ಬಡಗನ್ನೂರು:ಗೆಜ್ಜೆಗಿರಿ ಕ್ಷೇತ್ರದಲ್ಲಿ ಗೆಜ್ಜೆಗಿರಿ ಮೇಳದ ಉದ್ಘಾಟನೆ, ಪ್ರಥಮ ಸೇವೆಯಾಟ

0

ಯಕ್ಷಗಾನವು ದೇಶದ ಸಂಸ್ಕೃತಿಯನ್ನು ಪ್ರಚುರಪಡಿಸುವ ಕಲೆ-ವಿಖ್ಯಾತನಂದ ಸ್ವಾಮೀಜಿ

ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ಅವಿಭಾಜ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನಕ್ಕೆ ಅದರದ್ದೇ ಆದ ಮಹತ್ವವಿದೆ, ಸ್ಥಾನಮಾನವಿದೆ. ಯಕ್ಷಗಾನ ಕಲೆ ಎಂಬುದು ದೇಶದ ಸಂಸ್ಕೃತಿಯನ್ನು ಪ್ರಚುರಪಡಿಸುವ ಕಲೆಯಾಗಿದ್ದು ಇದು ಇಡೀ ವಿಶ್ವದಲ್ಲಿಯೇ ಅತ್ಯದ್ಭುತವಾಗಿ ಮೆರೆಯುತ್ತಿದೆ ಎಂದು ಸೋಲೂರು ಮಠದ ಆರ್ಯ-ಈಡಿಗ(ಬಿಲ್ಲವ) ಮಹಾಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ವಿಖ್ಯಾತಂದ ಸ್ವಾಮೀಜಿರವರು ಹೇಳಿದರು.

ಬಡಗನ್ನೂರು ಗ್ರಾಮದ ಗೆಜ್ಜೆಗಿರಿಯ ಮೂಲಸ್ಥಾನ ಶ್ರೀ ಆದಿ ಧೂಮಾವತಿ ಶ್ರೀ ದೇಯಿಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ವತಿಯಿಂದ ನ.27 ರಂದು ಶ್ರೀ ಗೆಜ್ಜೆಗಿರಿ ಕ್ಷೇತ್ರದಲ್ಲಿ ಶ್ರೀ ಗೆಜ್ಜೆಗಿರಿ ಮೇಳದ ಉದ್ಘಾಟನೆ ಹಾಗೂ ದೇವರ ಪ್ರಥಮ ಸೇವೆ ಆಟದ ಸಮಾರಂಭದಲ್ಲಿ ಅವರು ಆಶೀರ್ವಚನ ನೆರವೇರಿಸಿ ಮಾತನಾಡಿದರು. ದೇಯಿ ಬೈದೇತಿ, ಕೋಟಿ-ಚೆನ್ನಯರ ಕ್ಷೇತ್ರವೆನಿಸಿದ ಗೆಜ್ಜೆಗಿರಿ ಮಣ್ಣಿನಲ್ಲಿ ದೇಶವೇ ಹೊಗಳುವಂತಹ ಯಕ್ಷಗಾನ ಮೇಳವನ್ನು ನಾವೀನ್ಯತೆಯಿಂದ ಕಟ್ಟಿಕೊಂಡು ಹೊರಡಿರುವುದು ಮೆಚ್ಚತಕ್ಕ ವಿಷಯ. ಈ ಮೂಲಕ ಭಕ್ತಾದಿಗಳ ಹೃದಯದಲ್ಲಿ ಅಧ್ಯಾತ್ಮಿಕತೆಯ, ಕಲೆ ಸಂಸ್ಕೃತಿಯ ಭಾವನೆ ದ್ವಿಗುಣಗೊಳ್ಳಲಿ, ಎಲ್ಲರ ಹೃದಯದಲ್ಲಿ ನೆಲೆಸಲಿ, ಈ ಸಂಸ್ಕೃತಿ ಮುಂದಿನ ದಿನಗಳಲ್ಲಿ ಅಚ್ಚಳಿಯದೆ ಉಳಿಯಲಿ ಎಂಬುದೇ ನಮ್ಮ ಪ್ರಾರ್ಥನೆಯಾಗಿದೆ ಎಂದರು.

ಕಲಾವಿದ ಒಂದೇ ಮೇಳದಲ್ಲಿದ್ದು ಸೇವೆ ನೀಡುವಂತಾಗಲಿ-ಡಿ.ಹರ್ಷೇಂದ್ರ ಕುಮಾರ್:

ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್ ಮಾತನಾಡಿ, ದೂರದ ಮಸ್ಕತ್‌ನಲ್ಲಿ ಉದ್ಯೋಗದಲ್ಲಿರುವ ಪ್ರಶಾಂತ್‌ರವರ ತಂಡದಲ್ಲಿನ ವಿಶ್ವಾಸ, ನಂಬಿಕೆಯಿಂದ ಹಾಗೂ ಯಕ್ಷಗಾನದಲ್ಲಿನ ಪ್ರೀತಿಯಿಂದ ಅನೇಕ ದಾನಿಗಳು ಕೈಜೋಡಿಸಿರುವುದು ಶ್ರೀ ಕ್ಷೇತ್ರದ ಕಾರಣಿಕ ಶಕ್ತಿ ಏನೆಂಬುದು ಉಲ್ಲೇಖನೀಯ. ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳಕ್ಕೆ ೧೮೦ ವರ್ಷಗಳ ಇತಿಹಾಸವಿದೆ. ಹಿಂದಿನ ಯಕ್ಷಗಾನಕ್ಕೂ ಹಾಗೂ ಇಂದಿನ ಯಕ್ಷಗಾನಕ್ಕೂ ಬಹಳ ಸಾಮ್ಯತೆಯಿದೆ. ಯಕ್ಷಗಾನ ಕಲಾವಿದರಲ್ಲಿ ಸಮಯಪ್ರಜ್ಞೆ ಬಹಳ ಮುಖ್ಯವಾಗಿ ಬೇಕಾಗಿದೆ. ಒಂದು ಮೇಳಕ್ಕೆ ಕಲಾವಿದ ಖಾಯಂ ಆದ ಮೇಲೆ ಸಂಭಾವನೆಗೋಸ್ಕರ ಮತ್ತೊಂದು ಮೇಳಕ್ಕೆ ಸೇರಿದಾಗ ಆತನಲ್ಲಿನ ವಿದ್ವತ್ ಮೇಲೆ ಬಹಳ ಪರಿಣಾಮ ಬೀಳುತ್ತದೆ. ಶ್ರೀ ಕ್ಷೇತ್ರದಲ್ಲಿನ ಸಾನಿಧ್ಯಕ್ಕೆ ಯಾರೂ ಪ್ರಶ್ನೆ ಮಾಡಬೇಡಿ, ಸಾನಿಧ್ಯ ಇದ್ದೇ ಇದೆ ಎಂದರು.

ನೂತನ ಮೇಳವು ಗೆಜ್ಜೆಯ ಮೂಲಕ ಗಿರಿಯಾಗಿ ನಿಲ್ಲಲಿದೆ-ಸದಾನಂದ ವೆಂಕಟೇಶ್ ಅಸ್ರಣ್ಣ:

ಶ್ರೀ ಕ್ಷೇತ್ರ ಕಟೀಲು ಅನುವಂಶಿಕ ಅರ್ಚಕ ಸದಾನಂದ ವೆಂಕಟೇಶ್ ಅಸ್ರಣ್ಣರವರು ಮಾತನಾಡಿ, ದೇವರ ಸೇವೆಯನ್ನು ಮಾಡುವವರು ತಪಸ್ಸನ್ನು ಹೊಂದುವವರಾಗಬೇಕು. ಕ್ಷೇತ್ರದಲ್ಲಿ ನಡೆಯುವ ಪ್ರತಿಯೊಂದು ಕಾರ್ಯವು ನಿಯಮಬದ್ಧವಾಗಿರಬೇಕು ಹಾಗೂ ನಿರಂತರ ಅನ್ನದಾನ ಮಾಡಿದಾಗ ಆ ಕ್ಷೇತ್ರ ವೃದ್ಧಿಸುತ್ತದೆ ಎಂಬುದಕ್ಕೆ ಈ ಗೆಜ್ಜೆಗಿರಿ ಕ್ಷೇತ್ರವೇ ಉದಾಹರಣೆಯಾಗಿದೆ. ನಾವು ಮಾಡುವ ಕೆಲಸ ದೇವರ ಚಿತ್ತಕ್ಜೆ ಹತ್ತಿರವಾದಾಗ ನಾವು ಊಹಿಸಿಕೊಂಡ ಗುರಿ ಮುಟ್ಟಲು ಸಾಧ್ಯವಾಗುತ್ತದೆ. ಗೆಜ್ಜೆಗಿರಿ ಕ್ಷೇತ್ರಕ್ಕೆ ಈ ನೂತನ ಮೇಳವು ಗೆಜ್ಜೆಯ ಮೂಲಕ ಗಿರಿಯಾಗಿ ನಿಲ್ಲಲಿದೆ. ಹೇಗೆ ನದಿಯ ಪ್ರವಾಹ ಹರಿಯತೊಡಗುತ್ತದೋ ಹಾಗೆಯೇ ಶ್ರೀ ಕ್ಷೇತ್ರದ ನೂತನ ಮೇಳ ಎಲ್ಲರ ಶುಭ ಹಾರೈಕೆಗಳೊಂದಿಗೆ ಮುಂದುವರೆಯಲಿ ಎಂದು ಹೇಳಿ ಶುಭ ಹಾರೈಸಿದರು.

ಸಂಘಟಿತ ಪ್ರಯತ್ನದಿಂದ ಶ್ರೀ ಕ್ಷೇತ್ರದಲ್ಲಿ ಯಕ್ಷಗಾನ ಮೇಳ ಆರಂಭ-ಪೀತಾಂಬರ ಹೆರಾಜೆ:

ಅಧ್ಯಕ್ಷತೆ ವಹಿಸಿದ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಅಧ್ಯಕ್ಷ ಪೀತಾಂಬರ ಹೆರಾಜೆರವರು ಮಾತನಾಡಿ, ಗೆಜ್ಜೆಗಿರಿ ಕ್ಷೇತ್ರ ಅನ್ನುವುದೇ ಆಶ್ಚರ್ಯ ಹಾಗೂ ವಿಶಿಷ್ಟತೆ. ಶ್ರೀ ಕ್ಷೇತ್ರಕ್ಕೆ 550 ವರ್ಷಗಳ ಇತಿಹಾಸವಿದೆ. ಇಲ್ಲಿನ ಪ್ರತಿಯೋರ್ವರೂ ಶ್ರೀ ಕ್ಷೇತ್ರದ ಶಿಲಾನ್ಯಾಸ, ಹೊರೆ ಕಾಣಿಕೆ, ಬ್ರಹ್ಮಕಲಶ ಹೀಗೆ ಅಭಿವೃದ್ಧಿಗೆ ಹಗಲು ರಾತ್ರಿ ದುಡಿದಿದ್ದಾರೆ. ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಪೂರಕವೆಂಬಂತೆ ಶ್ರೀ ಕ್ಷೇತ್ರದಲ್ಲಿ ಗೆಜ್ಜೆಗಿರಿ ಹೆಸರಿನಲ್ಲಿ ಯಕ್ಷಗಾನ ಮೇಳ ಆರಂಭವಾಗುವುದು ಸಂಘದ ಸಂಘಟಿತ ಪ್ರಯತ್ನವಾಗಿದೆ ಎಂದರು.

ಯಕ್ಷಗಾನದಲ್ಲಿ ಸ್ವಚ್ಚತಾ ಭಾಷಾ ಪ್ರೌಢಿಮೆಯು ಮೇಳೈಸಿದೆ-ಡಾ.ಅರುಣ್ ಉಳ್ಳಾಲ್:

ಧರ್ಮದ ಕುರಿತು ಭಾಷಣಗೈದ ಯುವ ಸಂಶೋಧಕ ಡಾ.ಅರುಣ್ ಉಳ್ಳಾಲ್‌ರವರು, ಯಕ್ಷಗಾನ ಎಂಬುದು ಗಂಡು ಕಲೆಯಾಗಿದೆ. ಈ ಯಕ್ಷಗಾನ ಕಲೆಯಲ್ಲಿ ಆಂಗ್ಲ ಭಾಷೆ ನುಸುಳದಂತೇ ಅತ್ಯಂತ ಸ್ವಚ್ಚತಾ ಭಾಷಾ ಪ್ರೌಢಿಮೆಯೊಂದಿಗೆ ಮೇಳೈಸುತ್ತಿರುವುದು ವೈಶಿಷ್ಟ್ಯತೆಯಾಗಿದೆ. ಯಾವುದೇ ಕಲೆಯಾಗಿರಲಿ, ಕಾಲಬದ್ಧವಾದ ಆಸಕ್ತಿ ಕ್ಷಣಿಕವಾಗಿದ್ದು, ಅಂತರ್ಗತವಾದ ಸದಭಿಮಾನವಿದ್ದಾಗ ಮಾತ್ರ ಅದು ಸುದೀರ್ಘ ಕಾಲ ಬಾಳುತ್ತದೆ. ಗೆಜ್ಜೆಗಿರಿ ಕ್ಷೇತ್ರದಲ್ಲಿನ ನೂತನ ಮೇಳವು ಪ್ರತೀ ಮನೆ ಮನೆಯಲ್ಲಿ ಆಡಿಸುವಂತಾಗಲಿ ಎಂದರು.

ಯಕ್ಷಗಾನವು ಜನರ ಮೆದುಳಿಗೆ ಮೇವು ಕೊಡುವಂತಹ ಕೆಲಸ ಮಾಡುತ್ತಿದೆ-ಉಮಾನಾಥ್ ಕೋಟ್ಯಾನ್:

ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಶ್ರೀ ಕ್ಷೇತ್ರ ಗೆಜ್ಹೆಗಿರಿ ಎಂಬುದು ದೇಶ-ವಿದೇಶಗಳಲ್ಲಿ ಖ್ಯಾತಿ ಪಡೆದಿದೆ ಎಂಬುದು ಸತ್ಯದ ವಿಚಾರ. ಇದೇ ಕ್ಷೇತ್ರದಲ್ಲಿ ಆರಂಭಗೊಂಡಿರುವ ನೂತನ ಯಕ್ಷಗಾನ ಮೇಳವು ಎಲ್ಲೆಡೆ ಪಸರಿಸಲಿ. ಹಿಂದಿನ ಹಿರಿಯರಿಗೆ ವಿದ್ಯಾಭ್ಯಾಸವಿಲ್ಲದಿದ್ದರೂ ಮಹಾಭಾರತ, ರಾಮಾಯಣ, ಪುರಾಣದಂತಹ ಇತಿಹಾಸವನ್ನು ಬಹಳ ಬಳ್ಳವರಾಗಿದ್ದರು. ಆದರೆ ಇಂದಿನ ಸ್ಥಿತಿಯೇ ಬೇರೆ. ಯಕ್ಷಗಾನವು ಜನರ ಮೆದುಳಿಗೆ ಮೇವು ಕೊಡುವಂತಹ ಕೆಲಸ ಮಾಡುತ್ತಿದೆ. ಯಕ್ಷಗಾನದಲ್ಲಿ ಪಾತ್ರ ಮಾಡುವವರು ಹೆಚ್ಚು ವಿದ್ಯಾವಂತರಲ್ಲ. ಯಕ್ಷಗಾನವು ಜ್ಞಾನ ಹಾಗೂ ಅನುಭವ ಕೊಡುವ ಸಾಧನವಾಗಿದೆ ಎಂದರು.

ಗೆಜ್ಜೆಗಿರಿ ಮೇಳದ ಆರಂಭಕ್ಕೆ ದೇವರು ಪ್ರೇರೇಪಣಾಶಕ್ತಿಯಾಗಿ ಆಶೀರ್ವಾದ-ಕೆ.ಚಿತ್ತರಂಜನ್:

ಕಂಕನಾಡಿ ಬ್ರಹ್ಮ ಬೈದೆರ್ಕಳ ಗರಡಿ ಕ್ಷೇತ್ರದ ಅಧ್ಯಕ್ಷ ಕೆ.ಚಿತ್ತರಂಜನ್ ಮಾತನಾಡಿ, ಶ್ರೀ ಕ್ಷೇತ್ರ ಗೆಜ್ಜೆಗಿರಿ ಮಹಿಮೆಯನ್ನು ಯಾರೂ ಕೊಂಡಾಡದಿರಲು ಸಾಧ್ಯವಿಲ್ಲ. ಯಾಕೆಂದರೆ ಈ ಕ್ಷೇತ್ರದ ಮಹಿಮೆ ಹಾಗೆ ಇದೆ. ಪ್ರತೀ ಹೆಜ್ಜೆ ಹೆಜ್ಜೆಗೆ ದೇಯಿ ಬೈದೇತಿ, ಕೋಟಿ-ಚೆನ್ನಯರ ಶಕ್ತಿ ಇಲ್ಲಿನ ಸಾನಿಧ್ಯದಲ್ಲಿ ಭಕ್ತರಿಗೆ ಪ್ರಚುರಪಡಿಸುತ್ತಿದೆ. ಶ್ರೀ ಕ್ಷೇತ್ರದಲ್ಲಿ ಗೆಜ್ಜೆಗಿರಿ ಮೇಳವನ್ನು ಪ್ರಥಮವಾಗಿ ಆರಂಭಿಸುವ ಚಿಂತನೆಯಿದ್ದಾಗ ದೇವರು ಹೇಗೆ ಪ್ರೇರೇಪಣಾಶಕ್ತಿಯಾಗಿ ಆಶೀರ್ವಾದ ಮಾಡಿರೋದೇ ಸಾಕ್ಷಿಯಾಗಿದೆ ಎಂದರು.

ಇಲ್ಲಿನ ಸಾನಿಧ್ಯವೇ ತನ್ನಿಂದ ಕೊಡಿಸಲ್ಪಟ್ಟಿತ್ತು ಸೇವೆಯ ರೂಪ-ಪ್ರತಿಭಾ ಕುಳಾಯಿ:

ಯುವ ನಾಯಕಿ ಹಾಗೂ ಕುಳಾಯಿ ಫೌಂಡೇಶನ್ ಅಧ್ಯಕ್ಷೆ ಪ್ರತಿಭಾ ಕುಳಾಯಿ ಮಾತನಾಡಿ, ಶ್ರೀ ಕ್ಷೇತ್ರಕ್ಕೆ ಮೊದಲ ಬಾರಿಗೆ ಬಂದಾಗಲೇ ಏನಾದರೂ ಕೊಡಬೇಕೆನ್ನಿಸಿತ್ತು. ಎರಡನೇ ಸಲ ಬಂದಾಗ ಶ್ರೀ ಕ್ಷೇತ್ರದಲ್ಲಿ ನೂತನ ಮೇಳದ ರೂಪು ರೇಷೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ನೂತನ ಮೇಳಕ್ಕೆ ಜನರೇಟರ್‌ನ ಅಗತ್ಯವಿದೆ ಎಂದು ತಿಳಿಯಲ್ಪಟ್ಟಾಗ ತಾನು ಅದನ್ನು ತಕ್ಷಣ ಕೊಡಲು ಒಪ್ಪಿದೆ. ಯಾಕೆಂದರೆ ಇದು ತಾನು ಕೊಟ್ಟದ್ದಲ್ಲ, ಇಲ್ಲಿನ ಸಾನಿಧ್ಯವೇ ತನ್ನಿಂದ ಕೊಡಿಸಲ್ಪಟ್ಟಿತ್ತು. ಸಮಾಜಕ್ಕೆ ತನ್ನಿಂದ ಕಿಂಚಿತ್ತ್ ಸಹಾಯ ಮಾಡಲು ಸಿದ್ದ ಎಂದರು.

ಸಾಮಾಜಿಕ ಬದ್ಧತೆ, ಚಿಂತನೆಯೊಂದಿಗೆ ಕಣ್ಣೀರೊರೆಸುವ ಕೆಲಸವಾಗಲಿ-ಡಾ.ಅಣ್ಣಯ್ಯ ಕುಲಾಲ್:

ಪ್ರತಿಷ್ಠಿತ ಡಿ.ದೇವರಾಜು ಅರಸು ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ.ಅಣ್ಣಯ್ಯ ಕುಲಾಲ್ ಉಳ್ತೂರು ಮಾತನಾಡಿ, ಉತ್ತರಭಾಗದಿಂದ ಬಂದವನಾದ ನಾನು ಈ ಕ್ಷೇತ್ರವನ್ನು ನೋಡಿದಾಗ ಮಹದಾನಂದವಾಯಿತು. ಹಳೇ ಬೇರು ಹೊಸ ಚಿಗುರು ಎಂಬಂತೆ ದೂರದ ಮಸ್ಕತ್‌ನಲ್ಲಿ ಉದ್ಯೋಗ ಮಾಡಿಕೊಂಡಿರುವ ಯುವಕ ಪ್ರಶಾಂತ್‌ರವರು ಯಕ್ಷಗಾನ ಪ್ರೇಮಿಗಳಾದ ಹಿರಿಯರಲ್ಲಿ ನೂತನ ಯಕ್ಷಗಾನ ಮೇಳವೊಂದನ್ನು ಸ್ಥಾಪಿಸುವ ಜೊತೆಗೆ ಯಕ್ಷಗಾನ ಮೇಳಕ್ಕೆ ತಗಲುವ ಖರ್ಚು ವೆಚ್ಚಗಳನ್ನು ಪ್ರಸ್ತಾವಿಸಿದಾಗ ಹಿರಿಯರು ಸಹಾಯಹಸ್ತ ನೀಡಲು ಮುಂದಾಗಿರುವುದು ಶ್ಲಾಘನೀಯ. ಸಾಮಾಜಿಕ ಬದ್ಧತೆ ಹಾಗೂ ಚಿಂತನೆಯೊಂದಿಗೆ ಕಣ್ಣೀರೊರೆಸುವ ಕೆಲಸವಾಗಲಿ ಎಂದರು.

ಧಾರ್ಮಿಕ ಕಾರ್ಯಕ್ರಮ:

ಶ್ರೀ ಕ್ಷೇತ್ರದಲ್ಲಿ ಬೆಳಿಗ್ಗೆ ದ್ವಾದಶನಾರಿಕೇಳ ಗಣಯಾಗ, ಮಹಾಪೂಜೆ, ಮಧ್ಯಾಹ್ನ ಹಾಗೂ ರಾತ್ರಿ ಸಾರ್ವಜನಿಕ ಅನ್ನ ಸಂತರ್ಪಣೆ, ಅಪರಾಹ್ನ ತೆಂಕು ಹಾಗೂ ಬಡಗುತಿಟ್ಟಿನ ಪ್ರಸಿದ್ಧ ಕಲಾವಿದರಿಂದ ಯಕ್ಷನಾಟ್ಯ ಗಾನ ವೈಭವ, ರಾತ್ರಿ ಚೌಕಿ ಪೂಜೆ ಹಾಗೂ ಬೆಳಗ್ಗಿನವರೆಗೆ ದೇವರ ಪ್ರಥಮ ಸೇವೆಯಾಟ ನಡೆಯಿತು. ಜೊತೆಗೆ ಸಂಜೆಯಿಂದ ದುರ್ಗಾ ನಮಸ್ಕಾರ ಪೂಜೆ ಜರಗಿತು. ಅರ್ಚಕ ಶಿವಾನಂದ್ ಶಾಂತಿ ಮೂಡಬಿದ್ರೆರವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.

ಮೂಲ್ಕಿ ಬಿಲ್ಲವ ಮಹಾಮಂಡಲದ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್, ಅಖಿಲ ಭಾರತ ಬಿಲ್ಲವರ ಯೂನಿಯನ್‌ನ ನವೀನ್ ಚಂದ್ರ ಡಿ.ಸುವರ್ಣ, ಶ್ರೀ ಕ್ಷೇತ್ರ ಗೆಜ್ಜೆಗಿರಿಯ ನಿಕಟಪೂರ್ವ ಅಧ್ಯಕ್ಷ ಜಯಂತ್ ನಡುಬೈಲು, ಕುದ್ರೋಳಿ ಶ್ರೀ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ ಆರ್, ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರವರ ಪತ್ನಿ ಸುಚಿತ ಬಂಗೇರ, ದುಬೈ ಬಿಲ್ಲವಾಸ್ ಅಧ್ಯಕ್ಷ ಪ್ರಭಾಕರ ಸುವರ್ಣ ಕರ್ನಿರೆ, ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮು, ಕೊಟ್ಟಾರಿ ಸುಧಾರಕ ಸಂಘದ ಜಿಲ್ಲಾಧ್ಯಕ್ಷ ಬಾಲಕೃಷ್ಣ ಕೊಟ್ಟಾರಿ, ಉದ್ಯಮಿ ಕಮಲಾಕ್ಷ ಪೂಜಾರಿ ಮಂಗಳೂರುರವರು ಸಹಿತ ಹಲವರು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗೆಜ್ಜೆಗಿರಿ ಮೇಳದ ಹಾಡನ್ನು ಬರೆದು ಸುಶ್ರಾವ್ಯವಾಗಿ ಹಾಡಿದ ಅಕ್ಷಿತಾ ಹಿತೇಶ್‌ರವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಮಂಗಳೂರು ಬಜ್ಜೋಡಿಯ ವೀರಮಾರುತಿ ವ್ಯಾಯಾಮ ಶಾಲೆಯ ವತಿಯಿಂದ ತಾಲೀಮು ಪ್ರದರ್ಶನ ಜರಗಿತು. ಶ್ರೀ ಕ್ಷೇತ್ರ ಗೆಜ್ಜೆಗಿರಿ ಕಾರ್ಯಕಾರಿ ಸಮಿತಿ ಸದಸ್ಯರಾದ ನವೀನ್ ಸುವರ್ಣ, ಸಂಜೀವ ಪೂಜಾರಿ ಬಿರ್ವ, ಶೈಲೇಂದ್ರ ಸುವರ್ಣ, ದೀಪಕ್ ಕೋಟ್ಯಾನ್, ಮೋಹನ್ ದಾಸ್ ಬಂಗೇರ, ರಾಜೇಂದ್ರ ಚಿಲಿಂಬಿ, ನವೀನ್ ಪೂಜಾರಿಬಪಡು, ಜನಾರ್ದನ ಪೂಜಾರಿ ಪದಡ್ಕ, ನಾರಾಯಣ ಮಚ್ಚಿನ, ಹರೀಶ್ ಅಮೀನ್, ಕುಮಾರು ಇರುವೈಲು, ಮಮತಾ ಗರೋಡಿ, ಪ್ರಕಾಶ್ ದುಬೈ, ಚಂದ್ರಶೇಖರ್ ಉಚ್ಚಿಲ, ನೂತನ ನೆಟ್ಟಾರು, ಡಿ.ರಾಜು ಪೂಜಾರಿ,ಭಾಸ್ಕರ ಕರ್ಕೇರಾರವರು ಅತಿಥಿಗಳಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಸಹಕರಿಸಿದ ದೀಪಕ್ ಸಜಿಪ, ಲಕ್ಷ್ಮಣ, ಜಯರಾಂರವರನ್ನು ಅಭಿನಂದಿಸಲಾಯಿತು. ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್ ಸ್ವಾಗತಿಸಿ, ಕೋಶಾಧಿಕಾರಿ ದೀಪಕ್ ಕೋಟ್ಯಾನ್ ವಂದಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.

130 ಆಟಗಳು ಈಗಾಗಲೇ ಬುಕ್ಕಿಂಗ್..

ಗೆಜ್ಜೆಗಿರಿ ಮೇಳವನ್ನು ಸ್ಥಾಪಿಸುವ ಇಂಗಿತವನ್ನು ತೋರ್ಪಡಿಸಿಕೊಂಡಾಗ ಹಲವರು ಯಕ್ಷಗಾನ ಪ್ರಿಯರು ತನ್ನೊಂದಿಗೆ ಕೈಜೋಡಿಸಿದ್ದಾರೆ. ಈಗಾಗಲೇ 130 ಆಟಗಳು ಬುಕ್ ಆಗಿವೆ. ಗುಜರಾತ್, ಗೋವಾ, ಪುಣೆ, ದೆಹಲಿ, ಧಾರವಾಡ, ದುಬೈ, ಗಲ್ಫ್ ದೇಶ ಮುಂತಾದ ಕಡೆಗಳಲ್ಲಿ ಮಳೆಗಾಲದಂದು ಯಕ್ಷಗಾನವನ್ನು ಆಡಿಸುವ ನಿರೀಕ್ಷೆಯನ್ನು ಹೊಂದಿದ್ದೇವೆ. ದ.ಕ, ಚಿಕ್ಕಮಗಳೂರು, ಕಾಸರಗೋಡು, ಕೊಡಗು ಜಿಲ್ಲೆಗಳಲ್ಲಿ ಹರಕೆಯ ಆಟ ಬೇರೆನೆ ಇದೆ. ಈ ನೂತನ ಮೇಳದಲ್ಲಿ ಕಲಾವಿದರು, ಹಿಮ್ಮೇಳ, ಮುಮ್ಮೇಳ ಸೇರಿ 42 ಮಂದಿ ಪಾತ್ರಧಾರಿಗಳಿದ್ದಾರೆ. ನೂತನ ಪೌರಾಣಿಕ ನಾಟಕಗಳಾದ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ, ವಿಶ್ವವ್ಯಾಪಕ ನಾಮ ಶ್ರೀರಾಮ, ಬ್ರಹ್ಮಕಲಶ ಹಾಗೂ ಶ್ರೀದೇವಿ ಮಹಾತ್ಮೆ ಯಕ್ಷಗಾನ ಸಹಿತ ಎಲ್ಲಾ ಪೌರಾಣಿಕ ನಾಟಕಗಳನ್ನು ಆಡಿ ತೋರಿಸಲಾಗುವುದು. ಈ ನಿಟ್ಟಿನಲ್ಲಿ ಸರ್ವರ ಪ್ರೋತ್ಸಾಹ ಅಗತ್ಯವಾಗಿ ಬೇಕಾಗಿದೆ ಮಾತ್ರವಲ್ಲ ಗಂಡು ಕಲೆಯಾಗಿರುವ ಯಕ್ಷಗಾನವನ್ನು ಉಳಿಸಿ ಬೆಳೆಸಬೇಕಾಗಿದೆ.

-ಪ್ರಶಾಂತ್ ಮಸ್ಕತ್, ನೂತನ ಮೇಳದ ವ್ಯವಸ್ಥಾಪಕ ನಿರ್ದೇಶಕರು

ಸನ್ಮಾನ..

ಕಂಕನಾಡಿ ಬ್ರಹ್ಮ ಬೈದೆರ್ಕಳ ಗರಡಿ ಕ್ಷೇತ್ರದ ಅಧ್ಯಕ್ಷ ಕೆ.ಚಿತ್ತರಂಜನ್‌ರವರಿಗೆ ಶ್ರೀ ಧರ್ಮರತ್ನ ಪ್ರಶಸ್ತಿ, ತೆಂಕು-ಬಡಗುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಗೋವಿಂದಪ್ಪರವರಿಗೆ ಶ್ರೀ ದೇಯಿ ಬೈದೆತಿ ಮಾತೃ ಸನ್ಮಾನ, ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರಾದ ಹಿರಿಯ ಯಕ್ಷಗಾನ ಕಲಾವಿದ ಪೂಕಳ ಲಕ್ಷ್ಮೀನಾರಾಯಣ ಭಟ್‌ರವರಿಗೆ ಶ್ರೀ ಸಾಯನ ಬೈದ್ಯ ಗುರು ಸನ್ಮಾನ, ರಾಜ್ಯ ಪ್ರಶಸ್ತಿ ವಿಜೇತರಾದ ಹಿರಿಯ ಯಕ್ಷಗಾನ ಕಲಾವಿದ ಅರುವ ಕೊರಗಪ್ಪ ಶೆಟ್ಟಿಯವರಿಗೆ ಯಕ್ಷಕೋಟಿ ಸಾಧಕ ಸನ್ಮಾನ, ಕಲಾ ಪೋಷಕರಾದ ಪೆರ್ಮುದೆ ಯಾದವ ಕೋಟ್ಯಾನ್‌ರವರಿಗೆ ಕೋಟಿ-ಚೆನ್ನಯ ಕಲಾ ಪೋಷಕ ಸನ್ಮಾನಿಸುವ ಮೂಲಕ ಗೌರವಿಸಲಾಯಿತು.

ಅಭಿನಂದನೆ..

ತೆಂಕುತಿಟ್ಟಿನ ಪ್ರಸಿದ್ಧ ಭಾಗವತರಾದ ಶ್ರೀ ಪಾವಂಜೆ ಮೇಳದ ಪಟ್ಲ ಸತೀಶ್ ಶೆಟ್ಟಿ, ಶ್ರೀ ಹನುಮಗಿರಿ ಮೇಳದ ರವಿಚಂದ್ರ ಪೂಜಾರಿ ಕನ್ನಡಿಕಟ್ಟೆ, ಶ್ರೀ ಗೆಜ್ಜೆಗಿರಿ ಮೇಳದ ಗಿರೀಶ್ ರೈ ಕಕ್ಕೆಪದವು, ನಿರಂಜನ ಪೂಜಾರಿ ಬಡಗ ಬೆಳ್ಳೂರು, ಬಡಗು ತಿಟ್ಟಿನ ಭಾಗವತರಾದ ಆರ್.ಡಿ ಸಂತೋಷ್ ಪೂಜಾರಿ, ತೆಂಕುತಿಟ್ಟಿನ ಮಹಿಳಾ ಭಾಗವತರಾದ ಶ್ರೀಮತಿ ಭವ್ಯಶ್ರೀ ಮಂಡೆಕೋಲು, ಬಡಗು ತಿಟ್ಟಿನ ಉದಯೋನ್ಮುಖ ಮಹಿಳಾ ಭಾಗವತರಾದ ಕು|ಇಂಚರ ಪೂಜಾರಿ ಶಿವಪುರರವರಿಗೆ ಅಭಿನಂದನಾ ಸನ್ಮಾನ ನೆರವೇರಿತು.

ಬುಕ್ಕಿಂಗ್‌ಗೆ ಸಂಪರ್ಕಿಸಿ:

ಭಕ್ತರು ಯಕ್ಷಗಾನ ಆಟವನ್ನು ಆಡಲಿಚ್ಛಿಸುವವರು ಹಾಗೂ ಹೆಚ್ಚಿನ ಮಾಹಿತಿಗೆ 9108850097, 7899674809, 9110298731, 9845147475, 9148894088  ನಂಬರಿಗೆ ಸಂಪರ್ಕಿಸಬಹುದು ಎಂದು ಶ್ರೀ ಗೆಜ್ಜೆಗಿರಿ ಕ್ಷೇತ್ರದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here