ನಿಡ್ಪಳ್ಳಿ; 2022-23 ನೇ ಸಾಲಿನ ಮಹಿಳಾ ಉದ್ಯೋಗ ಸಬಲೀಕರಣ ಅಭಿಯಾನದಡಿ ಮಹಿಳಾ ಗ್ರಾಮ ಸಭೆ ಮತ್ತು ನರೇಗಾ ಯೋಜನೆಯ 2023-24 ನೇ ಸಾಲಿನ ಕಾರ್ಮಿಕರ ಆಯವ್ಯಯ ತಯಾರಿಸಲು ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯೆಡೆಗೆ ಅಭಿಯಾನ ಮತ್ತು ಜಲ ಸಂಜೀವಿನಿ ಕಾರ್ಯಕ್ರಮದಡಿ ವಿಶೇಷ ಗ್ರಾಮ ಸಭೆ ನ.29 ರಂದು ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಉದ್ಯೋಗ ಖಾತರಿ ಯೋಜನೆಯ ತಾಲೂಕು ಸಂಯೋಜಕಿ ಅಕಾಂಕ್ಷ ಯೋಜನೆಯಲ್ಲಿ ಫಲಾನುಭವಿಗಳು ಮಾಡ ಬಹುದಾದ ಕಾಮಗಾರಿ ಮತ್ತು ಅದಕ್ಕೆ ನೀಡುವ ಮೊತ್ತದ ಬಗ್ಗೆ ಮಾಹಿತಿ ನೀಡಿದರು.ಸಭೆಯ ಮಾರ್ಗದರ್ಶಿ ಅಧಿಕಾರಿಯಾಗಿದ್ದ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ವಿಷ್ಣು ಪ್ರಸಾದ್ ಮಾತನಾಡಿ ಮಹಿಳೆಯರು ಉದ್ಯೋಗದಲ್ಲಿ ಸಬಲೀಕರಣ ಹೊಂದ ಬೇಕಾದರೆ ಮಾಹಿತಿ ಸಿಗುವಂತಹ ಇಂತಹ ಸಭೆಗಳಲ್ಲಿ ಮಹಿಳೆಯರು ಹೆಚ್ಚಾಗಿ ಭಾಗವಹಿಸ ಬೇಕು.ಪದವಿ ಕಾಲೇಜಿನ ವಿದ್ಯಾರ್ಥಿನಿಯರನ್ನು ಮಹಿಳಾ ಗ್ರಾಮ ಸಭೆಗೆ ಆಹ್ವಾನಿಸಿದರೆ ಪ್ರತಿ ಮನೆಗೂ ಮಾಹಿತಿ ತಲುಪಿ ಕಾರ್ಯಕ್ರಮ ಪರಿಣಾಮಕಾರಿಯಾಗಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ಜಲಜೀವನ್ ಮಿಷನ್ ಯೋಜನೆಯ ಅಧಿಕಾರಿ ಮಹಾಂತೇಶ್ ಜಲ ಸಂಜೀವಿನಿ ಕಾರ್ಯಕ್ರಮದ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಸಂಕ್ಷಿಪ್ತ ಮಾಹಿತಿ ನೀಡಿದರು. ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪಂಚಾಯತ್ ಮಟ್ಟದಲ್ಲಿ ಆರೋಗ್ಯ ಸಮಿತಿ ರಚಿಸುವ ಬಗ್ಗೆ ತಾಲೂಕು ಆರೋಗ್ಯ ಸಂಯೋಜಕಿ ಅಶ್ವಿನಿ ವಿವರಿಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಪವಿತ್ರ. ಡಿ, ಉಪಾಧ್ಯಕ್ಷ ವಿನೋದ್ ಕುಮಾರ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಂಚಾಯತ್ ಸದಸ್ಯೆ ವಿದ್ಯಾಶ್ರೀ ನಾಡಗೀತೆ ಹಾಡಿದರು.ಪಿಡಿಒ ಸೌಮ್ಯ ಸ್ವಾಗತಿಸಿ ಕಾರ್ಯದರ್ಶಿ ಬಾಬು ನಾಯ್ಕ ವಂದಿಸಿದರು. ಪಂಚಾಯತ್ ಸದಸ್ಯರು, ಆರೋಗ್ಯ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಮಹಿಳೆಯರು ಹಾಗೂ ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜಿನ ಬಿಎಸ್ ಡಬ್ಲ್ಯೂ ವಿಭಾಗದ ವಿದ್ಯಾರ್ಥಿನಿಯರು ಪಾಲ್ಗೊಂಡರು.ಸಿಬ್ಬಂದಿಗಳು ಸಹಕರಿಸಿದರು.