- -2 ಟೆಸ್ಟ್ ಪಂದ್ಯ, 4 ವಿಕೆಟ್ ಸಾಧನೆ
- -ಪಾಕಿಸ್ತಾನದ ಜಾವೇದ್ ಮಿಯಾಂದಾದ್, ಮುದಸ್ಸರ್ ನಝರ್, ವೆಸ್ಟ್ ಇಂಡೀಸ್‌ನ ಕ್ಲೈವ್ ಲಾಯ್ಡ್, ಗಸ್ ಲೋಗಿ ವಿಕೆಟ್‌ಗಳನ್ನು ಕಬಳಿಸಿದ ಸಾಧನೆ
- -ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 82 ಪಂದ್ಯ, 754 ರನ್, 374 ವಿಕೆಟ್ ಸಾಧನೆ
ವರದಿ-ಸಂತೋಷ್ ಮೊಟ್ಟೆತ್ತಡ್ಕ
ಪುತ್ತೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ)ಯ ನೂತನ ಅಧ್ಯಕ್ಷರಾಗಿ ಭಾರತ ತಂಡದ ಮಾಜಿ ಎಡಗೈ ಸ್ಪಿನ್ ಗಾರುಡಿಗ, ದ.ಕ ಜಿಲ್ಲೆಯ ಪುತ್ತೂರು ಮೂಲದ ಅಡ್ವಾಯಿ ರಘುರಾಂ ಭಟ್‌ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕೆಎಸ್‌ಸಿಎ ಅಧ್ಯಕ್ಷರಾಗಿದ್ದ ಮಾಜಿ ಕ್ರಿಕೆಟಿಗ ರೋಜರ್ ಬಿನ್ನಿರವರು ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವುದರೊಂದಿಗೆ, ಕೆಎಸ್‌ಸಿಎ ಅಧ್ಯಕ್ಷ ಸ್ಥಾನದ ತೆರವಾದ ಹುದ್ದೆಗೆ 64 ವರ್ಷ ಪ್ರಾಯದ ರಘುರಾಂ ಭಟ್‌ರವರು ಇದೀಗ ಅಧ್ಯಕ್ಷ ಸ್ಥಾನದ ಚುಕ್ಕಾಣಿ ಹಿಡಿದಿದ್ದಾರೆ. ನವೆಂಬರ್ 20 ರಂದು ಚುನಾವಣೆ ನಿಗದಿಯಾಗಿದ್ದು, ಆಭ್ಯರ್ಥಿಗಳಿಗೆ ನಾಮಪತ್ರ ಮರಳಿ ಪಡೆಯಲು ಬುಧವಾರ(ನ.9) ಕೊನೆಯ ದಿನವಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿ.ಎನ್ ಮಧುಕರ್, ಸಂಜಯ್ ಪೋಳ್ ಹಾಗೂ ವಿನಯ್ ಮೃತ್ಯುಂಜಯರವರು ನಾಮಪತ್ರ ಮರಳಿ ಪಡೆದಿದ್ದರಿಂದ ರಘುರಾಂ ಭಟ್‌ರವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಇನ್ನುಳಿದ ಸ್ಥಾನಗಳಿಗೆ ಹಾಗೂ ಆಡಳಿತ ಸಮಿತಿ ಸದಸ್ಯರೂ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಸದ್ಯ ಚುನಾಯಿತರಾದ ಪದಾಧಿಕಾರಿಗಳು ಹಾಗೂ ಸಮಿತಿಯು 2025ರವರೆಗೆ ಅಧಿಕಾರದಲ್ಲಿರುತ್ತದೆ.
2 ಟೆಸ್ಟ್ ಪಂದ್ಯ, 4 ವಿಕೆಟ್:
ಅಂದು ಮೈಸೂರು ರಾಜ್ಯದ ಭಾಗವಾಗಿದ್ದ ಪುತ್ತೂರಿನ ವಿಟ್ಲ ಸಮೀಪದ ಪೆರುವಾಯಿ ಗ್ರಾಮದ ಅಡ್ವಾಯಿ ಭೀಮ ಭಟ್ ಹಾಗೂ ನಾರಾಯಣಿ ದಂಪತಿಯ ಪುತ್ರರಾಗಿ 1958, ಏಪ್ರಿಲ್ 16 ರಂದು ಜನಿಸಿದ ರಘುರಾಂ ಭಟ್‌ರವರು ತಮ್ಮ ವಿದ್ಯಾಭ್ಯಾಸವನ್ನು ಬೆಂಗಳೂರಿನ ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ ಪೂರೈಸಿದ್ದರು. ಕೆ.ಕೆ ತಾರಾಪುರ್‌ರವರ ಗರಡಿಯಲ್ಲಿ ಕೋಚಿಂಗ್ ಪಡೆದಿರುವ ರಘುರಾಂ ಭಟ್‌ರವರೋರ್ವ ಮಾಜಿ ಎಡಗೈ ಸ್ಪಿನ್ನರ್ ಆಗಿದ್ದಾರೆ. 1983, ಆಕ್ಟೋಬರ್ 5 ರಂದು ಪಾಕಿಸ್ತಾನ ವಿರುದ್ಧ ರಘುರಾಂ ಭಟ್‌ರವರು ಭಾರತ ತಂಡದ 165ನೇ ಆಟಗಾರನಾಗಿ ಅಂತರ್ರಾಷ್ಟ್ರೀಯ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆಗೈಯ್ದಿದ್ದರು. 1983, ಅಕ್ಟೋಬರ್ 21ರಂದು ವೆಸ್ಟ್ ಇಂಡೀಸ್ ವಿರುದ್ಧ ರಘುರಾಂ ಭಟ್‌ರವರು ಅಂತರ್ರಾಷ್ಟ್ರೀಯ ವೃತ್ತಿ ಜೀವನದ ಕೊನೆಯ ಪಂದ್ಯವನ್ನಾಡಿದ್ದರು. ಒಟ್ಟು ಎರಡು ಟೆಸ್ಟ್ ಪಂದ್ಯಗಳನ್ನಾಡಿದ್ದ ರಘುರಾಂ ಭಟ್‌ರವರು ಲೆಜೆಂಡ್ ಕ್ರಿಕೆಟಿಗರಾದ ಪಾಕಿಸ್ತಾನದ ಜಾವೇದ್ ಮಿಯಾಂದಾದ್, ಮುದಸ್ಸರ್ ನಝರ್, ವೆಸ್ಟ್ ಇಂಡೀಸ್‌ನ ಕ್ಲೈವ್ ಲಾಯ್ಡ್, ಗಸ್ ಲೋಗಿರವರ ವಿಕೆಟ್‌ಗಳನ್ನು ಕಬಳಿಸಿದ್ದರು.
ಕರ್ನಾಟಕ ತಂಡದ ಪ್ರಮುಖ ಆಟಗಾರ:
1980 ರಿಂದ 1993ರವರೆಗೆ ಕರ್ನಾಟಕ ತಂಡದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದ ರಘುರಾಂ ಭಟ್‌ರವರು 374 ವಿಕೆಟ್ ಕಬಳಿಸಿದ್ದಾರೆ. 1979-90ರ ಋತುವಿನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ತಮಿಳುನಾಡು ವಿರುದ್ಧ ರಘುರಾಂ ಭಟ್‌ರವರು ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದ್ದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ರಘುರಾಂ ಭಟ್‌ರವರು 82 ಪಂದ್ಯಾಟಗಳನ್ನಾಡಿ 754 ರನ್‌ಗಳನ್ನು ಪೇರಿಸಿದ್ದರು. ಇದರಲ್ಲಿ ಅಜೇಯ 47 ಗರಿಷ್ಟ ಸ್ಕೋರ್ ಆಗಿತ್ತು. 374 ವಿಕೆಟ್‌ಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡ ರಘುರಾಂ ಭಟ್‌ರವರು 24 ಬಾರಿ ಐದು ವಿಕೆಟ್‌ಗಳ ಗೊಂಚಲುಗಳನ್ನು ಪಡೆದಿದ್ದರು. ಐದು ಬಾರಿ ಎಲ್ಲಾ ಹತ್ತು ವಿಕೆಟ್‌ಗಳನ್ನು ಪಡೆದ ಸಾಧನೆಯ ಜೊತೆಗೆ 41 ಕ್ಯಾಚ್‌ಗಳನ್ನು ಗಳಿಸುವ ಸಾಧನೆಯನ್ನು ರಘುರಾಂ ಭಟ್‌ರವರು ಮಾಡಿರುತ್ತಾರೆ ಎಂದು ಕ್ರಿಕೆಟ್ ಅಂಕಿ-ಅಂಶಗಳು ಹೇಳುತ್ತವೆ.
ಕ್ರಿಕೆಟ್‌ನಿಂದ ನಿವೃತ್ತರಾದ ಬಳಿಕ ರಘುರಾಂ ಭಟ್‌ರವರು ಅಂಪೈರ್, ಕೋಚ್ ಹಾಗೂ ರಾಜ್ಯ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. 2011ರ ಜುಲೈ ತಿಂಗಳಿನಲ್ಲಿ ಗೋವಾ ತಂಡದ ಕೋಚ್ ಆಗಿ ರಘುರಾಂ ಭಟ್‌ರವರು ಕಾರ್ಯ ನಿರ್ವಹಿಸಿದ್ದರು. ಪ್ರಸ್ತುತ ರಘುರಾಂ ಭಟ್‌ರವರು ತನ್ನ 64ನೇ ವಯಸ್ಸಿನಲ್ಲಿ ಪ್ರತಿಷ್ಠಿತ ಕೆಎಸ್‌ಸಿಎ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.