ದೇಶದ ಗೌರವಾನ್ವಿತ ಸೇವೆಗಳಲ್ಲಿ ದ.ಕ ಜಿಲ್ಲೆಯ ಸಾಧಕರು ಉದ್ಭವಿಸಲಿ-ಲೋಕೇಶ್ ಎಸ್.ಆರ್
ಪುತ್ತೂರು: ಕೃಷಿ ಪ್ರಧಾನವಾದ ಕೋಲಾರ ಜಿಲ್ಲೆಯಲ್ಲಿ ಭಾರತ ದೇಶದ ಗೌರವಾನ್ವಿತ ಸೇವೆಗಳಾದ ಐಪಿಎಸ್, ಐಎಎಸ್, ಕೆಎಎಸ್ ಸಾಧಕರು ಬಹಳಷ್ಟು ಮಂದಿ ಕಾಣ ಸಿಗುತ್ತಾರೆ. ಬುದ್ಧಿವಂತರ ಜಿಲ್ಲೆಯಾಗಿರುವ ದ.ಕ ಜಿಲ್ಲೆಯಲ್ಲಿ ಅಂತ ಸಾಧನೆ ಮಾಡಲು ವಿದ್ಯಾರ್ಥಿಗಳಿಗೆ ಯಾಕೆ ಆಗ್ತಾ ಇಲ್ಲ, ಈ ನಿಟ್ಟಿನಲ್ಲಿ ದ.ಕ ಜಿಲ್ಲೆ ವಿದ್ಯಾರ್ಥಿಗಳು ದೇಶದ ಗೌರವಾನ್ವಿತ ಸೇವೆಯಲ್ಲಿ ಮುಂದುವರೆಯಲು ಸಾಧನೆ ಮಾಡುವವರಾಗಬೇಕು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ರವರು ಹೇಳಿದರು.
ನಗರದ ಹೃದಯಭಾಗದಲ್ಲಿರುವ ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ೮೦ನೇ ವಾರ್ಷಿಕೋತ್ಸವವು ನ.30 ರಂದು ಮಾಯಿದೆ ದೇವುಸ್ ಚರ್ಚ್ ವಠಾರದಲ್ಲಿ ಬೆಳಿಗ್ಗೆ ಜರಗಿದ್ದು, ಈ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ತಾನೂ ಭವಿಷ್ಯದಲ್ಲಿ ಹೀಗೆಯೇ ಆಗುತ್ತೇನೆ ಎಂಬ ಕನಸನ್ನು ಕಟ್ಟಿಕಂಡಿರುತ್ತಾರೆ. ಪೋಷಕರು ಮಕ್ಕಳ ಭವಿಷ್ಯದ ಆಸೆ, ಆಕಾಂಕ್ಷೆ ಏನು ಎಂದು ತಿಳಿದು ಅವರ ಕನಸಿಗೆ ನೀರೆರೆಯುವವರಾಗಬೇಕು. ಮಕ್ಕಳಲ್ಲಿ ಸಾಧನೆ ಮಾಡಬೇಕಾದ ಗುರಿಯಿರಬೇಕು. ಸಾಧನೆಯ ಹಸಿವಿರಬೇಕು, ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡಾಗ ಮಾತ್ರ ಸಾಧನೆ ಮಾಡಲು ಸಾಧ್ಯ. ಮನೆಯಲ್ಲಿ ಹಾಗೂ ಶಾಲೆಯಲ್ಲಿ ಸಾಧನೆಗೆ ಪೂರಕವಾದ ವಾತಾವರಣ ಹೊಂದಿರಬೇಕು ಜೊತೆಗೆ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಾಗ ಸಾಧನೆ ಸಾಧ್ಯವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ|ಲಾರೆನ್ಸ್ ಮಸ್ಕರೇನ್ಹಸ್ ಮಾತನಾಡಿ, ಹೆಣ್ಮಗಳು ಕಲಿತರೆ ಕುಟುಂಬ ಹಾಗೂ ಸಮಾಜ ಕಲಿತಂತೆ ಎಂಬಂತೆ 80 ವರ್ಷದ ಹಿಂದೆ ಶಿಕ್ಷಣ ಶಿಲ್ಪಿ ಮೊ| ಪತ್ರಾವೋರವರು ಪ್ರತೀ ಹೆಣ್ಮಕ್ಕಳು ವಿದ್ಯಾಭ್ಯಾಸ ಪಡೆಯಬೇಕು ಎಂಬ ದೂರದೃಷ್ಟಿತ್ವದ ಚಿಂತನೆಯೊಂದಿಗೆ ಆರಂಭಿಸಿದ ಈ ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾರ್ಜನೆಗೈಯ್ದು ಉತ್ತಮ ಜೀವನ ರೂಪಿಸಿರುತ್ತಾರೆ. ಮಕ್ಕಳಲ್ಲಿ ಒಳಿತು ಹಾಗೂ ಕೆಡುಕಿನ ಬಗ್ಗೆ ತಿಳಿಸುವವರಾಗಬೇಕು, ಮಕ್ಕಳು ಉತ್ತಮ ವ್ಯಕ್ತಿಗಳಾಗಿ ಬಾಳುವ ಮೂಲಕ ಆರೋಗ್ಯವಂತರಾಗಿ ಸಮಾಜದಲ್ಲಿ ಬೆಳೆಯಬೇಕು ಎಂದರು.
ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್ ಮಾತನಾಡಿ, ಎಸೆಸ್ಸೆಲ್ಸಿಯಲ್ಲಿ ತೃತೀಯ ದರ್ಜೆಯಲ್ಲಿ ಪಾಸಾಗಿ, ತಮ್ಮ ಸಾಧನೆಯ ಮುಖಾಂತರವೇ ಉತ್ತಮ ಹಾದಿಯನ್ನು ತುಳಿದು ರಾಷ್ಟ್ರಪಿತ ಹೆಸರು ಗಳಿಸಿದ ಮಹಾತ್ಮ ಗಾಂಧೀಜಿ ಹಾಗೂ ರಾಜನಾಗಿದ್ದ ಸಿದ್ಧಾರ್ಥನು ಜ್ಞಾನೋದಯ ಹೊಂದಿ ಗೌತಮ ಬುದ್ಧನಾಗಿ ಹೆಸರು ಪಡೆದಿರುವುದು ಇತಿಹಾಸವಾಗಿದ್ದು ಅವರಂತೆ ವಿದ್ಯಾರ್ಥಿಗಳಲ್ಲಿ ಸಾಧನೆಯ ತುಡಿತ ಮೇಳೈಸಲಿ. ಬೆಣ್ಣೆಯಲ್ಲಿ ತುಪ್ಪ ತುಂಬಿದೆ. ಬೆಣ್ಣೆಗೆ ಅಗ್ನಿಸ್ಪರ್ಶ ಕೊಟ್ಟಾಗ ತುಪ್ಪ ಹೊಂದಲು ಸಾಧ್ಯವಾಗುತ್ತದೆ. ಹಾಗೆಯೇ ವಿದ್ಯಾರ್ಥಿಗಳಿಗೆ ಸಂಸ್ಕಾರಯುತ, ಮೌಲ್ಯಯುತ ಶಿಕ್ಷಣ ನೀಡಿದಾಗ ವಿದ್ಯಾರ್ಥಿಗಳಲ್ಲಿ ಧನಾತ್ಮಕ ಗುಣಗಳು ಹೊಂದುವಂತಾಗುತ್ತದೆ. ವಿದ್ಯಾರ್ಥಿಗಳು ಗುರುಗಳಲ್ಲಿ ವಿಶ್ವಾಸವಿಡಿ, ಗೌರವ ಕೊಡಿ. ಅವರಲ್ಲಿ ಮಾಹಿತಿ ಪಡಕೊಂಡು ಪೋಷಕರ ಕನಸನ್ನು ಈಡೇರಿಸುವ ಮೂಲಕ ಸಾಧನೆ ಮಾಡುತ್ತಾ ಸಾಧಕರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಗುರುತಿಸುವವರಾಗಿ ಎಂದರು.
ಧ್ವಜಾರೋಹಣ/ಬಲಿಪೂಜೆ:
ಬೆಳಿಗ್ಗೆ ಮಾಯಿದೆ ದೇವುಸ್ ಚರ್ಚ್ ವಠಾರದಲ್ಲಿ ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ|ಲಾರೆನ್ಸ್ ಮಸ್ಕರೇನ್ಹಸ್ರವರು ಧ್ವಜಾರೋಹಣವನ್ನು ನೆರವೇರಿಸಿದರು. ಬಳಿಕ ಮಾಯಿದೆ ದೇವುಸ್ ಚರ್ಚ್ನಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ದಿವ್ಯ ಬಲಿಪೂಜೆಯಲ್ಲಿ ಸಂಚಾಲಕ ವಂ|ಲಾರೆನ್ಸ್ ಮಸ್ಕರೇನ್ಹಸ್, ಸಹಾಯಕ ಧರ್ಮಗುರು ವಂ|ಕೆವಿನ್ ಲಾರೆನ್ಸ್ ಡಿ’ಸೋಜ, ಫಿಲೋಮಿನಾ ಕಾಲೇಜು ಪ್ರಾಂಶುಪಾಲ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೊ, ಫಿಲೋಮಿನಾ ಪಿಯು ಕಾಲೇಜು ಪ್ರಾಂಶುಪಾಲ ವಂ|ಅಶೋಕ್ ರಾಯನ್ ಕ್ರಾಸ್ತಾ, ಫಿಲೋಮಿನಾ ಕಾಲೇಜು ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೊ, ಬನ್ನೂರು ಚರ್ಚ್ ಧರ್ಮಗುರು ವಂ|ಪ್ರಶಾಂತ್ ಫೆರ್ನಾಂಡೀಸ್, ಮರೀಲು ಚರ್ಚ್ ಧರ್ಮಗುರು ವಂ|ವಲೇರಿಯನ್ ಫ್ರ್ಯಾಂಕ್ರವರು ಮಾಯಿದೆ ದೇವುಸ್ ಶಾಲೆ, ವಿಕ್ಟರ್ ಬಾಲಿಕಾ ಪ್ರೌಢಶಾಲೆ, ವಿಕ್ಟರ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಆಡಳಿತ ಸಮಿತಿ, ಕ್ರೈಸ್ತ ಧರ್ಮದ ಶಿಕ್ಷಕ-ಆಡಳಿತ ಸಿಬ್ಬಂದಿ ವೃಂದ, ವಿದ್ಯಾರ್ಥಿಗಳು, ಹಿತೈಷಿಗಳೊಂದಿಗೆ ದಿವ್ಯ ಬಲಿಪೂಜೆಯನ್ನು ಅರ್ಪಿಸಲಾಯಿತು.
ಶಿಕ್ಷಕರಾದ ವಿಲ್ಮಾ ಲೋಬೊ, ಶೈಲಾ ಮಸ್ಕರೇನ್ಹಸ್, ಲೆನಿಟ ಮೊರಾಸ್, ಪೂರ್ಣಿಮಾ, ಫೆಲ್ಸಿ ಡಿ’ಸೋಜ, ರೊನಾಲ್ಡ್ ಮೋನಿಸ್, ರೀನಾ ರೆಬೆಲ್ಲೋ, ಸುಶ್ಮಾ ಕ್ರಾಸ್ತಾರವರು ಮಕ್ಕಳ ಶೈಕ್ಷಣಿಕ, ಆಟೋಟ ಸ್ಪರ್ಧೆ, ಧತ್ತಿನಿಧಿ, ರಕ್ಷಕ-ಶಿಕ್ಷಕ ಸಂಘದ ಸದಸ್ಯರ ಆಟೋಟ ಸ್ಪರ್ಧೆ, ಸಂಸ್ಥಾಪಕರ ಕ್ರೀಡಾಕೂಟಗಳಲ್ಲಿನ ವಿಜೇತರ ಪಟ್ಟಿಯನ್ನು ವಾಚಿಸಿದರು. ಸನ್ಮಾನಿತರ ಸನ್ಮಾನ ಪತ್ರವನ್ನು ಶಿಕ್ಷಕಿ ಭವ್ಯ ಹಾಗೂ ಸ್ಮಿತಾರವರು ವಾಚಿಸಿದರು. 2021-22ನೇ ಸಾಲಿನ ಎಸೆಸ್ಸೆಲ್ಸಿಯಲ್ಲಿ ಗರಿಷ್ಟ ಅಂಕ ಪಡೆದ ವಿದ್ಯಾರ್ಥಿನಿಯರ ಹೆಸರನ್ನು, ರಾಜ್ಯ ಮಟ್ಟದ ಸ್ಕೌಟ್ಸ್, ಗೈಡ್ಸ್ ರಾಜ್ಯ ಪುರಸ್ಕಾರ ವಿಜೇತರ ಹೆಸರನ್ನು ಹಾಗೂ ವಾರ್ಷಿಕೋತ್ಸವಕ್ಕೆ ಸಹಕರಿಸಿದ ದಾನಿಗಳ ಹೆಸರನ್ನು ಶಿಕ್ಷಕರಾದ ರೂಪ ಡಿ’ಕೋಸ್ಟ ಹಾಗೂ ಇನಾಸ್ ಗೊನ್ಸಾಲ್ವಿಸ್ರವರು ಓದಿದರು. ಮುಖ್ಯ ಶಿಕ್ಷಕಿ ರೋಸ್ಲಿನ್ ಲೋಬೊರವರು ವರದಿ ವಾಚಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಮಾಯಿದೆ ದೇವುಸ್ ಚರ್ಚ್ ಸಹಾಯಕ ಧರ್ಮಗುರು ವಂ|ಕೆವಿನ್ ಲಾರೆನ್ಸ್ ಡಿ’ಸೋಜ, ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ರಮೇಶ್ ಕೆ.ವಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಲೀನಾ ರೇಗೊರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ ಅನೀಶ ಡಿ’ಸಿಲ್ವ ಸ್ವಾಗತಿಸಿ, ಶಾಲಾ ನಾಯಕಿ ಧನ್ಯ ವಂದಿಸಿದರು. ವಿದ್ಯಾರ್ಥಿನಿಯರಾದ ಭೂಮಿಕಾ ಹಾಗೂ ಸಹದಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಪೊಷಕರೇ ಸಣ್ಣ ಮಟ್ಟಿನ ವೈದ್ಯರಾಗಿ…
ಓರ್ವ ವೈದ್ಯಳಾಗಿ ಒಂದೇ ಜಾಗದಲ್ಲಿ ಕಳೆದ 50 ವರ್ಷದಿಂದ ಜನಸೇವೆಯನ್ನು ನಿಸ್ವಾರ್ಥವಾಗಿ ಮಾಡಿದ್ದೇನೆ ಎಂಬ ಹೆಮ್ಮೆ ನನಗಿದೆ. ನನ್ನ ಕುಟುಂಬದ ಬಹುತೇಕ ಮಂದಿ ಮಾಯಿದೆ ದೇವುಸ್ ವಿದ್ಯಾಸಂಸ್ಥೆಯಲ್ಲಿ ಶಿಕ್ಣಣ ಪಡೆದು ಇಂದು ಉನ್ನತ ಸ್ಥಾನದಲ್ಲಿದ್ದಾರೆ. ಇಲ್ಲಿನ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಮೊ|ಪತ್ರಾವೋರವರೆಂದರೆ ನಮಗೆ ಬಹಳ ಅಚ್ಚುಮೆಚ್ಚು. ಹೇಗೆ ತಂದೆ ಮನೆಯಲ್ಲಿನ ಸದಸ್ಯರನ್ನು ಪ್ರೀತಿಯಿಂದ, ಜವಾಬ್ದಾರಿಯಿಂದ ನೋಡಿಕೊಳ್ಳುತ್ತಾರೋ ಹಾಗೆಯೇ ಮೊ|ಪತ್ರಾವೋರವರು ನಮ್ಮನ್ನು ಬಹಳ ಪ್ರೀತಿಯಿಂದ, ಜವಾವ್ದಾರಿಯುತವಾಗಿ ನೋಡಿಕೊಳ್ಳುತ್ತಿದ್ದರು. ಮಕ್ಕಳನ್ನು ಬೆಳೆಸುವಲ್ಲಿ ಪೋಷಕರ ಪಾತ್ರ ಬಹಳಷ್ಟಿದೆ. ಮಕ್ಕಳ ಆರೋಗ್ಯದ ಬಗ್ಗೆ, ಅವರ ಇಷ್ಟಾರ್ಥಗಳನ್ನು ಪೂರೈಸುವ ಬಗ್ಗೆ ಗಮನ ನೀಡುವ ಮೂಲಕ ಮನೆಯಲ್ಲಿಯೇ ಸಣ್ಣ ಮಟ್ಟಿನ ವೈದ್ಯರಾಗಿ ಕಾಳಜಿ ವಹಿಸಬೇಕು.
-ಡಾ.ರಮಾದೇವಿ ಕೆ, ಶಾಲಾ ಹಿರಿಯ ವಿದ್ಯಾರ್ಥಿನಿ ಹಾಗೂ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ
80 ವರ್ಷದ ಮೊದಲು ನಾವು ಈ ಭೂಮಿಯಲ್ಲಿ ಜೀವಿಸುವ ಮೊದಲು ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸ ಬೇಕು, ಅವರು ಸಮಾಜದ ಕಣ್ಣಾಗಬೇಕು ಎಂದು ಹೆಣ್ಮಕ್ಕಳ ಶಾಲೆಯನ್ನು ಸ್ಥಾಪನೆ ಮಾಡಿದ ಮಹಾನ್ ಚೇತನ ಮೊ|ಪತ್ರಾವೋರವರಿಗೆ ತಲೆ ತಗ್ಗಿಸಿ ಸಹಸ್ರ ಸಹಸ್ರ ನಮನಗಳನ್ನು ಅರ್ಪಿಸುತ್ತಿzನೆ. ಸಾಮಾನ್ಯ ಹೆಣ್ಣು ಮಗಳು ಕಲಿಯಬೇಕು ಎನ್ನುವ ಇಚ್ಚೆಯನ್ನಿಟ್ಟು ಪತ್ರಾವೋರವರು ಈ ಸಂಸ್ಥೆಯನ್ನು ಕಟ್ಟಿಸಿರುತ್ತಾರೆ. ಇಂದು ನಮ್ಮ ಆಸುಪಾಸಿನ ತಾಯಂದಿರ ಪ್ರಾಯದವರು ವಿದ್ಯಾಭ್ಯಾಸ ಪಡೆಯಲು ನಿಜಕ್ಕೂ ಈ ಸಂಸ್ಥೆ ಕಾರಣಕರ್ತವಾಗಿದೆ. ಈ ಸಂಸ್ಥೆಯಲ್ಲಿ ಕಲಿತಂತಹ ಯಾರಾದರೂ ಹೆಣ್ಣುಮಗಳು ಸಮಾಜದ ಉನ್ನತ ಸ್ಥಾನವನ್ನು ಅಲಂಕರಿಸುವತ್ತ ಹೆಜ್ಜೆ ಇಟ್ಟಾಗ ಸಂಸ್ಥೆಯ ಕೀರ್ತಿ ಮತ್ತಷ್ಟು ಹೆಚ್ಚುತ್ತದೆ.
-ಶಕುಂತಳಾ ಟಿ.ಶೆಟ್ಟಿ, ಮಾಜಿ ಶಾಸಕರು, ಪುತ್ತೂರು
ಸನ್ಮಾನ..
ಶಾಲೆಯ 60 ವರ್ಷದ ಹಿಂದಿನ ಹಿರಿಯ ವಿದ್ಯಾರ್ಥಿನಿ ಹಾಗೂ ವೈದ್ಯಕೀಯ ರಂಗದಲ್ಲಿ ಅಪಾರ ಸೇವೆಯನ್ನು ನೀಡುತ್ತಾ ಬಂದಿರುವ ಹಿರಿಯ ವೈದ್ಯೆಯಾಗಿರುವ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ರಮಾದೇವಿ ಕೆ ಹಾಗೂ ಪುತ್ತೂರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಆಗಮಿಸಿ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಯಾಗಿ ಆದಮಿಸಿದ ಲೋಕೇಶ್ ಎಸ್.ಆರ್ರವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.