ಬೆಂಗಳೂರು:ರಾಜಕಾಲುವೆ ಮೇಲಿರುವ ಅಕ್ರಮ ಒತ್ತುವರಿ ತೆರವುಗೊಳಿಸಲು ಆದೇಶ ನೀಡಿದ್ದರೂ ಸರಿಯಾಗಿ ವಿಚಾರಣೆ ಮಾಡದೆ ಕರ್ತವ್ಯ ಲೋಪವೆಸಗಿರುವ ಆರೋಪದಲ್ಲಿ ಬೆಂಗಳೂರು ಪೂರ್ವ ತಾಲ್ಲೂಕು(ಕೆ.ಆರ್.ಪುರಂ)ಗ್ರೇಡ್-1 ತಹಸಿಲ್ದಾರ್ ಪುತ್ತೂರಿನ ಎಸ್.ಅಜಿತ್ ಕುಮಾರ್ ರೈ ಅವರ ವಿರುದ್ಧ ಇಲಾಖಾ ವಿಚಾರಣೆ ಬಾಕಿಯಿರಿಸಿ ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಲಾಗಿದೆ.
ಬೆಂಗಳೂರು ಮಹದೇವಪುರದಲ್ಲಿನ ರಾಜಕಾಲುವೆ ಮೇಲಿರುವ ಅಕ್ರಮ ಒತ್ತುವರಿ ಕಟ್ಟಡ ಅಥವಾ ಇತರೆ ನಿರ್ಮಾಣಗಳನ್ನು ತೆಗೆಯಬೇಕಾದರೆ ಕರ್ನಾಟಕ ಭೂಕಂದಾಯ ಕಾಯ್ದೆ-104ರ ಅಡಿಯಲ್ಲಿ ಸರಿಯಾದ ರೀತಿಯಲ್ಲಿ ನೊಟೀಸ್ ನೀಡಿ ತುರ್ತಾಗಿ ಆದೇಶ ನೀಡಿದ್ದಲ್ಲಿ ಒತ್ತುವರಿ ತೆರವುಗೊಳಿಸಲು ಬಿಬಿಎಂಪಿಯಿಂದ ಕ್ರಮಕೈಗೊಳ್ಳಲು ಸಾಧ್ಯವಾಗುತ್ತದೆ.ಆದರೆ ಬೆಂಗಳೂರು ಪೂರ್ವ ತಾಲೂಕು ತಹಸಿಲ್ದಾರ್ ಎಸ್.ಅಜಿತ್ ಕುಮಾರ್ ರೈ ಅವರು ಸರಿಯಾದ ರೀತಿಯಲ್ಲಿ ವಿಚಾರಣೆ ಮಾಡದೆ, ಆದೇಶ ನೀಡಿದ್ದರೂ ತಡವಾಗಿ ಬಿಬಿಎಂಪಿಗೆ ಕಳುಹಿಸಿರುವುದು ಕಂಡು ಬಂದಿರುತ್ತದೆ.ಈ ಎಲ್ಲಾ ನ್ಯೂನ್ಯತೆಗಳಿಂದ ನ್ಯಾಯಾಲಯವು ಒತ್ತುವರಿ ತೆರವು ಕಾರ್ಯಾಚರಣೆಗೆ ತಡೆಯಾಜ್ಞೆ ನೀಡಿರುವುದು ಗಮನಕ್ಕೆ ಬಂದಿರುವುದರಿಂದ ತಹಸಿಲ್ದಾರ್ ಎಸ್.ಅಜಿತ್ ಕುಮಾರ್ ರೈಯವರನ್ನು ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಜಾಗದಲ್ಲಿ ಮುಂದುವರೆಸಬಾರದು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತರು ಸರಕಾರಕ್ಕೆ ಪತ್ರ ಬರೆದು ಕೋರಿದ್ದರು, ಇದನ್ನು ಪರಿಶೀಲಿಸಿ, ಓರ್ವ ಜವಾಬ್ದಾರಿಯುತ ಅಧಿಕಾರಿಯಾಗಿ ಸರ್ಕಾರಿ ನೌಕರರಿಗೆ ತಕ್ಕುದಲ್ಲದ ರೀತಿಯಲ್ಲಿ ವರ್ತಿಸಿ ಕರ್ತವ್ಯಲೋಪವೆಸಗಿ ಕರ್ನಾಟಕ ನಾಗರಿಕ ಸೇವಾ(ನಡತೆ) ನಿಯಮಗಳು 2021ರ ನಿಯಮ 3(!)(!!)(!!!)ಅನ್ನು ಉಲ್ಲಂಸಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಬೆಂಗಳೂರು ಪೂರ್ವ ತಹಸಿಲ್ದಾರ್ ಎಸ್.ಅಜಿತ್ ಕುಮಾರ್ ರೈಯವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ತೀರ್ಮಾನಿಸಿ, ಇವರ ವಿರುದ್ಧದ ದುರ್ನಡತೆ ಹಾಗೂ ಕರ್ತವ್ಯ ಲೋಪಗಳಿಗಾಗಿ ಕರ್ನಾಟಕ ನಾಗರಿಕ ಸೇವಾ(ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ)ನಿಯಮಾವಳಿಗಳು, 1957ರ ನಿಯಮ 10(1)(ಡಿ)ರನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಇಲಾಖಾ ವಿಚಾರಣೆ ಬಾಕಿಯಿರಿಸಿ ಅವರನ್ನು ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಲಾಗಿದೆ.ಅವರ ಹುದ್ದೆಯ ಮೇಲಿನ ಲೀನ್‌ಅನ್ನು ಸಹಾಯಕ ನಿರ್ದೇಶಕರು, ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ, ಜಿಲ್ಲಾಧಿಕಾರಿ ಕಚೇರಿ ಬೆಂಗಳೂರು ಗ್ರಾಮಾಂತರ ತಹಸಿಲ್ದಾರ್ ಗ್ರೇಡ್-2 ಹುದ್ದೆಗೆ ವರ್ಗಾಯಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ಕಂದಾಯ ಇಲಾಖೆ ಸೇವೆಗಳು-3)ಜಿ.ಎನ್.ಸುಶೀಲ ಅವರು ನ.23ರಂದು ಆದೇಶ ಹೊರಡಿಸಿದ್ದಾರೆ.ಎಸ್.ಅಜಿತ್ ಕುಮಾರ್ ರೈಯವರು ಕೆಯ್ಯೂರು ಗ್ರಾಮದ ಸೊರಕೆ ನಿವಾಸಿ.