ಪುತ್ತೂರು ಜಿಲ್ಲಾ ಕೇಂದ್ರವಾಗಿ ಘೋಷಣೆ, ಮೆಡಿಕಲ್ ಕಾಲೇಜು ಸ್ಥಾಪನೆ, ಘಾಟ್ ರಸ್ತೆಗಳಿಗೆ ಶಾಶ್ವತ ಪರಿಹಾರ, ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ

0

ಪುತ್ತೂರು ವರ್ತಕ ಸಂಘ ಮತ್ತು ಮಂಗಳೂರು ಕೆನರಾ ಛೇಂಬರ್ ಆಫ್ ಕಾಮರ್ಸ್ ಇಂಡಸ್ಟ್ರೀಸ್ ಜಂಟಿ ಸಭೆಯಲ್ಲಿ‌ ಆಗ್ರಹ

ಪುತ್ತೂರು:ಬೆಳೆಯುತ್ತಿರುವ ಪುತ್ತೂರನ್ನು ಜಿಲ್ಲಾ ಕೇಂದ್ರವಾಗಿ ಘೋಷಣೆ ಮಾಡಬೇಕು, ಪುತ್ತೂರಿಗೆ ಮೆಡಿಕಲ್ ಕಾಲೇಜು ಸ್ಥಾಪಿಸಬೇಕು, ಮಂಗಳೂರು-ಬೆಂಗಳೂರು ಸಂಪರ್ಕಿಸುವ ಘಾಟ್ ರಸ್ತೆಗಳಿಗೆ ಶಾಶ್ವತ ಪರಿಹಾರ ನೀಡಬೇಕು, ವ್ಯಾಪಾರ ವೃದ್ದಿಗೆ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು, ಜಿಲ್ಲೆಯ ಪರಿಸರಕ್ಕೆ ಪೂರಕವಾಗಿ ಕೃಷಿ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸಬೇಕು ಎಂದು ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಹಾಗೂ ಮಂಗಳೂರು ಕೆನರಾ ಛೇಂಬರ್ ಆಫ್ ಕಾಮರ್ಸ್ ಇಂಡಸ್ಟ್ರೀಸ್ ಜಂಟಿ ಸಭೆಯಲ್ಲಿ ವರ್ತಕರು ಆಗ್ರಹಿಸಿದ್ದಾರೆ.‌

ಜಂಟಿ ಸಭೆಯು ನ.23ರಂದು ಸಂಜೆ ಮರೀಲ್‌ನಲ್ಲಿರುವ ದಿ ಪುತ್ತೂರು ಕ್ಲಬ್‌ನಲ್ಲಿ ನಡೆಯಿತು.ಪುತ್ತೂರಿನ ಅಭಿವೃದ್ಧಿಗೆ ವರ್ತಕರ ಕೊಡುಗೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.ಎರಡೂ ಸಂಘಗಳ ಪದಾಽಕಾರಿಗಳು, ಸದಸ್ಯರು ವಿವಿಧ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಕೃಷಿ ಆಧಾರಿತ ಕೈಗಾರಿಕೆ ಅಗತ್ಯ-ಶಿವಶಂಕರ್ ಭಟ್: ಪರಿಸರದ ಸಂರಕ್ಷಣೆ ಜೊತೆಗೆ ಈ ಭಾಗದ ಕೃಷಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪುತ್ತೂರಿನಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸುವುದು ಹೆಚ್ಚು ಸೂಕ್ತ ಎಂದು ಶಿವಶಂಕರ್ ಭಟ್ ಹೇಳಿದರು.
ಮುಕ್ರಂಪಾಡಿಯಲ್ಲಿ 13 ಎಕರೆಯಲ್ಲಿ ಕೈಗಾರಿಕಾ ವಲಯ ಕಳೆದ 30 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಕೌಡಿಚ್ಚಾರ್‌ನಲ್ಲಿ 20 ಎಕರೆ ಜಾಗ ಗುರುತಿಸಲಾಗಿದ್ದು ಅದರಲ್ಲಿ 5 ಎಕರೆ ಈಗಾಗಲೇ ಮಂಜೂರಾಗಿದೆ.ಪುತ್ತೂರು-ಉಪ್ಪಿನಂಗಡಿ ಮಧ್ಯೆ 100 ಎಕರೆ ಜಾಗವನ್ನು ಕೈಗಾರಿಕಾ ವಲಯಕ್ಕೆ ಗುರುತಿಸಲಾಗಿದೆ ಎಂದು ಶಾಸಕರಿಂದ ಮಾಹಿತಿ ದೊರೆತಿದೆ ಎಂದು ಅವರು ತಿಳಿಸಿದರು.

ಜಿಲ್ಲಾ ಕೇಂದ್ರ ಸ್ಥಾಪನೆಗೆ ಕೆನರಾ ಛೇಂಬರ್ ಸಹಕಾರ ಅಗತ್ಯ- ಲೋಕೇಶ್ ಹೆಗ್ಡೆ: ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ಯು.ಲೋಕೇಶ್ ಹೆಗ್ಡೆ ಮಾತನಾಡಿ, ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿ ಆಗಬೇಕು.ಇದಕ್ಕಾಗಿ ಪುತ್ತೂರು ಜಿಲ್ಲಾ ಕೇಂದ್ರವಾಗಬೇಕು.ಎಸ್.ಪಿ ಕಚೇರಿ ಪುತ್ತೂರಿಗೆ ಸ್ಥಳಾಂತರಗೊಳ್ಳುವ ಪ್ರಯತ್ನ ನಡೆಯುತ್ತಿದೆ.ಪುತ್ತೂರು ಜಿಲ್ಲಾ ಕೇಂದ್ರವಾಗುವಲ್ಲಿ ಮಂಗಳೂರು ಕೆನರಾ ಛೇಂಬರ್ ಆಫ್ ಕಾಮರ್ಸ್ ಇಂಡಸ್ಟ್ರೀಸ್ ಸಹಕಾರ ನೀಡಬೇಕು ಎಂದು ವಿನಂತಿಸಿದರು.‌

ಮೆಡಿಕಲ್ ಕಾಲೇಜು ಪ್ರಾರಂಭವಾಗಲಿ-ವಿಶ್ವಪ್ರಸಾದ್ ಸೇಡಿಯಾಪು: ಪುತ್ತೂರು ಜಿಲ್ಲಾ ಕೇಂದ್ರವಾಗಬೇಕು ಎಂಬ ಒತ್ತಡಗಳಿದ್ದು ಇಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗಬೇಕು.ಇದಕ್ಕಾಗಿ ಈಗಾಗಲೇ ಜಾಗ ಗುರುತಿಸಲಾಗಿದೆ.ಇದಕ್ಕೆ ಖಾಸಗಿ ಲಾಬಿ ಇದೆಯಾ? ಯಾವುದೇ ಅಡೆತಡೆಗಳಿದ್ದರೂ ಅವುಗಳನ್ನು ತೆರವುಗೊಳಿಸಲು ಕೆನರಾ ಛೇಂಬರ್ ಪ್ರಯತ್ನಿಸಬೇಕು ಎಂದು ವಿಶ್ವಪ್ರಸಾದ್ ಸೇಡಿಯಾಪು ಆಗ್ರಹಿಸಿದರು.

ಘಾಟ್ ರಸ್ತೆ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿ-ವಿಶ್ವನಾಥ ನಾಯಕ್: ಪ್ರಮುಖ ವಾಣಿಜ್ಯ ನಗರಗಳಾದ ಮಂಗಳೂರು-ಬೆಂಗಳೂರು ಸಂಪರ್ಕಿಸುವ ಶಿರಾಡಿ ಹಾಗೂ ಚಾರ್ಮಾಡಿ ಘಾಟ್‌ಗಳು ಮಳೆಗಾಲದಲ್ಲಿ ಕುಸಿತಗೊಂಡು ಸಂಚಾರಕ್ಕೆ ಅಡಚಣೆ ಉಂಟಾಗಿ ವಾಣಿಜ್ಯೋದ್ಯಮಗಳಿಗೆ ಹೊಡೆತ ಬೀಳುತ್ತಿದೆ.ಪ್ರಮುಖ ವಾಣಿಜ್ಯ ಕೇಂದ್ರ ಮಂಗಳೂರು ಸಂಪರ್ಕಿಸುವ ಘಾಟ್ ರಸ್ತೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ವಿಶ್ವನಾಥ ನಾಯಕ್ ಆಗ್ರಹಿಸಿದರು.

ಜಿಎಸ್ಟಿ ಪಾವತಿಸುವ ಮ್ಹಾಲಕರಿಗೆ ವಿಮಾ ಸೌಲಭ್ಯ ನೀಡಬೇಕು- ಶ್ರೀಕಾಂತ್ ಕೊಳತ್ತಾಯ: ಯಾವುದೇ ಕೈಗಾರಿಕೆಗಳಲ್ಲಿ ಸಿಬ್ಬಂದಿಗಳಿಗೆ ಇಎಸ್‌ಐ ವಿಮಾ ಸೌಲಭ್ಯಗಳಿವೆ. ಆದರೆ ಜಿಎಸ್ಟಿ ಪಾವತಿಸುವ ಕಂಪನಿ ಮ್ಹಾಲಕರಿಗೆ ಯಾವುದೇ ವಿಮಾ ಸೌಲಭ್ಯಗಳಿಲ್ಲ.ಹೀಗಾಗಿ ಜಿಎಸ್ಟಿ ಪಾವತಿಸುವ ಸಂಸ್ಥೆಯ ಮ್ಹಾಲಕರಿಗೂ ಕೇಂದ್ರ ಸರಕಾರ ವಿಮಾ ಸೌಲಭ್ಯ ನೀಡಬೇಕು ಎಂದು ಶ್ರೀಕಾಂತ್ ಕೊಳತ್ತಾಯ ಹೇಳಿದರು.

ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ಅವಶ್ಯ-ವಾಮನ್ ಪೈ: ಪ್ರವಾಸೋದ್ಯಮವು ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡುತ್ತಿದೆ.ಹೀಗಾಗಿ ಪುತ್ತೂರಿನಲ್ಲಿರುವ ಕೆರೆಗಳನ್ನು ಅಭಿವೃದ್ಧಿಗೊಳಿಸಿ ವಿವಿಧ ನೀರಿನ ಆಟಗಳನ್ನು ಆಯೋಜಿಸಿಕೊಳ್ಳಬೇಕು ಎಂದು ಪಿ.ವಾಮನ ಪೈ ಒತ್ತಾಯಿಸಿದರು.

ವಿದ್ಯುತ್ ಬಿಲ್ ಕಡಿತಗೊಳಿಸಿ-ಉಲ್ಲಾಸ್ ಪೈ: ಮೆಸ್ಕಾಂ ಸಿಬ್ಬಂದಿಗಳಿಗೆ ಪಿಂಚಣಿ ನೀಡುವುದಕ್ಕಾಗಿ ವಿದ್ಯುತ್ ಬಿಲ್ ದರ ಏರಿಕೆ ಮಾಡಿದ್ದು ಗ್ರಾಹಕರಿಗೆ ದೊಡ್ಡ ಹೊರೆ ಬೀಳುತ್ತಿದೆ.ಈ ಹೊರೆ ತಪ್ಪಿಸಲು ವಿದ್ಯುತ್ ಬಿಲ್ ಕಡಿತಗೊಳಿಸುವಂತೆ ಸರಕಾರಕ್ಕೆ ಮನವಿ ಮಾಡಬೇಕು ಎಂದು ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ಉಲ್ಲಾಸ್ ಪೈ ಹೇಳಿದರು.

ಪಶುವೈದ್ಯಕೀಯ ಕಾಲೇಜು ನೆನೆಗುದಿಗೆ-ಇಂದುಶೇಖರ್: ಕಳೆದ ಹಲವು ವರ್ಷಗಳ ಹಿಂದೆ ಕೊಯಿಲಕ್ಕೆ ಮಂಜೂರಾದ ಪಶುವೈದ್ಯಕೀಯ ಕಾಲೇಜಿನ ಕಾಮಗಾರಿ ಪ್ರಾರಂಭಗೊಂಡಿದ್ದರೂ ಇನ್ನೂ ಪೂರ್ಣ ಗೊಂಡಿಲ್ಲ ಎಂದು ಇಂದುಶೇಖರ್ ತಿಳಿಸಿದರು.

ವರ್ತಕರ ಸಮಸ್ಯೆಗಳಿಗೆ ಧ್ವನಿಯಾಗಿ ಸುದ್ದಿ-ಡಾ.ಯು.ಪಿ ಶಿವಾನಂದ: ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದರು ಮಾತನಾಡಿ, ವರ್ತಕರಿಂದ ಊರಿನ ಅಭಿವೃದ್ಧಿಗೆ ದೊಡ್ಡ ಕೊಡುಗೆಯಿದೆ.ಆಗಾಗ ಬಲಾತ್ಕಾರದ ಬಂದ್‌ಗೆ ಕರೆ ಕೊಡುವುದರಿಂದ ವರ್ತಕರಿಗೆ ಉಂಟಾಗುವ ತೊಂದರೆ, ನಷ್ಟಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಬಲಾತ್ಕಾರದ ಬಂದ್ ವಿರುದ್ಧ ಸುದ್ದಿಯ ಮೂಲಕ ಆಂದೋಲನ ನಡೆಸಿ ಯಶಸ್ವಿಯಾಗಿದೆ.ಇದಕ್ಕೆ ವರ್ತಕರು ಹಾಗೂ ಜನರಿಂದ ಉತ್ತಮ ಸ್ಪಂದನೆ ದೊರೆತಿದೆ.ಬಲಾತ್ಕಾರದ ಬಂದ್‌ಗೆ ಬೆಂಬಲವಿಲ್ಲ ಎಂಬ ನಾಮ ಫಲಕ ಅಳವಡಿಸುವ ಮೂಲಕ ವರ್ತಕರಲ್ಲಿ ಜಾಗೃತಿ ಉಂಟಾಗಿದೆ. ಬಂದ್‌ಗೆ ಕರೆ ಕೊಡುವವರೇ ಪರಿಹಾರ ನೀಡಬೇಕು ಎಂದು ಹೈಕೋರ್ಟ್, ಸುಪ್ರೀಂ ಕೋರ್ಟ್‌ನಿಂದ ಕಾನೂನಾಗಿಯೂ ಬಂದಿದೆ.ಅಲ್ಲದೆ ಕೊರೋನಾ ಸಂದರ್ಭದಲ್ಲಿ ವೀಕೆಂಡ್ ಕರ್ಫ್ಯೂನಿಂದಾಗಿ ವರ್ತಕರಿಗೆ ಉಂಟಾದ ತೊಂದರೆಯ ಬಗ್ಗೆಯೂ ಅಭಿಯಾನ ನಡೆಸಿ ಕರ್ಫ್ಯೂ ಕೈ ಬಿಡುವಂತೆ ಮಾಡುವಲ್ಲಿಯೂ ಯಶಸ್ವಿಯಾಗುವ ಮೂಲಕ ಸುದ್ದಿ ಬಿಡುಗಡೆ ಪತ್ರಿಕೆಯು ನಿರಂತರವಾಗಿ ವರ್ತಕರ ಸಂಕಷ್ಟಗಳಿಗೆ ಧ್ವನಿಯಾಗಿದೆ. ಯಾವುದೇ ಬಂದ್‌ಗಳಿಗೆ ಕರೆ ಕೊಡುವಾಗ ವರ್ತಕರ ಒಪ್ಪಿಗೆ ಪಡೆಯಲೇ ಬೇಕು. ಅವರಿಗೆ ಆಗುವ ನಷ್ಟಕ್ಕೆ ಪರಿಹಾರ ದೊರಕಬೇಕು ಎಂಬ ನಿರ್ಣಯವನ್ನು ವರ್ತಕರ ಸಂಘಗಳು ಮಾಡಬೇಕು ಎಂದು ಕರೆ ನೀಡಿದರು. ಲಂಚ,ಭ್ರಷ್ಠಚಾರದ ವಿರುದ್ಧ ಆಂದೋಲನ ನಡೆಸಿ ಉತ್ತಮ ಸೇವೆ ನೀಡುವವರನ್ನು ಗುರುತಿಸಲಾಗಿದೆ. ಅದನ್ನು ವರ್ತಕರ ಸಂಘಗಳು ಮುಂದುವರಿಸಬೇಕು ಎಂದು ಹೇಳಿದರು.

ಪುತ್ತೂರಿಗೆ ಕೈಗಾರಿಕಾ ಪಾರ್ಕ್‌ಗೆ ಜಂಟಿ ಪ್ರಯತ್ನ- ಗಣೇಶ್ ಕಾಮತ್: ಮಂಗಳೂರು ಕೆನರಾ ಛೇಂಬರ್ ಆಫ್ ಕಾಮರ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಗಣೇಶ್ ಕಾಮತ್ ಮಾತನಾಡಿ, ಪುತ್ತೂರಿಗೆ ಕೈಗಾರಿಕಾ ಪಾರ್ಕ್‌ಗೆ ಜಮೀನು ಮಂಜೂರು ಗೊಳಿಸಲು ಹಿಂದಿನ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಯವರು ಬಹಳಷ್ಟು ಆಸಕ್ತಿ ತೋರಿದ್ದರು. ಇದರ ಪ್ರಕ್ರಿಯೆ ಅಂತಿಮ ಹಂತಕ್ಕೆ ಬಂದಿದ್ದು ಮಂಜೂರಾತಿ ಬಾಕಿಯಿದೆ.ಇದರ ಬಗ್ಗೆ ನಾವು ಜಂಟಿಯಾಗಿ ಪ್ರಯತ್ನಿಸಿ ಜಮೀನು ಮಂಜೂರುಗೊಳಿಸುವಂತೆ ಮಾಡುವ ಮೂಲಕ 40 ವರ್ಷಗಳ ಕನಸು ನನಸಾಗಬೇಕು ಎಂದರು.ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಂಘವು ಆರು ಕಡೆಗಳಲ್ಲಿ ಕೈಗಾರಿಕಾ ವಲಯಕ್ಕೆ ಗುರುತಿಸಿ ಗಮನಕೊಡಲಾಗಿದೆ.2 ಮತ್ತು 3 ತಲೆಮಾರಿಗೆ ನಿಂತು ಹೋಗುವ ವ್ಯಾಪಾರಿ ಕುಟುಂಬಗಳಿಗೆ ಪ್ರೋತ್ಸಾಹ, ಮಂಗಳೂರಿನಲ್ಲಿ ಐಟಿ ಪಾರ್ಕ್‌ಗೆ ಪ್ರಯತ್ನ, ಸ್ಟಾರ್ಟ್ ಅಪ್‌ಗೆ ಉತ್ತೇಜನ ನೀಡಲಾಗಿದೆ.ಕೈಗಾರಿಕೆ ಯಾವುದೇ ಇರಲಿ. ಸಮಯಕ್ಕೆ ಸರಿಯಾಗಿ ಸಮಸ್ಯೆ ಪರಿಹಾರ ಕಂಡುಕೊಳ್ಳಬೇಕು.ತಂಡವಾಗಿ ಕೆಲಸ ಮಾಡಬೇಕು.ಎಲ್ಲರ ಸಹಕಾರ ಅಗತ್ಯ. ಸಂಪರ್ಕ ಇಲ್ಲದೆ ಅಭಿವೃದ್ದಿ ಅಸಾಧ್ಯ.ಕೈಗಾರಿಕೆಗಳಿಗೆ ಅವಶ್ಯಕವಾದ ನೀರು, ಭೂಮಿಯ ಸಮಸ್ಯೆಗಳಿದ್ದು ಪರಿಹಾರ ಕಂಡುಕೊಳ್ಳಬೇಕು.ಜಿಲ್ಲೆಗೆ ಮೆಡಿಕಲ್ ಕಾಲೇಜು ಬೇಡಿಕೆಯಿದೆ. ಕೈಗಾರಿಕೆಗಳು ಅಭಿವೃದ್ಧಿಯಾಗಬೇಕಾದರೆ ಸಾಗಾಟ ಬಹುಮುಖ್ಯವಾಗಿದ್ದು ಉತ್ತಮ ಹೆದ್ದಾರಿಗಳ ಅಭಿವೃದ್ಧಿ ಆಗಬೇಕು ಎಂದವರು ಹೇಳಿದರು.

ಕೈಗಾರಿಕೆಗಳಿಗಿರುವ ಸವಾಲು ನಿವಾರಿಸಲು ಜಂಟಿ ಸಭೆ ಜಾನ್ ಕುಟಿನ್ಹಾ: ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜಾನ್ ಕುಟಿನ್ಹಾ ಮಾತನಾಡಿ ಕೈಗಾರಿಕೆಗಳಿಗೆ ಪ್ರೋತ್ಸಾಹ, ಸಹಕಾರ ನೀಡುವುದು, ಕೈಗಾರಿಕೆಗಳಿಗಿರುವ ಸಮಸ್ಯೆ, ಸವಾಲುಗಳನ್ನು ನಿವಾರಿಸಲು ಮಂಗಳೂರು ಸಂಘದ ಜೊತೆ ಜಂಟಿಯಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜಂಟಿ ಸಭೆ ಆಯೋಜಿಸಲಾಗಿದೆ.ಕೈಗಾರಿಕೆಗಳಿಗೆ ಹೆಚ್ಚುವರಿ ಪ್ರದೇಶ,ಮೂಲಭೂತ ಸೌಲಭ್ಯಗಳ ಪೂರೈಸುವ ಕುರಿತು ಚರ್ಚಿಸಲಾಗುವುದು ಎಂದರು.

ರಸ್ತೆ ಅಭಿವೃದ್ಧಿ, ಹೆಲಿಪ್ಯಾಡ್ ನಿರ್ಮಾಣವಾಗಬೇಕು- ಸುರೇಂದ್ರ ಕಿಣಿ: ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘ ನಡೆದು ಬಂದ ಹಾದಿಯ ಬಗ್ಗೆ ವಿವರಿಸಿದ ಮಾಜಿ ಅಧ್ಯಕ್ಷ ಸುರೇಂದ್ರ ಕಿಣಿ ಮಾತನಾಡಿ, ವರ್ತಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಸಂಘವು ಅಧಿಕಾರಿಗಳಿಂದ ತೊಂದರೆ ಆದಾಗ ವರ್ತಕರ ಪರವಾಗಿ ಕೆಲಸ ಮಾಡಿದೆ.ಈಗ ಇಲ್ಲಿ ಯಾವುದೇ ಇಲಾಖೆ ಬದಲಾವಣೆ ತರಬೇಕಾದರೆ ಪ್ರತಿ ವರ್ತಕರನ್ನು ವಿಶ್ವಾಸಕ್ಕೆ ಪಡೆದು, ಸಲಹೆ, ಸೂಚನೆಗಳನ್ನು ಪಡೆದುಕೊಳ್ಳುತ್ತಿದ್ದಾರೆ.ಇಲಾಖೆಗಳು ವರ್ತಕರಿಗೆ ಪೂರಕವಾಗಿ ಸ್ಪಂದಿಸುತ್ತಿದ್ದು ಸಂಘಟನೆಯ ಶಕ್ತಿ ಫಲವಾಗಿದೆ.ಪುತ್ತೂರಿಗೆ ಬೃಹತ್ ಕೈಗಾರಿಕೆ, ದೊಡ್ಡ ಉದ್ಯಮಗಳು ಬರಲಿದೆ. ಇದಕ್ಕಾಗಿ ರಸ್ತೆ ಅಭಿವೃದ್ಧಿ, ಹೆಲಿಪ್ಯಾಡ್ ನಿರ್ಮಾಣ ಆಗಬೇಕಿದೆ ಎಂದರು. ಮಂಗಳೂರು ಕೆನರಾ ಛೇಂಬರ್ ಆಫ್ ಕಾಮರ್ಸ್‌ನ ಕಾರ್ಯದರ್ಶಿಗಳಾದ ದಿವಾಕರ ಪೈ ಹಾಗೂ ನಝೀರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.‌

ಸನ್ಮಾನ: ಸಂಘದ ಹಿರಿಯ ಸದಸ್ಯ ರತ್ನಾಕರ ಶೆಣೈಯವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಸಂಘದ ಉಪಾಧ್ಯಕ್ಷ ಸೂರ್ಯನಾಥ ಆಳ್ವ, ಪುತ್ತೂರಿಗೆ ಮಾಲ್‌ನ ಕೊಡುಗೆ ನೀಡಿದ ಸ್ವರ್ಣೋದ್ಯಮಿ ಜಿ.ಎಲ್.ಬಲರಾಮ ಆಚಾರ್ಯ, ಪುತ್ತೂರಿನಲ್ಲಿ ಕ್ರಿಕೆಟ್ ಕ್ರೀಡಾಂಗಣಕ್ಕಾಗಿ ಶ್ರಮಿಸಿದ ವಿಶ್ವನಾಥ ನಾಯಕ್, ಹಿರಿಯ ಸದಸ್ಯ ಶಶಾಂಕ ಕೊಟೆಚಾ, ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ, ಸಿಡ್ಕೋ ಅಧ್ಯಕ್ಷ ಟಿ.ವಿ.ರವೀಂದ್ರನ್,ಸಂಘದ ಮಾಜಿ ಅಧ್ಯಕ್ಷರಾದ ಸುರೇಂದ್ರ ಕಿಣಿ, ಕೇಶವ ಪೈ, ಯು.ಲೋಕೇಶ್ ಹೆಗ್ಡೆ, ಸುಂದರ ಗೌಡ, ಮಂಗಳೂರು ಚೇಂಬರ್ ಆಫ್ ಕಾಮರ್ಸ್‌ನ ಪದಾಧಿಕಾರಿಗಳಾದ ನಂದಗೋಪಾಲ ಶೆಣೈ, ಐಸಾಕ್, ಅಮಿತ್, ರಾಮಚಂದ್ರ, ಜೀತನ್ ಸಿಕ್ವೇರಾ, ಅಶ್ವಿನ್ ಪೈ ಮಾರೂರು, ಅಹಮ್ಮದ್‌ರವರನ್ನು ಗುರುತಿಸಿ ಗೌರವಿಸಲಾಯಿತು.

ಅಧ್ಯಕ್ಷ ಜಾನ್ ಕುಟಿನ್ಹಾ ಸ್ವಾಗತಿಸಿದರು. ಕಾರ್ಯದರ್ಶಿ ಉಲ್ಲಾಸ್ ಪೈ ವರದಿ ವಾಚಿಸಿದರು.ಉಪಾಧ್ಯಕ್ಷ ವಾಮನ್ ಪೈ ಅತಿಥಿಗಳ ಪರಿಚಯ ಮಾಡಿದರು.ವಿಶ್ವಪ್ರಸಾದ್ ಸೇಡಿಯಾಪು ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ ನಡೆಯಿತು.

ಲಂಚ, ಭ್ರಷ್ಟಾಚಾರದ ವಿರುದ್ಧ ಘೋಷಣೆ, ಪ್ರತಿಜ್ಞೆ ಸ್ವೀಕಾರ

ಸುದ್ದಿ ಜನಾಂದೋಲನ ವೇದಿಕೆಯಿಂದ ಲಂಚ,ಭ್ರಷ್ಟಾಚಾರದ ವಿರುದ್ಧ ನಡೆಯುತ್ತಿರುವ ಆಂದೋಲನ ಬೆಂಬಲಿಸಿ ಕಾರ್ಯಕ್ರಮದಲ್ಲಿ ವರ್ತಕರು ಪ್ರತಿಜ್ಞೆ ಸ್ವೀಕರಿಸಿದರು.ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ ಶಿವಾನಂದರವರು ಪ್ರತಿಜ್ಞೆ ವಿಧಿ ಬೋಧಿಸಿದರು.ಮಂಗಳೂರು ಕೆನರಾ ಛೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಪುತ್ತೂರು ವರ್ತಕ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಪ್ರತಿಜ್ಞೆ ಸ್ವೀಕರಿಸಿದರು.

LEAVE A REPLY

Please enter your comment!
Please enter your name here