- ಪಂಚಾಯತ್ ಸೂಚಿಸಿದ್ದರೂ ರಸ್ತೆಗೆ ನೀರು ಪೂರೈಸದೆ ವಾಟರ್ ಮ್ಯಾನ್ ನಿಂದ ಗೇಟ್‍ವಾಲ್ವ್‍ಗೆ ಬೀಗ – ಪಿಡಿಒ
- ರಾಜಕೀಯ ಒತ್ತಡದಿಂದ ಗೇಟ್‍ವಾಲ್ವ್‍ಗೆ ವಾಟರ್ ಮ್ಯಾನ್ ನಿಂದ ಬೀಗ – ಗ್ರಾ.ಪಂ.ಸದಸ್ಯ:
ಕೌಡಿಚ್ಚಾರ್:ಗ್ರಾಮ ಪಂಚಾಯತ್ ನೀರು ಪೂರೈಕೆ ಗೇಟ್ ವಾಲ್ವ್ ಬೀಗ ಮುರಿದು ಖಾಸಗಿ ಕಾಮಗಾರಿಗೆ ನೀರು ಒದಗಿಸಲಾಗಿದೆ ಎಂದು ಆರೋಪಿಸಿ ಅರಿಯಡ್ಕ ಗ್ರಾಮ ಪಂಚಾಯತ್ ವಾಟರ್ ಮ್ಯಾನ್ ಕೆ.ವಿಠಲ ನಾಯ್ಕ ಅವರು ಗ್ರಾಮ ಪಂಚಾಯತ್‍ಗೆ ದೂರು ನೀಡಿದ್ದಾರೆ. ಶಾಸಕರ ಅನುದಾನದಲ್ಲಿ ನಡೆಯುತ್ತಿದ್ದ ರಸ್ತೆ ಕಾಮಗಾರಿಗೆ ನೀರು ಪೂರೈಸಲು ಸೂಚಿಸಿದ್ದರೂ ಪಂಚಾಯತ್ ವಾಟರ್ ಮ್ಯಾನ್ ಸದಸ್ಯರ ಗಮನಕ್ಕೆ ತಾರದೆ ಗೇಟ್‍ವಾಲ್ವ್ ಗೆ ಬೀಗ ಹಾಕಿ ಹೋಗಿದ್ದಾಗಿ ಗ್ರಾ.ಪಂ.ಸದಸ್ಯ, ಪಿಡಿಒ ಪ್ರತಿಕ್ರಿಯಿಸಿದ್ದಾರೆ.
ಪಂಚಾಯತ್ ವ್ಯಾಪ್ತಿಯ ಬಪ್ಪಪುಂಡೇಲು ಎಂಬಲ್ಲಿ ಅಪ್ಪಯ್ಯ ನಾಯ್ಕ ಎಂಬವರ ಮನಗೆ ಹೋಗುವ ರಸ್ತೆಗೆ ಕಾಂಕ್ರಿಟೀಕರಣ ಕಾಮಗಾರಿ ನಡೆಯುತ್ತಿದೆ.ಇದು ಗ್ರಾಮ ಪಂಚಾಯತ್ ರಸ್ತೆ ಯಾ ಪಂಚಾಯತ್‍ರಾಜ್ ಇಂಜಿನಿಯರಿಂಗ್ ವಿಭಾಗದಿಂದ ಆಗುತ್ತಿರುವ ಕಾಮಗಾರಿಯಾಗಿರುವುದಿಲ್ಲವಾದ್ದರಿಂದ ಇದಕ್ಕೆ ಪಂಚಾಯತ್‍ನ ಕುಡಿಯುವ ನೀರು ಉಪಯೋಗಿಸಲು ಅವಕಾಶವಿಲ್ಲ.ಆದರೂ ನನ್ನ ಗಮನಕ್ಕೆ ತರದೆ ಕಾಮಗಾರಿ ಗುತ್ತಿಗೆದಾರ ಹಾಗೂ ಪಂಚಾಯತ್ ಸದಸ್ಯ ನಾರಾಯಣ ನಾಯ್ಕ ಚಾಕೋಟೆ ಅವರು ಪಂಚಾಯತ್‍ನ ಕುಡಿಯುವ ನೀರಿನ ಗೇಟ್ ವಾಲ್ವ್ ನ್ನು ಬಲಾತ್ಕಾರವಾಗಿ ಮುರಿದು ಸದ್ರಿ ಕಾಮಗಾರಿಗೆ ನೀರನ್ನು ಉಪಯೋಗಿಸಿರುವುದಾಗಿ ಆರೋಪಿಸಿ ವಿಠಲ ನಾಯ್ಕ ಅವರು ಗ್ರಾಮ ಪಂಚಾಯತ್‍ಗೆ ದೂರು ನೀಡಿದ್ದು ತಪ್ಪಿತಸ್ಥರ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಪಂಚಾಯತ್ ಸೂಚಿಸಿದ್ದರೂ ನೀರು ಪೂರೈಸದೆ ವಾಟರಮ್ಯಾನ್‍ನಿಂದ ಗೇಟ್‍ವಾಲ್ವ್‍ಗೆ ಬೀಗ-ಪಿಡಿಒ: ಬಪ್ಪಪುಂಡೇಲು ಎಂಬಲ್ಲಿ ಪರಿಶಿಷ್ಟ ಪಂಗಡದವರ ಮನೆಗಳಿಗೆ ಹೋಗುವ ಸಾರ್ವಜನಿಕ ರಸ್ತೆಗೆ ಶಾಸಕರ ಅನುದಾನದಲ್ಲಿ ಮುಂಗಡವಾಗಿ ರಸ್ತೆ ಕಾಂಕ್ರಿಟೀಕರಣಗೊಂಡಿದೆ.ಈ ರಸ್ತೆಗೆ 22 ದಿನಗಳ ಕಾಲ ನೀರು ಹಾಕಲಿರುವುದರಿಂದ, ಸಾರ್ವಜನಿಕರಿಗೆ ಕುಡಿಯುವ ನೀರು ಅಭಾವವಾಗದಂತೆ ರಸ್ತೆಗೆ ನೀರು ಪೂರೈಸಲು ಪಂಪು ಚಾಲಕರಿಗೆ ಸೂಚನೆ ನೀಡಲಾಗಿತ್ತು.ಆದರೆ ಪಂಪು ಚಾಲಕ ವಿಠಲ ನಾಯ್ಕರವರು ಮೊದಲ ಒಂದು ದಿನ ನೀರು ಪೂರೈಸಿ ಮರು ದಿನ ಪಂಚಾಯತ್ ಗಮನಕ್ಕೆ ತಾರದೇ ಗೇಟ್‍ವಾಲ್ವ್ ಗೆ ಬೀಗಹಾಕಿ ನೀರು ಬಿಟ್ಟಿರುವುದಿಲ್ಲ.ಆದ್ದರಿಂದ ಅಧ್ಯಕ್ಷರ ಹಾಗೂ ವಾರ್ಡ್ ಸದಸ್ಯ ಗಮನಕ್ಕೆ ತಂದು, ಗೇಟ್‍ವಾಲ್ವ್‍ಗೆ ಹಾಕಿದ ಬೀಗ ತೆರವುಗೊಳಿಸಿ ಕಾಂಕ್ರಿಟೀಕರಣಗೊಂಡ ರಸ್ತೆಯ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಪೂರೈಸಲಾಗಿದೆ ಎಂದು ಗ್ರಾ.ಪಂ.ಅಭಿವೃದ್ಧಿ ಅ„ಕಾರಿ ಸ್ಪಷ್ಟನೆ ನೀಡಿದ್ದಾರೆ.
ರಾಜಕೀಯ ಒತ್ತಡದಿಂದ ಗೇಟ್‍ವಾಲ್ವ್‍ಗೆ ವಾಟರಮ್ಯಾನ್‍ನಿಂದ ಬೀಗ-ನಾರಾಯಣ ಚಾಕೋಟೆ: 2019-20ರಲ್ಲಿ ಬಪ್ಪಪುಂಡೇಲು-ಮಿನೋಜಿಕಲ್ಲು ರಸ್ತೆಯು ಪಂಚಾಯತ್ ಅನುದಾನ ಬಿಡುಗಡೆಗೊಂಡು ಹೊಸ ರಸ್ತೆ ರಚನೆಯಾಗಿದ್ದು ಪರಿಶಿಷ್ಟ ಪಂಗಡಗಳ ಕುಟುಂಬಗಳಿರುವ ಈ ರಸ್ತೆಯನ್ನು ಪಕ್ಕಾ ರಸ್ತೆ ಮಾಡಲು ಅನುದಾನಕ್ಕಾಗಿ ಶಾಸಕರಿಗೆ ಮನವಿ ಮಾಡಿದ್ದೆ.ಅದಕ್ಕೆ ಸ್ಪಂದಿಸಿರುವ ಶಾಸಕರು 4 ಲಕ್ಷ ರೂ.ಅಂದಾಜು ವೆಚ್ಚದಲ್ಲಿ ಮುಂಗಡ ಕಾಮಗಾರಿ ನಡೆಸಲು ಗುತ್ತಿಗೆದಾರರಿಗೆ ಸೂಚಿಸಿದ್ದರು.ಅದರಂತೆ ಕಾಮಗಾರಿ ನಡೆದಿದೆ.ಈ ರಸ್ತೆಗೆ ನೀರು ಪೂರೈಸಲು ಆ ಭಾಗದ ವಾಟರಮ್ಯಾನ್ ವಿಠಲ ನಾಯ್ಕರಿಗೆ ತಿಳಿಸಿದ ಪ್ರಕಾರ ಮೊದಲ ದಿನ ಅವರು ನೀರು ಒದಗಿಸಿರುತ್ತಾರೆ. ಮರುದಿನ ರಾಜಕೀಯ ಒತ್ತಡದಿಂದ,ಯಾವುದೇ ಅನುಮತಿ ಪಡೆಯದೆ ಗೇಟ್ ವಾಲ್ವ್ ಗೆ ಬೀಗ ಹಾಕಿರುತ್ತಾರೆ.ಈ ಬಗ್ಗೆ ಪಂಚಾಯತ್ ಅಧ್ಯಕ್ಷರು ಹಾಗು ಪಿಡಿಒ ಅವರ ಗಮನಕ್ಕೆ ತಂದಿದ್ದೇನೆ.ರಸ್ತೆ ಕಾಮಗಾರಿ ಮುಂದುವರಿಯಲು ಪಂಚಾಯತ್ ಸೂಚನೆ ಪ್ರಕಾರ ಗೇಟ್‍ವಾಲ್ವ್ ತೆರವುಗೊಳಿಸಿ ಕಾಮಗಾರಿ ಮುಂದುವರಿಸಿದ್ದೇವೆ ಎಂದು ಗ್ರಾ.ಪಂ.ಸದಸ್ಯ ನಾರಾಯಣ ಚಾಕೋಟೆ ಪ್ರತಿಕ್ರಿಯಿಸಿದ್ದಾರೆ.