ಪುತ್ತೂರು ಮೂಲದ ವೈದ್ಯ ಡಾ.ಕೃಷ್ಣಮೂರ್ತಿ ನಿಗೂಢ ಸಾವು

0

  • ಪುತ್ತೂರು ಮೂಲದ ವೈದ್ಯ ಡಾ.ಕೃಷ್ಣಮೂರ್ತಿ ನಿಗೂಢ ಸಾವು
  • ಕಾಸರಗೋಡು ಬದಿಯಡ್ಕದಿಂದ ನಾಪತ್ತೆ: ಕುಂದಾಪುರದಲ್ಲಿ ಮೃತದೇಹ ಪತ್ತೆ
  • ಆತ್ಮಹತ್ಯೆಯೇ? ಕೊಲೆಯೇ? ಮುಂದುವರಿದ ಪೊಲೀಸ್ ತನಿಖೆ
  • ಮುಸ್ಲಿಂ ಯುವತಿಗೆ ಕಿರುಕುಳ ನೀಡಿದ ಆರೋಪವೇ ಸಾವಿಗೆ ಕಾರಣವಾಯ್ತ?
  • ಜಾಗದ ತಕರಾರು ಕಾರಣವಾಯ್ತ?

ಪುತ್ತೂರು: ಮೂಲತಃ ಪುತ್ತೂರಿನವರಾಗಿದ್ದು ಕಾಸರಗೋಡು ಜಿಲ್ಲೆಯ ಬದಿಯಡ್ಕದಲ್ಲಿ ಸುಮಾರು ೩೦ ವರ್ಷಗಳಿಂದ ಹೆಸರಾಂತ ದಂತ ವೈದ್ಯರಾಗಿದ್ದ ಡಾ. ಕೃಷ್ಣಮೂರ್ತಿ ಸರ್ಪಂಗಳ (೫೭)ರವರು ನಿಗೂಢವಾಗಿ ಸಾವನ್ನಪ್ಪಿದ್ದಾರೆ.


ನ.೮ರಂದು ಬದಿಯಡ್ಕದಿಂದ ನಾಪತ್ತೆಯಾಗಿದ್ದ ಕೃಷ್ಣಮೂರ್ತಿ ಅವರ ಮೃತದೇಹ ನ.೧೦ರಂದು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹಟ್ಟಿಯಂಗಡಿ ಗ್ರಾಮದ ಕಾಡು ಅಜ್ಜಿಮನೆಯಲ್ಲಿಯ ರೈಲು ಹಳಿಯಲ್ಲಿ ಪತ್ತೆಯಾಗಿದೆ. ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಎಂದು ಕಂಡು ಬಂದಿದ್ದರೂ ಕೊಲೆ ಕೃತ್ಯದ ಶಂಕೆಯ ಮೇರೆಗೂ ಪೊಲೀಸರ ತನಿಖೆ ನಡೆಯುತ್ತಿದೆ.

ಡಾ.ಕೃಷ್ಣಮೂರ್ತಿ ನಿಗೂಢ ಸಾವು :

ಕಾಸರಗೋಡು ಬದಿಯಡ್ಕದ ತನ್ನ ಕ್ಲಿನಿಕ್ ನಿಂದ ನಾಪತ್ತೆಯಾಗಿದ್ದ ಡಾ.ಕೃಷ್ಣಮೂರ್ತಿಯವರ ಮೃತದೇಹ ಕುಂದಾಪುರದ ಕುತಲ್ಲೂರು ಸಮೀಪದ ರಾಜಾಡಿಯ ಕಡೆಗೆ ತೆರಳುವ ರಸ್ತೆಯಲ್ಲಿ ಹಟ್ಟಿಯಂಗಡಿ ಗ್ರಾಮದ ಕಾಡು ಅಜ್ಜಿಮನೆ ಎಂಬಲ್ಲಿನ ರೈಲು ಹಳಿಯಲ್ಲಿ ಎರಡು ಭಾಗವಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ದೇಹದ ತಲೆ ಭಾಗ ಒಂದು ಕಡೆ ಇದ್ದರೆ ಅಲ್ಲಿಂದ ೫೦ ಮೀಟರ್ ದೂರದಲ್ಲಿ ದೇಹದ ಉಳಿದ ಭಾಗ ಪತ್ತೆಯಾಗಿದೆ. ಮೃತದೇಹ ಪತ್ತೆಯಾದ ಬಳಿಕ ರೈಲ್ವೇ ಟ್ರ್ಯಾಕ್‌ಮೆನ್ ಗಣೇಶ ಕೆ. ನೀಡಿದ ದೂರಿನಂತೆ ಮೊದಲಿಗೆ ಅಪರಿಚಿತ ಮೃತದೇಹವೆಂದು ತಿಳಿದು ಆತ್ಮಹತ್ಯೆಯ ಉzಶದಿಂದ ರೈಲು ಹಳಿಯಲ್ಲಿ ಮಲಗಿದ್ದು ಯಾವುದೋ ರೈಲು ಹರಿದು ಸಾವನ್ನಪ್ಪಿರುವ ಸಾಧ್ಯತೆಯಿದೆ ಎಂದು ಕುಂದಾಪುರ ಕಂಡ್ಲೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


  
ನ.೮ರಂದು ಬೆಳಗ್ಗೆ ೮ರ ಸುಮಾರಿಗೆ ಡಾ. ಕೃಷ್ಣಮೂರ್ತಿ ಅವರು ತಮ್ಮ ಕ್ಲಿನಿಕ್‌ಗೆ ತೆರಳಿ ಎಂದಿನಂತೆ ಕೆಲಸ ಆರಂಭಿಸಿದ್ದರು. ಬೆಳಗ್ಗೆ ೧೧ರ ಸುಮಾರಿಗೆ ಕ್ಲಿನಿಕ್‌ಗೆ ತಪಾಸಣೆಗೆಂದು ಮುಸ್ಲಿಂ ಯುವತಿಯೊಬ್ಬಳು ಬಂದಿದ್ದರು. ಆಕೆಯ ಜತೆ ಅನುಚಿತವಾಗಿ ವರ್ತಿಸಿದ್ದಾರೆಂದು ಆರೋಪಿಸಿ ವೈದ್ಯರ ಮೇಲೆ ಗುಂಪೊಂದು ಬೆದರಿಕೆ ಹಾಕಿ ಹಲ್ಲೆಗೆ ಯತ್ನಿಸಿತ್ತು. ಈ ವೇಳೆ ಅಲ್ಲಿದ್ದವರು ತಡೆದಿದ್ದರು. ಇದಲ್ಲದೆ ವೈದ್ಯರ ವಿರುದ್ಧ ಕೇಸು ದಾಖಲಿಸುವುದಾಗಿಯೂ ಆ ಗುಂಪು ಬೆದರಿಕೆ ಹಾಕಿರುವುದಾಗಿ ಡಾ. ಕೃಷ್ಣಮೂರ್ತಿ ಅವರ ಮನೆಯವರು ಬದಿಯಡ್ಕ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬೆದರಿಕೆ ಹಾಕಿದ ಗುಂಪಿನವರು ಡಾ. ಕೃಷ್ಣಮೂರ್ತಿ ವಿರುದ್ಧ, ಅನುಚಿತ ವರ್ತನೆ ಎಸಗಿರುವುದಾಗಿ ಬದಿಯಡ್ಕ ಠಾಣೆಗೆ ದೂರು ನೀಡಿದ್ದರು. ಅದರಂತೆ ಡಾ. ಕೃಷ್ಣಮೂರ್ತಿ ವಿರುದ್ಧ ಕೇಸು ದಾಖಲಾಗಿತ್ತು. ವೈದ್ಯರ ನಿಕಟವರ್ತಿಗಳು ಹೇಳುವ ಪ್ರಕಾರ ಈ ಘಟನೆಯಿಂದ ಕುಗ್ಗಿಹೋದ ವೈದ್ಯರು ಮಧ್ಯಾಹ್ನ ೧೨ ಗಂಟೆಗೆ ಬದಿಯಡ್ಕದಿಂದ ಬೈಕ್‌ನಲ್ಲಿ ಹೊರಟಿದ್ದರು. ಅವರು ಮಧ್ಯಾಹ್ನ ಊಟಕ್ಕೆ ಹೊರಟಿರಬಹುದು ಎಂದು ಕಂಪೌಂಡರ್, ಮತ್ತಿತರರು ಭಾವಿಸಿದ್ದರು. ಆದರೆ ಮೊಬೈಲ್ ಫೋನ್ ಕ್ಲಿನಿಕ್ ನಲ್ಲಿಯೇ ಬಿಟ್ಟಿದ್ದು, ಬೈಕನ್ನು ಬದಿಯಡ್ಕ ಪೇಟೆಯಲ್ಲಿಟ್ಟು ಆ ಬಳಿಕ ನಾಪತ್ತೆಯಾಗಿದ್ದರು. ಆ ನಂತರ ಎಲ್ಲಿ ಹುಡುಕಾಡಿದರೂ ಅವರು ಪತ್ತೆಯಾಗಿರಲಿಲ್ಲ. ಕೊನೆಗೆ, ಕುಂದಾಪುರದಲ್ಲಿ ಮೃತದೇಹ ಪತ್ತೆಯಾಗಿತ್ತು.

ಮೃತದೇಹ ಪತ್ತೆಯಾದ ಸ್ಥಳಕ್ಕೆ ಕುಂದಾಪುರ ಡಿವೈಎಸ್‌ಪಿ
ಶ್ರೀಕಾಂತ್, ವೃತ್ತ ನಿರೀಕ್ಷಕ ಗೋಪಿಕೃಷ್ಣ, ಕಂಡ್ಲೂರು ಠಾಣಾಧಿಕಾರಿ ಪವನ್ ನಾಯಕ್ ಮತ್ತು ಫೊರೆನ್ಸಿಕ್ ತಂಡದ ಸಿಬ್ಬದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನ.೧೦ರ ಸಂಜೆ ಮತ್ತೆ ಸ್ಥಳಕ್ಕೆ ಭೇಟಿ ನೀಡಿದ ಎಸ್‌ಐ ಪವನ್ ನೇತೃತ್ವದ ಪೊಲೀಸರ ತಂಡ ಮೃತದೇಹ ಪತ್ತೆಯಾದ ಸ್ಥಳದಲ್ಲಿ ಇನ್ನೂ ಯಾವುದಾದರೂ ಸುಳಿವು, ಗುರುತು ವಸ್ತುಗಳು ಸಿಗಬಹುದೇ ಎನ್ನುವುದರ ಬಗ್ಗೆ ಹುಡುಕಾಟ ನಡೆಸಿದೆ. ಕುಂದಾಪುರ ತಲ್ಲೂರು-ಹಟ್ಟಿಯಂಗಡಿ ಸಮೀಪ ಅಪರಿಚಿತ ಮೃತದೇಹ ಪತ್ತೆಯಾದ ಬಗ್ಗೆ ಸುದ್ದಿ ತಿಳಿದ ಡಾ. ಕೃಷ್ಣಮೂರ್ತಿ ಅವರ ಮನೆಯವರು ನ.೧೦ರಂದು ಮಧ್ಯಾಹ್ನದ ವೇಳೆಗೆ ಕುಂದಾಪುರಕ್ಕೆ ತೆರಳಿದ್ದರು. ಮೃತದೇಹದ ಮೇಲಿದ್ದ ಜನಿವಾರ, ಹಿಂಬದಿ ದೇಹದಲ್ಲಿದ್ದ ಕಪ್ಪು ಮಚ್ಚೆ ಒಳ ಉಡುಪುಗಳನ್ನು ಗುರುತಿಸಿ, ಇದು ಕೃಷ್ಣಮೂರ್ತಿ ಅವರದೇ ಮೃತದೇಹ ಎಂದು ಗುರುತಿಸಲಾಗಿತ್ತು. ಸಹೋದರ ಡಾ. ರಾಮ್‌ಮೋಹನ್ ಪುತ್ತೂರು, ಬಾವ ಮನೋಹರ್, ಸ್ನೇಹಿತ ಉದಯ್‌ಕುಮಾರ್, ಆಸ್ಪತ್ರೆ ಕಂಪೌಂಡರ್ ಸಿ.ಎಚ್. ಪರಮೇಶ್ವರ ಭಟ್, ಬದಿಯಡ್ಕ ಠಾಣೆಯ ಮೂವರು ಪೊಲೀಸ್ ಸಿಬ್ಬಂದಿ ಆಗಮಿಸಿ, ಬಹುತೇಕ ಇದು ಡಾ. ಕೃಷ್ಣಮೂರ್ತಿ ಅವರದೇ ಮೃತ ದೇಹವೆಂದು ಖಚಿತಪಡಿಸಿದ್ದರು. ಆ ಬಳಿಕ ರಾತ್ರಿ ೮ ಗಂಟೆಯ ವೇಳೆಗೆ ಅವರ ಪುತ್ರಿ ಆಗಮಿಸಿ ತಂದೆಯz ಮೃತದೇಹ ಎನ್ನುವುದನ್ನು ಖಚಿತಪಡಿಸಿದ್ದರು.

ಕಾರಣ ಏನು?:
ಡಾ. ಕೃಷ್ಣಮೂರ್ತಿ ಅವರು ಮುಸ್ಲಿಂ ಯುವತಿಗೆ ಕಿರುಕುಳ ನೀಡಿದರೆಂಬ ಆರೋಪ ಎದುರಿಸಿರುವುದು ಅವರ ಸಾವಿಗೆ ಕಾರಣ ಆಯಿತೇ ಅಥವಾ ಜಾಗದ ವಿಚಾರಕ್ಕೆ ಸಂಬಂಧಿಸಿದ ತಗಾದೆ ಕಾರಣವಾಯಿತೇ ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ಜಾಗದ ವಿಚಾರವಾಗಿ ೬ ತಿಂಗಳುಗಳಿಂದ ಡಾ. ಕೃಷ್ಣಮೂರ್ತಿ ಅವರು ಕೆಲವರಿಂದ ನಿರಂತರ ಕಿರುಕುಳ, ಬೆದರಿಕೆ ಅನುಭವಿಸುತ್ತಿದ್ದರು. ಜಾಗವನ್ನು ತಮಗೇ ಮಾರಾಟ ಮಾಡಬೇಕೆಂದು ಕೆಲವರು ನಿರಂತರ ಒತ್ತಾಯಿಸುತ್ತಿದ್ದರು. ಅದಕ್ಕೆ ಒಪ್ಪದಿದ್ದಾಗ ಬೇರೆ ಬೇರೆ ರೀತಿಯಲ್ಲಿ ಕಿರುಕುಳ ನೀಡುತ್ತಿದ್ದರು. ಈ ವಿಚಾರದಿಂದ ವೈದ್ಯರು ನೊಂದಿದ್ದರು ಎಂದು ಹೇಳಲಾಗುತ್ತಿದೆ. ಇದಲ್ಲದೆ, ಮುಸ್ಲಿಂ ಯುವತಿಗೆ ಕಿರುಕುಳ ನೀಡಿರುವ ಆರೋಪ ತಮ್ಮ ಮೇಲೆ ಬಂತು ಎಂದು ನೊಂದು ಆತ್ಮಹತ್ಯೆ ಮಾಡಿಕೊಂಡರೇ ಎಂಬ ಸಂಶಯ ಉಂಟು ಮಾಡಿದೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ಕಂಡು ಬಂದರೂ ಕೆಲವು ಅನುಮಾನಗಳೂ ಹುಟ್ಟಿಕೊಂಡಿವೆ. ವೈದ್ಯರು ಸಾಯಲೇಬೇಕೆಂದು ನಿರ್ಧಾರ ಮಾಡಿದ್ದರೂ ಬದಿಯಡ್ಕದಿಂದ ಸುಮಾರು ೧೮೦-೧೯೦ ಕಿಲೋ ಮೀಟರ್ ದೂರದ ಕುಂದಾಪುರಕ್ಕೆ ಏಕೆ ಬಂದರು ಎಂಬ ಸಂಶಯ ವ್ಯಕ್ತವಾಗಿದೆ. ಕುಂದಾಪುರಕ್ಕೆ ರೈಲು ಅಥವಾ ಬಸ್ ಅಥವಾ ಇನ್ನಾವ ವಾಹನಗಳಲ್ಲಿ ಬಂದಿರಬಹುದು ಎಂಬುದಕ್ಕೆ ಯಾವುದೇ ಮಾಹಿತಿ, ದಾಖಲೆ ಲಭ್ಯವಾಗಿಲ್ಲ. ರೈಲಿನಲ್ಲಿಯೇ ಬಂದಿದ್ದರೂ ಮೂಡ್ಲಕಟ್ಟೆಯ ರೈಲು ನಿಲ್ದಾಣದಲ್ಲಿ ಇಳಿದರೆ ಅಲ್ಲಿಂದ ಮೃತದೇಹ ಪತ್ತೆಯಾದ ಹಟ್ಟಿಯಂಗಡಿಯ ಸ್ಥಳಕ್ಕೆ ಸುಮಾರು ೧೨ಕಿಲೋ ಮೀಟರ್ ದೂರವಿದೆ. ಅಲ್ಲಿಯವರೆಗೆ ಹಳಿಯಲ್ಲಿಯೇ ನಡೆದುಕೊಂಡೇ ಬಂದರೇ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಅದಲ್ಲದೆ ರಾತ್ರಿ ವೇಳೆ ಮೊಬೈಲ್ ಫೋನ್ ಅಥವಾ ಬೆಳಕಿನ ವ್ಯವಸ್ಥೆಯಿಲ್ಲದೆ ಹಳಿಯಲ್ಲಿಯೇ ಅಷ್ಟು ದೂರ ನಡೆದುಕೊಂಡು ಬರಲು ಸಾಧ್ಯವೇ ಎಂಬ ಪ್ರಶ್ನೆಯೂ ಕಾಡುತ್ತಿದೆ. ಒಂದು ವೇಳೆ ಬಸ್‌ನಲ್ಲಿ ಬಂದಿದ್ದರೂ ತಲ್ಲೂರಿನಲ್ಲಿ ಇಳಿದು ಅಲ್ಲಿಂದ ೩ ಕಿ.ಮೀ. ದೂರದವರೆಗೆ ನಡೆದುಕೊಂಡು ಈ ಸ್ಥಳಕ್ಕೆ ಬಂದಿರಬಹುದೇ ಇತ್ಯಾದಿ ಪ್ರಶ್ನೆಗಳು ಎದುರಾಗಿದೆ. ಆತ್ಮಹತ್ಯೆಯೇ ಕೊಲೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.

ಡಾ. ಎಸ್. ಕೃಷ್ಣಮೂರ್ತಿ ಅವರ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಮುಳ್ಳೇರಿಯ ಹವ್ಯಕ ಮಂಡಲ ಆಶ್ರಯದಲ್ಲಿ ಬದಿಯಡ್ಕ ಪೇಟೆಯಲ್ಲಿ ಬೃಹತ್ ಮೆರವಣಿಗೆ ನಡೆಸಿ ಪೊಲೀಸರಿಗೆ ಮನವಿ ಸಲ್ಲಿಸಲಾಗಿದೆ. ಡಾ. ಕೃಷ್ಣಮೂರ್ತಿ ಅವರ ಆಘಾತಕಾರಿ ಸಾವು ಮತ್ತು ಅದಕ್ಕೆ ಕಾರಣವಾದ ಘಟನೆಗಳನ್ನು ಖಂಡಿಸಿ ಬದಿಯಡ್ಕ ಪಂಚಾಯತ್ ವ್ಯಾಪ್ತಿಯಲ್ಲಿ ಬದಿಯಡ್ಕ ವಿಹಿಂಪ ಪ್ರಖಂಡ ಸಮಿತಿ ಹರತಾಳ ನಡೆಸಿದೆ.

ನ.೧೧ರಂದು ಮಧ್ಯಾಹ್ನ ಬದಿಯಡ್ಕಕ್ಕೆ ಡಾ.ಕೃಷ್ಣಮೂರ್ತಿಯವರ ಮೃತದೇಹ ತಂದು ಅವರ ಮನೆಯ ಹಿತ್ತಲಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಪುತ್ತೂರಿನಿಂದ ಹಲವರು ಅಲ್ಲಿಗೆ ತೆರಳಿದ್ದರು.

ಕೊಲೆ ಬೆದರಿಕೆ: ಐವರ ಬಂಧನ
ಡಾ.ಕೃಷ್ಣ ಮೂರ್ತಿಯವರಿಗೆ ಕೊಲೆ ಬೆದರಿಕೆ ಒಡ್ಡಿದ್ದ ಆರೋಪದಡಿ ಬದಿಯಡ್ಕ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಅಡಿಕೆ ವ್ಯಾಪಾರಿ ಹಾಗೂ ಮುಸ್ಲಿಂ ಲೀಗ್ ಪದಾಧಿಕಾರಿ ಆಲಿ ತುಪ್ಪಕಲ್ಲು, ಮುಸ್ಲಿಂ ಲೀಗ್ ಪದಾಧಿಕಾರಿಗಳಾದ ಮುಹಮ್ಮದ್ ಹನೀಫ್ ಯಾನೆ ಅನ್ವರ್, ಕುಂಬ್ಡಾಜೆ ನಿವಾಸಿ ಅಶ್ರಫ್, ಅನ್ನಡ್ಕ ನಿವಾಸಿ ಮುಹಮ್ಮದ್ ಶಿಯಾಬುದ್ದೀನ್, ವಿದ್ಯಾಗಿರಿ ಮುನಿಯೂರು ನಿವಾಸಿ ಉಮರುಲ್ ಫಾರೂಕ್ ಬಂಧಿತರು. ಅಲಿ ತುಪ್ಪಕಲ್ಲು ಮತ್ತು ಅನ್ವರ್ ನೇತೃತ್ವದ ತಂಡ ಡಾ.ಕೃಷ್ಣ ಮೂರ್ತಿಯವರಿಗೆ ಅವರ ಕ್ಲಿನಿಕ್‌ನಲ್ಲಿ ಕೊಲೆ ಬೆದರಿಕೆ ಒಡ್ಡಿದ್ದ ಆರೋಪದಲ್ಲಿ ಈ ಐವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಪುತ್ತೂರಿನ ಖ್ಯಾತ ವೈದ್ಯರುಗಳಾದ ಡಾ. ರಾಮಮೋಹನ್ ಮತ್ತು ಡಾ. ಅರವಿಂದ್ ಅವರ ಸಹೋದರರಾಗಿರುವ ಡಾ. ಕೃಷ್ಣಮೂರ್ತಿ ಅವರು ನಿಗೂಢವಾಗಿ ಸಾವನ್ನಪ್ಪಿದವರು. ಪುತ್ತೂರಿನವರೇ ಆದ ಡಾ.ಕೃಷ್ಣಮೂರ್ತಿಯವರು ಕಾಸರಗೋಡಿನ ಬದಿಯಡ್ಕದಲ್ಲಿ ದಂತ ವೈದ್ಯರಾಗಿದ್ದವರು. ದರ್ಬೆ ನಿವಾಸಿಯಾಗಿದ್ದು ಪುತ್ತೂರಿನ ಸಂತಫಿಲೋಮಿನಾ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿರುವ ಎಸ್.ಈಶ್ವರ ಭಟ್ ಅವರ ಪುತ್ರಿ ಪ್ರೀತಿರವರನ್ನು ವಿವಾಹವಾಗಿದ್ದ ಡಾ.ಕೃಷ್ಣಮೂರ್ತಿಯವರು ಕಾಸರಗೋಡು ಬದಿಯಡ್ಕದಲ್ಲಿ ವೈದ್ಯ ವೃತ್ತಿಯಲ್ಲಿದ್ದರೂ ಪುತ್ತೂರಿನವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು.

ಡಾ.ಕೃಷ್ಣಮೂರ್ತಿಯವರ ಸಾವಿನ ಪ್ರಕರಣದ ಸಮಗ್ರ ತನಿಖೆಗೆ ಆಗ್ರಹಿಸಿ ಬದಿಯಡ್ಕದಲ್ಲಿ ವಿಶ್ವ ಹಿಂದೂ ಪರಿಷದ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಮುಖರಾದ ಶರಣ್ ಪಂಪ್‌ವೆಲ್, ಕೆ. ಶ್ರೀಕಾಂತ್, ಹರೀಶ್ ನಾರಂಪಾಡಿ, ಪಿ. ರಮೇಶ್, ಹರೀಶ್ ಪುತ್ರಕಳ, ಜಯದೇವ ಖಂಡಿಗೆ, ಗೋಪಾಲಕೃಷ್ಣ ಮುಂಡೋಳುಮೂಲೆ, ಮಂಜುನಾಥ್ ಮಾನ್ಯ, ರವೀಂದ್ರ ರೈ ಗೋಸಾಡ, ಸುಧಾಮ ಗೋಸಾಡ, ರಕ್ಷಿತ್ ಕೆದಿಲಾಯ, ಬಾಲಕೃಷ್ಣ ಶೆಟ್ಟಿ ಕಡಾರು ಸಹಿತ ನೂರಾರು ಮಂದಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here