





ಪುತ್ತೂರು: ಸರಕಾರಿ ಜಾಗದಲ್ಲಿರುವ ಧಾರ್ಮಿಕ ಕೇಂದ್ರಗಳನ್ನು ಸಕ್ರಮ ಮಾಡಬೇಕೆಂಬ ಪುತ್ತೂರು ಶಾಸಕ ಅಶೋಕ್ ರೈ ಅವರ ಹೋರಾಟಕ್ಕೆ ಮೊದಲ ಜಯ ದೊರಕಿದ್ದು, ಸರಕಾರಿ ಜಾಗದಲ್ಲಿರುವ ಧಾರ್ಮಿಕ ಕೇಂದ್ರಗಳ ಸಕ್ರಮಕ್ಕೆ ಸಲ್ಲಿಸಲಾಗಿದ್ದ ಮನವಿಯನ್ನು ಸರಕಾರ ಅನುಮೋದನೆ ಮಾಡಿದೆ.


ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನೂರಾರು ದೇವಸ್ಥಾನಗಳು, ದೈವಸ್ಥಾನಗಳು, ಮಸೀದಿ, ಚರ್ಚ್ ಹಾಗೂ ಸಂಘ ಸಂಸ್ಥೆಗಳ ಕೇಂದ್ರಗಳಿದ್ದು ಇವುಗಳಿಗೆ ಯಾವುದೇ ದಾಖಲೆಗಳು ಇರುವುದಿಲ್ಲ. ದಾಖಲೆಗಳಿಲ್ಲದ ಕಾರಣ ಅವುಗಳಿಗೆ ಸರಕಾರದಿಂದ ಸಿಗುವ ಯಾವುದೇ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ, ಈ ನಿಟ್ಟಿನಲ್ಲಿ ಸರಕಾರಿ ಜಾಗದಲ್ಲಿರುವ ಎಲ್ಲಾ ಧಾರ್ಮಿಕ ಕೇಂದ್ರಗಳನ್ನು ಸರಕಾರ ಸಕ್ರಮಗೊಳಿಸಬೇಕೆಂದು ಕಂದಾಯ ಸಚಿವ ಕೃಷ್ಣಬೈರೇಗೌಡರಿಗೆ ಶಾಸಕ ಅಶೋಕ್ ರೈ ಕೆಲತಿಂಗಳ ಹಿಂದೆ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ಸರಕಾರ ಪ್ರಾಯೋಗಿಕವಾಗಿ 9 ಧಾರ್ಮಿಕ ಕೇಂದ್ರಗಳ ಸಕ್ರಮಗೊಳಿಸಲು ಅನುಮೋದನೆಯನ್ನು ನೀಡಿದೆ.





ಪ್ರಾಯೋಗಿಕವಾಗಿ ಆಯ್ಕೆಯಾದ ಧಾರ್ಮಿಕ ಕೇಂದ್ರಗಳು
ಮೊದಲ ಹಂತದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 9 ಧಾರ್ಮಿಕ ಕೇಂದ್ರಗಳನ್ನು ಆಯ್ಕೆ ಮಾಡಲಾಗಿದೆ. ಶಾಸಕ ಅಶೋಕ್ ರೈ ಶಿಫಾರಸ್ಸಿನಂತೆ ಈ ಆಯ್ಕೆ ನಡೆದಿದೆ. ದುರ್ಗಾಪರಮೇಶ್ವರಿ ಸೇವಾ ಟ್ರಸ್ಟ್, ದುರ್ಗಾಪರಮೇಶ್ವರಿ ಭಜನಾ ಮಂದಿರ ಪೆರಿಯಡ್ಕ, ಶ್ರೀ ಆದಿಮೊಗೆರ್ಕಳ ಸೇವಾ ಸಮಿತಿ ತೆಂಕಿಲ, ಪುತ್ತೂರು, ಶ್ರೀ ಶಾರದಾಂಬ ಭಜನಾಮಂದಿರ ಕುಳ, ಇಡ್ಕಿದು, ನಲಿಕೆಯವರ ಸಮಾಜ ಸೇವಾ ಸಂಘ ಕಬಕ, ಸಾರ್ಯ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನಿಯಮಿತ ಸಾರ್ಯ , ಬಲ್ನಾಡು, ಮಾತೃಭೂಮಿ ಯುವ ವೇದಿಕೆ ಮಾಣಿಲ, ಶ್ರೀ ಮಾರಿಯಮ್ಮ ದೇವಸ್ಥಾನ ವಜ್ರಮೂಲೆ ಮೇನಾಲ ನೆಟ್ಟಣಿಗೆ ಮುಡ್ನೂರು, ಶ್ರೀ ಮಾರಿಯಮ್ಮ ಮತ್ತು ಸಪರಿವಾರ ದೈವಗಳ ದೇವಸ್ಥಾನ ನೆಟ್ಟಣಿಗೆ ಮುಡ್ನೂರು, ಶ್ರೀ ಆದಿ ನಾಗಬ್ರಹ್ಮ ಮೊಗೆರ್ಕಳ ಸೇವಾ ಸಮಿತಿ ಶಾಂತಿಗೋಡು ಮೊದಲ ಹಂತದಲ್ಲಿ ಸಕ್ರಮಗೊಳ್ಳಲಿರುವ ಧಾರ್ಮಿಕ ಕೇಂದ್ರ ಹಾಗೂ ಸಂಘ ಸಂಸ್ಥೆಗಳು.
ಸಕ್ರಮಗೊಂಡಲ್ಲಿ ಏನು ಲಾಭ
ಸರಕಾರಿ ಜಾಗದಲ್ಲಿ ನಿರ್ಮಾಣವಾದ ಧಾರ್ಮಿಕ ಕೇಂದ್ರ ಹಾಗೂ ಸಂಘ ಸಂಸ್ಥೆಗಳ ಕೇಂದ್ರಗಳು ಸಕ್ರಮಗೊಂಡಲ್ಲಿ ಅಂತಹ ಧಾರ್ಮಿಕ ಕೇಂದ್ರಗಳು ದೇವರ ಹೆಸರಿನಲ್ಲಿ ಅಥವಾ ಧಾರ್ಮಿಕ ಕೇಂದ್ರಗಳ ಹೆಸರಿನಲ್ಲಿ ದಾಖಲೆಗಳನ್ನು ಪಡೆಯಲಿದೆ. ಇದುವರೆಗೂ ಯಾವುದೇ ದಾಖಲೆ ಇಲ್ಲದ ಕಾರಣಕ್ಕೆ ಸರಕಾರದಿಂದ ಯಾವುದೇ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಕಂದಾಯ ಇಲಾಖೆಯ ಮೂಲಕ ಇವುಗಳು ಸಕ್ರಮಗೊಂಡಲ್ಲಿ ಮುಂದಿನ ದಿನಗಳಲ್ಲಿ ಸರಕಾರದಿಂದ ದೊರೆಯುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.
ಮಾತುಕೊಟ್ಟಿದ್ದೆ ಅದರಂತೆ ನಡೆದುಕೊಂಡಿದ್ದೇನೆ. ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿರುವ ಸರಕಾರಿ ಜಾಗದಲ್ಲಿರುವ ಎಲ್ಲಾ ಧರ್ಮದವರ ಧಾರ್ಮಿಕ ಕೇಂದ್ರಗಳಾದ ದೇವಸ್ಥಾನ, ದೈವಸ್ಥಾನ, ಮಸೀದಿ,ಚರ್ಚ್ ಹಾಗೂ ಸಂಘ ಸಂಸ್ಥೆಗಳನ್ನು ಸಕ್ರಮಗೊಳಿಸುವ ಕೆಲಸ ನಡೆಯಲಿದೆ. ಪ್ರಾಯೋಗಿಕವಾಗಿ 9 ಕೇಂದ್ರಗಳ ಸಕ್ರಮ ನಡೆಯಲಿದೆ. ಇದು ಜನರ ಬಹುಕಾಲದ ಬೇಡಿಕೆಯಾಗಿದೆ. ಸೂಕ್ತ ದಾಖಲೆಯಿಲ್ಲದ ಕಾರಣ ಅದೆಷ್ಟೋ ಧಾರ್ಮಿಕ ಕೇಂದ್ರಗಳು, ಸಂಘ ಸಂಸ್ಥೆಗಳು ಸರಕಾರದ ಸೌಲಭ್ಯದಿಂದ ವಂಚಿತವಾಗಿದ್ದವು. ಮುಂದೆ ಅವುಗಳ ಸಕ್ರಮಗೊಂಡ ಬಳಿಕ ಸರಕಾರದಿಂದ ಅನುದಾನವನ್ನೂ ಕೊಡಿಸುವ ಕೆಲಸವನ್ನು ಮಾಡುತ್ತೇನೆ.
ಅಶೋಕ್ ರೈ ಶಾಸಕರು, ಪುತ್ತೂರು








