ಉದ್ಘಾಟನೆಗೊಂಡು ತಿಂಗಳಾದರೂ….. ಸಾರ್ವಜನಿಕರ ಉಪಯೋಗಕ್ಕೆ ಸಿಗದ ಗರಡಿ ಮನೆ

0

ಉಪ್ಪಿನಂಗಡಿ: ಇಲ್ಲಿನ ಗ್ರಾ.ಪಂ. ಅಧೀನದಲ್ಲಿರುವ ಗರಡಿ ಮನೆ ಉದ್ಘಾಟನೆಗೊಂಡು ತಿಂಗಳು ಕಳೆದರೂ, ಅದು ಸಾರ್ವಜನಿಕ ಉಪಯೋಗಕ್ಕೆ ಮಾತ್ರ ಇನ್ನೂ ಸಿಕ್ಕಿಲ್ಲ. ಆದ್ದರಿಂದ ಇದು ಉದ್ಘಾಟನೆಗೆ ಮಾತ್ರ ಸೀಮಿತವಾಗಿದೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಇದೀಗ ಕೇಳಿ ಬರುತ್ತಿದೆ.

ಇಲ್ಲಿನ ಒಂದನೇ ವಾರ್ಡ್‌ನ ಕೆಂಪಿಮಜಲು ಎಂಬಲ್ಲಿರುವ ಈ ಗರಡಿ ಮನೆಯ ಉದ್ಘಾಟನೆಯನ್ನು ಒಂದು ತಿಂಗಳ ಹಿಂದೆ ಪುತ್ತೂರು ಶಾಸಕ ಸಂಜೀವ ಮಠಂದೂರು ನೆರವೇರಿಸಿ ತೆರಳಿದ್ದರು. ಅಂದೊಮ್ಮೆ ಇದರ ಬಾಗಿಲು ತೆರೆದದ್ದು ಬಿಟ್ಟರೆ ಮತ್ತೆ ನಿರಂತರವಾಗಿ ಅದು ಬೀಗ ಜಡಿದ ಸ್ಥಿತಿಯಲ್ಲಿದೆ. ಗ್ರಾಮಸ್ಥರ ದೇಹದ ಫಿಟ್ನೆಸ್ ವರ್ಕೌಟ್‌ಗಾಗಿ ಗರಡಿ ಮನೆ ನಿರ್ಮಿಸುವ ಉದ್ದೇಶದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಡಳಿತಾವಧಿಯಲ್ಲಿ ಅಂದಿನ ಶಾಸಕಿ ಶಕುಂತಳಾ ಟಿ. ಶೆಟ್ಟಿಯವರು ರೂ. 10 ಲಕ್ಷಕ್ಕೂ ಮಿಕ್ಕಿ ಅನುದಾನ ನೀಡಿದ್ದರು. ಸುಸಜ್ಜಿತವಾಗಿ ಗರಡಿ ಮನೆಯ ಕಟ್ಟಡವು ಕೆಂಪಿಮಜಲಿನ ಬಳಿ ನಿರ್ಮಾಣಗೊಂಡಿದ್ದು, ಬಳಿಕ ಅದನ್ನು ಉಪ್ಪಿನಂಗಡಿ ಗ್ರಾ.ಪಂ.ಗೆ ಹಸ್ತಾಂತರಿಸಲಾಗಿತ್ತು. ಗ್ರಾ.ಪಂ. ವತಿಯಿಂದ ಗರಡಿ ಮನೆಗೆ ಬೇಕಾದ ಸಲಕರಣೆಗಳನ್ನು ಖರೀದಿಸಿ ಅಳವಡಿಸಲಾಗಿತ್ತು. ಆ ಬಳಿಕ ತಿಂಗಳ ಹಿಂದೆ ಇದರ ಉದ್ಘಾಟನೆಯೂ ನಡೆದಿತ್ತು. ಆದರೆ ಇನ್ನೂ ಕೂಡಾ ಇದು ಬೀಗ ಜಡಿದ ಸ್ಥಿತಿಯಲ್ಲಿದ್ದು, ಇದರ ಪ್ರಯೋಜನ ಮಾತ್ರ ಸಾರ್ವಜನಿಕರಿಗೆ ಸಿಕ್ಕಿಲ್ಲ.

LEAVE A REPLY

Please enter your comment!
Please enter your name here