ಫಿಲೋಮಿನಾ ಪಿಯು ಕಾಲೇಜಿನಲ್ಲಿ ಮಾಹಿತಿ ಹಕ್ಕು ಕಾಯ್ದೆ ಬಗ್ಗೆ ಕಾರ್ಯಾಗಾರ

0

ಭ್ರಷ್ಟಾಚಾರ ಬಯಲಿಗೆಳೆಯಲು ಕಾಯ್ದೆ ಸೂಕ್ತ ವೇದಿಕೆ-ಮಹಮದ್ ಬಡಗನ್ನೂರು

ಪುತ್ತೂರು: ಸರಕಾರವು ಆಯಾ ಇಲಾಖೆಗಳ, ಪಂಚಾಯತ್‌ಗಳ ಅಭಿವೃದ್ಧಿ ಕಾರ್ಯಗಳಿಗೆ ಸಮರ್ಪಕ ಅನುದಾನಗಳನ್ನು ಬಿಡುಗಡೆಗೊಳಿಸುತ್ತದೆ. ಆದರೆ ಬಿಡುಗಡೆಗೊಂಡ ಅನುದಾನಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದೆ ಅಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂಬ ಮಾಹಿತಿ ಅರಿತೊಡನೆ ಸಾರ್ವಜನಿಕ ವಲಯಕ್ಕೆ ಪ್ರಶ್ನಿಸಲು ಮಾಹಿತಿ ಹಕ್ಕು ಅಧಿನಿಯಮ ಕಾಯ್ದೆಯು ಸೂಕ್ತ ವೇದಿಕೆಯಾಗಿದೆ ಎಂದು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮಹಮದ್ ಬಡಗನ್ನೂರುರವರು ಹೇಳಿದರು.

ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ದರ್ಬೆ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಮಾನವಿಕ ಸಂಘದ ಆಶ್ರಯದಲ್ಲಿ ನ.21 ರಂದು ನಡೆದ ಕಾಲೇಜಿನ ಆಡಿಯೋ ವಿಶುವಲ್ ಸಭಾಂಗಣದಲ್ಲಿ ನಡೆದ ಮಾಹಿತಿ ಹಕ್ಕು ಅಧಿನಿಯಮ ಕಾಯ್ದೆ ಬಗೆಗಿನ ಕಾರ್ಯಾಗಾರದಲ್ಲಿ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯು ಬಲಿಷ್ಟವಾಗಬೇಕಾದರೆ ಸರಕಾರಿ ಅಧೀನದಲ್ಲಿರುವ ಇಲಾಖೆಗಳ, ಸಂಸ್ಥೆಗಳ ಕಾರ್ಯವೈಖರಿ ಬಗ್ಗೆ ಜನ ಸಾಮಾನ್ಯರು ಅರಿವು ಹೊಂದುವುದು ಇಂದಿನ ಅಗತ್ಯತೆಯಾಗಿದೆ. ಸಮಾಜದಲ್ಲಿನ ಒಟ್ಟಾರೆ ವ್ಯವಸ್ಥೆಯು ಒಳ್ಳೆಯದು ಆಗಬೇಕೆಂದು 2005ರಲ್ಲಿ ಸರಕಾರವು ಈ ಮಾಹಿತಿ ಹಕ್ಕು ಕಾಯ್ದೆಯನ್ನು ಅನುಷ್ಠಾನಕ್ಕೆ ತಂದಿದ್ದಾಗಿದೆ. ಶಿಕ್ಷಣದಿಂದ ಯಾರೂ ವಂಚಿತರಾಗಬಾರದು ಎಂಬಂತೆ ಶಿಕ್ಷಣ ಹಕ್ಕು, ಆಹಾರದಿಂದ ವಂಚಿತರಾಗಬಾರದು ಎನ್ನುವಂತೆ ಆಹಾರ ಭದ್ರತಾ ಕಾಯ್ದೆಯನ್ನು ಕೂಡ ಸರಕಾರವು ಅನುಷ್ಠಾನಕ್ಕೆ ತಂದಿದೆ. ಮಾಹಿತಿ ಹಕ್ಕು ಕಾಯ್ದೆಯು ಜಾರಿಗೆ ಬಂದ ಮೇಲೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಜಾಗೃತಿ ಮೂಡಿದೆ ಮತ್ತು ಸರಕಾರಿ ಅಧಿಕಾರಿಗಳಲ್ಲಿ ಈ ನಿಟ್ಟಿನಲ್ಲಿ ಭಾರೀ ಸಂಚಲನ ಉಂಟಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ ಕಾಲೇಜಿನ ಸಂಚಾಲಕ ವಂ|ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ, ವಿದ್ಯಾರ್ಥಿಗಳು ಎಲ್ಲಾ ಕಾಯ್ದೆಗಳ ಬಗ್ಗೆ ಮಾಹಿತಿ ತಿಳಿದುಕೊಂಡಾಗ ಮುಂದಿನ ಜೀವನವು ಸುಗಮವಾಗಿ ಸಾಗುತ್ತದೆ. ಹೆತ್ತವರಿಗೆ ಮೊಬೈಲ್‌ನಲ್ಲಿ ಆನ್‌ಲೈನ್ ಬ್ಯಾಂಕಿಂಗ್ ವ್ಯವಹಾರ ಹೇಳಿಕೊಡುವಷ್ಟರ ಮಟ್ಟಿಗೆ ಪ್ರಸಕ್ತ ವಿದ್ಯಾಮಾನದಲ್ಲಿ ಮಕ್ಕಳು ಸಾಕಷ್ಟು ಮುಂದುವರೆದಿದ್ದಾರೆ ಎನ್ನಬಹುದು. ಆದ್ದರಿಂದ ವಿದ್ಯಾರ್ಥಿಗಳು ಸಮಾಜದಲ್ಲಿ ಬೆಳೆಯುತ್ತಾ ಧನಾತ್ಮಕವಾಗಿ ಹೆಜ್ಜೆಯನ್ನಿಟ್ಟು ಮುಂದುವರೆಯಬೇಕು ಎಂದರು.
ಮಾನವಿಕ ಸಂಘದ ನಿರ್ದೇಶಕ ಭರತ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ವಿದ್ಯಾರ್ಥಿನಿ ಜಾಹ್ನವಿ ಸ್ವಾಗತಿಸಿದರು. ವಿದ್ಯಾರ್ಥಿನಿ ಸಂಜನಾ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

30 ದಿನಗಳೊಳಗೆ ಹಿಂಬರಹ ನೀಡಲೇಬೇಕು…
ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಸೇರಿದಂತೆ ಎಲ್ಲಾ ಸಾಂವಿಧಾನಿಕ ಅಧಿಕಾರಗಳನ್ನು ಈ ಕಾಯ್ದೆಯು ಒಳಗೊಂಡಿದೆ. ಈ ಕಾಯ್ದೆಯಡಿ ಸಾರ್ವಜನಿಕರು `ಸಾರ್ವಜನಿಕರ ಪ್ರಾಧಿಕಾರ’ದಿಂದ ಕೇಳುವ ವಿಷಯಗಳಿಗೆ ೩೦ ದಿನಗಳೊಳಗೆ ತ್ವರಿತವಾಗಿ ಉತ್ತರಿಸಬೇಕಾಗುತ್ತದೆ. ಆದರೆ ದೇಶದ ಭದ್ರತಾ ಸಂಸ್ಥೆಗೆ ಹಾಗೂ ವ್ಯಕ್ತಿಯ ಖಾಸಗಿ ವಿಚಾರವನ್ನು ಈ ಕಾಯ್ದೆಯಡಿ ಪ್ರಶ್ನಿಸುವ ಹಕ್ಕಿಲ್ಲ ಹಾಗೂ ಮಾಹಿತಿ ಕೊಡುವಂತೆಯೂ ಇಲ್ಲ ಎಂಬುದು ಕಾಯ್ದೆಯು ಹೇಳುತ್ತದೆ. ವ್ಯಕ್ತಿಯು ಸಲ್ಲಿಸುವ ಮಾಹಿತಿಗೆ ಸಮರ್ಪಕ ಉತ್ತರವನ್ನು ನಿಗದಿತ ಅವಧಿಯೊಳಗೆ ನೀಡದೇ ಇದ್ದಲ್ಲಿ ರಾಜ್ಯ ಮಾಹಿತಿ ಹಕ್ಕು ಆಯೋಗಕ್ಕೆ ದೂರನ್ನು ಸಲ್ಲಿಸಬಹುದಾಗಿದೆ.
-ಮಹಮದ್ ಬಡಗನ್ನೂರು, ಮಾಜಿ ಅಧ್ಯಕ್ಷರು, ತಾ.ಪಂ, ಪುತ್ತೂರು

LEAVE A REPLY

Please enter your comment!
Please enter your name here