ಕಡಬ: ಮುಸ್ಲಿಂ ಯುವಕನೋರ್ವ ಹಿಂದೂ ಯುವತಿಯನ್ನು ರೂಂ ಒಂದಕ್ಕೆ ಕರೆತಂದಿದ್ದ ಮಾಹಿತಿಯರಿತು ಸ್ಥಳದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಜಮಾಯಿಸಿ ತುಸು ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿತ್ತಾದರೂ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ ಘಟನೆ ಪೆರಾಬೆ ಗ್ರಾಮದ ಕುಂತೂರಿನಲ್ಲಿ ನ.27ರ ಸಂಜೆ ನಡೆದಿದೆ ಎಂದು ವರದಿಯಾಗಿದೆ.
ಕುಂತೂರು ಗ್ರಾಮದ ನಿವಾಸಿ ಎನ್ನಲಾದ ಮುಸ್ಲಿಂ ಯುವಕ ಪೆರಾಬೆ ಗ್ರಾ.ಪಂ.ಸಮೀಪವಿರುವ ತನ್ನ ಬಾಡಿಗೆ ಕೋಣೆಗೆ ಮಂಜೇಶ್ವರ ಮೂಲದ 21 ವರ್ಷದ ಹಿಂದೂ ಯುವತಿಯನ್ನು ಕರೆತಂದಿದ್ದ ಸುದ್ದಿ ಹರಡುತ್ತಿದ್ದಂತೆ ಸ್ಥಳದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಹಾಗೂ ಸ್ಥಳೀಯರು ಜಮಾಯಿಸಿದ್ದರು.ಇದರಿಂದಾಗಿ ಪರಿಸ್ಥಿತಿ ಉದ್ರಿಕ್ತವಾಗುವ ಹಂತಕ್ಕೆ ತಲುಪುವ ಮೊದಲೇ ಕಡಬ ಠಾಣಾ ಎಸ್.ಐ ಆಂಜನೇಯ ರೆಡ್ಡಿ ಹಾಗೂ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ತೆರಳಿದ್ದಾರೆ.ಪೊಲೀಸರು ಬರುವ ಮುನ್ನವೇ ಯುವಕ ರೂಮ್‌ನಿಂದ ಪರಾರಿಯಾಗಿದ್ದಾಗಿ ತಿಳಿದು ಬಂದಿದೆ.ಯುವಕ ಮತ್ತು ಯುವತಿಗೆ ಹೊಟೇಲೊಂದರಲ್ಲಿ ಪರಿಚಯವಾಗಿತ್ತು ಎನ್ನಲಾಗಿದೆ.
ಯುವಕನ ಪೂರ್ಣ ಮಾಹಿತಿ ಪಡೆಯದೆ ಬಾಡಿಗೆ ರೂಂ ನೀಡಿರುವ ಕಟ್ಟಡ ಮಾಲಿಕ ಸ್ಥಳಕ್ಕೆ ಬರುವಂತೆ ಸಂಘಟನೆಯವರು ಪಟ್ಟು ಹಿಡಿದರು.ಜನ ಸೇರುತ್ತಿರುವುದನ್ನು ಗಮನಿಸಿದ ಎಸ್.ಐ.ಆಂಜನೇಯ ರೆಡ್ಡಿಯವರು, ನೆರೆದಿದ್ದವರನ್ನು ಸ್ಥಳದಿಂದ ತೆರಳುವಂತೆ ಸೂಚಿಸಿ ಪರಿಸ್ಥಿತಿ ನಿಭಾಯಿಸಿದರು.ಯುವತಿಯನ್ನು ಪೊಲೀಸರು ಆಕೆಯ ಮನೆಗೆ ಕಳುಹಿಸಿರುವುದಾಗಿ ತಿಳಿದುಬಂದಿದೆ.ಪರಾರಿಯಾದ ಯುವಕನ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.ಪೊಲೀಸರು ತನಿಖೆ ಮುಂದುವರಿಸಿದ್ದಾರೆ.