ಷೇತ್ರಕ್ಕಿಂತಲೂ ನಾಟಕ ರಂಗ ಸಮಾಜದ ಅಗತ್ಯತೆಯಲ್ಲಿ ಒಂದಾಗಿದೆ. ಸಣ್ಣ ಕಲಾವಿದನಿಗೂ ನಾಟಕ ರಂಗ ಮಹತ್ವ ನೀಡುತ್ತದೆ ಎಂದರು.
ಪ್ರಶಸ್ತಿ ಸಂತೋಷ ತಂದಿದೆ: ಉದ್ಯಮಿ ಹಾಗೂ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವ ಡಾ| ಹರ್ಷಕುಮಾರ್ ರೈ ಮಾಡಾವುರವರು ಮಾತನಾಡಿ, ನನಗೆ ರಾಷ್ಟ್ರಮಟ್ಟದ ಪ್ರಶಸ್ತಿ ಲಭಿಸಿದರೂ ಅದಕ್ಕಿಂತ ಹೆಚ್ಚಿನ ಸಂತೋಷ ಇವತ್ತು ಆಗಿದೆ. ನಾಟಕ ರಂಗದ ಪ್ರಶಸ್ತಿಗೆ ಬೆಲೆ ಕಟ್ಟಲಾಗದು. ಹಾಗಾಗಿ ಪ್ರಶಸ್ತಿ ಸಂತೋಷ ತಂದಿದೆ. ಅದೇ ರೀತಿ ಕಲಾಕ್ಷೇತ್ರಕ್ಕೆ ನನ್ನ ನಿತ್ಯ ಸಹಕಾರ ನೀಡುತ್ತೇನೆ ಎಂದರು.
ನಾಟಕ ತಂಡದಿಂದ ಸಮಾಜಕ್ಕೆ ಉತ್ತಮ ಸಂದೇಶ ಸಿಗಲಿ: ಮಂಗಲ್ಪಾಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ವಿಜಯ ಪಂಡಿತ್ರವರು ಮಾತನಾಡಿ, ಒಳ್ಳೆಯ ಕಾರ್ಯ ಮಾಡಲು ಹೃದಯ ಶ್ರೀಮಂತಿಕೆ ಇರಬೇಕು. ಆ ಹೃದಯ ಶ್ರೀಮಂತಿಕೆ ನಾಟಕ ತಂಡದ ಹೆಸರಿನಲ್ಲೇ ಇದೆ. ಉಡಲ್ ಎಂಬ ಅರ್ಥಕ್ಕೆ ಸರಿಯಾದ ಅಭಿನಯದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಿಗಲಿ. ಸುರೇಶ್ ರೈ ಜೋಡುಕಲ್ಲು ಅವರ ಜೀವನದ ಎಲ್ಲಾ ಕ್ಷೇತ್ರದಲ್ಲೂ ಜೊತೆಗಿರುತ್ತೇನೆ ಎಂದರು. ಶ್ರೀ ದತ್ತಕೃಪಾ ಫೈನಾನ್ಸ್ ಕಾರ್ಪೋರೇಶನ್ ಮಾಲಕ ಶ್ರೀಧರ್ ಶೆಟ್ಟಿ ಗುಬ್ಯ ಮೇಗಿನಗುತ್ತು ಶುಭ ಹಾರೈಸಿದರು.
ಸರಿತಾ ಸುರೇಶ್ ಶೆಟ್ಟಿ, ಬಾರ್ತ್ ಕುಲಾಲ್, ಪ್ರಸಾದನ ಕಲಾವಿದ ಕಿಶೋರ್ ಕುಮಾರ್ ಉಪ್ಪಿನಂಗಡಿ, ಕಲಾವಿದ ಮುಖೇಶ್ ಶೆಟ್ಟಿ, ಮೋಹನ್ ಉಚ್ಚಿಲ, ಬಾಲಕೃಷ್ಣ ಜೋಡುಕಲ್ ಅತಿಥಿಗಳನ್ನು ಗೌರವಿಸಿದರು. ತುಳುವೆರೆ ಉಡಲ್ ಜೋಡುಕಲ್ಲು ಇದರ ಸುರೇಶ್ ರೈ ಜೋಡುಕಲ್ಲು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮನ್ಮಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ತುಳುವೆರ ಉಡಲ್ ಜೋಡುಕಲ್ಲು ಕಲಾವಿದರಿಂದ ನವೀನ್ ಸಾಲ್ಯಾನ್ ಪಿತ್ರೋಡಿ ರಚಿಸಿ ಸುರೇಶ್ ಶೆಟ್ಟಿ ಜೋಡುಕಲ್ಲು ನಿರ್ದೇಶಿಸಿರುವ ’ಮದ್ಮೆ ಒಂಜಿ ಆಂಡ್ಗೆತ್ತ’ ತುಳು ಹಾಸ್ಯಮಯ ಸಂಸಾರಿಕ ನಾಟಕದ ಉಚಿತ ಪ್ರದರ್ಶನ ನಡೆಯಿತು.
ರಂಗ ತೇಜಸ್ವಿ ಬಿರುದು ಪ್ರದಾನ
ರಂಗಭೂಮಿ, ಕಲೆ ಮತ್ತು ನಾಟಕ ತಂಡಕ್ಕೆ ಸಹಕಾರ ನೀಡುತ್ತಿರುವ ಪುತ್ತೂರಿನ ಉದ್ಯಮಿ ಹಾಗೂ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವ ಡಾ. ಹರ್ಷಕುಮಾರ್ ರೈ ಮಾಡಾವುರವರಿಗೆ ತುಳುವೆರೆ ಉಡಲ್ ಜೋಡುಕಲ್ಲು ಕಲಾತಂಡದ ಪರವಾಗಿ ಗಣ್ಯರು ’ರಂಗತೇಜಸ್ವಿ’ ಬಿರುದು ನೀಡಿ ಗೌರವಿಸಿದರು.