ನಿಡ್ಪಳ್ಳಿ; ಶ್ರೀ ಶಾಂತದುರ್ಗಾ ದೇವಸ್ಥಾನ ಮತ್ತು ಪೂಮಾಣಿ ಕಿನ್ನಿಮಾಣಿ ಪರಿವಾರ ದೈವಗಳ ದೈವಸ್ಥಾನ ಶ್ರೀ ಕ್ಷೇತ್ರ ನಿಡ್ಪಳ್ಳಿ ಇದರ ಪ್ರತಿಷ್ಟಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸ್ಮರಣ ಸಂಚಿಕೆ ನಿಶಾಂತ ಇದರ ವಿತರಣಾ ಕಾರ್ಯಕ್ರಮ ಡಿ.4 ರಂದು ಶ್ರೀ ಶಾಂತದುರ್ಗಾ ದೇವಸ್ಥಾನದಲ್ಲಿ ನಡೆಯಿತು.
ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ರೈ ಎಸ್ಟೇಟ್ ಕೋಡಿಂಬಾಡಿಯ ಅಶೋಕ್ ಕುಮಾರ್ ರೈ ಮುಖ್ಯ ಅತಿಥಿಯಾಗಿ ಭಾಗವಹಿಸಿ ವೇದಿಕೆಯಲ್ಲಿದ್ದ ಅತಿಥಿಗಳಿಗೆ ಸ್ಮರಣ ಸಂಚಿಕೆ ವಿತರಿಸುವ ಮೂಲಕ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬ್ರಹ್ಮಕಲಶೋತ್ಸವದ ಸವಿನೆನೆಪುಗಳ ಮೆಲುಕು ಹಾಕಿದರು.
ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಪ್ರಮೋದ್ ಆರಿಗ ನಿಡ್ಪಳ್ಳಿ ಗುತ್ತು ಅಧ್ಯಕ್ಷತೆ ವಹಿಸಿ ಮಾತನಾಡಿ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಹಾಗೂ ನಂತರದ ದಿನಗಳಲ್ಲಿ ಭಕ್ತಾದಿಗಳು ಸಹಕಾರ ನೀಡುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮುಂದೆಯೂ ತಮ್ಮೆಲ್ಲರ ಸಹಕಾರ ಕೋರಿದರು.ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣ ರೈ ಕೊಪ್ಪಳ, ಸಮಿತಿ ಸದಸ್ಯರಾದ ದಿವ್ಯಾ ಕೆ.ಶೆಟ್ಟಿ ಪುತ್ತೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸ್ಮರಣ ಸಂಚಿಕೆಯ ಸಂಪಾದಕ ಸಾಹಿತಿ, ನಿವೃತ್ತ ಶಿಕ್ಷಕ ರಘುನಾಥ ರೈ ನುಳಿಯಾಲು ಸಂಚಿಕೆಯ ಒಳಪುಟಗಳ ಪರಿಚಯ ಮಾಡಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ವೃದ್ದಿ ಕೊಪ್ಪಳ ಪ್ರಾರ್ಥಿಸಿ, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ನಾಗೇಶ ಗೌಡ ಪುಳಿತ್ತಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ದೇವಸ್ಥಾನ ಮತ್ತು ದೈವಸ್ಥಾನಗಳ ಜೀರ್ಣೊದ್ದಾರ, ಬ್ರಹ್ಮಕಲಶೋತ್ಸವ ಕಾರ್ಯ ನಡೆದು ಬಂದ ಹಾದಿ ಮತ್ತು ಸ್ಮರಣ ಸಂಚಿಕೆ ವಿತರಣೆಗೆ ವಿಳಂಬವಾಗಲು ಕಾರಣ ಮತ್ತು ಸಹಕರಿಸಿದವರ ಬಗ್ಗೆ ನೆನಪಿಸಿದರು.
ಸ್ಮರಣ ಸಂಚಿಕೆ ಸಮಿತಿ ಸಂಚಾಲಕ ಸತ್ಯನಾರಾಯಣ ರೈ ನುಳಿಯಾಲು ವಂದಿಸಿ, ನವೀನ್ ಕುಮಾರ್ ಮುಂಡಕೊಚ್ಚಿ ಕಾರ್ಯಕ್ರಮ ನಿರೂಪಿಸಿದರು. ತಿಮ್ಮಣ್ಣ ರೈ ಆನಾಜೆ, ಸರ್ವೋತ್ತಮ ಬೋರ್ಕರ್. ಬಿ, ಕುಂಞಣ್ಣ ಗೌಡ ಪಳಂಬೆ, ರಾಮಚಂದ್ರ ಬೊಳುಂಬುಡೆ, ವೆಂಕಟ್ರಮಣ ಭಟ್ ದೇವಸ್ಯ ಅತಿಥಿಗಳಿಗೆ ಶಾಲು ಹಾಕಿ ಗೌರವಿಸಿದರು. ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಭಕ್ತಾದಿಗಳು ಪಾಲ್ಗೊಂಡರು.