ಕಿದು ಸಿಪಿಸಿಆರ್‌ಐನಲ್ಲಿ ನ. 19ರಿಂದ 23 ರವರೆಗೆ ಮೆಗಾ ಕಿಸಾನ್ ಮೇಳ, ಕೃಷಿ ವಸ್ತು ಪ್ರದರ್ಶನ

ಸುದ್ದಿಗೋಷ್ಠಿಯಲ್ಲಿ ಸಿಪಿಸಿಆರ್‌ಐ ವಿಜ್ಞಾನಿ ಡಾ| ಹೆಬ್ಬಾರ್ ಹೇಳಿಕೆ

ಕಡಬ: ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕಿದುವಿನ ಸಿಪಿಸಿಆರ್‌ಐ ಸಂಶೋಧನಾ ಕೇಂದ್ರಕ್ಕೀಗ 50ರ ಹರೆಯ. ತನ್ನ ಸುವರ್ಣ ಮಹೋತ್ಸವದ ಸುಸಂದರ್ಭದಲ್ಲಿ ನ.19ರಿಂದ 23ರ ತನಕ ಕಿದು ಸಂಶೋಧನಾ ಕೇಂದ್ರದಲ್ಲಿ ಮೆಗಾ ಕಿಸಾನ್ ಮೇಳ ಮತ್ತು ಎಗ್ರೀ ಎಕ್ಸ್ಪೋ ಆಯೋಜಿಸಲಾಗಿದೆ ಎಂದು ಸಿಪಿಸಿಆರ್‌ಐ ಮುಖ್ಯ ವಿಜ್ಞಾನಿ ಡಾ| ಕೆ.ಪಿ. ಹೆಬ್ಬಾರ್ ಹೇಳಿದರು.

ಕಿದು ಸಿಪಿಸಿಆರ್‌ಐನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಉತ್ತಮ ಗುಣಮಟ್ಟದ ಗಿಡಗಳ ಉತ್ಪಾದನೆಗಾಗಿ ಕಿದುವಿನ 120 ಹೆಕ್ಟೇರ್ ಪ್ರದೇಶದಲ್ಲಿ ಸಿಪಿಸಿಆರ್‌ಐ ಸಂಶೋಧನಾ ಕೇಂದ್ರವನ್ನು 1972ರಲ್ಲಿ ಪ್ರಾರಂಭಿಸಲಾಯಿತು.

ನಂತರ 1998ರಲ್ಲಿ, ದಕ್ಷಿಣ ಏಷ್ಯಾ ಮತ್ತು ಮಧ್ಯಪ್ರಾಚ್ಯ ವಲಯಗಳ ಅಂತರ್ರಾಷ್ಟ್ರೀಯ ತೆಂಗಿನ ಜೀನ್ ಬ್ಯಾಂಕನ್ನು ಸ್ಥಾಪಿಸಲಾಯಿತು. ಪ್ರಸ್ತುತ ಕೇಂದ್ರವು ತೆಂಗಿನಕಾಯಿ ಮತ್ತು ಕೋಕೋ ಜರ್ಮ್ ಪ್ಲಾಸ್ಮ್‌ಗಳನ್ನು ಸಂರಕ್ಷಿಸುತ್ತದೆ. ಇದೀಗ ವಾರ್ಷಿಕವಾಗಿ ಸುಮಾರು 75,೦೦೦ ತೆಂಗು, 4 ಲಕ್ಷ ಅಡಿಕೆ ಮತ್ತು 50,೦೦೦ ಕೋಕೋ ನಾಟಿ ಸಾಮಗ್ರಿಗಳು ಕೃಷಿಕರಿಗೆ ಪೂರೈಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸುವರ್ಣಮಹೋತ್ಸವ ಸಂಭ್ರಮ:
50 ಸಾವಿರ ಮಂದಿ ಭಾಗಿ: 2022 ನೇ ವರ್ಷವು ಕಿದು ಸಂಶೋಧನಾ ಕೇಂದ್ರದ ಸುವರ್ಣ ಮಹೋತ್ಸವ ವರ್ಷ. ಇದರ ಅಂಗವಾಗಿ ನ. 19ರಿಂದ 23ರತನಕ ಮೆಗಾ ಕಿಸಾನ್ ಮೇಳ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಮತ್ತು ನೆರೆಯ ಹಾಗೂ ಪ್ರಮುಖ ಉತ್ಪಾದಕ ರಾಜ್ಯಗಳಿಂದ ಐದು ದಿನಗಳಲ್ಲಿ ಸುಮಾರು 50 ಸಾವಿರ ಮಂದಿ ಭಾಗವಹಿಸಲಿದ್ದಾರೆ. ಸುಮಾರು 20 ಸಾವಿರ ಬೆಳೆಗಾರರು, 30 ಸಾವಿರ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದರು.

ಎಕ್ಸ್ ಪೋ:
ಐದು ದಿನಗಳ ಎಗ್ರಿ ಎಕ್ಸ್‌ಪೋದಲ್ಲಿ ಕೃಷಿ ಒಳಸುರಿ ಮತ್ತು ಸೇವೆಗಳು, ಮೌಲ್ಯವರ್ಧನೆ ಮತ್ತು ಹೈಟೆಕ್ ತೋಟಗಾರಿಕೆ ಕ್ಷೇತ್ರಗಳಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಲಯದಿಂದ 150 ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸಲಿದ್ದಾರೆ. ಕೃಷಿ ವಸ್ತುಗಳು, ಗಿಡಗಳು, ಗ್ರಾಮೀಣ ಆಹಾರ ಮಳಿಗೆ, ದೇಶಾದ್ಯಂತ ಸವಿಯುವ ಖಾದ್ಯಗಳು, ಸಾವಯವ ಗೊಬ್ಬರ, ಕೀಟ ನಾಶಕ, ಕೈಮಗ್ಗದ ಬಟ್ಟೆ, ತಾಂತ್ರಿಕ ವಸ್ತುಗಳು, ವಿದ್ಯುತ್ ಚಾಲಿತ ವಾಹನಗಳ ಪ್ರಾತ್ಯಕ್ಷಿಕೆ, ಕೃಷಿ ಯಂತ್ರೋಪಕರಣ, ಗೊಬ್ಬರ, ವಿವಿಧ ಬೆಳೆಗಳು, ವಿವಿಧ ಬೀಜಗಳು, ರಾಸಾಯನಿಕ ಗೊಬ್ಬರ, ರೈತರ ಉತ್ಪನ್ನಗಳ ಪ್ರದರ್ಶನ ವ್ಯವಸ್ಥೆ ಇದೆ ಎಂದು ಡಾ| ಹೆಬ್ಬಾರ್ ವಿವರಿಸಿದರು.

ಎಲೆಚುಕ್ಕಿ ರೋಗಕ್ಕೆ ಪರಿಹಾರ:
ಎಲ್ಲಾ ಐದು ದಿನಗಳಲ್ಲೂ ವಿಜ್ಞಾನಿಗಳು- ಕೃಷಿಕರ ಸಮ್ಮುಖದಲ್ಲಿ ವಿಚಾರಗೋಷ್ಠಿ, ತರಬೇತಿ ಕಾರ್ಯಕ್ರಮಗಳು ಮತ್ತು ವಿಚಾರ ಸಂಕಿರಣಗಳನ್ನು ನಡೆಸಲಾಗುವುದು. ಎಲೆಚುಕ್ಕಿ ರೋಗ, ಹಳದಿ ರೋಗ ಬಗ್ಗೆ ಮಾಹಿತಿ ಮತ್ತು ಪರಿಹಾರ, ಪ್ರಗತಿಪರ ರೈತರು, ವಿಜ್ಞಾನಿಗಳು ಮಾಹಿತಿ ಮತ್ತು ಪ್ರಶ್ನೋತ್ತರ, ರೈತರೊಂದಿಗೆ ಸಂವಾದ ನಡೆಯಲಿದೆ. ಅಲ್ಲದೆ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಡಾ. ಹೆಬ್ಬಾರ್ ತಿಳಿಸಿದರು.

ನ. 19: ಉದ್ಘಾಟನೆಯ ಬಳಿಕ ವಿಚಾರ ಸಂಕಿರಣ:
ನ. 19 ರಂದು ಕಿಸಾನ್ ಮೇಳದ ಉದ್ಘಾಟನೆ ನೆರವೇರಲಿದೆ. ಬಳಿಕ ಹಲವು ವಿಚಾರ ಸಂಕಿರಣಗಳು ನಡೆಯಲಿವೆ. ಉದ್ಘಾಟನೆಯ ದಿನ ಮಧ್ಯಾಹ್ನ ಜೀವ ವೈವಿಧ್ಯ ಸಂರಕ್ಷಣಾ ಮೇಳ ಉದ್ಘಾಟನೆ. ವಿಜ್ಞಾನಿಗಳು- ಕೃಷಿಕರ ಸಮ್ಮುಖ ವಿಚಾರಗೋಷ್ಠಿ ಮತ್ತು ಡ್ರೋನ್ ತಂತ್ರಜ್ಞಾನದ ಪ್ರಾತ್ಯಕ್ಷಿಕೆ ನೆರವೇರಲಿದೆ. ಎರಡನೇ ದಿನ ಸುಸ್ಥಿರ ಅಡಿಕೆ ಕೃಷಿ ಮತ್ತು ಸಸ್ಯ ಸಂರಕ್ಷಣಾ ತಂತ್ರಜ್ಞಾನಗಳು, ಹೈಟೆಕ್ ತೋಟಗಾರಿಕೆ ತಂತ್ರಜ್ಞಾನ, ಮೂರನೇ ದಿನ ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ, ಕೋಕೋ ಕೃಷಿ ಮತ್ತು ಸಂಸ್ಕರಣೆ, ೪ನೇ ದಿನ ಪ್ಲಾಂಟೇಶನ್ ಬೆಳೆಗಳು ಮತ್ತು ಸಾಂಬಾರ ಪದಾರ್ಥಗಳಲ್ಲಿ ಮೌಲ್ಯವರ್ಧನೆ ಮತ್ತು ಯಾಂತ್ರೀಕರಣ, ರೈತರ ಉತ್ಪಾದಕ ಸಂಸ್ಥೆಗಳು, ಕಾರ್ಯ ಚಟುವಟಿಕೆಗಳು ಮತ್ತು ಅವಕಾಶಗಳು ಎಂಬ ವಿಚಾರವಾಗಿ ತರಬೇತಿ ನೆರವೇರಲಿದೆ. ಕೊನೆಯ ದಿನ ಸಸ್ಯ ಪ್ರಭೇದಗಳ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಬಗ್ಗೆ ಜಾಗೃತಿ ಮತ್ತು ಸಮಾಪನಾ ಸಮಾರಂಭ ನಡೆಯಲಿದೆ. ರೈತರು ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಅವಕಾಶ ನೀಡಲಾಗಿದೆ ಜೀವ ವೈವಿದ್ಯತೆ ಬಗ್ಗೆ ತಿಳಿಸಲಾಗುವುದು ಎಂದು ಹೇಳಿದರು.

ಬ್ಯಾಂಕ್ ಮಾಹಿತಿ:
ರೈತರಿಗೆ ಬ್ಯಾಂಕ್‌ನಿಂದ ದೊರಕುವ ಪರಿಹಾರ ಮತ್ತು ಸಹಕಾರ ಬಗ್ಗೆ ತಿಳಿಸಲಾಗುವುದು. ನಬಾರ್ಡ್ ಬ್ಯಾಂಕ್ ಅಧಿಕಾರಿಗಳು, ಕೆನರಾ ಬ್ಯಾಂಕ್ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಲಿದ್ದಾರೆ. ಅಲ್ಲದೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಹಾಗೂ ಮಹಾಲಿಂಗ ನಾಕ್ ಅವರಿಗೆ ಸನ್ಮಾನ ನೆರವೇರಲಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಿಪಿಸಿಆರ್‌ಐನ ಪ್ರಮುಖ ವಿಜ್ಞಾನಿಗಳಾದ ಡಾ. ನಿರಾಲ್, ಡಾ. ತಂಬನ್, ಡಾ. ದಿವಾಕರ್, ಹಿರಿಯ ತಾಂತ್ರಿಕ ಸಹಾಯಕ ಮನಮೋಹನ್ ಭಟ್ ಉಪಸ್ಥಿತರಿದ್ದರು.

ಎಗ್ರಿ ಎಕ್ಸ್ಪೋ

ಎಗ್ರಿ ಎಕ್ಸ್ಪೋದಲ್ಲಿ ವಿವಿಧ ವಿಭಾಗಗಳ 150 ಮಳಿಗೆಗಳು ಇರುತ್ತವೆ. ಇದು ಬೆಳೆಗಾರರು ತಮ್ಮ ವ್ಯಾಪಾರ ಮತ್ತು ಚಟುವಟಿಕೆಗಳನ್ನು ವಿಸ್ತರಿಸಲು ಮತ್ತು ವೈವಿಧ್ಯಗೊಳಿಸಲು ಸಹಕಾರಿಯಾಗಿದೆ. ಇಲ್ಲಿ ಕೃಷಿ ವಲಯದ ಎಲ್ಲಾ ಸಂಪನ್ಮೂಲ ಹಾಗೂ ಅದರ ಮಾಹಿತಿ ಮತ್ತು ಪರಿಚಯ ದೊರಕಲಿದೆ ಎಂದು ಡಾ. ಹೆಬ್ಬಾರ್ ತಿಳಿಸಿದರು.

ಸುದ್ದಿ ಕೃಷಿ ಸೇವಾ ಕೇಂದ್ರದಿಂದ ಸ್ಟಾಲ್, ಕೃಷಿಕರಿಗೆ ಮಾಹಿತಿ

ಕಿದು ಕಿಸಾನ್ ಮೇಳದಲ್ಲಿ ಸುದ್ದಿ ಕೃಷಿ ಸೇವಾ ಕೇಂದ್ರದಿಂದಲೂ ಸ್ಟಾಲ್ ಹಾಕಲಾಗುವುದು.ಮಾತ್ರವಲ್ಲದೆ ಮೇಳದಲ್ಲಿ ಭಾಗವಹಿಸಲಿರುವ ವಿವಿಧ ಸ್ಟಾಲ್‌ಗಳು, ಸ್ಟಾಲ್ ಹಾಕುವವರಿಗೆ ನೀಡಲಾಗುವ ವಸತಿ, ಮತ್ತಿತರ ಸೌಲಭ್ಯಗಳು ಹಾಗೂ ಮೇಳದ ಇತರ ವ್ಯವಸ್ಥೆಗಳ ಕುರಿತು ಮಾಹಿತಿಗಳನ್ನು ಸುದ್ದಿ ಕೃಷಿ ಸೇವಾ ಕೇಂದ್ರದ ಮೂಲಕ ಸಂಗ್ರಹಿಸಿ ಕೃಷಿಕರಿಗೆ ನೀಡಲು ಪ್ರಯತ್ನಿಸಲಾಗುವುದು.
ಮಾಹಿತಿಗಾಗಿ 6364570738 ಸಂಪರ್ಕಿಸಬಹುದು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.