ಉಪ್ಪಿನಂಗಡಿ: ಇಲ್ಲಿನ ಬಸ್ ನಿಲ್ದಾಣದಲ್ಲಿ ಗುರುವಾರ ಸಾಯಂಕಾಲ ಆಲಂಕಾರಿನತ್ತ ಸಂಚರಿಸುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ವಿದ್ಯಾರ್ಥಿಗಳು ಸುರಕ್ಷತೆಯ ಕಡೆಗೆ ಗಮನ ಹರಿಸದೇ ಬಸ್ಸಿನಲ್ಲೇ ನೇತಾಡಿಕೊಂಡು ಹೋಗುತ್ತಿದ್ದ ದೃಶ್ಯದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕಳವಳ ವ್ಯಕ್ತವಾಗಿದೆ. ಅಪಾಯಕಾರಿ ಸ್ಥಿತಿಯಲ್ಲಿ ವಿದ್ಯಾರ್ಥಿಗಳು ನೇತಾಡಿಕೊಂಡು ಹೋಗುತ್ತಿದ್ದ ದೃಶ್ಯವನ್ನು ಕಂಡು ಸ್ಥಳೀಯ ವ್ಯಾಪಾರಿಗಳು ಈ ಪೋಟೋವನ್ನು ಪತ್ರಿಕೆಗೆ ಒದಗಿಸಿದ್ದು, ಪ್ರಯಾಣಿಕರು ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿಗಳ ರಕ್ಷಣೆಗೆ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಗಮನ ಹರಿಸಬೇಕೆಂದು ಆಗ್ರಹಿಸಿದ್ದಾರೆ. ಶಾಲಾ ಮಕ್ಕಳನ್ನು ಕರೆದೊಯ್ಯುವ ಅಟೋ ರಿಕ್ಷಾಗಳ ಕೆಲ ಚಾಲಕರು ವಿದ್ಯಾರ್ಥಿನಿಯರನ್ನು ಚಾಲಕನ ಸೀಟಿನಲ್ಲಿ ಕುಳ್ಳಿರಿಸಿ ಅವರೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವ ಘಟನೆಗಳು ನಡೆಯುತ್ತಿದ್ದು, ಈ ಬಗ್ಗೆ ಪೊಲೀಸ್ ಇಲಾಖಾಧಿಕಾರಿಗಳು ಗಮನಹರಿಸಬೇಕೆಂದು ಸಾರ್ವಜನಿಕ ವಲಯದಿಂದ ಅಗ್ರಹ ಕೇಳಿ ಬಂದಿದೆ.