ಉಪ್ಪಿನಂಗಡಿ: ಕೃಷಿ ಚಟುವಟಿಕೆ ಹಾಗೂ ಅಂತರ್ಜಲವನ್ನು ವೃದ್ಧಿಸುವ ಮೂಲ ಉದ್ದೇಶದಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸುವ ಕಿಂಡಿ ಅಣೆಕಟ್ಟುಗಳು ಆ ಬಳಿಕ ನಿರ್ವಹಣೆಯಿಲ್ಲದೆ ಸೊರಗುತ್ತಿದ್ದು, ನಿಷ್ಪ್ರಯೋಜಕವಾಗುತ್ತಿವೆ. ಉಪ್ಪಿನಂಗಡಿ ಭಾಗದಲ್ಲಿ ಅಂತಹ ಅನೇಕ ಕಿಂಡಿ ಅಣೆಕಟ್ಟುಗಳಿಂದು ಮೂಲ ಉದ್ದೇಶವನ್ನೇ ಈಡೇರಿಸದೆ ಸ್ಮಾರಕಗಳಾಗಿ ನಿಂತಿವೆ.
ನಾಲಾಯದ ಗುಂಡಿ: 40 ಎಕರೆ ಕೃಷಿ ಪ್ರದೇಶದಲ್ಲಿ ಅಂತರ್ಜಲ ಅಭಿವೃದ್ಧಿಯ ಉದ್ದೇಶದಿಂದ ನೇತ್ರಾವತಿ ನದಿಯನ್ನು ಸೇರುವ ಸಣ್ಣ ಹೊಳೆಗೆ ನಾಲಾಯದ ಗುಂಡಿ ಎಂಬಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ಸಣ್ಣ ಕಿಂಡಿ ಅಣೆಕಟ್ಟೊಂದು ನಿರ್ಮಾಣಗೊಂಡು 2019ರ ಡಿಸೆಂಬರ್‌ನಲ್ಲಿ ಉದ್ಘಾಟನೆಗೊಂಡಿತ್ತು. ಈ ಸಂದರ್ಭ ಹಾಗೂ 2021ರಲ್ಲಿ ಇದಕ್ಕೆ ಹಲಗೆ ಅಳವಡಿಸಿ ನೀರು ಶೇಖರಿಸಿದ್ದು ಬಿಟ್ಟರೆ, ಆ ಮೇಲೆ ನೀರು ಶೇಖರಣೆ ಮಾಡುವ ಕೆಲಸ ಇಲ್ಲಿ ನಡೆದಿಲ್ಲ. ಇದರಿಂದಾಗಿ ಈ ಕಿಂಡಿ ಅಣೆಕಟ್ಟು ಜೀಪು, ರಿಕ್ಷಾಗಳಂತಹ ವಾಹನಗಳು ಹೋಗಲು ಸಂಪರ್ಕ ಸೇತುವಾಗಿ ಮಾತ್ರ ಬಳಕೆಯಾಗುವಂತಾಗಿದೆ.
ಈ ಕಿಂಡಿ ಅಣೆಕಟ್ಟಿನ ಸುಮಾರು 300 ಮೀಟರ್ ದೂರದಲ್ಲಿ ಹಲವು ವರ್ಷಗಳ ಹಿಂದೆ ಕಿಂಡಿ ಅಣೆಕಟ್ಟು ನಿರ್ಮಾಣವಾಗಿದ್ದು, ಒಂದೆರಡು ವರ್ಷ ಅಲ್ಲಿ ನೀರು ಶೇಖರಿಸಿದ್ದು, ಬಿಟ್ಟರೆ ಇದೀಗ ಅದು ಕೂಡಾ ಕೇವಲ ಸ್ಮಾರಕಕ್ಕೆ ಸೀಮಿತವಾಗಿದೆ. ಇದರಿಂದ ಲಕ್ಷಾಂತರ ರೂ. ವ್ಯರ್ಥವಾಗುವಂತಾಗಿದೆ.
ಕೆಮ್ಮಾರ: ನೇತ್ರಾವತಿ ನದಿಯನ್ನು ಸೇರುವ ಸಣ್ಣ ಹೊಳೆಗೆ ಕೆಮ್ಮಾರದ ನೆಕ್ಕರಾಜೆ ಬಳಿ ಒಂದು ಕಿಂಡಿ ಅಣೆಕಟ್ಟನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿ ಕಿಂಡಿ ಅಣೆಕಟ್ಟು ಇದ್ದರೂ, ಅದಕ್ಕೆ ಹಲಗೆ ಅಳವಡಿಸುವ ಕಾರ್ಯ ನಡೆಯುತ್ತಿಲ್ಲ. ಇದು ಸಂಪರ್ಕ ಸೇತುವಾಗಿಯೂ ಬಳಕೆಯಾಗುತ್ತಿಲ್ಲ. ಇದು ಸಂಪೂರ್ಣ ನಿಷ್ಪ್ರಯೋಜಕವಾಗಿದ್ದು, ಈಗ ಹೊಳೆ ನೀರಲ್ಲಿ ತೇಲಿ ಬಂದ ಮರಗಳು ಗುದ್ದಿ ಅಣೆಕಟ್ಟು ಜಖಂಗೊಂಡಿದೆ. ಈ ಕಾಮಗಾರಿಯಿಂದಾಗಿಯೂ ಹಲವು ಲಕ್ಷಗಳು ನೀರಲ್ಲಿ ಹರಿದಂತಾಗಿದೆ.
ಪಂಚೇರು: ನೇತ್ರಾವತಿ ನದಿಯನ್ನು ಸೇರುವ ಸಣ್ಣ ಹೊಳೆಗೆ ಪಂಚೇರು ಎಂಬಲ್ಲಿಯೂ ಕಿಂಡಿ ಅಣೆಕಟ್ಟೊಂದನ್ನು ನಿರ್ಮಿಸಲಾಗಿದೆ. ಆದರೆ ಇಲ್ಲೂ ನೀರು ಶೇಖರಿಸುವ ಕೆಲಸ ನಡೆಯುತ್ತಿಲ್ಲ. ಇದು ಹೊಳೆಗಡ್ಡವಾಗಿ ನಿಂತಿದ್ದರೂ, ಹೊಳೆ ನೀರು ಅದರ ಪಾಡಿಗೆ ಹರಿದು ಹೋಗುತ್ತಿದೆ. ಇದು ಸಂಪರ್ಕ ಸೇತುವೆಯಾಗಿ ಆ ಕಡೆ- ಈ ಕಡೆ ದಾಟಲು ಉಪಯೋಗವಾಗುತ್ತಿದೆ ಅನ್ನೋದೇ ಸಮಾಧಾನ.
ಮಠ: ಮಠದ ನೈಕುಳಿ ಎಂಬಲ್ಲಿ ತೋಡೊಂದಕ್ಕೆ ಕಿಂಡಿ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಇಲ್ಲಿ ಕೂಡಾ ಹಲಗೆ ಇಡುವ ಕಾರ್ಯ ನಡೆಯುತ್ತಿಲ್ಲ. ಇದೀಗ ಲಕ್ಷಾಂತರ ರೂಪಾಯಿ ಸಾರ್ವಜನಿಕ ದುಡ್ಡು ಪೋಲಾಗಿರುವುದಕ್ಕೆ ಸಾಕ್ಷಿಯಾಗಿ ನಿಂತಿದೆ.
‘ಹರಿಯುವ ನೀರನ್ನು ನಿಲ್ಲಿಸಿ. ನಿಂತ ನೀರನ್ನು ಇಂಗಿಸಿ’ ಎಂಬ ಧ್ಯೇಯದೊಂದಿಗೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ಜಿಲ್ಲಾ ಪಂಚಾಯತ್‌ಗಳಿಂದ ಕೋಟಿ, ಲಕ್ಷದ ಲೆಕ್ಕದಲ್ಲಿ ಅನುದಾನ ನೀಡಿ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲಾಗುತ್ತದೆ. ಅಲ್ಲೆಲ್ಲಾ ಒಂದೆರಡು ವರ್ಷ ಅದರ ಉದ್ದೇಶ ಈಡೇರಿದೆಯೇ ಹೊರತು. ಆಮೇಲೆ ಅದು ಉಪಯೋಗಶೂನ್ಯವಾಗಿದೆ. ಇದಕ್ಕೆ ಮೂಲ ಕಾರಣ ನಿರ್ವಹಣೆಯ ಕೊರತೆ. ಇದರ ನಿರ್ವಹಣೆಯೆಂದರೆ ವರ್ಷಂಪ್ರತಿ ಹೊಳೆಯಲ್ಲಿ ಸ್ವಲ್ಪ ಮಟ್ಟಿನ ನೀರಿನ ಹರಿವು ಇರುವ ನವೆಂಬರ್- ಡಿಸೆಂಬರ್ ತಿಂಗಳಲ್ಲಿ ಇದಕ್ಕೆ ಹಲಗೆ ಜೋಡಿಸುವುದು. ಹಲಗೆಗಳ ಮಧ್ಯೆ ಮಣ್ಣು ಹಾಕುವುದು. ಮಳೆಗಾಲ ಆರಂಭಕ್ಕೆ ಮುನ್ನ ಹಲಗೆಗಳನ್ನು ತೆಗೆಯುವುದು. ಆದರೆ ಅನುದಾನ ನೀಡುವ ಇಲಾಖೆಗಳಿಗೆ ಇದರ ನಿರ್ವಹಣೆಯ ಹೊಣೆ ಇಲ್ಲ. ಸ್ಥಳೀಯರಲ್ಲಿ ಒಗ್ಗಟ್ಟಿನ ಕೊರತೆ ಹಾಗೂ ಖರ್ಚಾಗುವ ಮೊತ್ತವನ್ನು ಭರಿಸುವುದ್ಯಾರು ಎಂಬ ಪ್ರಶ್ನೆ. ಇದರ ನಿರ್ವಹಣೆಗೆ ಸ್ಥಳೀಯರ ಸಮಿತಿ ರಚಿಸಿ, ಇದಕ್ಕಾಗುವ ಖರ್ಚುವೆಚ್ಚಗಳನ್ನು ಭರಿಸಲು ಸ್ಥಳೀಯಾಡಳಿತ ಸಂಸ್ಥೆಗಳು ಮುಂದಾಗುತ್ತಿಲ್ಲ. ಈ ಎಲ್ಲಾ ಕಾರಣಗಳಿಂದ ಯೋಜನೆಯ ನೆಪದಲ್ಲಿ ಕಿಂಡಿ ಅಣೆಕಟ್ಟಿಗಾಗಿ ಲಕ್ಷ, ಕೋಟಿ ರೂ. ಸಾರ್ವಜನಿಕರ ದುಡ್ಡು ಪೋಲಾಗಿರೋದು ಬಿಟ್ಟರೆ, ಇಲ್ಲಿ ನೀರು ನಿಲ್ಲೋದು ಇಲ್ಲ. ಇಂಗೋದು ಇಲ್ಲ. ಸಂಬಂಽಸಿದವರು ಇತ್ತ ಗಮನ ಹರಿಸಿ ಸಾರ್ವಜನಿಕ ದುಡ್ಡು ಪೋಲಾಗದಂತೆ ಅಣೆಕಟ್ಟುಗಳ ನಿರ್ವಹಣೆ ಸಂಬಂಧ ಅಗತ್ಯ ಕ್ರಮಕ್ಕೆಗೊಳ್ಳುವರೇ ಕಾದು ನೋಡಬೇಕಾಗಿದೆ.