ತಾಲೂಕು ಕ್ರೀಡಾಂಗಣದಲ್ಲಿ ಅಂಬಿಕಾ ಪದವಿ ಪೂರ್ವ ವಿದ್ಯಾಲಯಗಳ ವಾರ್ಷಿಕ ಕ್ರೀಡಾಕೂಟ

0

ಮಾನಸಿಕ ಒತ್ತಡದಿಂದ ದೂರವಾಗಲು ಕ್ರೀಡೆ ಹಾಗೂ ಯೋಗ ಅಗತ್ಯ : ರವಿ ಬಿ.ಎಸ್

ಪುತ್ತೂರು: ಕ್ರೀಡೆ ಎನ್ನುವುದು ಸಂಘಟಿತ, ಸ್ಪರ್ಧಾತ್ಮಕ, ಕೌಶಲ್ಯದಿಂದ ಕೂಡಿದ ದೈಹಿಕ ಚಟುವಟಿಕೆ. ಇಂತಹ ಚಟುವಟಿಕೆ ಇಲ್ಲದಿದ್ದರೆ ಸ್ಥೂಲಕಾಯ, ಹೃದಯ ಸಂಬಂಧಿ ಕಾಯಿಲೆಗಳು ಚಿಕ್ಕ ವಯಸ್ಸಿನಲ್ಲೇ ಕಾಡಲು ಆರಂಭಿಸುತ್ತವೆ. ದೈಹಿಕ, ಮಾನಸಿಕ ಒತ್ತಡದಿಂದ ದೂರವಾಗಲು ಕ್ರೀಡೆ, ಯೋಗ ಉಪಯೋಗಕಾರಿ. ಎಲ್ಲರೂ ಪ್ರತಿನಿತ್ಯ ಕ್ರೀಡೆಯಲ್ಲಿ ಭಾಗವಹಿಸಿ ಸದೃಢ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಪುತ್ತೂರು ಗ್ರಾಮೀಣ ವಿಭಾಗದ ಸರ್ಕಲ್ ಇನ್ಸ್‌ಪೆಕ್ಟರ್ ರವಿ ಬಿ.ಎಸ್ ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆ ಹಾಗೂ ಬಪ್ಪಳಿಗೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯಗಳ ಪ್ರಸಕ್ತ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ನ.7ರಂದು ಕೊಂಬೆಟ್ಟಿನ ತಾಲೂಕು ಕ್ರೀಡಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.

ತಂತ್ರಜ್ಞಾನವನ್ನು ಅಗತ್ಯಕ್ಕೆ ಮಾತ್ರ ಬಳಸಬೇಕು. ವಿದ್ಯಾರ್ಥಿಗಳು ಮೊಬೈಲ್ ಅನ್ನು ಅನಗತ್ಯವಾಗಿ ಬಳಸಬಾರದು. ದೇಶ ಉಳಿಯಬೇಕಾದರೆ, ನಮ್ಮನ್ನು ನಾವು ರಕ್ಷಿಸಬೇಕಾದರೆ ಶಕ್ತಿ ಬೇಕು. ದೇಹದಲ್ಲಿ ಪ್ರತಿರೋಧಕ ಶಕ್ತಿ ಬೆಳೆಯಬೇಕಾದರೆ, ರೋಗದಿಂದ ದೂರವಿರಬೇಕಾದರೆ ದೈಹಿಕ ಚಟುವಟಿಕೆಗಳ ಅಗತ್ಯವಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಮಾತನಾಡಿ ಶೈಕ್ಷಣಿಕ ಇತಿಹಾಸದಲ್ಲಿ ಮೈಲುಗಲ್ಲನ್ನು ಸಾಧಿಸಿರುವ ವಿದ್ಯಾಸಂಸ್ಥೆ ಅಂಬಿಕಾ. ಪುತ್ತೂರಿನಲ್ಲಿ ವೀರಯೋಧರ ಸ್ಮರಣಾರ್ಥವಾಗಿ ನಿರಂತರ ಜ್ಯೋತಿ ಬೆಳಗುತ್ತಿರುವ ಅಮರ್ ಜವಾನ್ ಜ್ಯೋತಿಯನ್ನು ಸ್ಥಾಪಿಸಿದ ಕೀರ್ತಿ ಈ ಸಂಸ್ಥೆಗಿದೆ ಎಂದು ಅಭಿಮಾನ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಆವಶ್ಯಕವಾದ ಎಲ್ಲಾ ರೀತಿಯ ಶಿಕ್ಷಣವನ್ನು ಕೊಡುವ ನಿಟ್ಟಿನಲ್ಲಿ ಕ್ರೀಡೋತ್ಸವವನ್ನು ಏರ್ಪಡಿಸಲಾಗಿದೆ. ಸೋಲು ಗೆಲುವು ಮುಖ್ಯವಲ್ಲ. ಆತ್ಮವಿಶ್ವಾಸದಿಂದ ಸ್ಪರ್ಧಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕ್ರೀಡಾಪಟುಗಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿದರು.

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗ ಕೋಶಾಧಿಕಾರಿ ರಾಜಶ್ರೀ ನಟ್ಟೋಜ, ಆಡಳಿತ ಮಂಡಳಿಯ ಸದಸ್ಯ ಸುರೇಶ್ ಶೆಟ್ಟಿ, ಉದ್ಯಮಿ ಶಿವರಾಮ ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಜಿಲ್ಲಾಮಟ್ಟ, ರಾಜ್ಯಮಟ್ಟ, ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ವಿಜೇತರಾದ ಕ್ರೀಡಾಪಟುಗಳಾದ ತನ್ಮಯಿ, ರಿಶಿಕ್, ಶ್ರೀನಿಧಿ ಶಂಕರ್, ಚರಣ್, ಹನಿ, ಜೀವನ್ ಕೆ.ಎಸ್. ಕ್ರೀಡಾಜ್ಯೋತಿಯನ್ನು ಅತಿಥಿಗಳಿಗೆ ಹಸ್ತಾಂತರಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ದೈಹಿಕ ಶಿಕ್ಷಣ ನಿರ್ದೇಶಕರಾದ ವಿಶ್ವೇಶ್ವರ ಭಟ್, ನವೀನ್, ಸುಖಾಂತ್, ಸುಧಾಕರ್ ರೈ ಕ್ರೀಡಾಕೂಟದಲ್ಲಿ ಉಪಸ್ಥಿತರಿದ್ದು ಸಹಕರಿಸಿದರು. ಅಂಬಿಕಾ ಪದವಿಪೂರ್ವ ವಿದ್ಯಾಲಯಗಳ ಆರ್ಯಭಟ, ಕಪಿಲ, ಕೌಟಿಲ್ಯ, ಕಣಾದ, ಪಾಣಿನಿ, ಮೈತ್ರೇಯಿ, ನಲಂದಾ, ತಕ್ಷಶಿಲಾ, ಚಾಣಕ್ಯ, ಸುಶ್ರುತ, ಭಾಸ್ಕರ, ಚರಕ, ಪತಂಜಲಿ ತಂಡದ ವಿದ್ಯಾರ್ಥಿಗಳು ಪಥ ಸಂಚಲನದ ಮೂಲಕ ಅತಿಥಿಗಳಿಗೆ ಗೌರವ ಸಲ್ಲಿಸಿದರು.

ವಿದ್ಯಾರ್ಥಿನಿಯರಾದ ಶರಧಿ, ವೈಷ್ಣವಿ ಪ್ರಾರ್ಥಿಸಿದರು. ಅಂಬಿಕಾ ವಸತಿಯುತ ಪದವಿ ಪೂರ್ವ ವಿದ್ಯಾಲಯದ ಪ್ರಾಚಾರ್ಯೆ ಸುಚಿತ್ರಾ ಪ್ರಭು ಸ್ವಾಗತಿಸಿ ನೆಲ್ಲಿಕಟ್ಟೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ವಂದಿಸಿದರು. ಉಪನ್ಯಾಸಕಿ ಅಕ್ಷತಾ ಎಂ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here