ಗಣಿ ಸಚಿವರ ಜೊತೆ ಮಾತನಾಡಿ ಮರಳು ಸಮಸ್ಯೆಗೆ ಪರಿಹಾರ -ಮಾಧುಸ್ವಾಮಿ

0

ಬಂಟ್ವಾಳ:ಕರಾವಳಿ ಮರಳು ನೀತಿ ಅನುಷ್ಠಾನ ಸರಿಯಾಗಿಲ್ಲ ಎಂಬ ವಿಚಾರ ಗಮನಕ್ಕೆ ಬಂದಿದೆ,ಈ ಕುರಿತು ಗಣಿ ಇಲಾಖೆ ಸಚಿವರ ಜತೆ ಮಾತನಾಡಿ ಮರಳು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ರಾಜ್ಯ ಕಾನೂನು, ಸಂಸದೀಯ ಮತ್ತು ಸಣ್ಣ ನೀರಾವರಿ ಇಲಾಖೆ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.


ಬಂಟ್ವಾಳದ ನಿರೀಕ್ಷಣಾ ಮಂದಿರದಲ್ಲಿ ಪತ್ರಕರ್ತರ ಜತೆ ಮಾತನಾಡಿದರು.ಬೆಂಗಳೂರು ವೋಟರ್ ಹಗರಣ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಚುನಾವಣೆಗೆ 6 ತಿಂಗಳು ಮೊದಲು ಚುನಾವಣಾ ಆಯೋಗವೇ ಮತದಾರರ ಪಟ್ಟಿ ಪರಿಷ್ಕರಣೆ ಮಾಡುತ್ತದೆ. ಇದರಲ್ಲಿ ಯಾವ ಸರಕಾರವೂ ಬಾಯಿ ಹಾಕುವುದಿಲ್ಲ. ಅದನ್ನು ಬಿಟ್ಟು ಸರಕಾರ ಏನಾದರೂ ಮಾಡುತ್ತಿದೆ ಎನ್ನುವುದರಲ್ಲಿ ಅರ್ಥವಿಲ್ಲ. ಚುನಾವಣಾ ಆಯೋಗವೇ ಸ್ವತಂತ್ರವಾಗಿ ಕೆಲಸ ಮಾಡುತ್ತಿದೆ ಎಂದರು.

40 ಪರ್ಸೆಂಟ್ ಕಮಿಷನ್ ಕಾಂಗ್ರೆಸ್ ಆರೋಪ ಸುಳ್ಳು: 40 ಪರ್ಸೆಂಟ್ ಕಮಿಷನ್ ಎಂಬ ಕಾಂಗ್ರೆಸ್ ಆರೋಪವೂ ಸುಳ್ಳು ಎಂದ ಅವರು, ಯಾರೋ ಗುತ್ತಿಗೆದಾರ ಹೇಳಿದ ಎಂದು ಕಾಂಗ್ರೆಸ್ ಯಾವುದೇ ದಾಖಲೆಗಳಿಲ್ಲದೆ 40 ಪರ್ಸೆಂಟ್ ಆರೋಪ ಮಾಡುತ್ತಿದೆ.ಒಂದಾದರೂ ದಾಖಲೆ ನೀಡಿದರೆ 40 ಪರ್ಸೆಂಟ್ ಕೊಟ್ಟವರು ಯಾರು, ತೆಗೆದುಕೊಂಡವರು ಯಾರು ಎಂದು ತನಿಖೆ ಮಾಡಬಹುದಿತ್ತು.ಇವತ್ತು 40 ಎಂದವರು ನಾಳೆ 80 ಪರ್ಸೆಂಟ್ ಅಂತ ಹೇಳುತ್ತಾರೆ ಅದನ್ನು ನಂಬಲು ಸಾಧ್ಯವೇ ಎಂದು ಸಚಿವರು ಪ್ರಶ್ನಿಸಿದರು.ವಿರೋಧ ಪಕ್ಷದ ನಾಯಕರಾಗಿರುವ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿ, ಹಣಕಾಸು ಸಚಿವರಾಗಿ ಕೆಲಸ ಮಾಡಿದವರು.ಅವರಿಗೆ ಇದರಲ್ಲಿ ಎಷ್ಟು ಸತ್ಯವಿದೆ ಎಂಬುದು ಗೊತ್ತಿಲ್ಲವೇ?.ಸುಳ್ಳನ್ನೇ ಹೇಳಿ ಹೇಳಿ ನಂಬಿಸಲು ಹೊರಟರೆ ಹೇಗೆ, ನಮ್ಮ ಮತದಾರರು ಯಾರು ಕೂಡ ಪ್ರಶ್ನೆ ಮಾಡಿಲ್ಲ.ಅವರಿಗೆ ನಮ್ಮ ಮೇಲೆ ವಿಶ್ವಾಸ ಇದೆ ಎಂದು ಮಾಧು ಸ್ವಾಮಿ ಹೇಳಿದರು.

ಸಿದ್ಧರಾಮಯ್ಯ ಅವರು ಚಿಕ್ಕನಾಯಕನಹಳ್ಳಿ ಸ್ಪರ್ಧಿಽಸುತ್ತಾರೆಯೇ ಎಂಬ ಪ್ರಶ್ನೆಗೆ ಸಚಿವರು ಪ್ರತಿಕ್ರಿಯಿಸಿ ಅವರು, ಬಂದರೆ ಬಹಳ ಸಂತೋಷ ಪಡುತ್ತೇನೆ ಎಂದರು.ಬಿಜೆಪಿಯು ಪಕ್ಷದ ವರಿಷ್ಠರ ಸಲಹೆ-ಸೂಚನೆಯಂತೆ ಕೆಲಸ ಮಾಡುತ್ತಿದ್ದು, ಇಲ್ಲಿ ಯಾರೂ ಕೂಡ ಸಿಎಂ ನಾನೇ ಎಂದು ಹೇಳಲು ಸಾಧ್ಯವಿಲ್ಲ ಎಂದವರು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹಿಂದೆ ಇಡೀ ಕರ್ನಾಟಕದ ಭೂ ಅತಿಕ್ರಮಣ(ಲ್ಯಾಂಡ್ ಗ್ರಾಬಿಂಗ್)ದ ಪ್ರಕರಣಗಳು ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಬರುತ್ತಿತ್ತು.ನಾವು ಅದಕ್ಕೆ ಕಾನೂನು ತಿದ್ದುಪಡಿ ಮಾಡಿ ಸಣ್ಣ ಪುಟ್ಟ ಒತ್ತುವರಿಯನ್ನು ಗ್ರಾಬಿಂಗ್ ಅಂತ ಕರೆಯದೆ ಒತ್ತುವರಿ ಪದ ಬಳಕೆ ಮಾಡಿ ಸ್ಥಳೀಯ ಕಂದಾಯ ಇಲಾಖೆಯೇ ತೀರ್ಮಾನ ಕೈಗೊಳ್ಳುವ ರೀತಿಯಲ್ಲಿ ತೀರ್ಮಾನ ಕೈಗೊಂಡಿದ್ದೇವೆ ಎಂದು ಸಚಿವ ಮಾಧುಸ್ವಾಮಿ ವಿವರಿಸಿದರು.ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್ ಉಪಸ್ಥಿತರಿದ್ದರು.

ನ್ಯಾಯಾಲಯಗಳಲ್ಲಿ ಸಾಕಷ್ಟು ಕೇಸ್‌ಗಳು ಬಾಕಿ ಇದ್ದು, ಒತ್ತಡದಲ್ಲಿ ಕೆಲಸ ಮಾಡಬೇಕಾದ ಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಕಳೆದ ತಿಂಗಳು ಗುಜರಾತಿನಲ್ಲಿ ನಡೆದ ಕಾನೂನು ಸಚಿವರುಗಳ ಸಮ್ಮೇಳನದಲ್ಲಿ ನ್ಯಾಯಾಲಯದ ಹೊರಗೆ ಕೇಸ್ ಇತ್ಯರ್ಥ ಪಡಿಸಲು ಅವಕಾಶಗಳು ಇದೆಯಾ ಎಂಬುದರ ಕುರಿತು ಚರ್ಚೆ ನಡೆದಿದೆ.ಪಂಚಾಯತ್ ಮಟ್ಟದಲ್ಲಿ ಸಣ್ಣ ಪುಟ್ಟ ಕೇಸ್‌ಗಳನ್ನು ಇತ್ಯರ್ಥಪಡಿಸಿ ನ್ಯಾಯಾಲಯದ ಒತ್ತಡ ಕಡಿಮೆ ಮಾಡಬೇಕು ಎಂಬುದರ ಕುರಿತು ರಾಷ್ಟ್ರ ಮಟ್ಟದಲ್ಲೇ ಚರ್ಚೆ ಮಾಡಿದ್ದೇವೆ ಎಂದು ಮಾಧುಸ್ವಾಮಿ ಹೇಳಿದರು.

LEAVE A REPLY

Please enter your comment!
Please enter your name here