ಹಲವರ ಬಾಳಿಗೆ ಬೆಳಕಾದ ರವಿ ಪ್ರಶಸ್ತಿಗೆ ಅರ್ಹರು, ಗೌರವ ಕೂಡ-ಶ್ರೀ ರಾಜಶೇಖರಾನಂದ ಸ್ವಾಮೀಜಿ
ಪುತ್ತೂರು: ಚೈತನ್ಯದ ಚಿಲುಮೆಯುಳ್ಳ ಗುಣ ಹೊಂದಿರುವ ರವಿ ಶೆಟ್ಟಿಯವರು ದೂರದ ಕತಾರ್‌ನಲ್ಲಿ ಉದ್ಯಮ ನಡೆಸುತ್ತಾ ಸಮಾಜಕ್ಕೆ ಅನೇಕ ಕೊಡುಗೆಗಳನ್ನು ನೀಡಿರುತ್ತಾರೆ. ರವಿ ಅಂದರೆ ಬೆಳಕು. ರವಿ ಶೆಟ್ಟಿಯವರ ಹೆಸರಿನಲ್ಲಿಯೇ ರವಿ ಇದ್ದಾನೆ. ಹಲವರ ಬಾಳಿಗೆ ಬೆಳಕಾದ ರವಿಯವರು ನಿಜಕ್ಕೂ ಪ್ರಶಸ್ತಿಗೆ ಅರ್ಹರು ಹಾಗೂ ಸಮಾಜಕ್ಕೆ ಗೌರವ ಕೂಡ ಆಗಿದೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿರವರು ಹೇಳಿದರು.
ಮೂಡಂಬೈಲು ರವಿ ಶೆಟ್ಟಿ ಅಭಿನಂದನಾ ಸಮಿತಿ ಮುಂಡೂರು-ಪುತ್ತೂರು ಸಾರಥ್ಯದಲ್ಲಿ ನ.12 ರಂದು ಸಂಜೆ ಮುಂಡೂರು ಪಜಿಮಣ್ಣು ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಮ್ಮೂರಿನ ಹೆಮ್ಮೆಯ ಡಾ|ರವಿ ಶೆಟ್ಟಿ ಮೂಡಂಬೈಲುರವರಿಗೆ ನಡೆದ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೆರವೇರಿಸಿ ಮಾತನಾಡಿದರು.
ಸಾಧನೆಗೆ ಪ್ರಾಯ ಮುಖ್ಯವಲ್ಲ ಬದಲಾಗಿ ಮನಸ್ಸು ಮುಖ್ಯ. ಬದುಕಿನಲ್ಲಿ ಸಿಹಿ-ಕಹಿ, ಸಂಕಷ್ಟದ ದಿನಗಳನ್ನು ರವಿಯವರು ಅನುಭವಿಸಿದ್ದಾರೆ. ಆದರೆ ಅವೆಲ್ಲವನ್ನೂ ದೇವರ ಅನುಗ್ರಹದಿಂದ ದಿಟ್ಟವಾಗಿ ಎದುರಿಸಿ ಇಂದು ಸಾರ್ಥಕೈ ಪಡೆದಿದ್ದಾರೆ ಎನ್ನುವುದಕ್ಕೆ ಇಲ್ಲಿನ ಶ್ರೀ ಸುಬ್ರಾಯ ದೇವಸ್ಥಾನದ ಸಾನಿಧ್ಯ ನೋಡಿದಾಗ ತಿಳಿಯುತ್ತದೆ. ಪ್ರಶಸ್ತಿಯು ರವಿಯವರಿಗೆ ಅರಸಿ ಬಂದಿದ್ದು ಆ ಪ್ರಶಸ್ತಿಗೆ ನಿಜಕ್ಕೂ ತೂಕ ಬಂದಿದೆ ಎಂದ ಅವರು ಪ್ರಧಾನಿ ಮೋದಿಯವರು ಸಣ್ಣವರಲ್ಲಿ ಸಣ್ಣವರ ಸಾಧನೆಯನ್ನು ಪರಿಗಣಿಸಿ ಅವರಿಗೆ ಪದ್ಮಶ್ರೀ, ಪದ್ಮವಿಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಿದ ಹಾಗೆಯೇ, ರಾಜ್ಯ ಸರಕಾರ ಕೂಡ ಪ್ರಧಾನಿ ಮೋದಿಯವರ ಚಂತನೆಯನ್ನು ಮೈಗೂಡಿಸಿಕೊಂಡು ಗ್ರಾಮೀಣ ಪ್ರದೇಶದ ರವಿ ಶೆಟ್ಟಿಯವರ ಸಾಧನೆಯನ್ನು ಗಮನಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು. ಮುಂದಿನ ದಿನಗಳಲ್ಲಿ ರವಿ ಶೆಟ್ಟಿಯವರಿಗೆ ದಾನ ಮಾಡಲು ಹೆಚ್ಚಿನ ಸಂಪತ್ತನ್ನು ದೇವರು ಕರುಣಿಸಲಿ, ಸುಬ್ರಾಯ ದೇವರ ಸಾನಿಧ್ಯದ ಪಜಿಮಣ್ಣು ಎಲ್ಲರಿಗೂ ಪರಿಮಳದ ಕಂಪನ್ನು ಪಸರಿಸಲಿ ಎಂದು ಅವರು ಹೇಳಿದರು.
ಪ್ರಶಸ್ತಿಗೆ ಸಂಸದ ನಳಿನ್‌ರವರ ಸತತ ಪ್ರಯತ್ನ ಕಾರಣ-ಮಠಂದೂರು:
ಅಧ್ಯಕ್ಷತೆ ವಹಿಸಿದ ಶಾಸಕ ಸಂಜೀವ ಮಠಂದೂರುರವರು ಮಾತನಾಡಿ, ಸಮಾಜದಲ್ಲಿ ವ್ಯಕ್ತಿ ಸಮಾಜಮುಖಿಯಾಗಿ ತನ್ನನ್ನು ತಾನು ತೊಡಗಿಸಿಕೊಂಡಾಗ ಆತ ಸಮಾಜದಲ್ಲಿ ಗೌರವಕ್ಕೆ ಪಾತ್ರನಾಗುತ್ತಾನೆ. ಇಂದಿಲ್ಲಿ ಈರ್ವರು ಸ್ವಾಮೀಜಿಗಳ ಸಮ್ಮುಖದಲ್ಲಿ ಹುಟ್ಟೂರ ಸನ್ಮಾನ ಸ್ವೀಕರಿಸುತ್ತಿರುವುದು ರವಿ ಶೆಟ್ಟಿಯವರ ಧರ್ಮಿಷ್ಟೆ, ಮಾನವೀಯತೆಯನ್ನೊಳಗೊಂಡಿದೆ. ಕಾಯಕವೇ ಕೈಲಾಸ ಎಂಬಂತೆ ಹೊರದೇಶದ ಕತಾರ್‌ನಲ್ಲಿ ದುಡಿದು ಹುಟ್ಟೂರಿನಲ್ಲಿ ಸೇವೆ ಮಾಡುವ ಮೂಲಕ ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ ರವಿ ಶೆಟ್ಟಿಯವರು. ಕೋವಿಡ್ ಸಂದರ್ಭದಲ್ಲಿ ಅಶಕ್ತರಿಗೆ ನೆರವಾಗಲು ಸರಕಾರಕ್ಕೆ ರೂ.10 ಲಕ್ಷ ವಿನಿಯೋಗ ಮಾಡುವ ಮೂಲಕ ಸಾಮಾಜಿಕ ಕಳಕಳಿ ತೋರಿಸಿದ್ದಾರೆ ಎಂದ ಅವರು ರವಿ ಶೆಟ್ಟಿಯವರಿಗೆ ಈ ಪ್ರಶಸ್ತಿ ಸಿಗಲು ಸಂಸದ ನಳಿನ್ ಕಟೀಲುರವರ ಸತತ ಪ್ರಯತ್ನ ಕಾರಣವಾಗಿದೆ. ಅನಿವಾಸಿ ಉದ್ಯಮದಲ್ಲಿ ಸ್ಪರ್ಧೆ ಕಡಿಮೆ ಆದರೂ ಜನಪರ ಸೇವೆಗಾಗಿ ರವಿ ಶೆಟ್ಟಿಯವರಿಗೆ ಪ್ರಶಸ್ತಿ ಸಿಗಬೇಕು ಎನ್ನುವ ಆದಮ್ಯ ಉತ್ಸಾಹ ನಮ್ಮದಾದರೂ ಕೊನೆಯ ಹಂತದಲ್ಲಿ ರವಿ ಶೆಟ್ಟಿಯವರಿಗೆ ಸಮಾಜಸೇವೆಗೆ ಈ ಪ್ರಶಸ್ತಿ ಸಿಗುವಂತಾಯಿತು ಎಂದು ಅವರು ಹೇಳಿದರು.
ಜನ್ಮಭೂಮಿ, ಕರ್ಮಭೂಮಿಯನ್ನು ರವಿಯವರು ಸಮಾನವಾಗಿ ಕಂಡವರು-ಪ್ರೊ|ತುಕಾರಾಮ:
ಶ್ರೀ ರಾಣಿ ಅಬ್ಬಕ್ಕ ತುಳು ಮ್ಯೂಸಿಯಂನ ಅಧ್ಯಕ್ಷ ಪ್ರೊ|ತುಕಾರಾಮರವರು ಅಭಿನಂದನಾ ಭಾಷಣಗೈದು ಮಾತನಾಡಿ, ಸ್ವಾಮಿ ವಿವೇಕಾನಂದರು ಕೂಡ ರವಿ ಶೆಟ್ಟಿಯವರಂತೆ ಶ್ರೀಮಂತರು ಹಾಗೂ ವಿದ್ಯಾವಂತರು. ಸ್ವಾಮಿ ವಿವೇಕಾನಂದರು ಮಾಡಿದ ಸಾಧನೆ ಎಲ್ಲರಿಗೂ ಗೊತ್ತೇ ಇದೆ. ಅದರಂತೆ ನಮ್ಮ ರವಿ ಶೆಟ್ಟಿ ಇಂದು ಅವರು ಮಾಡಿದ ಸಾಧನೆಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಮುಡಿಗೇರಿಸಿ ಎಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ. ವಿವೇಕಾನಂದರಿಗೆ ತನ್ನ ತಾಯಿ ಮೇಲೆ ಅಪೂರ್ವ ಭಕ್ತಿ. ಇದನ್ನ ನಾನು ರವಿ ಶೆಟ್ಟಿಯವರಲ್ಲಿ ಕಂಡೆ. ಎಲ್ಲರೂ ನನ್ನವರು ಎಂಬ ಉದಾತ್ತ ಗುಣವನ್ನು ಅಳವಡಿಸಿಕೊಂಡಿರುವ ರವಿಯವರಿಗೆ ಇದುವೇ ಸಾಕು ಜೀವನದ ಉತ್ತುಂಗಕ್ಕೇರಲು. ಜೀವನದಲ್ಲಿ ವಿನಯತೆ ಮೈಗೂಡಿಸಿದಾಗ ವಿದ್ಯೆಗೆ ಗೌರವ ಹೆಚ್ಚಾಗುತ್ತದೆ ಎಂಬುದಕ್ಕೆ ರವಿಯವರು ನಿದರ್ಶನವಾಗಿದ್ದಾರೆ ಎಂದ ಅವರು ರವಿಯವರ ಉತ್ತುಂಗಕ್ಕೆ ಇಲ್ಲಿನ ಮಣ್ಣು ಕಾರಣ. ಯಾಕೆಂದರೆ ತನ್ನ ಜನ್ಮಭೂಮಿ ಹಾಗೂ ಕರ್ಮಭೂಮಿಯನ್ನು ಅವರು ಸಮಾನವಾಗಿ ಕಂಡವರಾಗಿದ್ದಾರೆ. ಪ್ರಾಮಾಣಿಕತೆ ಮೈಗೂಡಿಸಿಕೊಂಡವ ಖಂಡಿತಾ ಸೋಲಿಗೆ ಹೆದರಲಾರ. ಸರ್ವ ಜನ ಸುಣದ ಹಿಂದೆ ದೇವರು ಇರುತ್ತಾನೆ ಎಂಬುದಕ್ಕೆ ರವಿ ಶೆಟ್ಟಿ ಉದಾಹರಣೆಯಾಗಿದ್ದಾರೆ. ಈಗಿನ ನಾನು, ನನ್ನದು ಎನ್ನುವ ನ್ಯೂಕ್ಲಿಯರ್ ಕುಟುಂಬಕ್ಕಿಂತ ಅಂದಿನ ಕೂಡು ಕುಟುಂಬದಲ್ಲಿ ಸ್ವಾರ್ಥ ಮನೆ ಮಾಡದೆ ಎಲ್ಲರಿಗೂ ಸ್ಥಾನಮಾನವಿತ್ತು. ಈ ನಿಟ್ಟಿನಲ್ಲಿ ರವಿ ಶೆಟ್ಟಿಯವರು ರಾಷ್ಟ್ರಕ್ಕೆ ಮಾದರಿ ಎನಿಸಿಕೊಂಡಿದ್ದಾರೆ ಎಂದು ಹೇಳಿ ಶುಭ ಹಾರೈಸಿದರು.
ಎಲ್ಲರನ್ನೂ ನಮ್ಮವರು ತಿಳಿದು ಸಮಾಜಸೇವೆಯಲ್ಲಿ ತೊಡಗಿಸಿಕೊಂಡವರು-ನವೀನ್ ಭಂಡಾರಿ:
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಮಾತನಾಡಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರವಿ ಶೆಟ್ಟಿಯವರು ಎಲ್ಲರನ್ನೂ ನಮ್ಮವರು ಎಂದು ತಿಳಿದು ಸಮಾಜಸೇವೆಯಲ್ಲಿ ತೊಡಗಿಸಿಕೊಂಡವರಾಗಿದ್ದಾರೆ ಮಾತ್ರವಲ್ಲದೆ ರವಿ ಶೆಟ್ಟಿಯವರ ಸೇವೆ ಎಲ್ಲರಿಗೂ ಮಾದರಿಯಾಗಿದೆ. ರವಿ ಶೆಟ್ಟಿಯವರು ಸಮಾಜಕ್ಕೆ ಏನೆಲ್ಲಾ ಕೊಡುಗೆ ನೀಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ದಕ್ಷಿಣ ಕನ್ನಡದ ಕರಾವಳಿ ಜಿಲ್ಲೆಯ ನಮ್ಮ ಮನೆಯ ರವಿ ಶೆಟ್ಟಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿರುವುದು ಖುಶಿ ತಂದಿದೆ ಎಂದು ಹೇಳಿದರು.
ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ರವಿ ಶೆಟ್ಟಿಯವರು ಜನರ ಕಣ್ಣಿಗೆ ಕಾಣುವಂತೆ ಅನೇಕ ಕೆಲಸ ಮಾಡಿದ್ದರೂ, ಕೆಲವೊಂದು ಜನರ ಕಣ್ಣಿಗೆ ಕಾಣದ ರೀತಿಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಂತಹ ವ್ಯಕ್ತಿತ್ವ ರವಿ ಶೆಟ್ಟಿಯವರದ್ದು. ಅವರಿಗೋಸ್ಕರ ಇಂತಹ ಕಾರ್ಯಕ್ರಮ ಏರ್ಪಡಿಸಿದ್ದು ಶ್ಲಾಘನೀಯ ಮಾತ್ರವಲ್ಲದೆ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಾರ್ಯಕ್ರಮ ಇದಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿ ಕೈಜೋಡಿಸಿದ ರವಿ ಶೆಟ್ಟಿಯವರ ಮುಂದಿನ ಜೀವನ ಫಲಪ್ರದವಾಗಲಿ ಎಂದು ಹೇಳಿ ಹಾರೈಸಿದರು.
ಸಂಪ್ಯ ಅಕ್ಷಯ ಕಾಲೇಜು ಅಧ್ಯಕ್ಷ ಜಯಂತ್ ನಡುಬೈಲು ಮಾತನಾಡಿ, ಯಾರು ಜೀವನದಲ್ಲಿ ಸ್ವಾರ್ಥರಹಿತವಾಗಿ ಕರ್ಮ ಮಾಡುತ್ತಾರೋ ಅವರಿಗೆ ತಕ್ಕ ಫಲ ಸಿಕ್ಕೇ ಸಿಗುತ್ತದೆ ಎನ್ನುವುದಕ್ಕೆ ರವಿ ಶೆಟ್ಟಿಯವರ ಸಮಾಜ ಸೇವೆಯ ಕೊಡುಗೆಗಳೇ ಕಾರಣವಾಗಿದೆ. ದೈವ-ದೇವರ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ರವಿ ಶೆಟ್ಟಿಯವರು ಇದ್ದೇ ಇರುತ್ತಾರೆ. ರವಿ ಶೆಟ್ಟಿಯವರಿಗೆ ಒಲಿದು ಬಂದ ರಾಜ್ಯೋತ್ಸವ ಪ್ರಶಸ್ತಿ ನಮಗೆ ಎಷ್ಟು ಖುಶಿ ಕೊಟ್ಟಿದ್ದೇಯೋ ಅದಕ್ಕಿಂತ ಹೆಚ್ಚು ಖುಶಿ ಅವರ ತಾಯಿ ಸರೋಜಮ್ಮರವರ ಮುಖದಲ್ಲಿ ಕಾಣುತ್ತದೆ. ಇಲ್ಲಿ ಮಗ ರವಿಯವರಿಗೆ ಎಲ್ಲರೂ ಸನ್ಮಾನ ಮಾಡುತ್ತಿರುವಾಗ ಅತ್ತ ಸರೋಜಮ್ಮ ಮಗನ ಸಾಧನೆಗೆ ಪ್ರಶಸ್ತಿ ಬಂತಲ್ಲ ಎಂದು ಆನಂದಭಾಷ್ಪ ಸುರಿಸುತ್ತಿದ್ದಾರೆ ಎಂದ ಅವರು ಪ್ರತಿಯೋರ್ವರೂ ಭೂಮಿಯಲ್ಲಿ ಬದುಕಿದ್ದಷ್ಟು ದಿನ ಉತ್ತಮ ಕಾರ್ಯಗಳನ್ನು ಮಾಡಿ ಉತ್ತಮರು ಎನಿಸಿಕೊಳ್ಳಿ. ಒಳ್ಳೆಯ ಕರ್ಮ ಮಾಡಿದಾಗ ಎಲ್ಲವೂ ತನ್ನಿಂದಾನೇ ಒಲಿದು ಬರುತ್ತದೆ ಎನ್ನುವುದಕ್ಕೆ ರವಿ ಶೆಟ್ಟಿಯವರೇ ಸಾಕ್ಷಿಯಾಗಿದ್ದಾರೆ ಎಂದು ಅವರು ಹೇಳಿದರು.
ರವಿಯವರಿಗೆ ಪದ್ಮಶ್ರೀ, ಪದ್ಮವಿಭೂಷಣ ಪ್ರಶಸ್ತಿ ಲಭಿಸುವಂತಾಗಲಿ-ಶಶಿಕುಮಾರ್ ರೈ ಬಾಲ್ಯೊಟ್ಟು:
ಡಿಸಿಸಿ ಬ್ಯಾಂಕ್ ಮಂಗಳೂರು ಇದರ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ರವಿ ಶೆಟ್ಟಿಯವರು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕವಾಗಿ ಎಲ್ಲರೊಂದಿಗೆ ಸಹೋದರ ಭಾವನೆಯೊಂದಿಗೆ ಗುರುತಿಸಿಕೊಂಡು ಕ್ಷೇತ್ರಕ್ಕೆ ಬೇಕಾದ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಮತ್ತು ಸಂಕಷ್ಟದಲ್ಲಿರುವರ ಕಷ್ಟ-ಕಾರ್ಪಣ್ಯಗಳಿಗೆ ಸದಾ ಸ್ಪಂದಿಸುತ್ತಾ ತನ್ನನ್ನು ತಾನು ತೊಡಗಿಸಿಕೊಂಡಿರುತ್ತಾರೆ. ರಾಜ್ಯ ಸರಕಾರ ರವಿ ಶೆಟ್ಟಿಯವರ ಸಾಧನೆಯನ್ನ ಪರಿಗಣಿಸಿ ಈ ಪ್ರಶಸ್ತಿ ನೀಡಿ ಗೌರವಿಸಿದೆ. ಮುಂದಿನ ದಿನಗಳಲ್ಲಿ ಅವರಿಗೆ ಪ್ರತಿಷ್ಠಿತ ಪದ್ಮಶ್ರೀ, ಪದ್ಮವಿಭೂಷಣ ಪ್ರಶಸ್ತಿ ಲಭಿಸುವಂತಾಗಲಿ. ಮನೆಯ ದೈವ-ದೇವರು, ರ್ಶರೀ ಸುಬ್ರಾಯ ದೇವರು, ಶ್ರೀ ಮಹಾಲಿಂಗೇಶ್ವರ ದೇವರು ರವಿ ಶೆಟ್ಟಯವರಿಗೆ ಸರ್ವ ಅನುಗ್ರಹ ಲಭಿಸಲಿ ಎಂದರು.
ರವಿ ಶೆಟ್ಟಿಯವರು ಸಮಾಜಕ್ಕೆ ಶಕ್ತಿಯಾಗಿ ಬೆಳೆದಿದ್ದಾರೆ-ಭಾಸ್ಕರ ಆಚಾರ್:
ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯ ಸಂಚಾಲಕ ಭಾಸ್ಕರ ಆಚಾರ್ ಹಿಂದಾರು ಮಾತನಾಡಿ, ಜೀವನದುದ್ದಕ್ಕೂ ಜನರ ಪ್ರೀತಿಯನ್ನು ಯಾವ ರೀತಿ ಸಂಪಾದಿಸಬೇಕು ಎನ್ನುವುದಕ್ಕೆ ಸರಳತೆಯನ್ನು ಮೈಗೂಡಿಸಿಕೊಂಡಿರುವ ರವಿ ಶೆಟ್ಟಿಯವರು ನಿದರ್ಶನವಾಗಿದ್ದಾರೆ. ಜೀವನದಲ್ಲಿನ ಸರಳತೆ ರವಿ ಶೆಟ್ಟಿಯವರ ಸಾಧನೆಗೆ ಮೈಲಿಗಲ್ಲಾಗಿದೆ ಎಂದರೆ ತಪ್ಪಾಗದು. ರವಿ ಶೆಟ್ಟಿಯವರು ಸಾಧನೆ ಮಾಡುವ ಮೂಲಕ ಸಫಲತೆಯನ್ನು ಕಂಡುಕೊಂಡವರಾಗಿದ್ದಾರೆ. ನಿಜಕ್ಕೂ ರವಿ ಶೆಟ್ಟಿಯವರು ಸಮಾಜಕ್ಕೆ ಶಕ್ತಿಯಾಗಿ ಬೆಳೆಯಲಿ ಎಂಬುದೇ ನಮ್ಮ ಆಶಯವಾಗಿದೆ ಎಂದು ಹೇಳಿ ಶುಭ ಹಾರೈಸಿದರು.
ಗಣ್ಯರಿಂದ, ಕುಟುಂಬಿಕರಿಂದ ಹಾರೈಕೆ:
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ|ರವಿ ಶೆಟ್ಟಿ ಮೂಡಂಬೈಲುರವರ ಸಾಧನೆಗೆ ಸಭೆಯಲ್ಲಿ ಉಪಸ್ಥಿತರಿದ್ದ ಗಣ್ಯರು, ಹಿತೈಷಿಗಳು ಹಾಗೂ ಮೂಡಂಬೈಲು, ದೋಣಿಂಜೆಗುತ್ತು ಕುಟುಂಬಿಕರಿಂದ ಶುಭ ಹಾರೈಕೆಯ ಮಾತುಗಳು ವ್ಯಕ್ತವಾದವು. ತನ್ನನ್ನು ಶಭ ಹಾರೈಸಲು ಬಂದಂತಹ ಎಲ್ಲರನ್ನೂ ರವಿ ಶೆಟ್ಟಿಯವರು ಆತ್ಮೀಯದಿಂದ, ಮುಗುಳ್ನಗೆಯೊಂದಿಗೆ ಬರ ಮಾಡಿಕೊಂಡರು. ಸಂಜೆ ನಡೆದ ಭವ್ಯ ಮೆರವಣಿಗೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಬಿಂಬಿಸುವ ಬಾವುಟಗಳು ರಾರಾಜಿಸುತ್ತಿದ್ದವು. ಮೆರವಣಿಗೆಯುದ್ದಕ್ಕೂ ಸುಡುಮದ್ದುಗಳ ಪ್ರದರ್ಶನ, ಮೆರವಣಿಗೆಯಲ್ಲಿ ನೂರಾರು ವಾಹನಗಳು, ಚೆಂಡೆ-ವಾದ್ಯಗಳ ರಂಗು ಮೇಳೈಸಿತ್ತು.
ಮುಂಡೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪುಷ್ಪಾ, ಉದ್ಯಮಿ ಉಮೇಶ್ ಕರ್ಕೇರಾ ನಾಡಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ರವಿ ಶೆಟ್ಟಿ ಮೂಡಂಬೈಲು ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಸ್ವಾಗತಿಸಿ, ರತ್ನಾಕರ್ ರೈ ಕೆದಂಬಾಡಿಗುತ್ತು ವಂದಿಸಿದರು. ಅನಿಲ್ ಕುಮಾರ್ ಕಣ್ಣಾರ್‌ನೂಜಿ, ಈಶ್ವರ್ ಅಜಲಾಡಿ, ಬಾಲಚಂದ್ರ ಗೌಡ ಕಡ್ಯ, ಬಾಲಕೃಷ್ಣ ಕುರೆಮಜಲು, ರಜನಿ, ಶೇಷಪ್ಪ ಶೆಟ್ಟಿ ಪೊನೋನಿ, ಶ್ರೀರಂಗ ಶಾಸ್ತ್ರಿ ಮಣಿಲ, ಬಾಲಕೃಷ್ಣ ಕಲ್ಲೂರಾಯ, ಸದಾಶಿವ ಶೆಟ್ಟಿ ಪಟ್ಟೆ, ಸುಧೀರ್ ಶೆಟ್ಟಿ ನೇಸರರವರು ಅತಿಥಿಗಳಿಗೆ ಹೂಗುಚ್ಛ ನೀಡಿ ಗೌರವಿಸಿದರು. ರತ್ನಾಕರ್ ರೈ ಕೆದಂಬಾಡಿಗುತ್ತು ವಂದಿಸಿದರು. ಸುದ್ದಿ ಸಮೂಹ ಸಂಸ್ಥೆಗಳ ಹೇಮಾ ಜಯರಾಂ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಬಳಿಕ ಭೋಜನ ಕೂಟವು ಏರ್ಪಟ್ಟಿತ್ತು.
ಪ್ರಶಸ್ತಿ ಊರಿಗೆ, ದಿ.ಉದಯ ಚೌಟರವರಿಗೆ ಅರ್ಪಣೆ..
ನಮಗೆ ಒಳ್ಳೇದು ಮಾಡು ಎಂದು ದೇವರಲ್ಲಿ ಪ್ರಾರ್ಥಿಸುವ ಬದಲು ನಮ್ಮ ಮೇಲಿನ ಕಷ್ಟಗಳನ್ನು ಎದುರಿಸಲು, ನಿವಾರಿಸಲು ಶಕ್ತಿ ಕೊಡು ಎಂದು ಪ್ರಾರ್ಥಿಸಿದಾಗ ದೇವರು ಸಂತೃಪ್ತಿಯಾಗಿ ಅನುಗ್ರಹಿಸುವನು. ನನಗೆ ಪ್ರಾಯ 50 ವರುಷದವರೆಗೆ ಯಾವುದೇ ಪ್ರಶಸ್ತಿಗಳು ಬಂದಿಲ್ಲ. 2009 ರಲ್ಲಿ ಇದೇ ರಾಜ್ಯೋತ್ಸವ ಪ್ರಶಸ್ತಿ ನನ್ನನ್ನು ಅರಸಿಕೊಂಡು ಬಂದಿತ್ತು. ಆಗ ನಾನು ಆ ಪ್ರಶಸ್ತಿಗೆ ಅರ್ಹನಲ್ಲ ಎಂದು ಹೇಳಿದ್ದೆ. ಇತ್ತೀಚೆಗೆ ಕಬಡ್ಡಿ ಆಟಗಾರ ಉದಯ ಚೌಟರವರ ನೇತೃತ್ವದಲ್ಲಿ ಕತಾರ್‌ನಲ್ಲಿ ಕಬಡ್ಡಿ ಪಂದ್ಯಾಟವನ್ನು ಆಯೋಜಿಸಿದ್ದ ಸಂದರ್ಭದಲ್ಲಿ ಚೌಟರವರು ನಿಮಗೆ ಯಾಕೆ ರಾಜ್ಯೋತ್ಸವ ಪ್ರಶಸ್ತಿ ನೀಡಬಾರದು ಎಂದು ಹೇಳಿ ಅದಕ್ಕೆ ಬೇಕಾದ ಸಮಗ್ರ ಮಾಹಿತಿಗಳನ್ನು ಸರಕಾರಕ್ಕೆ ಒಪ್ಪಿಸಿದರು. ಸಂಸದ ಕಟೀಲ್, ಮಾಜಿ ಶಾಸಕರಾದ ರಮಾನಾಥ ರೈ, ಶಕುಂತಳಾ ಶೆಟ್ಟಿ, ಶಾಸಕ ಮಠಂದೂರು ಸೇರಿದಂತೆ ಹಲವಾರು ಗಣ್ಯರು ಈ ಪ್ರಶಸ್ತಿ ಹಿಂದೆ ದುಡಿದಿದ್ದಾರೆ. ಅವರಿಗೆ ಕೃತಜ್ಞತೆಗಳು. ಆದರೆ ನನಗೆ ಪ್ರಶಸ್ತಿ ಬಂದಾಗ ಅದನ್ನು ಆನಂದಿಸಲು ಉದಯ ಚೌಟರವರು ನಮ್ಮುಂದೆ ಇಲ್ಲದಿರುವುದೇ ಬೇಸರವಾಗಿದೆ. ಈ ಪ್ರಶಸ್ತಿ ಇಡೀ ಊರಿಗೆ ಮತ್ತು ದಿ.ಉದಯ ಚೌಟರವರಿಗೆ ಸಮರ್ಪಿಸುತ್ತಿದ್ದೇನೆ.
ಭವ್ಯ ಮೆರವಣಿಗೆ..
ಸಭಾ ಕಾರ್ಯಕ್ರಮಕ್ಕೆ ಮುನ್ನ ಸಂಜೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ|ರವಿ ಶೆಟ್ಟಿ ಮೂಡಂಬೈಲುರವರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಡಾ|ರವಿ ಶೆಟ್ಟಿರವರನ್ನು ತೆರೆದ ವಾಹನದಲ್ಲಿ ರವಿ ಶೆಟ್ಟಿ ಮೂಡಂಬೈಲು ಅಭಿನಂದನಾ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲರವರು ಬೃಹತ್ ಹೂಹಾರ ಹಾಗೂ ತಾ|ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್‌ರವರು ಕನ್ನಡ ರಾಜ್ಯೋತ್ಸವದ ಶಾಲನ್ನು ಡಾ|ರವಿ ಶೆಟ್ಟಿಯವರಿಗೆ ಹಾಕುವ ಮೂಲಕ ಚಾಲನೆ ನೀಡಲಾಯಿತು. ಮೆರವಣಿಗೆಯು ದೇವಸ್ಥಾನದ ವಠಾರದಿಂದ ಹೊರಟು ಮುಖ್ಯರಸ್ತೆ, ದರ್ಬೆ-ಮುಕ್ರಂಪಾಡಿ-ಮೊಟ್ಟೆತ್ತಡ್ಕ-ಪಂಜಳ ಮಾರ್ಗವಾಗಿ ಮುಂಡೂರಿನ ಸಭಾ ವೇದಿಕೆಗೆ ಆಗಮಿಸಿತು. ಮೆರವಣಿಗೆಯುದ್ದಕ್ಕೂ ಡಾ|ರವಿ ಶೆಟ್ಟಿಯವರ ತಾಯಿ ಸರೋಜಿನಿ ಶೆಟ್ಟಿ ಜೀಪಿನಲ್ಲಿದ್ದು ತನ್ನ ಪುತ್ರನ ಸಾಧನೆಯನ್ನು ಕಣ್ತುಂಬಿಕೊಂಡರು. ಮೆರವಣಿಗೆಯುದ್ದಕ್ಕೂ
ರವಿಯಣ್ಣನ ಸನ್ಮಾನ ಅದು ಇಡೀ ಸಮಾಜಕ್ಕೆ ಸನ್ಮಾನ…
ಸಮಾಜದಲ್ಲಿ ಎಲ್ಲರೂ ಒಳ್ಳೆಯ ರೀತಿಯಲ್ಲಿ ಬದುಕಬೇಕು, ತಾನು ಉತ್ತಮ ಬದುಕನ್ನು ಸಾಗಿಸಿದರೆ ಸಾಲದು, ಸಮಾಜದಲ್ಲಿ ಇತರರು ಕೂಡ ಉತ್ತಮ ಬದುಕನ್ನು ಸಾಗಿಸಬೇಕು ಎನ್ನುವ ಆಶಯ ರವಿ ಶೆಟ್ಟಿಯವರದ್ದು. ಈ ನಿಟ್ಟಿನಲ್ಲಿ ಸರಕಾರ ನೀಡಿದ ಪ್ರಶಸ್ತಿ ಔಚಿತ್ಯಪೂರ್ಣವೆನಿಸುತ್ತದೆ. ರವಿಯಣ್ಣನ ಸನ್ಮಾನ ಎಂದರೆ ಅದು ಇಡೀ ಸಮಾಜಕ್ಕೆ ಸನ್ಮಾನ. ಇದು ನಮ್ಮ ಭಾಗ್ಯವಾಗಿದೆ. ರವಿಯಣ್ಣರವರ ಸಮಾಜದಲ್ಲಿನ ಗೌರವದ ಸ್ಥಾನಮಾನ ಮುಂದಿನ ಪೀಳಿಗೆಗೆ ಆದರ್ಶವಾಗಿದೆ. ರವಿಯಣ್ಣರವರ ಸನ್ಮಾನದ ಸಭೆಯಲ್ಲಿ ಸೇರಿದವರ ಮನಸ್ಸು ಒಂದೇ ಆಗಿದೆ ಅದೂ ಕೂಡ ನಮ್ಮ ಯೋಗ ಮತ್ತು ದೊಡ್ಡ ಭಾಗ್ಯ ಎಂದ ಅವರು ರವಿಯಣ್ಣ ಹುಟ್ಟೂರು ಮಾತ್ರವಲ್ಲ ಹೊರದೇಶದಲ್ಲಿ ದುಡಿದು ಅದೆಷ್ಟೋ ಮಂದಿಯ ಅನ್ನದ ಬಟ್ಟಲು ಎನಿಸಿಕೊಂಡಿದ್ದು ಅವರಲ್ಲಿನ ಔದಾರ್ಯತೆ ಮತ್ತು ಹೃದಯ ವೈಶಾಲ್ಯತೆ ಎತ್ತಿ ತೋರಿಸುತ್ತಿದೆ. ರವಿಯಣ್ಣನಿಗೆ ಮತ್ತಷ್ಟು ಸಾಧನೆ ಮಾಡಲು ದೇವರು ಶಕ್ತಿ ನೀಡಲಿ, ಅವರ ಜೀವನ ಪಾವನವಾಗಲಿ. ಜಾತಿ ಆಚರಣೆ ಇರಲಿ, ನೀತಿಯೊಂದಿಗೆ ಹಿಂದೂ ಸಾಮ್ರಾಜ್ಯ ಕಟ್ಟೋಣ.
-ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಮಾಣಿಲ ಕ್ಷೇತ್ರ