ಸಾಹಿತ್ಯಕ್ಕೆ ಎಲ್ಲರನ್ನೂ ಒಂದುಗೂಡಿಸುವ ಶಕ್ತಿ ಇದೆ : ಕುಂಬ್ರ ದುರ್ಗಾಪ್ರಸಾದ್ ರೈ
ಪುತ್ತೂರು: ಯಾವುದೇ ಜಾತಿ, ಧರ್ಮ,ಮತ, ರಾಜಕೀಯ ಭೇದವಿಲ್ಲದ ಕ್ಷೇತ್ರವೆಂದರೆ ಸಾಹಿತ್ಯ ಆಗಿದೆ. ಸಾಹಿತ್ಯಕ್ಕೆ ಎಲ್ಲರನ್ನ ಒಗ್ಗೂಡಿಸುವ ವಿಶೇಷ ಶಕ್ತಿ ಇದೆ. ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ನಾಡಗೀತೆ ಕಂಠಪಾಠವಾಗುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ನಾಡಗೀತೆಯ ಸ್ಪರ್ಧೆಯನ್ನು ಆಯೋಜಿಸಬೇಕು ಎಂದು ಕಾರ್ಯಕ್ರಮದ ಉದ್ಘಾಟಕರಾದ ಕುಂಬ್ರ ದುರ್ಗಾ ಪ್ರಸಾದ್ ರೈಯವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಕ.ಸಾ.ಪ. ಪುತ್ತೂರು, ಒಳಮೊಗ್ರು ಗ್ರಾಮ ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಮತ್ತು ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಿತ್ರಂಪಾಡಿ ಜಯರಾಮ ರೈ ಅಬುದಾಭಿ ಅವರ ಮಹಾ ಪೋಷಕತ್ವದಲ್ಲಿ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಎಂಬ ಘೋಷ ವಾಕ್ಯದಲ್ಲಿ ನಡೆಯುವ ಗ್ರಾಮದಲ್ಲೂ ಸಾಹಿತ್ಯ ಸಂಭ್ರಮ ಇದರ ಪ್ರಥಮ ಕಾರ್ಯಕ್ರಮ ಒಳಮೊಗ್ರು ಗ್ರಾಮದ ಕುಂಬ್ರದ ನವೋದಯ ರೈತ ಸಭಾ ಭವನದಲ್ಲಿ ನ. 13 ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕ. ಸಾ. ಪ. ಪುತ್ತೂರು ತಾಲೂಕು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ರವರು ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಸರಣಿ ಕಾರ್ಯಕ್ರಮ ತಾಲೂಕಿನ 32 ಗ್ರಾಮಗಳಲ್ಲಿಯೂ ನಡೆಯಲಿದೆ. ಇದರಲ್ಲಿ ಸಾಹಿತ್ಯಾಸಕ್ತ ವಿವಿಧ ಸಂಘ ಸಂಸ್ಥೆಗಳನ್ನು ಹಾಗೂ ಉದಯೋನ್ಮುಖ ಸಾಹಿತಿಗಳನ್ನು ಸಾಹಿತ್ಯ ಪರಿಷತ್ ಜೊತೆ ಸೇರಿಸಿ ನಡೆಸುವ ಸರಣಿ ಕಾರ್ಯಕ್ರಮವಿದು. ಗ್ರಾಮದ ಸಾಹಿತಿಗಳನ್ನ ಗುರುತಿಸಿ ಗೌರವಿಸುವ ಹಾಗೂ ಯುವ ಸಾಹಿತಿಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ಬರಮಾಡಿ ಪ್ರೋತ್ಸಾಹಿಸುವ ಸಾಹಿತ್ಯ ಸಂಭ್ರಮವೆಂದರು.
ಮುಖ್ಯ ಅಭ್ಯಾಗತರಾಗಿ ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ, ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ವಿಶ್ವ ಯುವಕ ಮಂಡಲ ಅಧ್ಯಕ್ಷ ಅಶೋಕ್ ಪೂಜಾರಿ ಬಡೆಕ್ಕೋಡಿ, ಕುಂಬ್ರ ಸ. ಪ. ಪೂ. ಕಾಲೇಜು ಪ್ರಾಂಶುಪಾಲ ಗೋಪಾಲಕೃಷ್ಣ ಉಪಾಧ್ಯಾಯ ಮತ್ತು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಹೆಚ್. ಜಿ. ಶ್ರೀಧರ್ ಸಂದರ್ಭೋಚಿತವಾಗಿ ಮಾತನಾಡಿದರು.
ಕವಿಗೋಷ್ಠಿ, ಸನ್ಮಾನ
ಸಭಾ ಕಾರ್ಯಕ್ರಮದ ಬಳಿಕ ನಡೆದ ಮಕ್ಕಳ ಕವಿಗೋಷ್ಠಿ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ, ನಿವೃತ್ತ ಶಿಕ್ಷಕ ನಾರಾಯಣ ರೈ ಕುಕ್ಕುವಳ್ಳಿ ಹಾಗೂ ಯುವ ಮತ್ತು ಹಿರಿಯರ ಕವಿಗೋಷ್ಠಿ ಅಧ್ಯಕ್ಷತೆಯನ್ನು ಸಾಹಿತಿ, ಉಪನ್ಯಾಸಕ ರಘು ಇಡ್ಕಿದು ವಹಿಸಿದ್ದರು. ಒಳಮೊಗ್ರು ಗ್ರಾಮದ ವಿವಿಧ ಶಾಲೆಗಳಿಂದ ಸುಮಾರು ೨೯ ಮಕ್ಕಳು ಕಥೆ ಮತ್ತು ಕವನ ವಾಚಿಸಿದರು. ಒಟ್ಟು ೮೦ ಕವಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಹತ್ತು ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು. ಹಿರಿಯ ಸಾಹಿತಿ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ, ಚಲನಚಿತ್ರ ನಟ, ರಂಗ ಕಲಾವಿದ ಸುಂದರ ರೈ ಮಂದಾರ ಮತ್ತು ಚಿಗುರೆಲೆ ಸಾಹಿತ್ಯ ಬಳಗದ ಸ್ಥಾಪಕಾಧ್ಯಕ್ಷ ಚಂದ್ರಮೌಳಿ ಕಡಂದೇಲುರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸುಜಯ ಎಸ್ ಪ್ರಾರ್ಥಿಸಿ, ಬಮಿತ ಎಂ. ಹೆಚ್. ಸ್ವಾಗತಿಸಿ, ನಾರಾಯಣ ಕುಂಬ್ರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಚೈತ್ರಾ ಮಾಯಿಲಕೊಚ್ಚಿ, ಸುಪ್ರೀತಾ ಚರಣ್ ಪಾಲಪ್ಪೆ ಮತ್ತು ಅಖಿಲಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಹಿತೇಶ್ ಕುಮಾರ್. ಎ. ವಂದಿಸಿದರು. ಅಪೂರ್ವ ಕಾರಂತ್ , ಮಂಜುಶ್ರೀ ನಲ್ಕ ,ಅನ್ನಪೂರ್ಣ. ಎನ್. ಕೆ. ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಉಚಿತ ಕಣ್ಣಿನ ತಪಾಸಣಾ ಶಿಬಿರ
ಇದೇ ಸಂದರ್ಭದಲ್ಲಿ ಪುತ್ತೂರಿನ ಕಾಮತ್ ಒಪ್ಟಿಕಲ್ಸ್ ವತಿಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಯಿತು. ಕುಂಬ್ರ ಕಾಲೇಜಿನ ಪ್ರಾಚಾರ್ಯ ಗೋಪಾಲಕೃಷ್ಣ ಉಪಾಧ್ಯಾಯ ಅವರು ಈ ಶಿಬಿರವನ್ನು ಉದ್ಘಾಟಿಸಿದರು. ಸಾರ್ವಜನಿಕರು ಇದರ ಸದುಪಯೋಗ ಪಡುಕೊಂಡರು.