ಪುತ್ತೂರು: ಸುಮಾರು 62 ವರ್ಷಗಳ ಇತಿಹಾಸವಿರುವ ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಜ್ರುಪಾದೆ ಶಾಖೆಯ ನೂತನ ಕಚೇರಿ ಕಟ್ಟಡ ಉದ್ಘಾಟನೆಯು ಡಿ.8ರಂದು ನಡೆಯಲಿದೆ.
1960ರಲ್ಲಿ ಪ್ರಾರಂಭಗೊಂಡಿರುವ ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದವು ಬೆಳಿಯೂರುಕಟ್ಟೆಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ತನ್ನ ಸದಸ್ಯರಿಗೆ ಸೇವೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಉಜ್ರುಪಾದೆಯಲ್ಲಿ ಶಾಖೆಯನ್ನು ಪ್ರಾರಂಭಿಸಿ ಕಳೆದ 40 ವರ್ಷಗಳಿಂದ ಸೇವೆ ನೀಡುತ್ತಾ ಬಂದಿದೆ. ಇಷ್ಟರ ತನಕ ಬಾಡಿಗೆ ಕಟ್ಟಡದಲ್ಲಿ ಶಾಖಾ ಕಚೇರಿಯು ವ್ಯವಹರಿಸುತ್ತಾ ಬಂದಿರುತ್ತದೆ. ಇದೀಗ ಸುಮಾರು ರೂ.75 ಲಕ್ಷ ವೆಚ್ಚದಲ್ಲಿ ಸುಸಜ್ಜಿತವಾದ ಕಟ್ಟಡವನ್ನು ನಿರ್ಮಿಸಲಾಗಿದ್ದು ಉದ್ಘಾಟನೆಗೆ ಸಿದ್ದಗೊಂಡಿದೆ. ಶಾಖೆಯು ಪ್ರಾರಂಭದಲ್ಲಿ ಸದಸ್ಯರಿಗೆ ಪಡಿತರ ಸಾಮಾಗ್ರಿಗಳನ್ನು ವಿತರಿಸುವ ಮೂಲಕ ಪ್ರಾರಂಭವಾದ ಸಂಘವು ನಂತರದ ದಿನಗಳಲ್ಲಿ ಉಳಿತಾಯವನ್ನು ಪ್ರಾರಂಭಿಸಿದೆ. ಮುಂದಿನ ದಿನಗಳಲ್ಲಿ ಬ್ಯಾಂಕಿಂಗ್ ವ್ಯವಹಾರವನ್ನು ಪ್ರಾರಂಭಿಸಲಾಗುವುದು.
ಸಂಘದ ಸಾಧನೆಗಳು
ಸಂಘವು 2021-22ನೇ ಸಾಲಿನಲ್ಲಿ ಒಟ್ಟು ರೂ.101.84ಕೋಟಿ ವಾರ್ಷಿಕ ವ್ಯವಹಾರ ನಡೆಸಿದೆ. ರೂ.23.16 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ರೂ.6.63ಕೋಟಿ ಠೇವಣಾತಿ, ರೂ.17.22ಕೋಟಿ ಸದಸ್ಯರ ಹೊರಬಾಕಿ ಸಾಲ, ರೂ.13.70ಕೋಟಿ ಜಿಲ್ಲಾ ಕೇಂದ್ರ ಬ್ಯಾಂಕ್ನಲ್ಲಿ ಸಾಲ, ರೂ.1.93ಕೋಟಿ ಸದಸ್ಯರ ಪಾಲು ಬಂಡವಾಳ, ರೂ.5.33ಕೋಟಿ ಬ್ಯಾಂಕ್ನಲ್ಲಿ ಧನ ವಿನಿಯೋಗ ಮಾಡಿದೆ. 2021-22ನೇ ಸಾಲಿನಲ್ಲಿ ರೂ.48.58ಲಕ್ಷ ಲಾಭಗಳಿಸಿದೆ. ಸಾಲ ವಸೂಲಾತಿಯಲ್ಲಿ ಸಂಘವು ಶೇ.99.14ಸಾಧನೆ ಮಾಡಿದೆ. ಆಡಿಟ್ ವರ್ಗಿಕರಣದಲ್ಲಿ ಕಳೆದ 11 ವರ್ಷಗಳಿಂದ ನಿರಂತರವಾಗಿ `ಎ’ ಶ್ರೇಣಿಯನ್ನು ಪಡೆದುಕೊಂಡಿದೆ.
ಸಂಘದ ಸೌಲಭ್ಯಗಳು:
ಸಂಘವು ತನ್ನ ಸದಸ್ಯರಿಗೆ ಅಲ್ಪಾವಧಿ, ಮಧ್ಯಮಾವಧಿ, ದೀರ್ಘಾವಧಿ, ಕೃಷಿ ಸಾಲ, ಚಿನ್ನಾಭರಣ ಈಡಿನ ಸಾಲ, ಮಧ್ಯಮಾವಧಿ/ದೀರ್ಘಾವಧಿ ಕೃಷಿಯೇತರ ಸಾಲ, ಉತ್ಪತ್ತಿ ಈಡಿನ ಸಾಲ ಹಾಗೂ ವಾಹನ ಖರೀದಿ ಸಾಲ ನೀಡಲಾಗುತ್ತಿದೆ.
ಪ್ರಸ್ತುತ ಸಂಘದ ಅಧ್ಯಕ್ಷರಾಗಿ ವಿ.ಸತೀಶ್ ಗೌಡ ಒಳಗುಡ್ಡೆ, ಉಪಾಧ್ಯಕ್ಷರಾಗಿ ಅಬ್ದುಲ್ ಹಕೀಂ, ನಿರ್ದೇಶಕರಾಗಿ ಪ್ರಕಾಶ್ಚಂದ್ರ ಎ.ಎಂ., ಪ್ರವೀಣಚಂದ್ರ ಆಳ್ವ ಎ.ಎಂ., ಕೆ.ಚಂದಪ್ಪ ಪೂಜಾರಿ, ಅಂಬ್ರೋಸ್ ಡಿ’ಸೋಜ, ನವೀನ ಕರ್ಕೇರ, ಸುರೇಶ್ ಎನ್., ಪ್ರಮೋದ್ ಬಿ., ಸೀತಾರಾಮ ಗೌಡ ಬಿ.ಕೆ., ವಿನಯ, ಶುಕವಾಣಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೀತಾರಾಮ ಗೌಡ ಕೆ. ಕಾರ್ಯನಿರ್ವಹಿಸುತ್ತಿದ್ದಾರೆ.
ನೂತನ ಕಟ್ಟಡವನ್ನು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಲಿದ್ದಾರೆ. ಸಂಘದ ಅಧ್ಯಕ್ಷ ವಿ.ಸತೀಶ್ ಗೌಡ ಒಳಗುಡ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ದೀಪ ಪ್ರಜ್ವಲಿಸಲಿದ್ದಾರೆ. ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಆಡಳಿತ ಕಚೇರಿ ಉದ್ಘಾಟಿಸಲಿದ್ದಾರೆ. ಪುತ್ತೂರು ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ತ್ರಿವೇಣಿ ರಾವ್ ಕೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಕಚೇರಿ ಉದ್ಘಾಟಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷ ಸತೀಶ್ ಗೌಡ, ಉಪಾಧ್ಯಕ್ಷ ಅಬ್ದುಲ್ ಹಕೀಂ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೀತಾರಾಮ ಗೌಡ ತಿಳಿಸಿದ್ದಾರೆ.