ಪುತ್ತೂರು-ಉಪ್ಪಿನಂಗಡಿ ರಸ್ತೆ ಕಾಮಗಾರಿ ಅವ್ಯವಸ್ಥೆ ಖಂಡಿಸಿ ರೈತ ಸಂಘದಿಂದ ಬೆಳ್ಳಿಪ್ಪಾಡಿ ಕ್ರಾಸ್ ಬಳಿ ಪ್ರತಿಭಟನೆ

0

ಪಿಡಬ್ಲ್ಯುಡಿ ಅಧಿಕಾರಿಗಳ ಭೇಟಿ: ಡಿಸೆಂಬರ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸುವ ಭರವಸೆ-ಪ್ರತಿಭಟನೆ ವಾಪಸ್

ಡಿಸೆಂಬರ್ ತಿಂಗಳ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳದೇ ಇದ್ದಲ್ಲಿ ತೀವ್ರ ಪ್ರತಿಭಟನೆಯ ಎಚ್ಚರಿಕೆ

ಪುತ್ತೂರು: ಪುತ್ತೂರು-ಉಪ್ಪಿನಂಗಡಿ ರಸ್ತೆಯ ಚತುಷ್ಪಥ ಕಾಮಗಾರಿಯ ಅವ್ಯವಸ್ಥೆ ಖಂಡಿಸಿ ಮತ್ತು ಶೀಘ್ರವೇ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿ ನ.7ರಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ವತಿಯಿಂದ ಕೋಡಿಂಬಾಡಿಯ ಬೆಳ್ಳಿಪ್ಪಾಡಿ ಕ್ರಾಸ್ ಬಳಿ ಪ್ರತಿಭಟನೆ ನಡೆಯಿತು.
ಕಾಮಗಾರಿ ಪೂರ್ಣಗೊಳಿಸಲು ಒಂದು ತಿಂಗಳ ಕಾಲಾವಕಾಶ ನೀಡಿದ ಪ್ರತಿಭಟನಾಕಾರರು ಬೇಡಿಕೆ ಈಡೇರದೇ ಇದ್ದಲ್ಲಿ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಪ್ರಮೋದ್ ಪ್ರತಿಭಟನಾಕಾರರ ಸಮಸ್ಯೆಗಳನ್ನು ಆಲಿಸಿದರಲ್ಲದೆ ಕಾಮಗಾರಿ ವಿಳಂಬದ ಬಗ್ಗೆ ಮನವರಿಕೆ ಮಾಡಿದರು. ಡಿಸೆಂಬರ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು. ಬಳಿಕ ಪ್ರತಿಭಟನೆ ವಾಪಸ್ ಪಡೆದುಕೊಳ್ಳಲಾಯಿತು.

ಲೋಕೋಪಯೋಗಿ ಇಲಾಖೆ ಕಛೇರಿಗೆ ಬೀಗ ಜಡಿದು ಪ್ರತಿಭಟನೆ-ರೂಪೇಶ್ ರೈ:

ಪ್ರತಿಭಟನೆ ಉದ್ದೇಶಿಸಿ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಸಂಚಾಲಕ ರೂಪೇಶ್ ರೈ ಅಲಿಮಾರ ಮಾತನಾಡಿ, ಪುತ್ತೂರು-ಉಪ್ಪಿನಂಗಡಿ ರಸ್ತೆಯಲ್ಲಿ ಕಳೆದ ಮೂರು ವರ್ಷಗಳಿಂದ ಕಾಮಗಾರಿ ನಡೆಯುತ್ತಿದೆ. ಇವರಿಗೆ ರಸ್ತೆ ಮಾಡಲು ಹೇಳಿದ್ದು ಯಾರು, ಕಾಮಗಾರಿಗೆ ನಿಗದಿತ ಕಾಲಮಿತಿ ಇಲ್ಲವೇ, ನಿಯಮಗಳು ಇಲ್ಲವೇ ಎಂದು ಪ್ರಶ್ನಿಸಿದರು. ಸಂಬಂಧಪಟ್ಟವರು ಕೂಲಂಕುಷವಾಗಿ ಪರಿಶೀಲಿಸಿ ಮಾಹಿತಿ ನೀಡಬೇಕು. ಕಾಮಗಾರಿಯನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸಬೇಕು. ಇಲ್ಲದಿದ್ದಲ್ಲಿ ಲೋಕೋಪಯೋಗಿ ಇಲಾಖೆ‌ ಕಛೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಸಿದರು. ರಸ್ತೆಯಲ್ಲಿ ಅರ್ಧಂಬರ್ದ ಕಾಮಗಾರಿ ನಡೆದಿದೆ. ಕಾಮಗಾರಿ ನಡೆದ ಜಾಗದಲ್ಲಿಯೂ ರಸ್ತೆ ಕೆಟ್ಟು ಹೋಗಿದೆ. ನಮ್ಮ ತೆರಿಗೆಯ ಹಣದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಬ್ಯಾನರ್ ಅಳವಡಿಸದಂತೆ ಸುಪ್ರೀಂ ಕೋರ್ಟ್‌ನ ಆದೇಶವಿದ್ದರೂ ಅನುದಾನಗಳ ಬಗ್ಗೆ ಬ್ಯಾನರ್ ಅಳವಡಿಸಿ, ಜಬರ್‌ದಸ್ತ್ ರಾಜಕೀಯ ಮಾಡುತ್ತಾರೆ. ಇಂಜಿನಿಯರ್ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಈ ರೀತಿ ಆಗುತ್ತಿದೆ. ಸದರಿ ಕಾಮಗಾರಿಯನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸದಿದ್ದಲ್ಲಿ ತೀವ್ರ ಹೋರಾಟ ನಡೆಸುವುದಾಗಿ ರೂಪೇಶ್ ರೈ ಹೇಳಿದರು.

40% ಕಮಿಷನ್‌ಗಾಗಿ ಕಾಮಗಾರಿ ವಿಳಂಬ-ಡಾ.ರಾಜಾರಾಮ ಕೆ.ಬಿ:

ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ ಮಾತನಾಡಿ, ರಸ್ತೆ ಕಾಮಗಾರಿಯು ೪೦% ಕಮೀಷನ್‌ಗಾಗಿ ವಿಳಂಬವಾಗುತ್ತಿದೆ ಎಂದು ಆರೋಪಿಸಿದರು. ಈ ಭಾಗದ ರೈತರು ರಸ್ತೆ ನಿರ್ಮಾಣಕ್ಕಾಗಿ ತಮ್ಮ ಕೃಷಿ ಭೂಮಿಯನ್ನು ನೀಡಿದ್ದಾರೆ. ಈಗ ಜಾಗವೂ ಇಲ್ಲ. ರಸ್ತೆಯೂ ಇಲ್ಲ ಎನ್ನುವಂತಾಗಿದೆ. ಜನ ವಿರೋಧಿ, ರೈತ ವಿರೋಧಿ ನೀತಿಯ ಮೂಲಕ ಸರಕಾರ ದುರಾಡಳಿತ ನಡೆಸುತ್ತಿದೆ. ರೈತ ವಿರೋಧಿ ನೀತಿ ಜಾರಿಗೊಳಿಸುವ ಮುಖಾಂತರ ರೈತರ ಬೆನ್ನುಮೂಳೆ ಮುರಿಯವ ಕೆಲಸ ಮಾಡಿದ್ದಾರೆ ಎಂದು ಹೇಳಿದ ಅವರು ಕಬಕ-ವಿಟ್ಲ ರಸ್ತೆ ಕಾಮಗಾರಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುವುದಾಗಿ ತಿಳಿದಾಗ ಅಣಬೆಯಂತೆ ರಾತ್ರಿ ಬೆಳಗಾಗುವಷ್ಟರಲ್ಲಿ ಬಿಜೆಪಿಯವರು ಬ್ಯಾನರ್‌ಗಳನ್ನು ಅಳವಡಿಸಿರುವುದಲ್ಲದೆ ಒಂದು ತಿಂಗಳಲ್ಲಿ ಕಾಮಗಾರಿ ನಡೆಸುವುದಾಗಿ ತಿಳಿಸಿದ್ದರು. ಈಗ ಒಂದು ತಿಂಗಳು ಕಳೆದರೂ ಕಾಮಗಾರಿ ಪ್ರಾರಂಭಿಸಿಲ್ಲ ಎಂದು ಆರೋಪಿಸಿದರು.

ಸರಿಯಾದ ಮಾಹಿತಿ ನೀಡುತ್ತಿಲ್ಲ-ಮುರಳೀಧರ ರೈ

ಕೋಡಿಂಬಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಎ. ಮುರಳೀಧರ ರೈ ಮಠಂತಬೆಟ್ಟು ಮಾತನಾಡಿ, ಕಳೆದ ಎರಡು ವರ್ಷಗಳಿಂದ ಈ ರಸ್ತೆಯಲ್ಲಿ ವಾಹನ ಸವಾರರು ಹಾಗೂ ಸಾರ್ವಜನಿಕರು ಸಂಕಷ್ಟ ಪಡುತ್ತಿದ್ದಾರೆ. ಈ ರಸ್ತೆ ಅವ್ಯವಸ್ಥೆಯ ಆಗರವಾಗಿದೆ. ರಸ್ತೆ ನಿರ್ಮಾಣಕ್ಕಾಗಿ ಜಾಗ ಸ್ವಾಧೀನಪಡಿಸಿಕೊಂಡಿದ್ದರೂ ಪರಿಹಾರ ಇನ್ನೂ ನೀಡಿಲ್ಲ. ವಿಚಾರಿಸಿದರೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಇದಕ್ಕಾಗಿ ಜನರು ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಒಂದು ತಿಂಗಳ ಕಾಲಾವಕಾಶ-ಇಬ್ರಾಹಿಂ ಖಲೀಲ್:

ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಮಾತನಾಡಿ, ನಮ್ಮ ರಸ್ತೆ ನಮ್ಮ ಹಕ್ಕು. ಈ ರಸ್ತೆಯಲ್ಲಿ ಕಳೆದ ಹಲವು ಸಮಯಗಳಿಂದ ಸಂಕಷ್ಟ ಅನುಭವಿಸುತ್ತಿದ್ದೇವೆ. ಗುತ್ತಿಗೆದಾರರು ಸಮರ್ಪಕವಾಗಿ ಕಾಮಗಾರಿ ನಡೆಸುತ್ತಿಲ್ಲ. ಇದರ ಬಗ್ಗೆ ರಾಜಕೀಯ ನಾಯಕರುಗಳು ಯಾರೂ ಮಾತನಾಡುತ್ತಿಲ್ಲ. ರಸ್ತೆ ಅವ್ಯವಸ್ಥೆಯ ಬಗ್ಗೆ ಇಂದು ಸಾಂಕೇತಿಕ ಪ್ರತಿಭಟನೆ ನಡೆಸಲಾಗಿದೆ. ಕಾಮಗಾರಿ ಪೂರ್ಣಗೊಳಿಸಲು ಒಂದು ತಿಂಗಳ ಕಾಲಾವಕಾಶ ನೀಡಲಾಗುವುದು. ಒಂದು ತಿಂಗಳಲ್ಲಿ ಪೂರ್ಣಗೊಳಿಸದಿದ್ದರೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.

ಮನೆಯ ರಸ್ತೆ ಸಂಪರ್ಕ ಕಡಿತ-ಹರೀಶ್ ಆಳ್ವ:
ಸ್ಥಳೀಯ ನಿವಾಸಿ ಹರೀಶ್ ಆಳ್ವ ಮಾತನಾಡಿ, ರಸ್ತೆ ಕಾಮಗಾರಿಗಾಗಿ ನನ್ನ ಮನೆಯ ರಸ್ತೆಯನ್ನು ಅಗೆದು ಹಾಕಿದ್ದಾರೆ. ಈಗ ಪಕ್ಕದ ಮನೆಯವರ ಜಾಗದಲ್ಲಿ ಹೋಗುವಂತಾಗಿದೆ. ಪೈಪ್ ಲೈನ್‌ಗೆ ಹಾನಿಯಾಗಿದ್ದು ಈ ಭಾಗದಲ್ಲಿ ಕುಡಿಯಲು ನೀರಿಲ್ಲದೆ ಕೊಡಪಾನದಲ್ಲಿ ಹೊತ್ತುಕೊಂಡು ಹೋಗುವಂತಾಗಿದೆ. ಸರಿಯಾದ ದಾರಿಯಿಲ್ಲದೆ ಶಾಲಾ ಮಕ್ಕಳು ಸಂಕಷ್ಟ ಪಡುತ್ತಿದ್ದಾರೆ. ನನ್ನ ಮಗಳಿಗೆ ಶಸ್ತ್ರ ಚಿಕಿತ್ಸೆಯಾದ ಸಂದರ್ಭದಲ್ಲಿ ಹೊತ್ತುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈಗ ತಂತ್ರಜ್ಞಾನ ಸಾಕಷ್ಟು ಇದ್ದರೂ ಕಾಮಗಾರಿ ವಿಳಂಬವಾಗುತ್ತಿರುವುದು ವಿಪರ್ಯಾಸವಾಗಿದೆ ಎಂದರು.

ಯಾವ ಶಿಕ್ಷೆಯಾದರೂ ಹೋರಾಟ-ಜಗನ್ನಾಥ ಶೆಟ್ಟಿ:
ಕೋಡಿಂಬಾಡಿ ಗ್ರಾ.ಪಂ ಸದಸ್ಯ ಜಗನ್ನಾಥ ಶೆಟ್ಟಿ ನಡುಮನೆ ಮಾತನಾಡಿ, ಒಂದು ಟೆಂಡರ್ ಮುಗಿಯುವ ಮೊದಲೇ ಇನ್ನೊಂದು ಟೆಂಡರ್ ನಡೆಸಿ ರಸ್ತೆ ಅಗೆದು ಹಾಕಿದ್ದಾರೆ. ಗ್ರಾಮ ಪಂಚಾಯತ್‌ನ ಅನುದಾನವನ್ನು ಶಾಸಕರ ಅನುದಾನ ಎಂದು ಬ್ಯಾನರ್ ಹಾಕಲಾಗುತ್ತದೆ. ಪರವಾನಿಗೆ ಇಲ್ಲದೆ ಬ್ಯಾನರ್‌ಗಳನ್ನು ಅಳವಡಿಸುತ್ತಾರೆ. ಅದು ಬಿದ್ದು ಹರಿದು ಹೋದರೆ ದೂರು ನೀಡುತ್ತಾರೆ. ರಸ್ತೆ ಕಾಮಗಾರಿಯಿಂದಾಗಿ ಪಂಚಾಯತ್‌ನ ಕುಡಿಯುವ ನೀರಿನ ಪೈಪ್ ಲೈನ್‌ಗೆ ಹಾನಿಯಾಗಿದ್ದು ಇನ್ನೂ ಸರಿಪಡಿಸಿಲ್ಲ. ಇದನ್ನು ಶೀಘ್ರವಾಗಿ ಮಾಡಬೇಕು. ಇಲ್ಲದಿದ್ದಲ್ಲಿ ಯಾವುದೇ ಶಿಕ್ಷೆಯಾದರೂ ಹೋರಾಟ ಮಾಡುವುದಾಗಿ ಹೇಳಿದರು.

ರಸ್ತೆ ತಡೆದು ಪ್ರತಿಭಟನೆ-ಕೇಶವ ಭಂಡಾರಿ ಕೈಪ:
ಪ್ರಗತಿಪರ ಕೃಷಿಕ‌ ಕೇಶವ ಭಂಡಾರಿ ಕೈಪ ಮಾತನಾಡಿ, ರಸ್ತೆಯ ಎರಡೂ ಭಾಗಗಳಲ್ಲಿಯೂ ಅಗೆದು ಹಾಕಿದ್ದು ವಾಹನ ಸವಾರರು ತೀರಾ ಸಂಕಷ್ಟ ಅನುಭವಿಸುತ್ತಿದ್ದಾರೆ. ಕಾಮಗಾರಿ ಪ್ರಾರಂಭಿಸಿ ಎರಡು ವರ್ಷ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ಎಲ್ಲಾ ಕಡೆ ರಸ್ತೆಯನ್ನು ಅಗೆದು ಹಾಕಲಾಗಿದೆ. ಕಾಮಗಾರಿಯನ್ನು ಶೀಘ್ರ ಪ್ರಾರಂಭಿಸಿ, ಒಂದು ತಿಂಗಳೊಳಗೆ ಪೂರ್ಣಗೊಳಿಸಬೇಕು. ಇಲ್ಲದಿದ್ದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಗುವುದು ಎಂದರು.

ಇವರ ಹಣ ಬ್ಯಾನರ್‌ನಲ್ಲಿ ಮಾತ್ರ-ಸುಬ್ರಹ್ಮಣ್ಯ ಶೆಟ್ಟಿ

ರೈತ ಮುಖಂಡ ಸುಬ್ರಹ್ಮಣ್ಯ ಶೆಟ್ಟಿ ರೆಂಜಾಜೆ ಮಾತನಾಡಿ, ಈ ರಸ್ತೆ ರೈತರಿಗೆ ಮಾತ್ರವಲ್ಲ. ಪ್ರತಿಯೊಬ್ಬರಿಗೂ ಅವಶ್ಯಕ. ಇವರು ನೀಡುವ ಹಣ ಬ್ಯಾನರ್‌ಗಳಲ್ಲಿ ಮಾತ್ರ. ಅದೂ ನಮ್ಮ ಹಣ. ಹಾಗಾಗಿ ನಮಗೂ ಕೇಳುವ ಹಕ್ಕಿದೆ. ಯಾವುದೇ ಕಾಮಗಾರಿಗೂ ನಿಗದಿತ ಕಾಲಮಿತಿ ಇರುತ್ತದೆ. ನಾವು ಇಷ್ಟು ಸಮಯ ಕಾದು ನೋಡಿದ್ದೇವೆ. ಈಗ ನಾವು ಮಾತನಾಡುತ್ತೇವೆ. ಅವರ ಅಪ್ಪನ ಮನೆಯಿಂದ ತರುವ ಹಣವಲ್ಲ. ರಸ್ತೆಯ ಎರಡೂ ಭಾಗಗಳಲ್ಲಿ ಹೊಂಡ ಮಾಡಿದ್ದು ಬೆಂಗಳೂರಿನಲ್ಲಿ ಆಗಿರುವ ದುರಂತಗಳು ಇಲ್ಲಿ ನಡೆಯಬಾರದು ಎಂದರು.

ಮಾಡಿದ ಗುಂಡಿಗಳನ್ನು ಮುಚ್ಚಿಸಿಕೊಡಿ-ಸೀತಾರಾಮ ಶೆಟ್ಟಿ ಹೆಗ್ಡೆ ಹಿತ್ಲು:
ಪ್ರಗತಿಪರ ಕೃಷಿಕರಾದ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ತಿಲು ಮಾತನಾಡಿ, ರಸ್ತೆ ಮಾಡಲು ನಾವು ಹೇಳಿಲ್ಲ. ಹಿಂದೆ ಯಾವುದೇ ತೊಂದರೆಯಿಲ್ಲದೆ ವಾಹನದಲ್ಲಿ ಹೋಗಬಹುದಾಗಿತ್ತು. ಈಗ ಎಲ್ಲಾ ಕಡೆ ಅಗೆದು ಹಾಕಿದ್ದಾರೆ. ರಸ್ತೆಯ ಎರಡೂ ಕಡೆ ಗುಂಡಿಗಳಿದ್ದು ರಾತ್ರಿ ವೇಳೆ ವಾಹನ ಸಂಚಾರ ತೀರಾ ಸಮಸ್ಯೆ ಉಂಟಾಗಿದೆ. ಹೊಸ ರಸ್ತೆ ನಿರ್ಮಾಣ ಮಾಡದಿದ್ದರೂ ತೊಂದರೆಯಿಲ್ಲ. ಮಾಡಿದ ಗುಂಡಿಗಳನ್ನು ಮುಚ್ಚಿಸಿಕೊಡಿ ಎಂದು ಹೇಳಿದರು

ತೀವ್ರ ಹೋರಾಟ- ಮಾರ್ಷೆಲ್ ವೇಗಸ್:
ಬೆಳ್ಳಿಪ್ಪಾಡಿ ಘಟಕದ ಅಧ್ಯಕ್ಷ ಮಾರ್ಷಲ್ ವೇಗಸ್ ಮಾತನಾಡಿ, ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಇಲ್ಲದಿದ್ದಲ್ಲಿ ರೈತ ಸಂಘದಿಂದ ತೀವ್ರ ಹೋರಾಟ ನಡೆಸುವುದಾಗಿ ತಿಳಿಸಿದರು.

ಪಿಡಬ್ಲ್ಯೂಡಿ ಅಧಿಕಾರಿಗಳ ಭೇಟಿ:
ಪ್ರತಿಭಟನಾ ಸ್ಥಳಕ್ಕೆ ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಪ್ರಮೋದ್ ಭೇಟಿ ನೀಡಿ ಪ್ರತಿಭಟನಾಕಾರರ ಮನವಿ ಆಲಿಸಿದರು. ಬಳಿಕ ಮಾತನಾಡಿದ ಅವರು, ರಸ್ತೆ ಕಾಮಗಾರಿಗೆ 2019-20ರಲ್ಲಿ ಟೆಂಡರ್ ಆಗಿತ್ತು. ಎರಡು ವರ್ಷ ಕೊರೋನಾದಿಂದ ಕಾಮಗಾರಿ ನಡೆಸುವುದು ಅಸಾಧ್ಯವಾಗಿತ್ತು. ಅಲ್ಲದೆ ಎರಡು ವರ್ಷಗಳಲ್ಲಿ ತೀವ್ರ ಮಳೆಯಿಂದಾಗಿ ಕಾಮಗಾರಿ ನಿಗದಿತ ಸಮಯದಲ್ಲಿ ನಡೆಸಲು ಸಾಧ್ಯವಾಗಿಲ್ಲ. ಕಳೆದ ಮಾರ್ಚ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಬೇಕಿತ್ತು. ತೀವ್ರ ಮಳೆಯ ಕಾರಣದಿಂದಾಗಿ ಆಗಿಲ್ಲ. ಇದೇ ಡಿಸೆಂಬರ್ ತಿಂಗಳ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಬೆಳ್ಳಿಪ್ಪಾಡಿ ಕ್ರಾಸ್ ಬಳಿ ನಗರ ಸಭಾ ನೀರಿನ ಪೈಪ್‌ಲೈನ್‌ನಿಂದ ಕಾಮಗಾರಿ ವಿಳಂಬವಾಗುತ್ತಿದೆ. ಈ ಭಾಗ ಹೊರತು ಪಡಿಸಿ ಉಳಿದೆಲ್ಲಾ ಕಾಮಗಾರಿಗಳು ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ಪ್ರಮೋದ್ ಹೇಳಿದರು. ಡಿಸೆಂಬರ್ ಅಂತ್ಯಕ್ಕೆ ರಸ್ತೆ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಜ.೧ರಂದು ಇದೇ ಸ್ಥಳದಲ್ಲಿ ಮತ್ತೆ ತೀವ್ರ ರೀತಿಯಲ್ಲಿ ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.

ನಗರಸಭೆ, ಪೌರಾಯುಕ್ತರ ಮೇಲೆ ಕೇಸು ಹಾಕಿ:
ನಗರಸಭೆಯ ನೀರಿನ ಪೈಪ್‌ಲೈನ್ ಇದೇ ರಸ್ತೆಯ ಮೂಲಕ ಹಾದು ಹೋಗುತ್ತಿದೆ. ಅದರ ಸ್ಥಳಾಂತರ ಕಾಮಗಾರಿಯ ವಿಳಂಬದಿಂದಾಗಿ ರಸ್ತೆ ಕಾಮಗಾರಿಯು ವಿಳಂಬವಾಗುತ್ತಿದೆ ಎಂದು ಇಂಜಿನಿಯರ್ ಪ್ರಮೋದ್ ತಿಳಿಸಿದಾಗ ಸರಿಯಾದ ಪ್ಲಾನಿಂಗ್ ಇಲ್ಲದೆ ಈ ರೀತಿ ಸಮಸ್ಯೆಗಳು ಉಂಟಾಗುತ್ತಿದೆ ಎಂದು ರೈತ ಸಂಘದ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಹೇಳಿದರು. ನಗರ ಸಭೆಯಿಂದಾಗಿ ರಸ್ತೆ ಕಾಮಗಾರಿ ವಿಳಂಬವಾಗುವುದಾದರೆ ನಗರ ಸಭೆ ಮತ್ತು ಪೌರಾಯುಕ್ತರ ಮೇಲೆ ಕೇಸು ಹಾಕಿ. ನಾವು ನಿಮಗೆ ಬೆಂಬಲ ನೀಡುತ್ತೇವೆ. ಪೌರಾಯುಕ್ತರು ಬ್ರಹ್ಮನಲ್ಲ. ನಮ್ಮಂತೆ ಮನುಷ್ಯ. ವಿಳಂಬ ಧೋರಣೆಗೆ ಅವರ ಮೇಲೆ ಕೇಸು ಹಾಕಬೇಕು ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಪ್ರಮೋದ್‌ಗೆ ರೈತ ಸಂಘದ ಜಿಲ್ಲಾ ಸಂಚಾಲಕ ರೂಪೇಶ್ ರೈ ಅಲಿಮಾರ ಹೇಳಿದರು.
ಪುತ್ತೂರು ಕೋಟಿ-ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಿರಂಜನ ರೈ ಮಠಂತಬೆಟ್ಟು, ಎ.ಜತೀಂದ್ರ ಶೆಟ್ಟಿ ಅಲಿಮಾರ ನೆಕ್ಕಿಲಾಡಿ, ಶಿವಪ್ರಸಾದ್ ರೈ, ಯೋಗೀಶ್ ಸಾಮಾನಿ ಸಂಪಿಗೆದಡಿ, ಪ್ರಹ್ಲಾದ್ ಬೆಳ್ಳಿಪ್ಪಾಡಿ, ಮುಂಡೂರು ಘಟಕದ ಶಿವನಾಥ ರೈ ಮೇಗಿನಗುತ್ತು, ಗಣೇಶ್ ಪಜಿಮಣ್ಣು, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಪೆರ್ನೆ, ಪದ್ಮನಾಭ ಶೆಟ್ಟಿ ರೆಂಜಾಜೆ, ವಿಕ್ರಂ ಶೆಟ್ಟಿ ಅಂತರ, ಕೋಡಿಂಬಾಡಿ ಗ್ರಾ.ಪಂ ಸದಸ್ಯೆ ಪೂರ್ಣಿಮಾ ಯತೀಶ್ ಶೆಟ್ಟಿ ಬರಮೇಲು, ನೆಕ್ಕಿಲಾಡಿ ಗ್ರಾ.ಪಂ.ಸದಸ್ಯೆ ಅನಿ‌ ಮಿನೇಜಸ್, ಯತೀಶ್ ಶೆಟ್ಟಿ ಬರಮೇಲು, ಸುರೇಶ್ ಶೆಟ್ಟಿ ಬರಮೇಲು, ಪೂರ್ಣಿಮಾ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ತಿಲು ಸೇರಿದಂತೆ ಹಲವು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕೋಡಿಂಬಾಡಿ ಗ್ರಾ.ಪಂ. ಸದಸ್ಯ ಜಯಪ್ರಕಾಶ್ ಬದಿನಾರು ವಂದಿಸಿದರು.
ಪುತ್ತೂರು ನಗರ ಠಾಣಾ ಇನ್ಸ್ಪೆಕ್ಟರ್ ಸುನಿಲ್ ಕುಮಾರ್ ಮತ್ತು ಎಸ್.ಐ.‌ ಶ್ರೀಕಾಂತ್ ರಾಥೋಡ್ ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

LEAVE A REPLY

Please enter your comment!
Please enter your name here