ಕಡಬ: ಕೆಲವು ದಿನಗಳ ಹಿಂದೆ ಕೋಡಿಂಬಾಳದ ಮುರಚೆಡವು ಎಂಬಲ್ಲಿ ಬೆಳ್ಳಂಬೆಳಿಗ್ಗೆ ಪಿಕಪ್‍ನಲ್ಲಿ ಜಾನುವಾರು ಸಾಗಾಟ ಮಾಡುತ್ತಿದ್ದ ವೇಳೆ ಕಡಬ ವಿ.ಹಿಂ.ಪ, ಬಜರಂಗದಳ ಕಾರ್ಯಕರ್ತರು ತಡೆವೊಡ್ಡಿ ಪೊಲೀಸರಿಗೆ ಒಪ್ಪಿಸಿದ್ದರು, ಈ ಘಟನೆಯ ಸಂದರ್ಭ ಜಾನುವಾರು ಸಾಗಾಟಗಾರರೊಬ್ಬರ ಚಿನ್ನದ ಚೈನು ಹಾಗೂ ಹಣ ಕಾಣೆಯಾಗಿದ್ದು ಇದನ್ನು ದಾಳಿ ನಡೆಸಿದ ಸಂಘಟನೆಯ ಕಾರ್ಯಕರ್ತರು ಕದ್ದಿದ್ದಾರೆ ಎಂದು ಆರೋಪಿಸಿ ಜಾನುವಾರು ಸಾಗಾಟಗಾರ ಅವರು ಕಾರಣಿಕ ಕ್ಷೇತ್ರ ಕೋಡಿಂಬಾಳ ಮಜ್ಜಾರು ಕ್ಷೇತ್ರಕ್ಕೆ ದೂರು ನೀಡಿದ್ದು, ನ.8ರಂದು ಕ್ಷೇತ್ರದಲ್ಲಿ ದೂರು ವಿಚಾರಣೆ ನಡೆಯಿತು.
ಅಕ್ರಮ ಜಾನುವಾರು ಸಾಗಾಟ ಮಾಡುತ್ತಿದ್ದ ಆರೋಪಿಗಳಾದ ಏನೆಕಲ್ಲು ನಿವಾಸಿ ಸುಧೀರ್ ಮತ್ತು ಬೆಳಿಯಪ್ಪ ಎಂಬವರು ಮಜ್ಜಾರು ಕ್ಷೇತ್ರಕ್ಕೆ ಆಗಮಿಸಿದ್ದರು. ಚಿನ್ನದ ಚೈನ್ ಹಾಗೂ ಹಣ ಕಳ್ಳತನ ಮಾಡಿದ್ದಾರೆಂದು ಆರೋಪ ಹೊರಿಸಲಾಗಿದ್ದ ಹಿನ್ನೆಲೆಯಲ್ಲಿ ಕಡಬ ಪ್ರಖಂಡ ವಿ.ಹಿಂ.ಪ. ಕಾರ್ಯದರ್ಶಿ ಪ್ರಮೋದ್ ರೈ ನಂದುಗುರಿ, ಗೋ ರಕ್ಷಕ ಪ್ರಮುಖ್ ಜಯಂತ ಕಲ್ಲುಗುಡ್ಡೆ, ಬಜರಂಗದಳದ ರಕ್ಷಿತ್ ಕೇಪು, ಸಂತೋಷ್ ದೋಳ, ತೀರ್ಥೇಶ್ ಮೀನಾಡಿ ಮೊದಲಾದವರೂ ಮಜ್ಜಾರು ಕ್ಷೇತ್ರಕ್ಕೆ ಆಗಮಿಸಿದ್ದರು. ಕ್ಷೇತ್ರದ ಅಧ್ಯಕ್ಷ ಪ್ರಸಾದ ಕೆದಿಲಾಯ ಅವರ ಉಪಸ್ಥಿತಿಯಲ್ಲಿ ವಿಚಾರಣೆ ನಡೆಯಿತು.
ಅಕ್ರಮ ದನ ಸಾಗಾಟ ಮಾಡಿದ್ದ ಆರೋಪಿ ಸುಧೀರ್ ಅವರು, ತನ್ನ ಚಿನ್ನದ ಚೈನು ಮತ್ತು ಹಣ ಕಳೆದು ಹೋಗಿದೆ, ಇದನ್ನು ದಾಳಿ ನಡೆಸಿದ ವಿ.ಹಿಂ.ಪ. ಬಜರಂಗದಳದ ಕಾರ್ಯಕರ್ತರು ಕದ್ದಿದ್ದಾರೆ ಎಂದು ಪ್ರಾರಂಭದಲ್ಲಿ ಆರೋಪ ಮಾಡಿದ್ದರು. ಈ ಸಂದರ್ಭದಲ್ಲಿ ವಿ.ಹಿಂ.ಪ., ಬಜರಂಗದಳದ ಕಾರ್ಯಕರ್ತರು ಮಾತನಾಡಿ, ನೀವು ಅಕ್ರಮವಾಗಿ ಕಸಾಯಿಖಾನೆಗೆ ಗೋವುಗಳನ್ನು ಸಾಗಾಟ ಮಾಡಿದ್ದರಿಂದ ನಾವು ತಡೆವೊಡ್ಡಿ ಪೊಲೀಸರಿಗೆ ಒಪ್ಪಿಸಿದ್ದು ನಿಜ, ಆದರೆ, ನಿಮ್ಮ ಚಿನ್ನ, ಹಣ ನಾವು ಕದ್ದಿಲ್ಲ, ಅದನ್ನು ನೋಡಿಯೂ ಇಲ್ಲ, ಆ ಬಗ್ಗೆ ನೀವು ದೈವದ ಸಾನಿಧ್ಯದಲ್ಲಿ ಪ್ರಾರ್ಥನೆ ಮಾಡಿಕೊಳ್ಳಿ ನಮ್ಮದೇನೂ ಅಭ್ಯಂತರವಿಲ್ಲ, ನೀವು ಅಕ್ರಮವಾಗಿ ಕಸಾಯಿಖಾನೆಗೆ ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಿಸುತ್ತಿದ್ದರೂ ಅದನ್ನು ಒಪ್ಪಿಕೊಳ್ಳದೆ, ತಂಗಿ ಮನೆಗೆ ಸಾಕಲು ಕೊಂಡೊಯ್ಯುತ್ತಿರುವುದಾಗಿ ಸುಳ್ಳು ಹೇಳಿದ್ದೀರಿ, ಇದು ಸತ್ಯವೆಂದು ದೈವದ ಸಾನಿಧ್ಯದ ಎದುರು ಹೇಳಿ ಎಂದಾಗ ಸುಧೀರ್ ಅವರು ತನ್ನ ತಪ್ಪನ್ನು ಒಪ್ಪಿಕೊಂಡು ನಾವು ಕ್ರಿಶ್ಚಿಯನ್ ಓರ್ವರ ಮನೆಗೆ ಜಾನುವಾರು ಕೊಂಡೊಯ್ದಿರುವುದಾಗಿ ಹೇಳಿದರಲ್ಲದೆ ನನ್ನ ತಪ್ಪಾಗಿದೆ, ಇನ್ನು ಮುಂದೆ ಅಕ್ರಮ ಕಸಾಯಿಖಾನೆಗೆ ಜಾನುವಾರು ಸಾಗಾಟ ಮಾಡುವುದಿಲ್ಲ ಎಂದು ಹೇಳಿ ಕ್ಷಮೆಯಾಚಿಸಿದರು. ಬಳಿಕ, ಚಿನ್ನ ಮತ್ತು ಹಣ ಕಾಣೆಯಾಗಿರುವ ಬಗ್ಗೆ ರಾಜನ್ ದೈವದ ಸಾನಿಧ್ಯದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಜ್ಜಾರು ಕ್ಷೇತ್ರದ ಮುಂದಾಳುಗಳಾದ ಸುದರ್ಶನ ಗೌಡ, ರಾ.ಸ್ವ.ಸೇ.ಸಂ.ದ ಮಾಧವ ಕೋಲ್ಪೆ, ರಘುರಾಮ ನಾೈಕ್ ಕುಕ್ಕೆರೆಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.