ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ನಿಂದ ಅರ್ಜಿ ಆಹ್ವಾನ: ನ.15 ಕೊನೇಯ ದಿನ

0

ಶಕುಂತಳಾ ಶೆಟ್ಟಿ, ಹೇಮನಾಥ ಶೆಟ್ಟಿ, ಭರತ್ ಮುಂಡೋಡಿ, ಕೃಪಾ ಅಮರ್ ಆಳ್ವ, ದಿವ್ಯಪ್ರಭಾ ಚಿಲ್ತಡ್ಕ, ಎಂ.ಎಸ್. ಮಹಮ್ಮದ್, ಎಂ.ಬಿ. ವಿಶ್ವನಾಥ ರೈ, ಡಾ. ರಾಜಾರಾಮ್, ಚಂದ್ರಹಾಸ್ ಶೆಟ್ಟಿ, ಸತೀಶ್ ಕೆಡೆಂಜಿಯವರಿಂದ ಕೆಪಿಸಿಸಿಗೆ ಅರ್ಜಿ ಸಲ್ಲಿಕೆ

ಪುತ್ತೂರು: 2023ರಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಆಕಾಂಕ್ಷೆ ಉಳ್ಳವರು ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೂಚಿಸಿದ್ದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದಿಂದಲೂ ಹಲವರು ಕಾಂಗ್ರೆಸ್ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಇನ್ನೂ ಕೆಲವರು ಅರ್ಜಿ ಸಲ್ಲಿಸಲಿದ್ದಾರೆ.
5 ಸಾವಿರ ರೂ ಅರ್ಜಿಯ ಶುಲ್ಕ ಪಾವತಿಸಿ 2 ಲಕ್ಷ ರೂಪಾಯಿ ಡಿ.ಡಿ.ಯನ್ನು ಕೆಪಿಸಿಸಿಗೆ ನೀಡಬೇಕಾಗಿದೆ. ಅಭ್ಯರ್ಥಿಯಾಗಲು ಬಯಸಿ ಅರ್ಜಿ ಸಲ್ಲಿಸುವವರು ಕೆಪಿಸಿಸಿಯ ಷರತ್ತಿಗೆ ಬದ್ಧರಾಗಬೇಕಾಗಿದೆ. ಅಂತಿಮವಾಗಿ ಚುನಾವಣೆಗೆ ಯಾವುದೇ ಅಭ್ಯರ್ಥಿಯನ್ನು ಪಕ್ಷ ಅಂತಿಮಗೊಳಿಸಿದರೂ ಯಾವುದೇ ಬಂಡಾಯಕ್ಕೆ ಅವಕಾಶ ನೀಡದೆ ಅಧಿಕೃತ ಅಭ್ಯರ್ಥಿಗೆ ಬೆಂಬಲ ನೀಡಬೇಕು ಎಂಬ ಷರತ್ತಿಗೆ ಒಪ್ಪಿಕೊಂಡು ಈಗಾಗಲೇ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಹಲವರು ಅರ್ಜಿ ಸಲ್ಲಿಸಿದ್ದು ಇನ್ನು ಕೆಲವರು ಅರ್ಜಿ ಸಲ್ಲಿಸಲು ಕೊನೇಯ ದಿನವಾದ ನ.15ರಂದು ಕೆಪಿಸಿಸಿಗೆ ಅರ್ಜಿ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ. ಲಭ್ಯ ಮಾಹಿತಿಯ ಪ್ರಕಾರ, ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಹಾಲಿ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ ಕೆ.ಬಿ, ಕೆಪಿಸಿಸಿ ವಕ್ತಾರ ಭರತ್ ಮುಂಡೋಡಿ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷೆ ಡಾ.ಕೃಪಾ ಅಮರ್ ಆಳ್ವ, ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷೆ ಡಾ. ದಿವ್ಯಪ್ರಭಾ ಚಿಲ್ತಡ್ಕ, ಜಿ.ಪಂ. ಮಾಜಿ ಸದಸ್ಯ ಎಂ.ಎಸ್.ಮಹಮ್ಮದ್, ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ ಮತ್ತು ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷರಾಗಿರುವ ಕೆಪಿಸಿಸಿ ಸದಸ್ಯ ಸತೀಶ್ ಕುಮಾರ್ ಕೆಡೆಂಜಿರವರು ಕೆಪಿಸಿಸಿಯ ಕದ ತಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೂ ಹಲವರು ಆಕಾಂಕ್ಷಿಗಳಿದ್ದು ಅದರಲ್ಲಿ ಕೆಲವರು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ ಎಂದೂ ಇನ್ನೂ ಕೆಲವರು ನ.15ರಂದು ಅರ್ಜಿ ಸಲ್ಲಿಸಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಅಧಿಕೃತ ಮಾಹಿತಿ ಯಾರಿಂದಲೂ ಲಭ್ಯವಾಗಿಲ್ಲ.

LEAVE A REPLY

Please enter your comment!
Please enter your name here