* ರಾಜ್ಯ, ರಾಜ್ಯಗಳೊಲಗೆ ಹೋರಾಟ ನಾಚಿಕೆಗೇಡಿನ ಕೆಲಸ-ಡಾ.ಎಂ.ಕೆ ಪ್ರಸಾದ್
* ಆರೋಗ್ಯ ರಕ್ಷಣೆ ಮಹತ್ವವಾದುದು-ಡಾ.ಸುರೇಶ್ ಪುತ್ತೂರಾಯ
* ಶ್ರೀರಾಂ ಫ್ರೆಂಡ್ಸ್‌ನಿಂದ ಮಾದರಿ ಕಾರ್ಯಕ್ರಮ-ಸಹಜ್ ರೈ
ಪುತ್ತೂರು:ಭಾರತೀಯರಾದ ನಾವೆಲ್ಲರೂ ಒಂದೇ. ಭಾಷೆ, ಜಿಲ್ಲೆ, ನೀರಿಗಾಗಿ ರಾಜ್ಯ ರಾಜ್ಯಗಳೊಳಗೆ ಹೋರಾಟ ನಡೆಸುವುದು ನಾಚಿಕೆಗೇಡಿನ ಕೆಲಸ. ಇದರಿಂದ ದೇಶದಲ್ಲಿ ಆಂತರಿಕ ಕಲಹ ಉಂಟಾಗುತ್ತದೆ. ರಾಜ್ಯ ರಾಜ್ಯಗಳೊಲಗೆ ನಾನಾ ಉದ್ದೇಶಗಳಿಗೆ ಹೋರಾಡುವವರು ದೇಶದ ಗಡಿಯಲ್ಲಿ ಹೋಗಿ ಹೋರಾಡಲಿ. ಹಿಂದುಗಳಾಗಿ ಹಿಂದು ಧರ್ಮದ ಅವಹೇಳನ ಮಾಡಿ ಕಲಹ ಉಂಟಾಗುವಂತೆ ಮಾಡುವವರನ್ನು ಪ್ರಥಮವಾಗಿ ಬಂಧಿಸಬೇಕು ಎಂದು ಆದರ್ಶ ಆಸ್ಪತ್ರೆಯ ಡಾ. ಎಂ.ಕೆ ಪ್ರಸಾದ್ ಹೇಳಿದರು.
ಪಡ್ನೂರು ಶಾಲಾ ವಠಾರದಲ್ಲಿ ದಿ. ಕೇಶವ ಗೌಡ ಬಜತ್ತೂರು ವೇದಿಕೆಯಲ್ಲಿ ಡಿ.೩ರಂದು ಬೆಳಿಗ್ಗೆ ನಡೆದ ಶ್ರೀರಾಂ ಫ್ರೆಂಡ್ಸ್‌ನ ದಶಮಾನೋತ್ಸವ ನಮ್ಮೂರ ಹಬ್ಬದ ಅಂಗವಾಗಿ ನಡೆದ ವೈದ್ಯಕೀಯ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪಠ್ಯ ಪುಸ್ತಕದಲ್ಲಿ ಮಕ್ಕಳಿಗೆ ಆರೋಗ್ಯ ರಕ್ಷಣೆಯ ಬಗ್ಗೆ ಮಾಹಿತಿ ನೀಡಬೇಕು. ಇದರಿಂದ ಸೂಕ್ತ ಚಿಕಿತ್ಸೆ ಪಡೆದು ಆರೋಗ್ಯವಂತೆ ಜೀವನಕ್ಕೆ ಸಹಕಾರಿಯಾಗುತ್ತದೆ. ರೋಗಗಳು ಮಂತ್ರದಿಂದ ವಾಸಿಯಾಗುವುದಿಲ್ಲ. ರೋಗ ಬೇಗನೇ ವಾಸಿಯಾಗಲು, ವೈದ್ಯರಿಂದ ಉತ್ತಮ ಚಿಕಿತ್ಸೆ ದೊರೆಯುವಂತಾಗಲು ದೇವರಲ್ಲಿ ಪ್ರಾರ್ಥಿಸಬೇಕು. ನಾಟಿ ಮದ್ದೇ ಮುಖ್ಯವಲ್ಲ. ಖಾಯಿಲೆ ವಾಸಿಯಾಗುವುದಿಲ್ಲ. ಹೆಡ್ಡತನ. ಹೆಚ್ಚುವರಿ ಖರ್ಚು. ಮದುಮೇಹಕ್ಕೆ ಚಿಕಿತ್ಸೆ ದೊರೆಯಲು ಸಾಧ್ಯವಿಲ್ಲ. ಎಲ್ಲಾ ಕಾಯಿಲೆಗಳಿಗೆ ನಾಟಿ ಮದ್ದಿನಲ್ಲಿ ಔಷಧಿಯಿಲ್ಲ. ಅಜ್ಞಾನದಿಂದ ಆರೋಗ್ಯವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದರು.
ಮುಖ್ಯಮಂತ್ರಿ, ಪ್ರಧಾನಿಯಾದರೆ ಮದ್ಯ ನಿಷೇಧ:
ಹಿಂದುಗಳು ಕುಡಿತದ ಚಟಕ್ಕೆ ಬಲಿಯಾಗಿ ಜೀವನವನ್ನೇ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಅದೆಷ್ಟೋ ಮಹಿಳೆಯರು ಕಣ್ಣಿರುಡುವಂತ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅವರಿಗೆ ಜೀವನ ನಡೆಸುವುದೇ ಅಸಾಧ್ಯವಾಗುವಂತಾಗುತ್ತದೆ. ಹೀಗಾಗಿ ಯಾರೂ ಕುಡಿತದ ಚಟಕ್ಕೆ ಬಲಿಯಾಗಬಾರದು. ಪ್ರತಿಯೊಬ್ಬರೂ ಮುಂಜಾಗ್ರತೆ ವಹಿಸಬೇಕು, ಮದ್ಯ ಮಾರಾಟ ನಿಷೇಧವಾಗಬೇಕು. ನಾನು ಮುಖ್ಯ ಮಂತ್ರಿಯೋ, ಪ್ರಧಾನಿಯೋ ಆದರೆ ದೇಶದಲ್ಲಿ ಮದ್ಯ ನಿಷೇಷ ಮಾಡುವುದಾಗಿ ಡಾ.ಎಂ.ಕೆ ಪ್ರಸಾದ್ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಹಾವೀರ ಆಸ್ಪತ್ರೆಯ ವೈದ್ಯ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಖಾಯಿಲೆ ಬರುವ ಮೊದಲೇ ನಾವು ಪರೀಕ್ಷಿಸುತ್ತಿರಬೇಕು. ಸಾಕಷ್ಟು ವೈದ್ಯಕೀಯ ಸೌಲಭ್ಯಗಳಿದ್ದು ನಾವು ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ಶಾಲೆಗಳಲ್ಲಿ ಶಿಕ್ಷಕರೂ ಮಕ್ಕಳಿಗೆ ಆರೋಗ್ಯ ರಕ್ಷಣೆಯ ಮಹತ್ವವನ್ನು ತಿಳಿಸಿ ಅವರ ಮನದಲ್ಲಿರುವಂತೆ ಮಾಡಬೇಕು. ಮಕ್ಕಳೂ ಇದನ್ನು ಶಿಕ್ಷೆ ಎಂದು ತಿಳಿಯದೇ ಅಳವಡಿಸಿಕೊಂಡಾಗ ಉತ್ತಮ ಆರೋಗ್ಯವಂತ ಪ್ರಜೆಗಳಾಗಿ ಬೆಳೆಯಲು ಸಾಧ್ಯ. ಭಾರತೀಯರೆಂಬ ಭಾವನೆ ನಮ್ಮ ಮನದಲ್ಲಿದ್ದರೆ, ಜಾತಿ, ಭಾಷಾ ವಿಷಯದಲ್ಲಿ ದೇಶದ ಆಂತರಿಕ ಕಲಹಗಳನ್ನು ನಿಯಂತ್ರಿಸಬಹುದು. ಇದರ ಬಗ್ಗೆ ಸಾಮಾಜಿಕ ಅರಿವನ್ನು ಸಂಘಟನೆಗಳ ನಾಯಕರು ತಿಳಿಸಬೇಕಾದ ಆವಶ್ಯಕತೆಯಿದೆ ಎಂದರು.
ಬಿಜೆಪಿ ಯುವ ಮೋರ್ಛಾದ ಜಿಲ್ಲಾ ಉಪಾಧ್ಯಕ್ಷ ಸಹಜ್ ರೈ ಮಾತನಾಡಿ, ಶ್ರೀರಾಂ ಫ್ರೆಂಡ್ಸ್ ಸಾಮಾಜಿಕವಾಗಿ ತೊಡಗಿಸಿಕೊಂಡು ಶ್ರೇಷ್ಟವಾದ ರಕ್ತದಾನ ಮಾಡುತ್ತಿದೆ. ದಶಮಾನೋತ್ಸವದ ಅಂಗವಾಗಿ ನಡೆಯುವ ಎರಡು ದಿನದ ಕಾರ್ಯಕ್ರಮ ಹಬ್ಬದ ರೀತಿಯಲ್ಲಿ ಆಚರಣೆಯಾಗುತ್ತಿದೆ. ಕೇವಲ ಕಾರ್ಯಕ್ರಮವಾಗಿ ನಡೆಯುತ್ತಿಲ್ಲ. ಜಾತ್ರೆ ರೀತಿಯಲ್ಲಿ ನಡೆಯುತ್ತಿದ್ದು ಮಾದರಿಯಾಗಿದೆ ಎಂದರು.
ಗೌರವಾಧ್ಯಕ್ಷ ನವೀನ್ ಪಡ್ನೂರು ಮಾತನಾಡಿ, ಕಳೆದ ಹಲವು ವರ್ಷಗಳಿಂದ ವಿವಿಧ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬಂದಿರುವ ಶ್ರೀರಾಮ್ ಫ್ರೆಂಡ್ಸ್‌ನ ದಶಮಾನೋತ್ಸವದ ಅಂಗವಾಗಿ `ನಮ್ಮೂರ ಹಬ್ಬ’ ಕಾರ್ಯಕ್ರಮ ಎರಡು ದಿನಗಳ ಕಾಲ ಆಯೋಜಿಸಲಾಗಿದೆ. ಮಹಾವೀರ ಮೆಡಿಕಲ್ ಸೆಂಟರ್ ಪುತ್ತೂರು ಮತ್ತು ಮಂಗಳೂರಿನ ನುರಿತ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ, ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್‌ನ ಸಹಕಾರದೊಂದಿಗೆ ರಕ್ತದಾನ ಶಿಬಿರ, ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಹಿಂದೂ ಬಾಂಧವರಿಗಾಗಿ ಪುರುಷರ ಹೊನಲು ಬೆಳಕಿನ ೫೫ ಕೆ.ಜಿ ವಿಭಾಗದ ಮತ್ತು ಸೂರ್ಯ ಬೆಳಕಿನ ಮುಕ್ತ ವಿಭಾಗದ ಪ್ರೊ. ಮಾದರಿಯ ಕಬಡ್ಡಿ ಪಂದ್ಯಾಟ ವೀರ ಸಾವರ್ಕರ್ ಟ್ರೋಫಿ-೨೦೨೨ ಕರುಣೋದಯ ಮ್ಯಾಟ್ ಅಂಕಣದಲ್ಲಿ ನಡೆಯಲಿದೆ ಎಂದರು.
ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್‌ನ ಡಾ| ರಾಮಚಂದ್ರ ಭಟ್ ಮಾತನಾಡಿ, ರಕ್ತದಾನದ ಮಹತ್ವ, ರಕ್ತದಾನ ಮಾಡುವ ವಿಧಾನಗಳು, ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತಿಳಿಸಿದ ಅವರು ಶ್ರೀರಾಂ ಫ್ರೆಂಡ್ಸ್‌ನ ದಶಮಾನೋತ್ಸವದ ರಕ್ತ ಸಂಗ್ರಹಣೆಗೂ ನಮಗೆ ಅವಕಾಶ ಕಲ್ಪಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.
ಸನ್ಮಾನ:
ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪ್ರತಿ ತಿಂಗಳು ಉಚಿತ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಿಕೊಂಡು ಉಚಿತ ಚಿಕಿತ್ಸೆ ನೀಡುತ್ತಿರುವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಮಹಾವೀರ ಆಸ್ಪತ್ರೆಯ ವೈದ್ಯ ಡಾ.ಸುರೇಶ್ ಪುತ್ತೂರಾಯರವರನ್ನು ಸನ್ಮಾನಿಸಲಾಯಿತು.
ಪುತ್ತೂರು ಪಾಲಿಕ್ಲಿನಿಕ್‌ನ ಕನ್ಸಲ್ಟೆಂಟ್ ಆರ್ಥೋಪೆಡಿಕ್ ಸರ್ಜನ್ ಡಾ|ಸಚಿನ್ ಶಂಕರ್ ಹಾರಕರೆ, ಪಡ್ನೂರು ಜನಾರ್ದನ ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಆಟಕ್ಕು, ಪಡ್ನೂರು ಯರ್ಮುಂಜಪಳ್ಳ ಗೆಳೆಯರ ಬಳಗದ ಅಧ್ಯಕ್ಷ ಕುಶಲ ಗೌಡ ಪಳ್ಳ, ಬೇರಿಕೆ ಆದಿಶಕ್ತಿ ಭಜನಾ ಮಂದಿರದ ಅಧ್ಯಕ್ಷ ಕೃಷಪ್ಪ ಮೂಲ್ಯ, ಪಡ್ಡಾಯೂರು ಅನ್ನಪೂರ್ಣೇಶ್ವರೀ ಭಜನಾ ಮಂದಿರದ ಅಧ್ಯಕ್ಷ ಗಣೇಶ್ ಪಡ್ಡಾಯೂರು, ಪಡ್ನೂರು ಸರಸ್ವತಿ ಯುವಕ ಮಂಡಲದ ಅಧ್ಯಕ್ಷೆ ರೇವತಿ ಪಂಜಿಗುಡ್ಡೆ, ಪಡ್ನೂರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟದ ಅಧ್ಯಕ್ಷ ತಿಮ್ಮಪ್ಪ ಶಾಲಾಬಳಿ, ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ರಾಮಣ್ಣ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀರಾಂ ಫ್ರೆಂಡ್ಸ್‌ನ ಗೌರವಾಧ್ಯಕ್ಷ ನವೀನ್ ಪಡ್ನೂರು ಸ್ವಾಗತಿಸಿದರು. ಅಧ್ಯಕ್ಷ ಯತೀಶ್ ಪಂಜಿಗುಡ್ಡೆ, ಶಿಶಿರ್ ಪೆರ್ವೋಡಿ, ಸುಹಾನ್ ಕುಂಜಾರು, ಪೃಥ್ವಿರಾಜ್ ಮುಂಡಾಜೆ, ಅಶ್ವಿನ್ ಕುಂಜಾರು, ತೀರ್ಥಪ್ರಸಾದ್, ಪ್ರಕಾಶ್ ಮುಂಡಾಜೆ, ರಶ್ಮಿತ್, ಮೋನಪ್ಪ ಪಡೀಲು, ಮೋಹನ್‌ದಾಸ್ ರಾಮನಗರ, ವಸಂತ ಮುಂಡಾಜೆ ಅತಿಥಿಗಳಿಗೆ ಶಾಲು, ಸ್ಮರಣಿಕೆ ನೀಡಿ ಗೌರವಿಸಿದರು. ಅಭಿಷೇಕ್ ಬೇರಿಕೆ ಕಾರ್ಯಕ್ರಮ, ನಿರೂಪಿಸಿ, ವಂದಿಸಿದರು.
ರಕ್ತದಾನ, ಉಚಿತ ವೈದ್ಯಕೀಯ ಶಿಬಿರ:
ಮಹಾವೀರ ಮೆಡಿಕಲ್ ಸೆಂಟರ್ ಪುತ್ತೂರು ಮತ್ತು ಮಂಗಳೂರಿನ ನುರಿತ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ, ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಪುತ್ತೂರು ಇದರ ಸಹಕಾರದೊಂದಿಗೆ ರಕ್ತದಾನ ಶಿಬಿರ, ಆಯುಷ್ಮಾನ್ ಆರೋಗ್ಯ ಭಾರತ್ ಕಾರ್ಡ್ ನೋಂದವಣೆಯು ಕಾರ್ಯಕ್ರಮದಲ್ಲಿ ನಡೆಯಿತು.
ಡಿ.೪ರಂದು ಸಮಾರೋಪ ಸಮಾರಂಭ
ನಮ್ಮೂರ ಹಬ್ಬದಲ್ಲಿ ಡಿ.೪ರಂದು ಬೆಳಗ್ಗೆ ೧೦ ಗಂಟೆಗೆ ಮುಕ್ತ ವಿಭಾಗದ ಕಬಡ್ಡಿ ಪಂದ್ಯಾಟ ನಡೆಯಲಿದ್ದು, ಮಧ್ಯಾಹ್ನ ೧೨.೩೦ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಗಂಟೆ ೬ರಿಂದ ಮಾತೆಯರನ್ನು ಅರಸಿನ ಕುಂಕುಮ ಮತ್ತು ಗಾಜಿನ ಬಳೆ ನೀಡಿ ಸ್ವಾಗತಿಸುವ ಕಾರ್ಯಕ್ರಮ ನಡೆಯಲಿದೆ. ರಾತ್ರಿ ೭ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ರಾತ್ರಿ ೮ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ೯ಕ್ಕೆ ದೇವದಾಸ್ ಕಾಪಿಕಾಡ್ ಅಭಿನಯದ ಚಾಪರ್ಕ ಕಲಾವಿದರಿಂದ `ನಾಯಿದ ಬೀಲ’ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ ಸಂಘಟಕರು ತಿಳಿಸಿದ್ದಾರೆ.