ಉಪ್ಪಿನಂಗಡಿ: ದೇಶದೆಲ್ಲೆಡೆ ದೇವಾಲಯಗಳ ಪುನರುತ್ಥಾನವಾಗುತ್ತಿದ್ದು, ಇದೇ ವೇಳೆ ಪೆರ್ನೆ-ಬಿಳಿಯೂರು ಗ್ರಾಮದ ಕಳೆಂಜ ದೇಂತಡ್ಕದ ಶ್ರೀ ವಿಷ್ಣುಮೂರ್ತಿ ದೇವಸ್ಥಾನವೂ ಅಷ್ಠಬಂಧ ಬ್ರಹ್ಮಕಲಶೋತ್ಸವಕ್ಕೆ ಅಣಿಯಾಗುತ್ತಿದ್ದು, ಈ ಭಾಗದ ಜನರ ಸೌಭಾಗ್ಯವಾಗಿದೆ. ಜನರು ತಮ್ಮ ತಮ್ಮ ಶಕ್ತಿಗನುಗುಣವಾಗಿ ತನು-ಮನ-ಧನಗಳ ಸಮರ್ಪಣೆ ಮಾಡಿ
ಶ್ರೀ ದೇವರ ಕಾರ್ಯವನ್ನು ಅತ್ಯುತ್ತಮ ರೀತಿಯಲ್ಲಿ ನಡೆಸಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಕಳೆಂಜ ದೇಂತಡ್ಕ ಶ್ರೀ ವಿಷ್ಣುಮೂರ್ತಿ ದೇವಾಲಯದಲ್ಲಿ ಅಷ್ಠಬಂಧ ಬ್ರಹ್ಮಕಲಶೋತ್ಸವದ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ಹಾಗೂ ಆಮಂತ್ರಣ ಪತ್ರ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇವಾಲಯದಲ್ಲಿ ಭಗವಂತನ ಸಾನಿಧ್ಯವನ್ನು ವೃದ್ಧಿಸುವ ಸಲುವಾಗಿ ಅಷ್ಠಬಂಧ ಬ್ರಹ್ಮಕಲಶೋತ್ಸವವನ್ನು ನಡೆಸಲಾಗುತ್ತಿದೆ. ಈ ಪುಣ್ಯ ಕಾರ್ಯಕ್ಕೆ ಸಮಾಜದ ಎಲ್ಲಾ ವರ್ಗದ ಮಂದಿ ಕರ್ತವ್ಯ ಬದ್ದತೆಯಿಂದ ಭಾಗವಹಿಸಬೇಕು ಎಂದ ಅವರು ಇದೇ ವೇಳೆ ದೇವಾಲಯದ ಬಳಿ ಸುಮಾರು 70 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ತಡೆಗೋಡೆಯ ಕಾರ್ಯವನ್ನು ಪೂರ್ಣಗೊಳಿಸುವ ಭರವಸೆಯನ್ನು ವ್ಯಕ್ತಪಡಿಸಿದರು.
ದೇವಾಲಯದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಧನ್ಯ ಕುಮಾರ್ ರೈ ಮಾತನಾಡಿ ಮುಂಬರುವ ಡಿ. 25 ರಿಂದ ಡಿ. 30ರ ವರೆಗೆ ನಡೆಯುವ ಅಷ್ಠಬಂಧ ಬ್ರಹ್ಮಕಲಶೋತ್ಸವದಲ್ಲಿ ಎಡನೀರು ಮಠಾಧೀಶ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಸೋದೆ ಮಠಾಧೀಶ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಇವರುಗಳ ಶುಭಾಶೀರ್ವಾದ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ರಾಜರ್ಷಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ್ ತಂತ್ರಿಗಳ ನೇತೃತ್ವ ವಹಿಸಲಿದ್ದಾರೆ. ಈ ಸಂಬಂಧ ನಡೆಯುವ ಧಾರ್ಮಿಕ ಸಭೆಗಳಲ್ಲಿ ಒಡಿಯೂರು ಮಠಾಧೀಶರು, ಮಾಣಿಲ ಮಠಾಧೀಶರು, ಆನೆಗುಂದಿ ಮಹಾಸಂಸ್ಥಾನದ ಮಠಾಧೀಶರು ಹಾಗೂ ವಿವಿಧ ಕ್ಷೇತ್ರದ ವಿದ್ವಾಂಸರು ಭಾಗವಹಿಸಲಿದ್ದಾರೆ ಎಂದರು.
ಸಭೆಯಲ್ಲಿ ಬ್ರಹ್ಮಕಲಶೋತ್ಸವದ ಗೌರವಾಧ್ಯಕ್ಷ ಭರತ್ ಕುಮಾರ್ ಆರಿಗ, ಪದ್ಮಾಸಿನಿ ಎನ್. ಜೈನ್, ದೇವಳದ ಆಡಳಿತ ಮಂಡಳಿ ಅಧ್ಯಕ್ಷ ರೋಹಿತಾಕ್ಷ ಬಿ., ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಅವಿನಾಶ್ ಜೈನ್, ಆಡಳಿತ ಮಂದಳಿ ಕಾರ್ಯದರ್ಶಿ ಗೋಪಾಲ ಶೆಟ್ಟಿ ಎಸ್., ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಉಮಾನಾಥ ಶೆಟ್ಟಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಂಭು ಭಟ್, ಗಣ್ಯರಾದ ಕೃಷ್ಣರಾಜ್, ಅಶೋಕ್ ಕುಮಾರ್, ರಮೇಶ್, ಪದ್ಮನಾಭ ಸಾಮಾನಿ, ಶ್ರೀಧರ ಗೌಡ, ಮುತ್ತಪ್ಪ ಸಾಲಿಯಾನ್, ಐತ್ತಪ್ಪ ಭಂಡಾರಿ, ಗಂಗಾಧರ ರೈ, ಮಹೇಶ್ ಪಡಿವಾಳ್, ಶಿವಪ್ಪ ನಾಯ್ಕ, ಸುರೇಶ್ ಆಚಾರ್ಯ, ಯಶೋಧಾ ಜಿ. ಗೌಡ, ಸುಮತಿ ಪದ್ಮನಾಭ, ಕಿರಣ್ ಶೆಟ್ಟಿ, ಗೋಪಾಲ ಸಪಲ್ಯ, ಮೋಹನ್ ಶೆಟ್ಟಿ ಇದ್ದರು.