ರಾಷ್ಟ್ರೀಯತೆಯ ಜೀವಂತಿಕೆಗೆ ಮಾತೃಭಾಷೆ ಪರಿಣಾಮಕಾರಿ: ರೋಹಿತ್ ಚಕ್ರತೀರ್ಥ

0

ಉಪ್ಪಿನಂಗಡಿ: ರಾಷ್ಟ್ರೀಯತೆ ಎಂದರೆ ಕೇವಲ ಭಾವನೆಯಲ್ಲ. ಅದು ಕ್ರಿಯಾತ್ಮಕವಾಗಿ ಗೋಚರಿಸಬೇಕು. ರಾಷ್ಟ್ರೀಯತೆಯ ಜೀವಂತಿಕೆಗೆ ಮಾತೃ ಭಾಷೆ ಪರಿಣಾಮಕಾರಿಯಾಗಿದೆ ಎಂದು ಯುವ ಚಿಂತಕ ಬರಹಗಾರ, ರಾಜ್ಯ ಪುಸ್ತಕ ಪರಿಷ್ಕರಣಾ ಸಮಿತಿಯ ನಿಕಟ ಪೂರ್ವ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಪ್ರತಿಪಾದಿಸಿದರು.


ಉಪ್ಪಿನಂಗಡಿಯ ವೇದಶಂಕರನಗರದಲ್ಲಿನ ಶ್ರೀ ರಾಮ ಶಾಲಾ ಸಭಾಂಗಣದಲ್ಲಿ ಶನಿವಾರ `ಮಾತೃ ಭಾಷಾ ಶಿಕ್ಷಣದ ಮಹತ್ವ ಮತ್ತು ಶಿಕ್ಷಣದಲ್ಲಿ ರಾಷ್ಟ್ರೀಯತೆ’ ಎಂಬ ವಿಚಾರದಲ್ಲಿ ನಡೆದ ವಿಚಾರ ಗೋಷ್ಠಿ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

180 ಕ್ಕೂ ಮಿಕ್ಕಿದ ದೇಶಗಳ ಪೈಕಿ ಹೆಚ್ಚೆಂದರೆ ೪೦ ದೇಶಗಳಲ್ಲಿ ಮಾತ್ರ ಇಂಗ್ಲಿಷ್ ಭಾಷೆ ಇದೆ. ಅಮೇರಿಕಾ ದೇಶವನ್ನು ಬಿಟ್ಟರೆ ಅತ್ಯಧಿಕ ಇಂಗ್ಲಿಷ್ ಭಾಷೆಯನ್ನಾಡುವ ದೇಶ ಭಾರತವಾಗಿದೆ. ಇಂಗ್ಲಿಷ್ ಭಾಷೆ ಸ್ವಂತಿಕೆ ಇಲ್ಲದ, ಕಲಬೆರಕೆಯ ಭಾಷೆಯಾಗಿದ್ದು, ಅದರ ಮೇಲಿನ ಕುರುಡು ಪ್ರೇಮದಿಂದಾಗಿ ಭಾರತೀಯ ಭಾಷೆಗಳು ಅವನತಿಯತ್ತ ಸಾಗುತ್ತಿವೆ. ಭಾಷೆ ನಾಶವಾದರೆ ಅದರೊಂದಿಗೆ ಸಂಸ್ಕೃತಿಯೂ ನಾಶವಾಗುವ ಅಪಾಯವಿದ್ದು, ಮಕ್ಕಳಲ್ಲಿ ಮಾತೃ ಭಾಷಾಭಿಮಾನವನ್ನು ಮೂಡಿಸುವಲ್ಲಿ ಹೆತ್ತವರು ಕಾಳಜಿ ವಹಿಸಬೇಕೆಂದು ವಿನಂತಿಸಿದರು.

ಮಕ್ಕಳಲ್ಲಿ ಪುಸ್ತಕವನ್ನು ಓದುವ ಅಭಿರುಚಿ ಮೂಡಿಸಲು ಮಕ್ಕಳನ್ನು ಸೆಳೆಯುವ ಪೂರಕವಾದ ಪುಸ್ತಕಗಳನ್ನು ಸಿದ್ದಪಡಿಸುವ ಹೊಣೆಗಾರಿಕೆ ಸಾಹಿತಿಗಳ, ಶಿಕ್ಷಣ ತಜ್ಞರದ್ದಾಗಿದೆ. ಮಕ್ಕಳಲ್ಲಿ ಪುಸ್ತಕ ಪ್ರೀತಿ ಮೂಡಿಸಲು ಹೆತ್ತವರು ಮೊದಲು ಪುಸ್ತಕ ಪ್ರೀತಿ ಬೆಳೆಸಿಕೊಳ್ಳಬೇಕೆಂದರು.

ಕಾರ್ಯಕ್ರಮದಲ್ಲಿ ತಮ್ಮ ಮಗನ ಸ್ಮರಣಾರ್ಥ ಶಾಲೆಗೆ ಕೊಠಡಿಯನ್ನು ಕೊಡುಗೆಯಾಗಿ ನೀಡಿದ ಸುಂದರ ಶೆಟ್ಟಿ ಎಂಜಿರಪಳಿಕೆ ದಂಪತಿಯನ್ನು ಇದೇ ಸಂಧರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉದ್ಯಮಿ ಕೃಷ್ಣನಾರಾಯಣ ಮುಳಿಯರವರು, ಪ್ರಸಕ್ತ ಹಿಂದೂ ವಿರೋಧಿ ನಿಲುವು ಎಂದರೆ ಅದು ಆಧುನಿಕತೆ ಎಂಬ ಮಾನಸಿಕತೆ ಮೂಡಿರುವುದು ದುರಾದೃಷ್ಟಕರವಾಗಿದೆ. ಮಾತೃ ಭಾಷೆಯಲ್ಲೇ ಜಗತ್ತಿನ ಎಲ್ಲಾ ಜ್ಞಾನಗಳೂ ಲಭಿಸುವಂತಾಗಲು ಭಾಷಾಂತರ ಕೃತಿಗಳು ಹೊರಬರುವಂತಾಗಬೇಕು. ತನ್ಮೂಲಕ ಅದೊಂದು ಉದ್ಯಮವಾಗಿಯೂ ಹೊರಹೊಮ್ಮಬಹುದೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಶಾಲಾ ಸಂಚಾಲಕ ಯು.ಜಿ. ರಾಧಾ ರವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಸುನಿಲ್ ಆನಾವು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನೆರೆದ ಗಣ್ಯರ, ವಿದ್ಯಾರ್ಥಿಗಳ ಭಾಗೀಧಾರಿಕೆಯಲ್ಲಿ ಸಂವಾದ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಇಂದ್ರಪ್ರಸ್ಥ ವಿದ್ಯಾಲಯದ ಅಧ್ಯಕ್ಷ ಕರುಣಾಕರ ಸುವರ್ಣ, ಇಂದ್ರಪ್ರಸ್ಥ ಪಿಯು ಕಾಲೇಜಿನ ಪ್ರಾಂಶುಪಾಲ ಎಚ್.ಕೆ. ಪ್ರಕಾಶ್, ಇಂದ್ರಪ್ರಸ್ಥ ವಿದ್ಯಾಲಯದ ಮುಖ್ಯೋಪಾಧ್ಯಾಯಿನಿ ವೀಣಾ ಆರ್. ಪ್ರಸಾದ್, ಉಪನ್ಯಾಸಕ ವಿಘ್ನೇಶ್, ಗಣ್ಯರಾದ ಮನೋಜ್ ಶೆಟ್ಟಿ, ಜಯಂತ ಪೊರೋಳಿ, ಗುಣಕರ ಅಗ್ನಾಡಿ, ಹರಿರಾಮಚಂದ್ರ, ರಾಧಾಕೃಷ್ಣ ಭಟ್ ಬೊಳ್ಳಾವು, ಏಕ ವಿದ್ಯಾಧರ , ಸುಧಾಕರ ಶೆಟ್ಟಿ, ಅನೀಶ್ ಗಾಣಿಗ, ಮೋಹನ್ ಭಟ್, ಶಶಿಧರ್ ಶೆಟ್ಟಿ, ಜಗದೀಶ್ ಶೆಟ್ಟಿ, ಗೋವಿಂದ ಭಟ್, ಪ್ರವೀಣ್ ರೈ, ಶೀನಪ್ಪ ಗೌಡ, ಉದಯ ಅತ್ರಮಜಲು, ರವೀಂದ್ರ ದಕ್ಷ, ಸುಧೀರ್, ಗಣೇಶ್ ಕುಲಾಲ್, ಶೋಭಿತಾ ಸತೀಶ್, ಜಯಪ್ರಕಾಶ್ ಕಡಮ್ಮಾಜೆ, ಕೃಷ್ಣ ಭಟ್ ಕೊಕ್ಕಡ ಮೊದಲಾದ ಗಣ್ಯರು ಭಾಗವಹಿಸಿದ್ದರು.

ಶಾಲೆಯ ಪ್ರೌಢ ಶಾಲಾ ವಿಭಾಗದ ಮುಖ್ಯೋಪಾಧ್ಯಾಯ ರಘುರಾಮ ಭಟ್ ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ವಿಮಲಾ ವಂದಿಸಿದರು. ಶಿಕ್ಷಕಿಯರಾದ ಅರ್ಚನಾ ಮತ್ತು ಶಿಲ್ಪಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here