ಕೆದಂಬಾಡಿ ಗ್ರಾಮದಲ್ಲಿ ನಿರ್ಮಾಣವಾಗಲಿದೆ ಆಧುನಿಕ ತಂತ್ರಜ್ಞಾನದ ಘನತ್ಯಾಜ್ಯ ನಿರ್ವಹಣಾ ಕೇಂದ್ರ

0

3 ತಾಲೂಕುಗಳ 68 ಗ್ರಾಮ ಪಂಚಾಯತ್‌ಗಳ ಒಣ ಕಸ ಸಂಗ್ರಹಣೆ – ದಿನಕ್ಕೆ 5 ಟನ್ ತ್ಯಾಜ್ಯ ವಿಲೇವಾರಿ

ವರದಿ: ಸಿದ್ದಿಕ್‌ ಕುಂಬ್ರ

ಪುತ್ತೂರು:ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ | ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ | ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ , ತಾಲೂಕು ಪಂಚಾಯತ್ ಪುತ್ತೂರು, ಕಡಬ, ಸುಳ್ಯ | ಗ್ರಾಮ ಪಂಚಾಯತ್ ಕೆದಂಬಾಡಿ ಸಹಯೋಗದಲ್ಲಿ ಕೆದಂಬಾಡಿ ಗ್ರಾಮದ ಬೋಳೋಡಿಯಲ್ಲಿ ಸಮಗ್ರ ಘನ ತ್ಯಾಜ್ಯ ನಿರ್ವಹಣಾ ಕೇಂದ್ರ ನಿರ್ಮಾಣವಾಗಲಿದ್ದು ಇದರ ಶಿಲಾನ್ಯಾಸ ಕಾರ್ಯಕ್ರಮವು ನ.18  ರಂದು ನಡೆಯಲಿದೆ.

ದಕ ಜಿಲ್ಲಾ ಉಸ್ತುವಾರಿ ಸಚಿವರಾದ  ಸುನಿಲ್‌ ಕುಮಾರ್ ರವರು ಶಿಲಾನ್ಯಾಸ ನೆರವೇರಿಸಲಿದ್ದು, ಮೀನುಗಾರಿಕೆ ಬಂದರು ಹಾಗೂ ಒಳನಾಡು ಜಲ ಸಾರಿಗೆ ಸಚಿವರಾದ ಎಸ್ ಸಂಗಾರರವರು ದೀಪ ಪ್ರಜ್ವಲನೆ ಮಾಡಲಿದ್ದಾರೆ. ಪುತ್ತೂರು ಶಾಸಕರಾದ ಸಂಜೀವ ಮಠಂದೂರು ಅಧ್ಯಕ್ಷತೆಯಲ್ಲಿ ಶಿಲಾನ್ಯಾಸ ಕಾರ್ಯ ನಡೆಯಲಿದೆ ಎಂದು ತಾಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್ ನವೀನ್ ಭಂಡಾರಿ ತಿಳಿಸಿದ್ದಾರೆ.

ಏನಿದು ಘಟನ ತ್ಯಾಜ್ಯ ಘಟಕ?

ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಚತೆಯ ಪರಿಕಲ್ಪನೆಯನ್ನು ದೇಶವ್ಯಾಪಿ ತಲುಪಿಸಿ ನೈರ್ಮಲ್ಯದ ಮಂತ್ರವನ್ನು ಜಪಿಸುವಂತೆ ಮಾಡುವಲ್ಲಿ ಸ್ವಚ್ಛ ಭಾರತ ಮಿಷನ್ (ಗ್ರಾಮೀಣ). ಒಂದು ಹೆಜ್ಜೆ ಮುಂದುವರೆದು ಒಣ ತ್ಯಾಜ್ಯ ನಿರ್ವಹಣಾ ಕೇಂದ್ರ ನಿರ್ಮಿಸುವ ಮೂಲಕ ಪ್ರತಿ ದಿನಕ್ಕೆ 5 ಟನ್ ಸಾಮರ್ಥ್ಯದ ಘನ ತ್ಯಾಜ್ಯವನ್ನು ಆಧುನಿಕ ರೀತಿಯಲ್ಲಿ, ಪರಿಸರಕ್ಕೆ ಹಾನಿಯಾಗದೆ ಅತ್ಯಂತ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಎಂಆರ್‌ಎಫ್ ಕೇಂದ್ರವಾಗಿದೆ.

ಸಮಗ್ರ ಘನ ತ್ಯಾಜ್ಯ ನಿರ್ವಹಣಾ ಕೇಂದ್ರ. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿಯಲ್ಲಿ 3 ತಾಲೂಕಿನ 68 ಗ್ರಾಮ ಪಂಚಾಯತ್‌ಗಳ ಒಣ ತ್ಯಾಜ್ಯವನ್ನು ವಿಲೇವಾರಿ ಮಾಡುವ ಎಂಆರ್‌ಎಫ್ ಘಟಕ ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಬೋಳೋಡಿಯಲ್ಲಿ ಆರಂಭಗೊಳ್ಳಲಿದೆ.

68 ಗ್ರಾಮ ಪಂಚಾಯತ್‌ಗಳ ಒಣ ತ್ಯಾಜ್ಯ- ಗ್ರಾಮೀಣ ಪ್ರದೇಶದಲ್ಲಿ ವೈಜ್ಞಾನಿಕ ರೀತಿಯಲ್ಲಿ ತ್ಯಾಜ್ಯ ನಿರ್ವಹಣೆ
ಕೇಂದ್ರ ಸರಕಾರದ ಮಹಾತ್ವಾಕಾಂಕ್ಷಿ ಯೋಜನೆಯಲ್ಲಿ ಒಂದಾದ ಸ್ವಚ್ಛ ಭಾರತ ಮಿಷನ್ (ಗ್ರಾ) ಗ್ರಾಮೀಣ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಒಗ್ಗೂಡಿಸುವಿಕೆಯೊಂದಿಗೆ ಆರಂಭದಲ್ಲಿ ಗ್ರಾಮೀಣ ಭಾಗದಲ್ಲಿ ಶೌಚಾಲಯವನ್ನು ಉಪಯೋಗಿಸುವ ಕುರಿತು ಜಾಗೃತಿ ಮೂಡಿಸಿ ಆ ಮೂಲಕ ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳನ್ನಾಗಿ ಘೋಷಿಸಿತು. ಮುಂದುವರಿದು ಪ್ರತಿ ಗ್ರಾಮ ಪಂಚಾಯತ್‌ಗಳಲ್ಲಿ ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕಿಸಿ ಅವುಗಳ ವಿಲೇವಾರಿಗಾಗಿ ಸರಕಾರದ ಆದೇಶದಂತೆ ಸಂಜೀವಿನಿ ಒಕ್ಕೂಟವು ಸ್ವಚ್ಛ ಸಂಕೀರ್ಣದಲ್ಲಿ ಘನ ತ್ಯಾಜ್ಯ ಹಾಗೂ ಅವಶ್ಯಕವಿರುವ ಗ್ರಾಪಂ.ಗಳಲ್ಲಿ ದ್ರವ ತ್ಯಾಜ್ಯ ನಿರ್ವಹಣೆಯನ್ನು ಪರಿಚಯಿಸಿದೆ. ಮುಂದುವರಿದು ಮನೆಗಳಿಂದ ಹೊರ ಬರುವ ಬೂದು ನೀರಿನ ನಿರ್ವಹಣೆಯನ್ನು ಸಮಪರ್ಕವಾಗಿ ವಿಲೇವಾರಿಗೊಳಿಸುವ ನಿಟ್ಟಿನಲ್ಲಿ ಬಚ್ಚಲುಗುಂಡಿಗಳನ್ನು ಮಾಡಿಸುವ ಮೂಲಕ ನೈರ್ಮಲ್ಯ ಪ್ರಜ್ಞೆಯನ್ನು ಹಾಗೂ ಗ್ರಾಮೀಣ ಪ್ರದೇಶದಲ್ಲಿ ವೈಜ್ಞಾನಿಕ ರೀತಿಯಲ್ಲಿ ತ್ಯಾಜ್ಯ ನಿರ್ವಹಣೆ ಬಗ್ಗೆ ಅರಿವು ಮೂಡಿಸಿದ ಹೆಗ್ಗಳಿಕೆ ಸ್ವಚ್ಛ ಭಾರತ ಮಿಷನ್ (ಗ್ರಾ)ಗೆ ಸಲ್ಲುತ್ತದೆ. ಪ್ರಸ್ತುತ ಗ್ರಾಮ ಪಂಚಾಯತ್‌ಗಳಲ್ಲಿ ಸಂಜೀವಿನಿ ಒಕ್ಕೂಟಗಳ ಮೂಲಕ ಕಸ ಸಂಗ್ರಹಣೆ ಹಾಗೂ ವಿಂಗಡಣೆ ಮಾಡಲಾಗುತ್ತಿದ್ದು ಮುಂದಕ್ಕೆ ಈ ಎಲ್ಲಾ ಪ್ರಕ್ರಿಯೆಗಳು ಸುಲಭ ರೀತಿಯಲ್ಲಿ ಎಂಆರ್‌ಎಫ್ ಘಟಕದಲ್ಲಿ ಕೆಲಸ ನಿರ್ವಹಿಸಲಿದೆ.

ಪ್ರತಿ ದಿನಕ್ಕೆ 5 ಟನ್ ವಿಂಗಡನಾ ಸಾಮರ್ಥ್ಯ
ಕೆದಂಬಾಡಿಯಲ್ಲಿ ನಿರ್ಮಾಣವಾಗುವ ಘಟಕವು ದಿನಕ್ಕೆ 5 ಟನ್ ವಿಂಗಡಿಸುವ ಸಾಮರ್ಥ್ಯವನ್ನು ಹೊಂದಿದ್ದು, ಸಿವಿಲ್ ಕಾಮಗಾರಿ ಮತ್ತು ಯಂತ್ರೋಪಕರಣ ಸೇರಿದಂತೆ ಘಟಕದ ಅಂದಾಜು ಮೊತ್ತ 195 ಲಕ್ಷ.ರೂ. ಆಗಿರುತ್ತದೆ. ಸರಳ ಯಂತ್ರಗಳ ಬಳಕೆಯಿಂದ ತ್ಯಾಜ್ಯ ನಿರ್ವಹಣೆಯಲ್ಲಿ ಕರ್ತವ್ಯ ನಿರ್ವಹಿಸುವ ಮಾನವ ಸಂಪನ್ಮೂಲದ ದಕ್ಷತೆ ಹೆಚ್ಚುತ್ತದೆ. ಸ್ವಚ್ಛ ಸಂಕೀರ್ಣದಲ್ಲಿ ಉತ್ಪತ್ತಿಯಾಗುವ ಮರುಬಳಕೆ ಮಾಡಲು ಸಾಧ್ಯವಿಲ್ಲದ ತ್ಯಾಜ್ಯಕ್ಕೆ ವಿಲೇವಾರಿ ಸವಾಲು ಹಾಗೂ ವೆಚ್ಚದಾಯಕವಾಗಿದ್ದು ಇದಕ್ಕೆ ಸೂಕ್ತ ಪರಿಹಾರ ಒದಗಲಿದೆ. ತ್ಯಾಜ್ಯವನ್ನು ಅಧಿಕೃತ ಹಾಗೂ ಅಂತಿಮ ಮರು ಉತ್ಪಾದನಾ ಕೇಂದ್ರಕ್ಕೆ ವಿಲೇವಾರಿ ಮಾಡಲಾಗುತ್ತದೆ. ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲಸಗಾರರಿಗೆ ಉತ್ತಮ ಸೌಲಭ್ಯ, ಸಾಮಾಜಿಕ ಭದ್ರತೆ, ಆರೋಗ್ಯ ಮತ್ತು ಸುರಕ್ಷಾ ಸೌಲಭ್ಯ ದೊರೆಯಲಿದೆ. ತ್ಯಾಜ್ಯ ನಿರ್ವಹಣೆಗೆ ಕುರಿತಂತೆ ಉತ್ತಮವಾದ ದತ್ತಾಂಶ/ದಾಖಲೆಗಳ ನಿರ್ವಹಣೆ ಮಾಡುವುದು. ಮರುಬಳಕೆ ಮಾಡಲು ಸಾಧ್ಯವಿಲ್ಲದ ಮರುಉತ್ಪಾದನಾ ಕಂಪನಿಗಳಿಗೆ ಕಚ್ಛಾವಸ್ತುಗಳಾಗಿ ಪೂರೈಕೆ ಮಾಡುವುದು ಈ ಘಟಕ ನಿರ್ಮಾಣದ ಮುಖ್ಯ ಉದ್ದೇಶವಾಗಿದೆ.

ಗ್ರಾಮ ಪಂಚಾಯತ್‌ಗಳಿಂದ ನೇರವಾಗಿಎಂಆರ್‌ಎಫ್ ಘಟಕಕ್ಕೆ
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮನೆ ಮನೆಯಿಂದ ಸಂಗ್ರಹಿಸಲಾದ ಒಣ ತ್ಯಾಜ್ಯವನ್ನು ಗ್ರಾಪಂ. ವ್ಯಾಪ್ತಿಯ ಸ್ವಚ್ಛ ಸಂಕೀರ್ಣಕ್ಕೆ ತರಲಾಗುತ್ತದೆ. ಸ್ವಚ್ಛ ಸಂಕೀರ್ಣದಲ್ಲಿ ತ್ಯಾಜ್ಯವನ್ನು ತೂಕ ಮಾಡಿ ಪ್ಯಾಕ್ ಮಾಡಿ ಇಡಲಾಗುತ್ತದೆ. ಪ್ರತಿ ವಾರ ಎಂ.ಆರ್.ಎಫ್. ಕೇಂದ್ರಕ್ಕೆ ಸ್ವಚ್ಛ ಸಂಕೀರ್ಣಗಳಿಂದ ಒಣ ತ್ಯಾಜ್ಯವನ್ನು ಪೂರೈಸಲಾಗುತ್ತದೆ. ಹೀಗೆ ಸಂಗ್ರಹಿಸಿದ ತ್ಯಾಜ್ಯವನ್ನು ಎಮ್.ಆರ್. ಎಫ್. ಕೇಂದ್ರದಲ್ಲಿ ತೂಕ ಮಾಡಿ ಶೇಖರಣಾ ವಿಭಾಗದಲ್ಲಿ ದಾಸ್ತಾನುಮಾಡಲಾಗುತ್ತದೆ. ನಂತರ ಕ್ವನ್ವೆಯರ್ ಬೆಲ್ಟ್ ಸಹಾಯದಿಂದ ಸುಮಾರು 25 ರಿಂದ 30 ವಿಭಾಗಗಳಾಗಿ ವಿಂಗಡಿಸಲಾಗುತ್ತದೆ. ಹೀಗೆ ವಿಂಗಡಿಸಿದ ತ್ಯಾಜ್ಯವನ್ನು ಬೈಲಿಂಗ್ ಯಂತ್ರದ ಸಹಾಯದಿಂದ ಬೈಲ್ ಮಾಡಲಾಗುತ್ತದೆ. ಬೈಲ್ ಮಾಡಿದ ತ್ಯಾಜ್ಯದಲ್ಲಿ ಪುನರ್ ಬಳಕೆ ಮಾಡಬಹುದಾದ ತ್ಯಾಜ್ಯವನ್ನು ಅಧಿಕೃತ ಮರುಉತ್ಪಾದಕ ಕಂಪನಿಗಳಿಗೆ ಮಾರಾಟ ಮಾಡಲಾಗುತ್ತದೆ. ಪುನರ್ಬಳಕೆ ಮಾಡಲು ಸಾಧ್ಯವಿಲ್ಲದ ತ್ಯಾಜ್ಯವನ್ನು ಮರು ಸಂಸ್ಕರಣೆ ಉದ್ದೇಶಕ್ಕೆ ಸಿಮೆಂಟ್ ಫ್ಯಾಕ್ಟರಿಗಳಿಗೆ ಸಾಗಿಸಲಾಗುತ್ತದೆ.

ಎಂ.ಆರ್.ಎಫ್. ಘಟಕವು ಸುಸಜ್ಜಿತ ಕಟ್ಟಡವನ್ನು ಹೊಂದಲಿದ್ದು, ದಿನವೊಂದಕ್ಕೆ 5 ಟನ್ ತ್ಯಾಜ್ಯವನ್ನು ನಿರ್ವಹಣೆ ಮಾಡುವ ಸಾಮರ್ಥ್ಯ ಹೊಂದಿದೆ. ಘಟಕದಲ್ಲಿ ತ್ಯಾಜ್ಯ ಶೇಖರಣೆ, ವಿಂಗಡಣೆ ಹಾಗೂ ಬೈಲಿಂಗ್ ಮಾಡುವ ವಿಭಾಗ, ಕಛೇರಿ, ಸೆಕ್ಕೂರಿಟಿ ಕೊಠಡಿ, ವಿಶ್ರಾಂತಿ ಕೊಠಡಿ ಹಾಗೂ ಶೌಚಾಲಯ ಸೌಲಭ್ಯ ಇರಲಿದೆ. ಕನ್ಹೆಯರ್ ಬೆಲ್ಟ್, ಬೈಲಿಂಗ್ ಯಂತ್ರ, ಸ್ಟ್ಯಾಕರ್. ಫೈರ್ ಸೇಪ್ಪಿ ಸೌಲಭ್ಯ, ಜನರೇಟರ್, ಸಿಸಿ ಟಿವಿ, ವೇ ಬ್ರಿಡ್ಜ್ ಹಾಗೂ ೫ ಟನ್ ಸಾಮರ್ಥ್ಯದ ಟ್ರಕ್ (ಲಾರಿ) ಇರಲಿದೆ.

ಅನುಷ್ಟಾನದ ಜವಾಬ್ದಾರಿ
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾಮಗಾರಿಯನ್ನು ಅನುಷ್ಟಾನಿಸುತ್ತಿದ್ದು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಉಪವಿಭಾಗಗಳ ಸಹಾಯಕ ಕಾರ್ಯಪಾಲಕ ಅಭಿಯಂತರರು ಗ್ರಾಕು.ನೀ ಮತ್ತು ನೈ. ಇಲಾಖೆ ಅನುಷ್ಟಾನದ ಜವಾಬ್ದಾರಿಯನ್ನು ಹೊಂದಿರುತ್ತಾರೆ. ದೇಶದ ಗ್ರಾಮೀಣ ಭಾಗದಲ್ಲಿನ ಸಾರ್ವಜನಿಕ ವಲಯದಲ್ಲಿ ನಿರ್ಮಾಣವಾಗುತ್ತಿರುವ ಈ ಎಂ.ಆರ್. ಎಫ್ ಘಟಕದಿಂದ ೩ ತಾಲೂಕುಗಳ ಗ್ರಾಮ ಪಂಚಾಯತ್‌ಗಳ ಕಸ ವಿಲೇವಾರಿಗೆ ಪರಿಹಾರ ದೊರೆಯಲಿದೆ. ಈ ಘಟಕದಿಂದ ಸ್ಥಳೀಯರಿಗೆ ಉದ್ಯೋಗವಕಾಶ ಒದಗಲಿದ್ದು, ಈ ಕೇಂದ್ರದ ಆರಂಭದಿಂದ ಗ್ರಾಮೀಣ ಭಾಗದ ತ್ಯಾಜ್ಯ ವಿಲೇವಾರಿ ಕುರಿತಂತೆ ಹೊಸ ಅಧ್ಯಾಯ ಆರಂಭಗೊಳ್ಳಲಿದೆ.

3 ತಾಲೂಕುಗಳ 68 ಗ್ರಾಮ ಪಂಚಾಯತ್‌ಗಳ ಒಣ ಕಸ ಸಂಗ್ರಹಣೆ
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ 25 ಗ್ರಾಪಂ.ಗಳು, ಕಡಬ ತಾಲೂಕಿನ 21 ಗ್ರಾಪಂ.ಗಳು ಹಾಗೂ ಪುತ್ತೂರು ತಾಲೂಕಿನ ೨೨ ಗ್ರಾಪಂ.ಗಳು ಹೀಗೆ ಒಟ್ಟು 68 ಗ್ರಾಮ ಪಂಚಾಯತ್‌ಗಳ ಒಣ ತ್ಯಾಜ್ಯವನ್ನು ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದಲ್ಲಿನ ಸರ್ವೆನಂಬರ್ 168 ರ 1 ಎಕ್ರೆ ಭೂ ಪ್ರದೇಶದಲ್ಲಿನ ಬೋಳೋಡಿ ಎಂಬಲ್ಲಿ ನಿರ್ಮಾಣಗೊಳ್ಳಲಿರುವ ಒಣ ತ್ಯಾಜ್ಯ ಸಂಗ್ರಹಣ ಘಟಕದಲ್ಲಿ ವಿಂಗಡಿಸುವ ಕಾರ್ಯ ನಡೆಯಲಿದೆ. ಈ ಕೇಂದ್ರವು ತ್ಯಾಜ್ಯದಿಂದ ಸುಮಾರು 90% ಕಿಂತಲೂ ಅಧಿಕ ಸಂಪನ್ಮೂಲವನ್ನು ಪಡೆಯುವಸಾಮರ್ಥ್ಯವನ್ನು ಹೊಂದಿದ್ದು, ಕಡಿಮೆ ಮಾನವ ಸಂಪನ್ಮೂಲದ ಸಹಾಯದಿಂದ ಪರಿಣಾಮಕಾರಿಯಾಗಿ ತ್ಯಾಜ್ಯ ನಿರ್ವಹಣೆ ಮಾಡುವ ಈ ಕೇಂದ್ರ, ಅಸಮರ್ಪಕ ತ್ಯಾಜ್ಯ ನಿರ್ವಹಣೆಗೆ ಪರಿಹಾರ ಒದಗಿಸಿ ಪರಿಸರದ ಸಂರಕ್ಷಣೆಗೆ ಮಹತ್ತರವಾದ ಕೊಡುಗೆ ನೀಡಬಲ್ಲದು.

ಸನ್ಮಾನ್ಯ ಪ್ರಧಾನಮಂತ್ರಿ ಮೋದಿಜಿಯವರ ಪರಿಕಲ್ಪನೆಗೆ ಪೂರಕವಾಗಿ ಸ್ವಚ್ಛ ಭಾರತ ಅಭಿಯಾನದ ಮೂಲಕ ಪುತ್ತೂರು, ಕಡಬ, ಸುಳ್ಯ ತಾಲೂಕಿನ ಪ್ರತಿ ಗ್ರಾಮ ಪಂಚಾಯತ್‌ಗಳಿಂದ ಸಂಗ್ರಹಿಸಲಾಗುವ ಒಣ ತ್ಯಾಜ್ಯ ಹಾಗೂ ಪ್ಲಾಸ್ಟಿಕ್ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಮತ್ತು ಯಾಂತ್ರಿಕವಾಗಿ ಮರು ಉತ್ಪಾದನೆಗೆ ಯೋಗ್ಯವಾಗಿಸುವಕೇ೦ದ್ರವನ್ನು ಪುತ್ತೂರಿನ ಕೆದಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೋಳೋಡಿಯಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ಘಟಕ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆಯಲಿದೆ.
– ಸಂಜೀವ ಮಠಂದೂರು

 

 

ಮೂರು ತಾಲೂಕುಗಳಲ್ಲಿ ಯಶಸ್ವಿಯಾಗಿ ಗ್ರಾಮ ಪಂಚಾಯತ್‌ಗಳಲ್ಲಿ ಸ್ವಚ್ಛ ಸಂಕೀರ್ಣದಲ್ಲಿ ಸಂಜೀವಿನಿ ಒಕ್ಕೂಟಗಳ ಮೂಲಕಸಂಗ್ರಹವಾಗುತ್ತಿರುವ ವಿವಿಧ ರೀತಿಯ ಒಣ ಕಸಗಳನ್ನು ವಿಂಗಡಣೆ ಮಾಡುತ್ತಿದ್ದು. ಮುಂದಿನ ದಿನಗಳಲ್ಲಿ ಎಂಆರ್‌ಎಫ್ ಘಟಕದಮೂಲಕ ಸುಲಭ ಯಾಂತ್ರಿಕ ವ್ಯವಸ್ಥೆಯ ಮೂಲಕ ಮೂರು ತಾಲೂಕಿಗೆ ಕೇಂದ್ರವಾಗಿರುವ ಕೆದಂಬಾಡಿ ಗ್ರಾಮದಲ್ಲಿ ಈ ಘಟಕ ನಿರ್ಮಾಣವಾಗಲಿದ್ದು, ಸುಮಾರು 1 ಎಕ್ರೆ ಪ್ರದೇಶವನ್ನು ಗುರುತಿಸಿ ಭೂ ಸಮತಟ್ಟು ಕಾರ್ಯ ನಡೆದಿದೆ. ನ.18ರಂದು ಸಚಿವರು, ಶಾಸಕರು ಹಾಗೂ ಮೇಲಾಧಿಕಾರಿಗಳ ಸಮ್ಮುಖದಲ್ಲಿ ಶಿಲಾನ್ಯಾಸ ಕಾರ್ಯಕ್ರಮವೂ ನಡೆಯಲಿದೆ.
ನವೀನ್ ಭಂಡಾರಿ ಕಾರ್ಯನಿರ್ವಾಹಕ ಅಧಿಕಾರಿ
ತಾ.ಪಂ. ಪುತ್ತೂರು

LEAVE A REPLY

Please enter your comment!
Please enter your name here