ಪುತ್ತೂರು : ಹವ್ಯಕ ಮಹಾಸಭೆಯ ಸಮಾಜಮುಖೀ ಕಾರ್ಯಗಳಿಗೆ ಸಮಾಜದಿಂದ ಉತ್ತಮ ಪ್ರತಿಸ್ಪಂದನೆ ವ್ಯಕ್ತವಾಗುತ್ತಿದ್ದು, ಬೇರೆ ಸಮಾಜದವರೂ ಕೂಡ ನಮ್ಮ ಸಮಾಜದ ಕಾರ್ಯಕ್ಕೆ ಅಯಾಚಿತವಾಗಿ ಸಹಕಾರ ನೀಡುತ್ತಿದ್ದಾರೆ. ಮಹಾಸಭೆಯ ಸಮಾಜೋತ್ಥಾನದ ಕಾರ್ಯಗಳನ್ನು ನಾಡಿನ ಬೇರೆ ಬೇರೆಬೇರೆ ಜನರೂ ಗುರುತಿಸುತ್ತಿದ್ದಾರೆ ಎಂಬುದಕ್ಕೆ ನಿದರ್ಶನ ಎಂದು ಡಾ.ಗಿರಿಧರ ಕಜೆ ಹೇಳಿದರು.
ಮಲ್ಲೇಶ್ವರದಲ್ಲಿರುವ ಶ್ರೀ ಅಖಿಲ ಹವ್ಯಕ ಮಹಾಸಭೆಯ ಪ್ರಾಂಗಣದಲ್ಲಿ ನಡೆದ 79 ನೆಯ ವರ್ಷದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಗಿರಿಧರ ಕಜೆಯವರು, ಹವ್ಯಕರು ಪ್ರಮುಖವಾಗಿ ನೆಲೆಸಿರುವ ಶಿವಮೊಗ್ಗ, ಉತ್ತರಕನ್ನಡ, ದಕ್ಷಿಣಕನ್ನಡ, ಕೊಡಗು ಹಾಗೂ ಕಾಸರಗೋಡು ಭಾಗಗಳಲ್ಲಿ ಸ್ಥಳೀಯವಾಗಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಸಂಘಟಿತರಾಗಲು ಪ್ರಯತ್ನ ಪಡಬೇಕಿದ್ದು, ಈ ದಿಶೆಯಲ್ಲಿ ಪುತ್ತೂರಿನಲ್ಲಿ ಮಹಾಸಭೆಯ ಪ್ರಾದೇಶಿಕ ಕೇಂದ್ರ ಕಾರ್ಯಾರಂಭ ಮಾಡಿದೆ. ಸಾಗರ ಹಾಗೂ ಉತ್ತರ ಕನ್ನಡದಲ್ಲಿ ಪ್ರಾದೇಶಿಕ ಕೇಂದ್ರ ಸ್ಥಾಪಿಸುವ ಪ್ರಯತ್ನಗಳು ನಡೆಯುತ್ತಿದೆ ಎಂದು ತಿಳಿಸಿದರು.
ಅಡಿಕೆ ಎಲೆಚುಕ್ಕಿ ಹಾಗೂ ಹಳದಿ ಎಲೆ ರೋಗಕ್ಕೆ ಸ್ಪಂದನೆ:
ಅಡಿಕೆ ಹವ್ಯಕರ ಪಾರಂಪರಿಕ ಕೃಷಿಯಾಗಿದ್ದು, ಅಡಿಕೆ ಕೃಷಿಕರ ಕಷ್ಟಕ್ಕೆ ಹವ್ಯಕ ಮಹಾಸಭೆಯ ಸ್ಪಂದಿಸಲಿದೆ. ಅಡಿಕೆ ಎಲೆಚುಕ್ಕಿ ಹಾಗೂ ಹಳದಿ ಎಲೆ ರೋಗದ ಕುರಿತಾಗಿ ಸೂಕ್ತ ಸಂಶೋಧನೆ ಹಾಗೂ ಕ್ಲುಪ್ತ ಪರಿಹಾರ ನೀಡವಂತೆ ಸರ್ಕಾರವನ್ನು ಆಗ್ರಹಿಸಲಾಗುವುದು. ಅಡಿಕೆ ಕ್ಯಾನ್ಸರ್ ಕಾರಕವಲ್ಲ ಎಂಬುದು ಈಗಾಗಲೇ ಧೃಡಪಟ್ಟಿದೆ, ಹೀಗಿದ್ದರೂ ಅಡಿಕೆಯ ಬಗ್ಗೆ ಅವಕೃಪೆ ಸಲ್ಲದು ಎಂದ ಡಾ.ಕಜೆ, ಈ ತಿಂಗಳಲ್ಲಿ ಬೇರೆಬೇರೆ ಪ್ರಾಂತ್ಯಗಳಲ್ಲಿ ಅಡಿಕೆ ಕೃಷಿಕರ ಸಮಾವೇಶ ನಡೆಸಿ; ಕೃಷಿ ವಿಜ್ಞಾನಿಗಳನ್ನು ಕರೆಸಿ ಅಡಿಕೆ ಎಲೆಚುಕ್ಕಿ ರೋಗಕ್ಕೆ ಈ ತಕ್ಷಣ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚೆ ನಡೆಸಿ; ಕೃಷಿಕರನ್ನು ಸಂಘಟಿಸುವಂತೆ ಎಲ್ಲಾ ಭಾಗಗಳ ಸ್ಥಳೀಯ ನಿರ್ದೇಶಕರಿಗೆ ಸೂಚನೆ ನೀಡಿದರು.
ಪ್ರಧಾನ ಕಾರ್ಯದರ್ಶಿ ಸಿಎ. ವೇಣುವಿಘ್ನೇಶ ಸಂಪ ಸಭೆಯನ್ನು ನಡೆಸಿ;
ಸದಸ್ಯರ ಪ್ರಶ್ನೆಗಳಿಗೆ ಸಮಜಾಯಿಷಿ ನೀಡಿ, ಮಹಾಸಭೆಯ ಕಾರ್ಯಗಳಿಗೆ ಪದಾಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ನೀಡುತ್ತಿರುವ ಬೆಂಬಲಕ್ಕೆ ಅಭಿನಂದನೆ ಸಲ್ಲಿಸಿದರು. ಕೋಶಾಧಿಕಾರಿ ಕೃಷ್ಣಮೂರ್ತಿ ಭಟ್ ಯಲಹಂಕ ಆಯವ್ಯಯ ಮಂಡಿಸಿ; ಖರ್ಚುವೆಚ್ಚಗಳ ಮಾಹಿತಿ ನೀಡಿದರು. ಮಹಾಸಭೆಯಲ್ಲಿ ಆರ್ಥಿಕ ಶಿಸ್ತಿಗಾಗಿ ಕೈಗೊಂಡಿರುವ ಕ್ರಮಗಳ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ‘ಹವ್ಯಕ’ ಮಾಸಪತ್ರಿಕೆಯ ಸಂಪಾದಕರಾಗಿ 18 ವರ್ಷಗಳ ಸೇವೆಸಲ್ಲಿಸಿ ನಿವೃತ್ತರಾದ ಶ್ರೀಕಾಂತ ಹೆಗಡೆ ಅಂತ್ರವಳ್ಳಿ, ಹಾಗೂ ಪುತ್ತೂರು ಸಭಾಭವನದಲ್ಲಿ 12 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತರಾದ ರಾಮಕೃಷ್ಣ ಭಟ್ ಕೋಟಿಮೂಲೆ ಅವರನ್ನು ಮಹಾಸಭೆವತಿಯಿಂದ ಗೌರವಿಸಲಾಯಿತು. ಸಾಗರ, ಮಂಗಳೂರು, ಉತ್ತರ ಕನ್ನಡ ಸೇರಿದಂತೆ ಬೇರೆಬೇರೆ ಪ್ರಾಂತಗಳ ಸದಸ್ಯರು ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಭಾಗವಹಿಸಿದ್ದರು,
ಡಾ.ಕಜೆ 8ನೆಯ ಬಾರಿಗೆ ಪುನರಾಯ್ಕೆ
ಡಾ.ಗಿರಿಧರ ಕಜೆಯವರು ಮಹಾಸಭೆಯ ಅಧ್ಯಕ್ಷರಾಗಿ 8ನೆಯ ಬಾರಿಗೆ ಸರ್ವಾನುಮತದಿಂದ ಪುನರಾಯ್ಕೆಯಾದರು. ನಿರ್ದೇಶಕರ ಸಭೆಯಲ್ಲಿ ನೂತನವಾಗಿ ಸರ್ವಾನುಮತದಿಂದ ಆಡಳಿತ ಮಂಡಳಿಯನ್ನು ಆಯ್ಕೆ ಮಾಡಲಾಯಿತು.
ಡಾ. ಗಿರಿಧರ ಕಜೆ – ಅಧ್ಯಕ್ಷರು
ಆರ್. ಎಂ ಹೆಗಡೆ – ಉಪಾಧ್ಯಕ್ಷರು
ಶ್ರೀಧರ ಜೆ ಭಟ್ಟ ಕೆಕ್ಕಾರು – ಉಪಾಧ್ಯಕ್ಷರು
ಸಿಎ. ವೇಣುವಿಘ್ನೇಶ ಸಂಪ – ಪ್ರಧಾನ ಕಾರ್ಯದರ್ಶಿ
ಪ್ರಶಾಂತ ಕುಮಾರ ಜಿ ಭಟ್ಟ ಮಲವಳ್ಳಿ – ಕಾರ್ಯದರ್ಶಿ
ಆದಿತ್ಯ ಹೆಗಡೆ ಕಲಗಾರು – ಕಾರ್ಯದರ್ಶಿ
ಕೃಷ್ಣಮೂರ್ತಿ ಎಸ್ ಭಟ್ ಯಲಹಂಕ – ಕೋಶಾಧಿಕಾರಿ