ನಮ್ಮ ಮಕ್ಕಳು ನಮ್ಮ ಬದುಕು.ಅಪಾರ ಸುಪ್ತ ಪ್ರತಿಭೆಗಳ ಸಂಗಮ.ಶಿಕ್ಷಣ,ಕಲೆ,ಸಾಹಿತ್ಯ,ಕ್ರೀಡೆ,ಸಮಾಜ ಸೇವೆ…ಇತ್ಯಾದಿಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಮಕ್ಕಳಿಗೆ ಮನೆ-ಶಾಲೆ-ಸಂಘಸಂಸ್ಥೆಗಳಿಂದ ಪ್ರೋತ್ಸಾಹ ಹಾಗೂ ವೇದಿಕೆ ದೊರೆತಾಗ ಬಾಲ್ಯದಿಂದಲೇ ಅವರ ಪ್ರತಿಭೆ ವಿಕಾಸಗೊಂಡು ಬೆಳೆಯುತ್ತಾ ಹೋದಂತೆ ಶಿಕ್ಷಣದ ಜೊತೆಜೊತೆಯಲ್ಲಿ ಕಲೆ,ಸಾಹಿತ್ಯ,ಕ್ರೀಡೆ,ಪರಿಸರ-ದೇಶಪ್ರೇಮ ಬೆಳೆಸಿಕೊಂಡು ಮುಂದೆ ಯೋಗ್ಯ ನಾಗರಿಕರಾಗಿ ದೇಶದ ಕೀರ್ತಿ ಬೆಳಗುವರು.ಯೋಗ್ಯ ಶಿಕ್ಷಣ ನೀಡಿ ಸಂಸ್ಕೃತಿಯನ್ನು ಕಲಿಸುವ ಕಾರ್ಯ ನಮ್ಮೆಲ್ಲರಿಂದಲೂ ಆಗಬೇಕಾದ ಅಗತ್ಯವಿದೆ.ಅಸಂಖ್ಯಾತ ಬಾಲಪ್ರತಿಭೆಗಳು ಇಂದು ನಾನಾ ಕ್ಷೇತ್ರಗಳಲ್ಲಿ ಮಿಂಚುತ್ತಿರುವುದು ನಾವು ಹೆಮ್ಮೆ ಪಡಬೇಕಾದ ವಿಷಯವಾಗಿದೆ.ಅವರಲ್ಲಿ ಒಬ್ಬರು ಯಕ್ಷ ಬಾಲ ಪ್ರತಿಭೆ ಶಿವಜಿತ್ ವೈ.ಜೆ ಚಾರ್ವಾಕ.
ಮೂಲತ: ಚಾರ್ವಾಕದ ಸಾಕ್ಷಾತ್ ಶಿವನಿಲಯದ ಪ್ರಶಸ್ತಿ ಪುರಸ್ಕೃತ ಶಿಕ್ಷಕರು, ಪ್ರತಿಭಾವಂತ ಕಲಾವಿದ ಹಾಡುಗಾರರೂ ಆಗಿರುವ ಜಯಂತ್ ವೈ ಮತ್ತು ಶಿಕ್ಷಣ ಇಲಾಖೆಯ ಕಾಣಿಯೂರು ಕ್ಲಸ್ಟರ್ ನ ಸಿ.ಆರ್.ಪಿ ಸಂಪನ್ಮೂಲ ಶಿಕ್ಷಕಿಯಾಗಿರುವ ಶ್ರೀಮತಿ ಯಶೋದಾ ಜಯಂತ್ ಇವರ ಸುಪುತ್ರ ಶಿವಜಿತ್ ಸರಕಾರಿ ಪ್ರೌಢಶಾಲೆ ಕಾಣಿಯೂರಿನಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿ.
ಕಲಿಯುವಿಕೆಯಲ್ಲಿ ಪ್ರತಿಭಾವಂತನಾಗಿರುವ ಈತ ಪ್ರಶಾಂತ್ ನೆಲ್ಯಾಡಿ ಯಕ್ಷಗಾನ ನಾಟ್ಯಗುರುಗಳಿಂದ ಯಕ್ಷಗಾನ,ನಾಟ್ಯ ಶಿಕ್ಷಣ ಪಡೆದು ,ಕಲಾವಿದನಾಗಿ ಹಲವು ಕಡೆ ಪ್ರದರ್ಶನ ನೀಡಿ ಪ್ರೇಕ್ಷಕರ ಗಮನ ಸೆಳೆದ ಕಲಾವಿದ. ತಬಲಾವಾದನವನ್ನು ಮನೋಜ್ ಸೋಲಂಕಿ ಪುಣೆ ,ಗುರುಗಳಿಂದ ಕಲಿತು ತಬಲಾವಾದನವನ್ನೂ ಕರಗತಮಾಡಿಕೊಂಡಿರುವ ಬಾಲ ಕಲಾವಿದ.ಕುಮಾರ ಸುಬ್ರಹ್ಮಣ್ಯ ವಳಕುಂಜ ಗುರುಗಳಿಂದ ಚೆಂಡೆ ಮದ್ದಳೆ ವಾದನವನ್ನೂ ಕಲಿತು ಯಕ್ಷಗಾನ ರಂಗದಲ್ಲಿ ಮುಂದೆ ಎಲ್ಲರ ಮೆಚ್ಚುಗೆಗೆ ಪಾತ್ರನಾಗುವ ಕನಸು ಹೊಂದಿರುವ ಶಿವಜಿತ್ ವೈ.ಜೆ ,ಕಲಾವಿದೆ ಮಾಲಿನಿ ಭಟ್ ಇವರಲ್ಲಿ ಸಂಗೀತಾಭ್ಯಾಸವನ್ನೂ ಮಾಡುತ್ತಿರುವುದು ಮುಂದಿನ ಈತನ ಕಲಾಸಾಧನೆಗೆ ಒಂದು ಮುನ್ನುಡಿಯೆಂದೇ ಹೇಳಬಹುದು.
ನೃತ್ಯ,ಸಾಹಿತ್ಯ ,ಚಿತ್ರ ರಚನೆ ಯಲ್ಲಿ ಆಸಕ್ತಿ ಹೊಂದಿರುವ ಶಿವಜಿತ್,ಇತ್ತೀಚೆಗೆ ಜರುಗಿದ ಶಿಕ್ಷಕರ ಸಾಹಿತ್ಯ ಸಮ್ಮೇಳನ-2022ರಲ್ಲಿ ಜಾನಪದ ನೃತ್ಯ ಪ್ರದರ್ಶನ ನೀಡಿ ಎಲ್ಲರನ್ನೂ ಮನರಂಜಿಸಿ ಈತ ಅಭಿನಂದನಾ ಪತ್ರ ಪಡೆದಿರುವುದು ಮಾತ್ರವಲ್ಲದೆ,ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್,ಪುತ್ತೂರು ತಾಲೂಕು ಘಟಕ,ರೋಟರಿ ಕ್ಲಬ್ ಪುತ್ತೂರು,ಗುರುಕುಲ ಪ್ರತಿಷ್ಠಾನ ಪುತ್ತೂರು ಹಾಗೂ ಚಿಗುರೆಲೆ ಯುವ ಬಳಗ ಪುತ್ತೂರು ಇವುಗಳ ಸಹಯೋಗದಲ್ಲಿ ಪುತ್ತೂರಿನಲ್ಲಿ ಜರುಗಿದ ಮಕ್ಕಳ ಕವಿಗೋಷ್ಠಿಯಲ್ಲಿ ಸ್ವರಚಿತ ಕವನ ವಾಚಿಸಿ ಪ್ರಶಂಸೆಗೂ ಪಾತ್ರನಾಗಿರುವ ಸಾಹಿತ್ಯ ಪ್ರತಿಭೆ.ಪ್ರತಿಭಾ ಕಾರಂಜಿಯ ಅನೇಕ ಸ್ಪರ್ಧೆಗಳಲ್ಲೂ ಭಾಗವಹಿಸಿ ವಲಯ,ತಾಲೂಕು,ಜಿಲ್ಲಾ ಮಟ್ಟದಲ್ಲಿ ಬಹುಮಾನಿತನಾಗಿರುವ ಶಿವಜಿತ್ ಹಲವು ಪ್ರತಿಭೆಗಳ ಸಂಗಮವೇ ಸರಿ.
ನಾಳೆ ದಶಂಬರ 6ರಂದು ಮಂಗಳವಾರ ಸವಣೂರಿನ ಪದ್ಮಾಂಬ ವಠಾರದಲ್ಲಿ ನಡೆಯಲಿರುವ ಶ್ರೀ ಕಟೀಲು ಮೇಳದ ದೇವಿ ಮಹಾತ್ಮೆ ಯಕ್ಷಗಾನ ದಲ್ಲಿ ಮದ್ದಳೆ ರಂಗಪ್ರವೇಶ ಮಾಡಲಿರುವ ಪ್ರತಿಭಾವಂತ ಯಕ್ಷ ಬಾಲ ಪ್ರತಿಭೆ ಶಿವಜಿತ್ ವೈ.ಜೆ ಗೆ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ತಾಯಿಯ ,ಕಲಾಮಾತೆಯ ಪೂರ್ಣ ಅನುಗ್ರಹ ಸಿಗಲೆಂದೂ,ಭವಿಷ್ಯದಲ್ಲಿ ಪ್ರತಿಭಾವಂತ ಯಕ್ಷ ಸಾಧಕನಾಗಿ ಮೂಡಿ,ಕಲಾ ಸೇವೆ ಮಾಡಲೆಂದುನಾವು ಆಶೀರ್ವದಿಸೋಣ.
✍️ನಾರಾಯಣ ರೈ ಕುಕ್ಕುವಳ್ಳಿ.