ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ
ಪುತ್ತೂರು: ಪಂಚಾಯತ್ ರಾಜ್ ವ್ಯವಸ್ಥೆಯಡಿಯಲ್ಲಿ ಬರುವ ತ್ರಿಸ್ತರದ ಸ್ಥಳೀಯ ಸಂಸ್ಥೆಗಳನ್ನು ಅದನ್ನು ಸಂಪೂರ್ಣವಾಗಿ ದುರ್ಬಲಗೊಳಿಸುವ ಪ್ರಯತ್ನಕ್ಕೆ ರಾಜ್ಯ ಬಿಜೆಪಿ ಸರಕಾರ ಮುಂದಾಗಿದೆ. ಪಂಚಾಯತ್ ರಾಜ್ ವ್ಯವಸ್ಥೆಯ ಬುಡವನ್ನು ಅಲುಗಾಡಿಸುವ ರೀತಿಯಲ್ಲಿ ಸರಕಾರ ಕೈಗೊಳ್ಳುತ್ತಿರುವ ಕ್ರಮದ ಬಗ್ಗೆ ಈಗಾಗಲೇ ಪುತ್ತೂರು ಬ್ಲಾಕ್ ಕಾಂಗ್ರೆಸ್ ಪಂಚಾಯತ್‌ರಾಜ್ ಘಟಕದ ವತಿಯಿಂದ ಪ್ರತಿಭಟನೆ ಮಾಡಿದ್ದೆವು. ಈ ಬಗ್ಗೆ ಶಾಸಕರಾದ ಸಂಜೀವ ಮಠಂದೂರು ಅವರು ಇಂತಹ ವ್ಯವಸ್ಥೆಯೇ ನಡೆದಿಲ್ಲ. ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಕಾಂಗ್ರೆಸ್‌ನವರು ತಪ್ಪು ಮಾಹಿತಿ ಜನರಿಗೆ ನೀಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಆದರೆ ತಪ್ಪು ಮಾಹಿತಿಯನ್ನು ಶಾಸಕರು ನೀಡಿದ್ದಾರೆ. ನಾವು ಯಾವುದೇ ದಾಖಲೆ ಇಲ್ಲದೆ ಪ್ರತಿಭಟನೆ ಮಾಡುವ ಕೆಲಸ ಮಾಡಿಲ್ಲ. ಈ ಪ್ರಸ್ತಾವನೆಯನ್ನು ರದ್ದುಪಡಿಸಿದ ದಾಖಲೆ ಶಾಸಕ ಸಂಜೀವ ಮಠಂದೂರು ಅವರ ಬಳಿ ಇದ್ದರೆ ಅದನ್ನು ನೀಡಬೇಕು ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಆಗ್ರಹಿಸಿದ್ದಾರೆ.
ನ.೭ರಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಂಚಾಯತ್ ಅಧ್ಯಕ್ಷರುಗಳ ಮತ್ತು ಸದಸ್ಯರ ಸಂಪೂರ್ಣ ಮೂಲಭೂತ ಹಕ್ಕನ್ನು ಅದನ್ನು ತೆಗೆದುಹಾಕುವ ನಡಾವಳಿಯನ್ನು, 12 ಐಎಎಸ್ ಅಧಿಕಾರಿಗಳು ಸೇರಿಕೊಂಡು ಮಾಡಿದ ಸಭೆಯ ನಡಾವಳಿ ಪ್ರತೀ ಪಂಚಾಯತ್‌ಗಳಿಗೆ ಬಂದಿದೆ. ನಾವು ಮೌನವಾಗಿದ್ದರೆ ಈ ಕರಡು ಪ್ರತಿ ಸರಕಾರಕ್ಕೆ ಪ್ರಸ್ತಾವನೆಯಾಗಿ ಅನುಮೋದನೆಯಾಗಿ ಜಾರಿಯಾಗುತ್ತಿತ್ತು. ಪಕ್ಷದ ವತಿಯಿಂದ ತಿಳುವಳಿಕೆ ನೀಡಿ ಪ್ರತಿಭಟನೆ ವ್ಯಕ್ತವಾದಾಗ ಹೆದರಿ ಅದನ್ನು ತಡೆಹಿಡಿದಿದ್ದರೂ ಇನ್ನೂ ಈ ವಿಚಾರ ಜೀವಂತವಾಗಿದೆ. ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪರ ರಾಜೀನಾಮೆಯ ಬಳಿಕ ಗ್ರಾಮೀಣಾಭಿವೃದ್ಧಿ ಖಾತೆಗೆ ಹೊಸ ಸಚಿವರನ್ನು ನೇಮಕ ಮಾಡದೆ ಸಿಎಂ ಬಳಿ ಖಾತೆಯನ್ನು ಇಟ್ಟುಕೊಂಡು ಗೃಹ ಸಚಿವರು ಅವರ ಪರವಾಗಿ ಮಾತನಾಡುತ್ತಾರೆ. ಇದನ್ನು ರದ್ದುಪಡಿಸುತ್ತೇವೆ ಎಂದು ಹೇಳಿದ್ದರೂ ಈವರೆಗೆ ಅಧಿಕೃತ ಆದೇಶ ಆಗಿಲ್ಲ. ಇದನ್ನು ರದ್ದುಪಡಿಸಿ ಆದೇಶ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಜಿ.ಪಂ., ತಾ.ಪಂ. ಚುನಾವಣೆ ನಡೆಸುವ ದೈರ್ಯವಿಲ್ಲ: ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯನ್ನು ನಡೆಸುವ ಧೈರ್ಯ ಇವರಿಗಿಲ್ಲ. ಅಲ್ಲಿಂದ ಬರುವ ಅನುದಾನವನ್ನು ಶಾಸಕರ ಮೂಲಕ ಹಂಚಿಕೊಂಡು ಗ್ರಾಮ ಪಂಚಾಯತ್ ಅಧೀನದಲ್ಲಿರುವ ಸರಕಾರಿ ಶಾಲೆಗಳು, ಅಂಗನವಾಡಿಗಳು, ಆರೋಗ್ಯ ಕೇಂದ್ರಗಳಿಗೆ ಅನುದಾನ ವಿಂಗಡಿಸದೆ, ತಾ.ಪಂ., ಜಿ.ಪಂ.ನಲ್ಲಿ ಚುನಾಯಿತ ಜನಪ್ರತಿನಿಧಿಗಳಿಲ್ಲದ ಸಂದರ್ಭದಲ್ಲಿ ಅವರ ಪ್ರತಿನಿಧಿಗಳಾಗಿ ಇರುವ ಇಬ್ಬರು ವಿಧಾನಪರಿಷತ್ ಸದಸ್ಯರ ಅಭಿಪ್ರಾಯವನ್ನು ಕೂಡ ಕೇಳದೆ ಏಕಪಕ್ಷೀಯವಾಗಿ ಅನುದಾನವನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆಯೂ ನಮ್ಮ ಆಕ್ಷೇಪವಿದೆ. ಗ್ರಾಮಸಭೆಗಳ ಅಭಿಪ್ರಾಯ, ಜನಪ್ರತಿನಿಧಿಗಳ ಅಭಿಪ್ರಾಯದ ಮೂಲಕ ಕ್ರಿಯಾಯೋಜನೆ ಮಾಡಬೇಕಿತ್ತು. ಅಲ್ಲಿ ಹಸ್ತಕ್ಷೇಪವಾಗಿದೆ. ಗ್ರಾ.ಪಂ. ವ್ಯವಸ್ಥೆಯಡಿಯಲ್ಲಿ ಒಂದು ಆರೋಗ್ಯ ಉಪಕೇಂದ್ರಕ್ಕೆ ಮೂಲಭೂತ ಸೌಕರ್ಯಕ್ಕೆ 10 ಸಾವಿರ ನಿಧಿಯ ಮೂಲಕ ಅಧ್ಯಕ್ಷರ ಜಂಟಿ ಸಹಿಯಲ್ಲಿ ಖರ್ಚು ಮಾಡಲಾಗುತ್ತಿತ್ತು. ಅದರ ಸಂಪೂರ್ಣ ಖಾತೆಯನ್ನು ರದ್ದುಪಡಿಸಿ ಆರೋಗ್ಯ ಇಲಾಖೆಗೆ ತೆಗೆದುಕೊಂಡಿದ್ದಾರೆ. ಆರೋಗ್ಯ ಕೇಂದ್ರಗಳಿಗೆ ರಾಷ್ಟ್ರೀಯ ಆರೋಗ್ಯ ಮಿಷನ್ ವ್ಯಾಪ್ತಿಯಲ್ಲಿ ಬರುತ್ತಿದ್ದ ಅನುದಾನವನ್ನು ಖರ್ಚು ಮಾಡುವ ಅನುದಾನವನ್ನೂ ಪಂಚಾಯತ್ ಅಧ್ಯಕ್ಷರಿಂದ ಹಿಂಪಡೆಯಲಾಗಿದೆ. ಶಾಲಾಭಿವೃದ್ಧಿ ಸಮಿತಿಗೆ ಪ್ರತೀ ಶಾಲೆಗೆ 10 ಸಾವಿರ ರೂ.ಗಳಂತೆ ಬರುತ್ತಿದ್ದ ನಿಧಿಯಲ್ಲಿ ನಯಾಪೈಸೆ ಬರುತ್ತಿಲ್ಲ. ಕುಡಿಯುವ ನೀರಿನ ಮೇಲ್ವಿಚಾರಣೆಗೆ ಒಂದು ಗ್ರಾಮ ಪಂಚಾಯತ್‌ಗೆ 1 ಲಕ್ಷ ರೂ. ಕನಿಷ್ಠ ಬರುತ್ತಿತ್ತು, ಅದನ್ನು ಕೂಡ ರದ್ದುಪಡಿಸಲಾಗಿದೆ. ಕೋವಿಡ್ 19 ಸಮಯದಲ್ಲಿ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಮರಣ ಹೊಂದಿದ್ದಲ್ಲಿ ಅಥವಾ ಅನಾರೋಗ್ಯಕ್ಕೆ ತುತ್ತಾದ ಸಂದರ್ಭದಲ್ಲಿ ವೈದ್ಯಕೀಯ ವೆಚ್ಚಕ್ಕೆ 30 ಲಕ್ಷ ರೂ. ವರೆಗೆ ಅನುದಾನವನ್ನು ಕೊಡುತ್ತೇವೆ ಎನ್ನುವ ಭರವಸೆ ನೀಡಿದ್ದರು. ಈಗ ಅವರ ಬಳಿ ನೀಡಲು ಹಣವಿಲ್ಲ. ಗ್ರಾಮ ಪಂಚಾಯತ್‌ನ ಸ್ಥಳೀಯ ಕ್ರೋಢೀಕರಣದ ಸಂಪನ್ಮೂಲದಲ್ಲಿ, 50 ಲಕ್ಷ ರೂ,ಗಳಿಗಿಂತ ಅಧಿಕ ಸಂಪನ್ಮೂಲ ಇರುವ ಪಂಚಾಯತ್‌ಗಳು 3 ಲಕ್ಷ ರೂ.ವರೆಗೆ ಜಿಲ್ಲಾ ಪಂಚಾಯತ್ ನಿಧಿಗೆ ದೇಣಿಗೆ ನೀಡಬೇಕೆಂದು ಆದೇಶ ಮಾಡಿದ್ದಾರೆ. ಒಂದೆಡೆಯಿಂದ ಪ್ರಜಾಪ್ರಭುತ್ವದ ಹಕ್ಕನ್ನು ಮೊಟಕುಗೊಳಿಸುವ ಜೊತೆಗೆ ಆರ್ಥಿಕ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಕಿತ್ತುಕೊಳ್ಳುವ ಕೆಲಸ ಮಾಡಲಾಗುತ್ತಿದೆ. ಆಡಳಿತ ಮಂಡಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲದ ಕೆಲಸ ಮಾಡುತ್ತಿದ್ದಾರೆ. ಇಂತಹ ಕೆಲಸ ಆಗುತ್ತಿರುವುದು ಶಾಸಕ ಸಂಜೀವ ಮಠಂದೂರು ಅವರಿಗೆ ತಿಳಿದಿಲ್ಲವೇ? ಎಂದು ಪ್ರಶ್ನಿಸಿದ ಸುಭಾಶ್ಚಂದ್ರ ಶೆಟ್ಟಿ, ಶಾಸಕರ ನಾಟಕ ನಮ್ಮ ಎದುರು ಅವಶ್ಯಕತೆ ಇಲ್ಲ. ಪಕ್ಷ ಸಂಘಟನೆ ಮತ್ತು ಪಕ್ಷದ ಅಸ್ತಿತ್ವಕ್ಕಾಗಿ ಪಂಚಾಯತ್‌ರಾಜ್‌ನ ವಿಚಾರಗಳನ್ನು ಮುಂದಿಟ್ಟುಕೊಂಡು ಅಪಪ್ರಚಾರ ಮಾಡುವ ಅವಶ್ಯಕತೆ ನಮಗಿಲ್ಲ ಎಂದು ಹೇಳಿದರು.
ಇದು ಕಾಂಗ್ರೆಸ್ ಬೆಂಬಲಿತ ಸದಸ್ಯರ ಹಕ್ಕು ಮಾತ್ರವಲ್ಲ, ನಮ್ಮ ಹಣ ಮಾತ್ರ ಹೋಗುವುದಲ್ಲ, ಬಿಜೆಪಿ ಬೆಂಬಲಿತ ಸದಸ್ಯರಿಗೂ ಹಕ್ಕು ಇರುವುದಿಲ್ಲ. ಈಗ ಅವರಿಗೆ ಅವರ ಶಾಸಕರ ಮೂಲಕ ಹಂಚಿಕೆಯಾಗಿ ಅನುದಾನ ಬರಬಹುದು. ಮುಂದಕ್ಕೆ ಅವರೇ ಇರುತ್ತಾರೆನ್ನುವ ನಂಬಿಕೆ ಇಲ್ಲ. ಸರಕಾರ ಬದಲಾಗಬಹುದು, ಶಾಸಕರು ಬದಲಾಗಬಹುದು ಆಗ ಅವರಿಗೂ ತೊಂದರೆಯಾಗುತ್ತದೆ. ಇದು ನಮ್ಮ ಸ್ವಾಭಿಮಾನದ, ಗೌರವದ ಪ್ರಶ್ನೆ. ಎಲ್ಲ ಪಂಚಾಯತ್ ಸದಸ್ಯರು ರಾಜಕೀಯ ಮರೆತು, ಅಸ್ತಿತ್ವಕ್ಕಾಗಿ ಇದರ ವಿರುದ್ಧ ನಿಲ್ಲಬೇಕಾಗಿದೆ ಎಂದು ಸುಭಾಶ್ಚಂದ್ರ ಶೆಟ್ಟಿ ಹೇಳಿದರು.
20 ಮನೆಗಳನ್ನು ಕೊಟ್ಟಿದ್ದೇವೆಎಂದು ಆಯ್ಕೆ ಮಾಡಿಸಿದ್ದಾರೆ. ಆದರೆ ಆದೇಶಪತ್ರವನ್ನು ಕೊಟ್ಟಿದ್ದಾರೆ ವಿನಃ ಪಂಚಾಯತ್‌ಗಳಿಗೆ ನಯಾಪೈಸೆ ಅನುದಾನ ಬಿಡುಗಡೆಯಾಗಿಲ್ಲ. ಇದು ಚುನಾವಣಾ ಗಿಮಿಕ್. ಇವರಿಗೆ ಗ್ರಾಮೀಣ ಭಾಗದ ಜನತೆ ಬಗ್ಗೆ ಕಾಳಜಿಯಿಲ್ಲ. ಇವರು ಕೊಟ್ಟ ಭರವಸೆ ಈಡೇರಿಸಲು ಜನರ ತೆರಿಗೆಯ ಹಣವನ್ನು ಬಳಸುತ್ತಿದ್ದಾರೆ. ಗ್ರಾಮ ಪಂಚಾಯತ್ ಹಣವನ್ನೂ ಲೂಟಿ ಮಾಡಲು ಹೊರಟಿದ್ದಾರೆ. ಇದನ್ನು ನಿಲ್ಲಿಸಬೇಕು ಇಲ್ಲದೇ ಇದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು. ಪಂಚಾಯತ್ ಸದಸ್ಯರ ಅಸಭ್ಯ ದುರ್ವರ್ತನೆ ಎಲ್ಲಾದರೂ ಕಂಡುಬಂದಲ್ಲಿ ಅವರ ಸದಸ್ಯತ್ವ ರದ್ದುಪಡಿಸುವ ಅಗತ್ಯ ಚುನಾವಣಾ ಆಯೋಗಕ್ಕೆ ಇತ್ತು. ಆದರೆ ಅದನ್ನು ತೆಗೆದು ಜಿಲ್ಲಾ ಪಂಚಾಯತ್ ಹಂತದ ಅಧಿಕಾರಿಗಳ ಕೈಗೆ ನೀಡುತ್ತಿದ್ದಾರೆ. ಅಲ್ಲಿಯೂ ರಾಜಕೀಯ ಮೇಲಾಟ ನಡೆಸಲು ನೋಡುತ್ತಿದ್ದಾರೆ. ಈ ಮೂಲಕ ಸಂಪೂರ್ಣವಾಗಿ ಸ್ಥಳೀಯ ಸಂಸ್ಥೆಯ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಕೆಲಸಕ್ಕೆ ಸರಕಾರ ಕೈಹಾಕಿದೆ. ಜನರ ಎದುರು ನಮ್ಮ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸುಭಾಶ್ಚಂದ್ರ ಶೆಟ್ಟಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ಹಸೈನಾರ್ ನೆಲ್ಲಿಗುಡ್ಡೆ, ಮಹಿಳಾ ಘಟಕದ ಅಧ್ಯಕ್ಷೆ ಸೀತಾ ಭಟ್ ಪಾಣಾಜೆ ಉಪಸ್ಥಿತರಿದ್ದರು.