* ರಾಷ್ಟ್ರ ಮಟ್ಟದ ಕ್ರೀಡಾಪಟುಗಳನ್ನು ತಯಾರುಗೊಳಿಸಿದ ಕೀರ್ತಿ ಸಂಸ್ಥೆಗೆ ಸಲ್ಲುತ್ತದೆ – ಜಯಸೂರ್ಯ ರೈ ಮಾದೋಡಿ
* ಶಿಕ್ಷಣದ ಜೊತೆ ಕ್ರೀಡಾ ಕ್ಷೇತ್ರಗಳಲ್ಲ್ಲಿಯೂ ಮಿಂಚಬೇಕು- ಸುಧಾಕರ ರೈ ಪೆರಾಜೆ
* ಉತ್ತಮ ಉದ್ಯೋಗ ಪಡೆಯುವಲ್ಲಿ ಕಬಡ್ಡಿ ಪೂರಕ- ಕಪಿಲ್ ಕುಮಾರ್
* ಕಬಡ್ಡಿಯಿಂದ ಮನೋಸ್ಥೆರ್ಯ ಬೆಳೆಯಲು ಸಾಧ್ಯ- ಯೋಗೀಶ್ ಚಿದ್ಗಲ್
ಚಿತ್ರ: ಸುಧಾಕರ್ ಕಾಣಿಯೂರು
ಕಾಣಿಯೂರು: ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಶಿಕ್ಷಣ ಕ್ಷೇತ್ರದ ಜತೆಗೆ ನಿರಂತರ ಕ್ರೀಡೆಗೆ ಪ್ರೋತ್ಸಾಹಿಸಿಕೊಂಡು ಬರುತ್ತಿದ್ದು, ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಇಲ್ಲಿನ ವಿದ್ಯಾರ್ಥಿಗಳು ಮಿಂಚುವ ಮೂಲಕ ಗ್ರಾಮೀಣ ಪ್ರದೇಶದ ಪ್ರಗತಿ ವಿದ್ಯಾಸಂಸ್ಥೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ ಪೆರಾಜೆ ಹೇಳಿದರು. ಅವರು ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ನ 26ರಂದು ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ನಡೆದ ದ.ಕ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ಉತ್ತಮ ಸಾಧನೆ ತೋರಿಸಬೇಕು. ಶಿಕ್ಷಣದ ಜೊತೆ ಕ್ರೀಡಾ ಕ್ಷೇತ್ರಗಳಲ್ಲಿಯೂ ವಿದ್ಯಾರ್ಥಿಗಳು ಮಿಂಚಬೇಕು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ, ಕ್ರೀಡಾರಂಗದ ಇತಿಹಾಸದಲ್ಲಿಯೇ ರಾಷ್ಟ್ರ ಮಟ್ಟದ ಕ್ರೀಡಾಪಟುಗಳನ್ನು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ತಯಾರುಗೊಳಿಸಿದ ಕೀರ್ತಿ ಸಂಸ್ಥೆಗೆ ಸಲ್ಲುತ್ತದೆ. ರಾಷ್ಟ್ರ ಮಟ್ಟದ ಕ್ರೀಡಾಪಟುಗಳನ್ನು ಕಂಡಂತಹ ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ನಿರಂತರವಾಗಿ ಶೇಕಡಾ 100 ಫಲಿತಾಂಶವನ್ನು ಪಡೆದುಕೊಂಡಂತಹ ಸಂಸ್ಥೆ ಬೆಳೆದು ನಿಲ್ಲಲು ಎಲ್ಲರ ಸಹಕಾರದಿಂದ ಸಾಧ್ಯವಾಗಿದೆ ಎಂದರು.
ಕೊಡಗು ನ್ಯಾಯವಾದಿ ಕಪಿಲ್ ಕುಮಾರ್ ಮಾತನಾಡಿ, ನಮ್ಮ ಮಣ್ಣಿನ ಆಟವಾದ ಕಬಡ್ಡಿಗೆ ಇಂದು ರಾಷ್ಟ್ರಮಟ್ಟದಲ್ಲಿ ಮಾನ್ಯತೆ ಹೆಚ್ಚಾಗುತ್ತಿದೆ, ಇದು ಉತ್ತಮ ಬೆಳವಣಿಗೆಯಾಗಿದೆ, ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳನ್ನಾಗಿ ರೂಪಿಸುವಲ್ಲಿ ಮತ್ತು ಉತ್ತಮ ಉದ್ಯೋಗ ಪಡೆಯುವಲ್ಲಿ ಕಬಡ್ಡಿ ಕೂಡಾ ಪೂರಕವಾಗಿದೆ ಎಂದರು. ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಯೋಗೀಶ್ ಚಿದ್ಗಲ್ ಮಾತನಾಡಿ, ಕಬಡ್ಡಿಯಂತಹ ಕ್ರೀಡೆ ನಮ್ಮ ಮನೋಸ್ಥೆರ್ಯ ಬೆಳೆಸುವುದರಲ್ಲದೆ ದೈಹಿಕವಾಗಿ ಆರೋಗ್ಯವಂತ ಸಮಾಜ ನಿಮಾರ್ಣವಾಗಲು ಸಾಧ್ಯವಾಗುತ್ತದೆ. ಕಬಡ್ಡಿಯಲ್ಲಿ ಸಿಗುವಂತಹ ಸ್ಥಾನಮಾನ ಮತ್ತು ದೈಹಿಕ, ಬಾದ್ಧಿಕ, ನೈತಿಕ, ಆಧ್ಯಾತ್ಮಿಕ, ಮಾನಸಿಕ, ಸದೃಢ ಬೆಳವಣಿಗೆಯನ್ನು ಕಾಣಲು ಸಾಧ್ಯ ಎಂದರು. ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಧನಂಜಯ ಕೇನಾಜೆ, ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಉಮೇಶ್ ಕೆ.ಎಂ.ಬಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಐಶಿತಾ ರೈ, ಶ್ರಾವ್ಯ ಕೆ.ಎಚ್, ಪ್ರತೀತ ಪಿ ಪ್ರಾರ್ಥಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ವಸಂತ ರೈ ಕಾರ್ಕಳ ವಸಂತ ರೈ ಕಾರ್ಕಳ ಸ್ವಾಗತಿಸಿ, ಸಂಸ್ಥೆಯ ಮುಖ್ಯಗುರು ಸರಸ್ವತಿ ಎಂ. ವಂದಿಸಿದರು. ಶಿಕ್ಷಕಿಯರಾದ ಅನಿತಾ ಜೆ.ರೈ, ವಿನಯ ವಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸನ್ಮಾನ: 147 ಬಾರಿ ರಕ್ತದಾನ ಮಾಡಿದ ಸುಳ್ಯ ವರ್ತಕ ಸಂಘದ ಅಧ್ಯಕ್ಷ ಸುಧಾಕರ್ ರೈ ಪೆರಾಜೆ ಹಾಗೂ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಯೋಗೀಶ್ ಚಿದ್ಗಲ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ರಾಷ್ಟ್ರೀಯ ಸಂವಿಧಾನ ದಿನ- ಪ್ರತಿಜ್ಞಾ ವಿಧಿ ಸ್ವೀಕಾರ
ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ರಾಷ್ಟ್ರೀಯ ಸಂವಿಧಾನ ದಿನ ಅಂಗವಾಗಿ ವಿದ್ಯಾರ್ಥಿಗಳಿಗೆ, ಗಣ್ಯ ಅತಿಥಿಗಳಿಗೆ, ಶಿಕ್ಷಕರಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಸಂಸ್ಥೆಯ ಹಿರಿಯ ಶಿಕ್ಷಕಿ ವಿನಯ. ವಿ.ಶೆಟ್ಟಿ ಪ್ರತಿಜ್ಞಾ ವಿಧಿ ಬೋಧಿಸಿದರು.