ಉಪ್ಪಿನಂಗಡಿ: `ನಮ್ಮೂರು- ನೆಕ್ಕಿಲಾಡಿ’ ಸಂಸ್ಥೆಯ ವತಿಯಿಂದ ಇಲ್ಲಿನ 34 ನೆಕ್ಕಿಲಾಡಿಯಲ್ಲಿರುವ ಆರೋಗ್ಯ ಮತ್ತು ಕ್ಷೇಮ ಕೇಂದ್ರಕ್ಕೆ ನಾಮಫಲಕ ವಿತರಣೆ ಹಾಗೂ ಕೇಂದ್ರದಲ್ಲಿ ಜನರಿಗೆ ಉತ್ತಮ ಸೇವೆ ನೀಡುತ್ತಿರುವ ಸಮುದಾಯ ಆರೋಗ್ಯಾಧಿಕಾರಿ ರಿಯಾ ಅವರಿಗೆ ಸನ್ಮಾನ ಕಾರ್ಯಕ್ರಮವು ನ.26 ನಡೆಯಿತು.
ಸನ್ಮಾನ ನೆರವೇರಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಜತೀಂದ್ರ ಶೆಟ್ಟಿ, ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವುದಕ್ಕೆ ಕೇಂದ್ರ ಸರಕಾರವು ಜಾರಿಗೆ ತಂದಿರುವ ಈ ಯೋಜನೆಯು ಉತ್ತಮ ಯೋಜನೆಯಾಗಿದೆ. ಇದರಿಂದಾಗಿ ಜನರಿಗೆ ತಮ್ಮ ಗ್ರಾಮದಲ್ಲೇ ಪ್ರಾಥಮಿಕ ಚಿಕಿತ್ಸೆ ಸಿಗುವಂತಾಗಿದೆ. ಇಲಾಖೆಯಲ್ಲಿ ಕಾರ್ಯನಿರ್ವಹಿಸುವವರಿಗೆ ಸೇವಾ ಮನೋಭಾವನೆಯಿದ್ದಾಗ ಮಾತ್ರ ಸರಕಾರದ ಯೋಜನೆಯೊಂದು ಜನರಿಗೆ ಯಶಸ್ವಿಯಾಗಿ ಮುಟ್ಟಲು ಸಾಧ್ಯ. ಇಲ್ಲಿನ ಆರೋಗ್ಯಾಧಿಕಾರಿ ರಿಯಾ ಅವರು ಇಂತಹ ಸೇವಾ ಮನೋಭಾವನೆಯುಳ್ಳವರಾಗಿದ್ದು, ಅದಕ್ಕಿಂದು ಅವರು ಸನ್ಮಾನಕ್ಕೆ ಅರ್ಹರಾಗಿದ್ದಾರೆ. ಅವರಿಂದ ಇನ್ನಷ್ಟು ಸೇವೆಗಳು ಜನರಿಗೆ ಲಭಿಸಲಿ ಎಂದರಲ್ಲದೆ, `ನಮ್ಮೂರು- ನೆಕ್ಕಿಲಾಡಿ’ಯು ಸಮಾಜಮುಖಿ ಸಂಸ್ಥೆಯಾಗಿದ್ದು, ಸಮಾಜದ ಹಲವು ಸಾಧಕರನ್ನು ಗುರುತಿಸುವ ಕೆಲಸಗಳೊಂದಿಗೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ನಡೆಸಿದೆ ಎಂದರು.
ಸದಸ್ಯ ಅಬ್ದುರ್ರಹ್ಮಾನ್ ಯುನಿಕ್ ಮಾತನಾಡಿ, ಈ ಯೋಜನೆ ಪ್ರಾರಂಭವಾಗಿ ಏಳೆಂಟು ತಿಂಗಳಾಗಿದ್ದರೂ, ಗ್ರಾಮದ ಬೇರೆಡೆ ಇದ್ದ ಕೇಂದ್ರ ಇತ್ತೀಚೆಗಷ್ಟೇ ಇಲ್ಲಿನ ನೆಕ್ಕಿಲಾಡಿಯ ಮೈದಾನದ ಬಳಿಯಿರುವ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಇಲ್ಲಿ ನಾಮಫಲಕವಿಲ್ಲದ್ದರಿಂದ ಕೆಲವರಿಗೆ ಇಲ್ಲಿ ಈ ಕೇಂದ್ರವಿರೋದು ಅರಿವಾಗುತ್ತಿರಲಿಲ್ಲ. ಆದ್ದರಿಂದ ಇಲ್ಲಿಗೆ ನಾಮಫಲಕವನ್ನು ಅಳವಡಿಸುವ ಕೆಲಸವನ್ನು `ನಮ್ಮೂರು- ನೆಕ್ಕಿಲಾಡಿ’ ಸಂಸ್ಥೆಯ ವತಿಯಿಂದ ಮಾಡಲಾಗಿದೆ. ಇಲ್ಲಿನ ಆರೋಗ್ಯಾಧಿಕಾರಿ ಬಿ.ಎಸ್ಸಿ. ನರ್ಸಿಂಗ್ ಪದವೀಧರರಾಗಿದ್ದು, ವಿದೇಶದಲ್ಲೂ ಆಸ್ಪತ್ರೆಯ ಐಸಿಯೂ ಘಟಕದಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವವನ್ನು ಹೊಂದಿದ್ದಾರೆ. ಆದುದರಿಂದ ಅನುಭವಿಯಾಗಿರುವ ಇವರು ನಮ್ಮ ಗ್ರಾಮದ ಕೇಂದ್ರಕ್ಕೆ ನೇಮಕಾತಿ ಆಗಿರುವುದು ಗ್ರಾಮಸ್ಥರು ಉತ್ತಮ ಸೇವೆ ಪಡೆಯಲು ಅವಕಾಶ ಸಿಕ್ಕಂತಾಗಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಿಯಾ ಅವರು, ಪ್ರತಿ ಗ್ರಾಮದ ಜನರಿಗೆ ಆರೋಗ್ಯ ಸೌಲಭ್ಯ ದೊರಕಿಸುವ ಸಲುವಾಗಿ ಆರೋಗ್ಯ ಮತ್ತು ಕ್ಷೇಮ ಕೇಂದ್ರವನ್ನು ತೆರೆಯಲಾಗಿದೆ. ಇದು ಕೇಂದ್ರ ಸರಕಾರದ ಯೋಜನೆಯಾಗಿದ್ದು, ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯ ಅಡಿಯಲ್ಲಿದೆ. ಇದು ಉಪ್ಪಿನಂಗಡಿ ಸಮುದಾಯ ಕೇಂದ್ರದಡಿ ಕಾರ್ಯಾಚರಿಸುತ್ತಿದೆ. ಇಲ್ಲಿ ಬಿ.ಪಿ ಟೆಸ್ಟ್, ಶುಗರ್ ಟೆಸ್ಟ್, ಗಾಯಗಳಿಗೆ ಡ್ರೆಸ್ಸಿಂಗ್, ಶೀತ, ಜ್ವರ, ಹಲ್ಲು ನೋವು, ಗಂಟಲು ನೋವು ಸೇರಿದಂತೆ ವಿವಿಧ ರೋಗಗಳಿಗೆ ಪ್ರಾಥಮಿಕ ಚಿಕಿತ್ಸೆಯನ್ನು ನೀಡಲಾಗುವುದು. ಅಲ್ಲದೇ, ಎಂಡೋ ಪೀಡಿತರು, ಹಾಸಿಗೆ ಹಿಡಿದಿರುವ ರೋಗಿಗಳು ಇರುವ ಮನೆಗೆ ಮನೆ ಭೇಟಿ ಕಾರ್ಯಕ್ರಮವೂ ನಡೆಯಲಿದೆ. ಆದಷ್ಟು ಸಾರ್ವಜನಿಕರು ಇದರ ಉಪಯೋಗಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರಲ್ಲದೆ, ನಾಮಫಲಕ ವಿತರಿಸಿ, ಸನ್ಮಾನ ನೆರವೇರಿಸಿದ `ನಮ್ಮೂರು- ನೆಕ್ಕಿಲಾಡಿ’ಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭ `ನಮ್ಮೂರು- ನೆಕ್ಕಿಲಾಡಿ’ಯ ಸದಸ್ಯರಾದ ಅನಿ ಮಿನೇಜಸ್, ಅಝೀಝ್ ಪಿ.ಟಿ., ಜಯಶೀಲಾ ಶೆಟ್ಟಿ, ಶಬೀರ್ ಅಹಮ್ಮದ್, ಫಯಾಝ್ ಉಪಸ್ಥಿತರಿದ್ದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಖಲಂದರ್ ಶಾಫಿ ಸ್ವಾಗತಿಸಿ, ವಂದಿಸಿದರು.