ಮಹಮ್ಮದ್ ಶಾರೀಕ್ ಪುತ್ತೂರಿಗೂ ಬಂದಿದ್ದ! ಸ್ಫೋಟಕ ಮಾಹಿತಿ ಬಹಿರಂಗ
ಪುತ್ತೂರು; ಮಂಗಳೂರು ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಗುರಿಯಲ್ಲಿ ನ.19ರಂದು ಸಂಜೆ 5 ಗಂಟೆ ವೇಳೆಗೆ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಶಂಕಿತ ಉಗ್ರ ಮಹಮ್ಮದ್ ಶಾರೀಕ್ ಪುತ್ತೂರಿಗೂ ಬಂದಿದ್ದ ಎಂಬ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ. ಶಾರೀಕ್ ಮತ್ತು ಆತನ ಸಹಚರರು ಸರಣಿ ಬಾಂಬ್ ಸ್ಫೋಟ ನಡೆಸುವ ಮೂಲಕ ಕರಾವಳಿಯಲ್ಲಿ ತಲ್ಲಣ ಸೃಷ್ಠಿಸುವ ಸಂಚು ರೂಪಿಸಿದ್ದರು ಎಂಬುದನ್ನೂ ಪೊಲೀಸರು ಬಹಿರಂಗ ಪಡಿಸಿದ್ದಾರೆ.
ಪುತ್ತೂರಿಗೆ ಬಂದಿದ್ದ ಶಾರೀಕ್-ಮಂಗಳೂರಿನಲ್ಲಿ ಹಲವೆಡೆ ಸುತ್ತಾಡಿದ್ದ:
ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವನಾಗಿದ್ದು ಮೈಸೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಮಹಮ್ಮದ್ ಶಾರೀಕ್ ಮಂಗಳೂರಿನಲ್ಲಿ ಸರಣಿ ಬಾಂಬ್ ಸ್ಫೋಟ ನಡೆಸಲು ಸಿದ್ಧತೆ ನಡೆಸಿದ್ದ. ಮಾತ್ರವಲ್ಲದೆ ಮೈಸೂರಿನಲ್ಲಿರುವ ಬಾಡಿಗೆ ಮನೆಯಲ್ಲಿ ಕುಕ್ಕರ್ ಬಾಂಬ್ ಜೊತೆ ಫೋಟೋಶೂಟ್ ನಡೆಸಿದ್ದ ಎಂದು ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಶಾರೀಕ್ ಪುತ್ತೂರಿಗೂ ಬಂದಿದ್ದ ಎಂಬುದನ್ನೂ ಪೊಲೀಸರು ಬಹಿರಂಗ ಪಡಿಸಿದ್ದಾರೆ. ಮಂಗಳೂರಿನ ಕಂಕನಾಡಿಯಲ್ಲಿ ರಿಕ್ಷಾವನ್ನು ನಿಲ್ಲಿಸಿ ತನ್ನನ್ನು ಮಂಗಳೂರು ಪೇಟೆಗೆ ಬಿಡುವಂತೆ ಚಾಲಕನಿಗೆ ಸೂಚಿಸಿದ್ದ ಶಾರೀಕ್ ಮೈಸೂರಿನಿಂದಲೇ ಕುಕ್ಕರ್ ತಂದಿದ್ದ. ಮಂಗಳೂರಿನ ಜನನಿಬಿಡ ಪ್ರದೇಶದಲ್ಲಿ ಬಾಂಬ್ ಸ್ಫೋಟಿಸಲು ಸಿದ್ಧತೆ ನಡೆಸಲಾಗಿತ್ತಾದರೂ ರಿಕ್ಷಾದಲ್ಲಿ ಪ್ರಯಾಣಿಸುವಾಗಲೇ ಆಕಸ್ಮಿಕವಾಗಿ ಬಾಂಬ್ ಸ್ಫೋಟಗೊಂಡಿತ್ತು. ಬಾಂಬ್ ತಯಾರಿಯಲ್ಲಿ ಶಾರೀಕ್ ಪರಿಣತಿ ಹೊಂದಿಲ್ಲದ ಕಾರಣ ರಿಕ್ಷಾದಲ್ಲಿಯೇ ಬಾಂಬ್ ಸ್ಫೋಟಗೊಂಡಿದ್ದು ದೊಡ್ಡ ಹಾನಿ ಸಂಭವಿಸುವುದು ತಪ್ಪಿದೆ ಎಂದು ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ. ಬಾಂಬ್ ಸ್ಫೋಟ ನಡೆಯುವ ವಾರದ ಮೊದಲು ಮಂಗಳೂರಿಗೆ ಬಂದು ಹಲವೆಡೆ ಶಾರೀಕ್ ಸುತ್ತಾಡಿದ್ದ. ವಿವಿದೆಡೆ ಸ್ಥಳ ಪರಿಶೀಲನೆ ನಡೆಸಿದ್ದ ಎಂದು ತನಿಖೆಯಲ್ಲಿ ಸಾಕ್ಷಿ ಸಂಗ್ರಹಿಸಿರುವ ಪೊಲೀಸರು ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ನೀಡಿದ ದೂರಿನಂತೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಆರೋಪಿ ಶಾಕೀರ್ ವಿರುದ್ಧ ಯುಎಪಿಎ ಕಾಯ್ದೆ, ಕೊಲೆ ಯತ್ನ ಹಾಗೂ ಆಧಾರ್ ಕಾರ್ಡ್ ನಕಲಿ ಮಾಡಿದ ಆರೋಪದಡಿ ಕೇಸು ದಾಖಲು ಮಾಡಿಕೊಂಡಿದ್ದಾರೆ.
ಮಾಸ್ಟರ್ ಮೈಂಡ್‌ಗೆ ಶೋಧ;
ಉಗ್ರ ಸಂಘಟನೆಯ ಜತೆ ನಂಟು ಹೊಂದಿರುವ ತೀರ್ಥಹಳ್ಳಿಯ ಅಬ್ದುಲ್ ಮತೀನ್ ತಹಾ ಎಂಬಾತ ಸ್ಫೋಟದ ಮಾಸ್ಟರ್ ಮೈಂಡ್ ಆಗಿದ್ದು ಆತನಿಗೆ ಪೊಲೀಸರು ಬಲೆ ಬೀಸಿದ್ದಾರೆ. ಈಗಾಗಲೇ ಅಬ್ದುಲ್ ಮತೀನ್ ತಹಾ ಪತ್ತೆಗೆ ಲುಕೌಟ್ ನೊಟೀಸ್ ಜಾರಿಗೊಳಿಸಿರುವ ರಾಷ್ಟ್ರೀಯ ತನಿಖಾ ದಳದವರು ಆತನ ಮಾಹಿತಿ ನೀಡಿದವರಿಗಾಗಿ ೫ ಲಕ್ಷ ರೂ ನೀಡುವುದಾಗಿ ಘೋಷಿಸಿದ್ದಾರೆ. ಮಂಗಳೂರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯದ ಏಳು ಕಡೆಗಳಲ್ಲಿ ಶೋಧ ನಡೆಸಿರುವ ಪೊಲೀಸರು ಮೈಸೂರಿನಲ್ಲಿ ಇಬ್ಬರು, ಮಂಗಳೂರಿನಲ್ಲಿ ಒಬ್ಬ ಹಾಗೂ ಊಟಿಯಲ್ಲಿ ಓರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸ್ಫೋಟ ಪ್ರಕರಣದ ತನಿಖಾಧಿಕಾರಿಯಾಗಿರುವ ಮಂಗಳೂರು ನಗರ ಕೇಂದ್ರ ಉಪವಿಭಾಗದ ಎಸಿಪಿ ಪಿ.ಎ. ಹೆಗಡೆ ನೇತೃತ್ವದ ತಂಡದೊಂದಿಗೆ ಶಿವಮೊಗ್ಗ ಮತ್ತು ಮೈಸೂರು ಘಟಕದ ಪೊಲೀಸ್ ಅಧಿಕಾರಿಗಳು ಕೈ ಜೋಡಿಸಿದ್ದಾರೆ. ಪೊರೆನ್ಸಿಕ್, ತಾಂತ್ರಿಕ ಸಾಕ್ಷ್ಯ, ಆಪರೇಷನ್ ತಂಡ, ಪರಿಶೋಧನಾ ತಂಡ ದಾಖಲೆ ಸಂಗ್ರಹದಲ್ಲಿ ತೊಡಗಿದೆ. ಮೈಸೂರಿನಲ್ಲಿ ಶಂಕಿತ ಉಗ್ರ ಶಾರೀಕ್ ವಾಸವಿದ್ದ ಬಾಡಿಗೆ ಮನೆಯಿಂದ ಹಾಗೂ ಕುಕ್ಕರ್ ಸ್ಫೋಟ ನಡೆದಿರುವ ಸ್ಥಳದಿಂದ ೬೭ಕ್ಕೂ ಅಧಿಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಶಾರೀಕ್‌ನ ಗುರುತು ಪತ್ತೆ;
ಬಾಂಬ್ ಸ್ಫೋಟದಿಂದಾಗಿ ಗಂಭೀರ ಗಾಯಗೊಂಡು ಮಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿರುವ ವ್ಯಕ್ತಿ ತೀರ್ಥಹಳ್ಳಿಯ ಮಹಮ್ಮದ್ ಶಾರೀಕ್ ಹೌದು ಎಂದು ಆತನ ಸಂಬಂಧಿಕರು ಗುರುತು ಪತ್ತೆ ಹಚ್ಚಿದ್ದಾರೆ. ತಂದೆ ಮತ್ತು ತಾಯಿಯನ್ನು ಕಳೆದುಕೊಂಡಿರುವ ಶಾರೀಕ್‌ನ ಮಲತಾಯಿ ಶಬನಾ, ಸಹೋದರಿ ಆಯಿಷಾ ಹಾಗೂ ತಾಯಿಯ ತಂಗಿ ಯಾಸ್ಮೀನರವರು ಆಸ್ಪತ್ರೆಗೆ ಭೇಟಿ ನೀಡಿ ಶಾರಿಕ್‌ನ ಗುರುತು ಪತ್ತೆ ಹಚ್ಚಿದ್ದಾರೆ.
ಬಸ್‌ನಲ್ಲಿ ಬಂದಿದ್ದ:
ಈ ಹಿಂದೆ ವಿವಿಧ ಕ್ರಿಮಿನಲ್ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ ಮಹಮ್ಮದ್ ಶಾರೀಕ್ ನ.೧೯ರಂದು ಮೈಸೂರಿನಿಂದ ಹೊರಟು ಹುಣಸೂರು, ಮಡಿಕೇರಿ, ಪುತ್ತೂರು, ಬಿ.ಸಿ.ರೋಡ್‌ಗೆ ಬಸ್‌ನಲ್ಲಿ ಬಂದಿದ್ದ. ಅಲ್ಲಿಂದ ಕಂಕನಾಡಿ, ನಾಗುರಿಗೆ ಹೇಗೆ ಬಂದ ಎನ್ನುವುದು ಸ್ಪಷ್ಟವಾಗಿಲ್ಲ. ಮೈಸೂರು, ತೀರ್ಥಹಳ್ಳಿ, ಮಂಗಳೂರು ಸೇರಿದಂತೆ ವಿವಿದೆಡೆ ದಾಳಿ ನಡೆಸಿದಾಗ ಸಾರೀಕ್ ಸ್ಫೋಟಕ ತಯಾರಿಸುತ್ತಿರುವ ಬಗ್ಗೆ ಬಲವಾದ ಸಾಕ್ಷಿ ದೊರೆತಿದೆ. ಈತನಿಗೆ ಸಾದತ್, ಮಾಝ್ ಮತ್ತು ಅರಾಫತ್ ಆಲಿ ಎಂಬವರು ಸಹಕಾರ ನೀಡುತ್ತಿದ್ದರು. ಸಾದತ್ಮತ್ತು ಮಾಝ್‌ನನ್ನು ವಿಚಾರಣೆಗೊಳಪಡಿಸಲಾಗುತ್ತಿದ್ದು ಅರಾಫತ್ ಆಲಿ ತಲೆ ಮರೆಸಿಕೊಂಡಿದ್ದಾನೆ. ಮಂಗಳೂರಿನ ಕೋರ್ಟ್ ಸಮೀಪ, ಬಿಜೈ ಮತ್ತು ಪಂಪ್‌ವೆಲ್‌ನಲ್ಲಿ ಉಗ್ರರ ಪರ ಗೋಡೆ ಬರಹ ಬರೆದಿದ್ದ ಪ್ರಕರಣದ ಮೂವರು ಆರೋಪಿಗಳಲ್ಲಿ ಶಾರೀಕ್ ಒಬ್ಬನಾಗಿದ್ದಾನೆ. ಶಿವಮೊಗ್ಗದಲ್ಲಿ ನಡೆದ ಕೋಮುಗಲಭೆಯಲ್ಲಿಯೂ ಈತ ಆರೋಪಿಯಾಗಿದ್ದಾನೆ. ಇದಲ್ಲದೆ ಇತರ ಕೃತ್ಯಗಳಲ್ಲಿಯೂ ಆರೋಪಿಯಾಗಿರುವ ಶಾರೀಕ್ ನಕಲಿ ಆಧಾರ್ ಕಾರ್ಡ್ ನೀಡಿ ಮೈಸೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಅಲ್ಲದೆ ಮೊಬೈಲ್ ರಿಪೇರಿ ಸಂಸ್ಥೆಯಲ್ಲಿ ತರಬೇತುದಾರನಾಗಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿದೆ.
ಕರ್ನಾಟಕ ಪೊಲೀಸರಿಗೆ ಸಾಥ್:
ಕರ್ನಾಟಕ ಪೊಲೀಸ್ ಇಲಾಖೆಯ ಮಹಾನಿರ್ದೇಶಕ ಪ್ರವೀಣ್ ಸೂದ್, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಮತ್ತು ಮಂಗಳೂರು ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ನೇತೃತ್ವದ ಪೊಲೀಸರ ತಂಡದಿಂದ ಬಾಂಬ್ ಸ್ಫೋಟದ ತನಿಖೆ ನಡೆಸುತ್ತಿರುವಂತೆಯೇ ಕೊಚ್ಚಿಯಲ್ಲಿರುವ ಕೇಂದ್ರ ಗುಪ್ತಚರ ದಳದ ಪ್ರಧಾನ ಕಛೇರಿಯಲ್ಲಿ ಕೇಂದ್ರ ಮತ್ತು ಕೇರಳ ರಾಜ್ಯದ ಭದ್ರತಾ ಏಜೆನ್ಸಿಗಳ ಉನ್ನತ ಅಧಿಕಾರಿಗಳ ಸಭೆ ನಡೆದಿದೆ. ಬಾಂಬ್ ಸ್ಪೋಟ ಪ್ರಕರಣದ ಆರೋಪಿ ಮಹಮ್ಮದ್ ಶಾರೀಕ್ ಕರ್ನಾಟಕ ಮತ್ತು ಕೇರಳ ರಾಜ್ಯಗಳಿಗೂ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ತನಿಖೆ ವಿಸ್ತರಿಸಲಾಗಿದೆ. ಸ್ಫೋಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು ಐ.ಬಿ., ರಾ ಮತ್ತು ಎನ್‌ಐಎ ಕೂಡ ಕರ್ನಾಟಕ ಪೊಲೀಸರ ತಂಡದೊಂದಿಗೆ ಕೈ ಜೋಡಿಸಲಿದೆ.