ಕಿದು: ನ. 19ರಿಂದ 23ರವರೆಗೆ ಮೆಗಾ ಕಿಸಾನ್ ಮೇಳ, ಕೃಷಿ ವಸ್ತು ಪ್ರದರ್ಶನ ಮೇಳ

0

ಪುತ್ತೂರು: ಕಡಬ ತಾಲೂಕಿನ ಕಿದು ಐಸಿಎಆರ್ – ಸಿಪಿಸಿಆರ್‌ಐ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ನವಂಬರ್ 19ರಿಂದ 23ರವರೆಗೆ ಸಂಸ್ಥೆಯ ಆವರಣದಲ್ಲಿ ಮೆಗಾ ಕಿಸಾನ್ ಮೇಳ ಮತ್ತು ಕೃಷಿ ವಸ್ತು ಪ್ರದರ್ಶನ ಮೇಳ ನಡೆಯಲಿದೆ ಎಂದು ಕಿದು ಸಿಪಿಸಿಆರ್‌ಐನ ಪ್ರಭಾರ ವಿಜ್ಞಾನಿ ಡಾ. ದಿವಾಕರ್ ವೈ ಹೇಳಿದರು.

ಸುದ್ದಿ ನ್ಯೂಸ್ ಜೊತೆ ಮಾತನಾಡಿದ ಅವರು, ಕಿದು ಐಸಿಎಆರ್ – ಸಿಪಿಸಿಆರ್‌ಐ ಸಂಶೋಧನಾ ಕೇಂದ್ರ ಈ ವರ್ಷ ಸುವರ್ಣ ಮಹೋತ್ಸವ ಆಚರಿಸುತ್ತಿದ್ದು, ಅನೇಕ ಸಂಸ್ಮರಣಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕೃಷಿ ಸಮುದಾಯಕ್ಕೆ ನೆರವಾಗುವ ಹಾಗೂ ಕೃಷಿ ತಂತ್ರಜ್ಞಾನಗಳ ಇತ್ತೀಚಿನ ಆವಿಷ್ಕಾರಗಳನ್ನು ಪರಿಚಯಿಸುವ ಉದ್ದೇಶದಿಂದ ಮೆಗಾ ಕೃಷಿ ಮೇಳ ಮತ್ತು ಕೃಷಿ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ಇದರಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಮತ್ತು ನೆರೆಯ ಹಾಗೂ ಪ್ರಮುಖ ಉತ್ಪಾದಕ ರಾಜ್ಯಗಳಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ರೈತರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದರು.

ಮೊದಲನೆ ದಿನವಾದ ನವಂಬರ್ 19ರಂದು ಬೆಳಿಗ್ಗೆ 10ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಮಧ್ಯಾಹ್ನ 12.30ಕ್ಕೆ ಜೀವವೈವಿಧ್ಯ ಸಂರಕ್ಷಣಾ ಮೇಳದ ಉದ್ಘಾಟನೆ ನಡೆಯಲಿದೆ. ಮಧ್ಯಾಹ್ನ 2ಕ್ಕೆ ರೈತರ – ವಿಜ್ಞಾನಿಗಳ ಸಮಾವೇಶ ಹಾಗೂ ಡ್ರೋನ್ ತಂತ್ರಜ್ಞಾನದ ಪ್ರದರ್ಶನ ಏರ್ಪಡಿಸಲಾಗಿದೆ. ನ. 20ರಂದು ಬೆಳಿಗ್ಗೆ 10ಕ್ಕೆ ಸುಸ್ಥಿರ ಅಡಿಕೆ ಕೃಷಿ ಮತ್ತು ಸಸ್ಯ ಸಂರಕ್ಷಣಾ ತಂತ್ರಜ್ಞಾನಗಳು ಹಾಗೂ ಮಧ್ಯಾಹ್ನ 2ಕ್ಕೆ ಹೈಟೆಕ್ ತೋಟಗಾರಿಕಾ ತಂತ್ರಜ್ಞಾನಗಳ ಕುರಿತ ವಿಚಾರ ಸಂಕಿರಣ ನಡೆಯಲಿದೆ. ನ. 21ರಂದು ಬೆಳಿಗ್ಗೆ 10ಕ್ಕೆ ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ ಹಾಗೂ ಮಧ್ಯಾಹ್ನ 2ಕ್ಕೆ ಕೋಕೋ ಕೃಷಿ ಮತ್ತು ಸಂಸ್ಕರಣೆ ಕುರಿತು ವಿಚಾರ ಸಂಕಿರಣ ನಡೆಯಲಿದೆ. ನ. 22ರಂದು ಬೆಳಿಗ್ಗೆ 10ಕ್ಕೆ ಪ್ಲಾಂಟೇಶನ್ ಮತ್ತು ಸಾಂಬಾರು ಬೆಳೆಗಳಲ್ಲಿ ಮೌಲ್ಯವರ್ಧನೆ ಮತ್ತು ಯಾಂತ್ರೀಕರಣ ಹಾಗೂ ಮಧ್ಯಾಹ್ನ 2ಕ್ಕೆ ರೈತರ ಉತ್ಪಾದಕ ಸಂಸ್ಥೆಗಳ ವ್ಯಾಪ್ತಿ ಮತ್ತು ಅವಕಾಶಗಳ ಕುರಿತು ವಿಚಾರ ಸಂಕಿರಣ ನಡೆಯಲಿದೆ. ನ. 23ರಂದು ಬೆಳಿಗ್ಗೆ 10ಕ್ಕೆ ಸಸ್ಯ ಪ್ರಭೇದಗಳ ರಕ್ಷಣೆ ಮತ್ತು ರೈತರ ಹಕ್ಕುಗಳ ಬಗ್ಗೆ ಜಾಗೃತಿ ಹಾಗೂ ಮಧ್ಯಾಹ್ನ 2ಕ್ಕೆ ಸಮಾರೋಪ ಜರಗಲಿದೆ ಎಂದು ಮಾಹಿತಿ ನೀಡಿದರು.

ಸ್ಟಾಲ್ ಬುಕ್ಕಿಂಗ್: ಮೇಳದಲ್ಲಿ ಸ್ಟಾಲ್ ಬುಕ್ಕಿಂಗ್ ಮಾಡಲಿಚ್ಚಿಸುವವರು ನ. 10ರ ಮೊದಲು ಬುಕ್ಕಿಂಗ್ ಮಾಡಬಹುದು. ಇದಕ್ಕೆ ಮೊದಲು ಬುಕ್ಕಿಂಗ್ ಮಾಡಿದವರಿಗೆ ಒಟ್ಟು ಶುಲ್ಕದಲ್ಲಿ ರಿಯಾಯಿತಿ ನೀಡಲಾಗುವುದು. ಎಕನಾಮಿಕ್ ಸ್ಟಾಲ್‌ಗೆ 5 ಸಾವಿರ ರೂ., ಇದಕ್ಕಿಂತ ಉತ್ತಮ ಸ್ಟಾಲ್‌ಗಳಿಗೆ 10 ಸಾವಿರ ರೂ., ಉತ್ತಮ ದರ್ಜೆಯ ಸ್ಟಾಲ್‌ಗಳಿಗೆ 25 ಸಾವಿರ ರೂ. ದರ ನಿಗದಿ ಮಾಡಲಾಗಿದೆ ಎಂದು ದಿವಾಕರ್ ವೈ. ವಿವರಿಸಿದರು.

ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ, ಕೃಷಿ ಯಂತ್ರೋಪಕರಣ ಮತ್ತು ಇತರೆ ಕೃಷಿ ವಲಯಗಳಿಗೆ ಸಂಬಂಧಪಟ್ಟ ವಸ್ತುಗಳ ಪ್ರದರ್ಶನ ಹಾಗೂ ಮಾರಾಟವನ್ನು ಮೆಗಾ ಕಿಸಾನ್ ಮೇಳ ಮತ್ತು ಕೃಷಿ ವಸ್ತು ಪ್ರದರ್ಶನದಲ್ಲಿ ಹಮ್ಮಿಕೊಳ್ಳಲಾಗಿದೆ. ಸುಮಾರು ೧೫೦ ಮಳಿಗೆಗಳು ಮೇಳದಲ್ಲಿ ಭಾಗವಹಿಸಲಿದ್ದು, ಸಂಬಂಧಪಟ್ಟ ಬೆಳೆಗಾರರು, ಸಗಟು ವ್ಯಾಪಾರಿಗಳು, ಆಮದುದಾರರು, ರ-ದಾರರು ತಮ್ಮ ವ್ಯಾಪಾರ ಚಟುವಟಿಕೆಗಳನ್ನು ವಿಸ್ತರಿಸಲು ಮತ್ತು ವೈವಿಧ್ಯಗಳಿಸಲು ಬಯಸುವ ಆಸಕ್ತರು ಮಳಿಗೆಗಳನ್ನು ಪಡೆದುಕೊಂಡು ವಸ್ತು ಪ್ರದರ್ಶನದಲ್ಲಿ ಪಾಲ್ಗೊಳ್ಳಬಹುದು. ಈ ಬಾರಿ ವಿಶೇಷವೆಂಬಂತೆ ಪ್ರತಿದಿನ ಸಂಜೆ ೫.೩೦ರ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಿದು ಸಿಪಿಸಿಆರ್‌ಐನ ಪ್ರಭಾರ ವಿಜ್ಞಾನಿ ಡಾ. ದಿವಾಕರ್ ವೈ ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here