ಡಿ.5ರಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕದ ಪದಾಧಿಕಾರಿಗಳ ಸ್ಥಾನಕ್ಕೆ ನಡೆದ ಚುನಾವಣೆಗೆ ಸಂಬಂಧಿಸಿದಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ನೀಡಿರುವ ಅಭಿಪ್ರಾಯ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ದಕ್ಷಿಣ ಕನ್ನಡ ಜಿಲ್ಲಾ ಶಾಖೆ ಇಡೀ ರಾಜ್ಯದಲ್ಲೆ ಕ್ರಿಯಾಶೀಲ ಸಂಘಟನೆ ಎಂಬ ಹೆಮ್ಮೆಯ ಜೊತೆಗೆ ಅದೇ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಕೆಯುಡಬ್ಲ್ಯುಜೆ ಶಾಖೆ ಸರಿಯಾದ ರೀತಿಯಲ್ಲಿ ಅಸ್ತಿತ್ವದಲ್ಲಿಲ್ಲದ ಕೊರಗು ಕಾಡುತ್ತಿತ್ತು. ಪುತ್ತೂರಿನ ನಮ್ಮದೇ ಸಹೋದ್ಯೋಗಿಗಳ ಕಾರ್ಯನಿರತ ಪತ್ರಕರ್ತರ ಭಿನ್ನ ಅಭಿಪ್ರಾಯಗಳು ಸಂಘಟನೆಯ ಹೆಜ್ಜೆಗಳಿಗೆ ಅಡ್ಡಗೋಡೆಗಳಂತಿದ್ದವು. ಎಲ್ಲರನ್ನೂ ಕೆಯುಡಬ್ಲ್ಯುಜೆಯ ನೆರಳಿಗೆ ತಂದು ಸಮ್ಮತ ಅಭಿಪ್ರಾಯ ಮತ್ತು ಸಂಘಟಿತ ರೂಪ ಕೊಡುವುದು ದೊಡ್ಡ ಸವಾಲು ಎಂಬಂತ ಮಾತುಗಳು ಕೇಳಿ ಬಂದಿದ್ದವು. ಪುತ್ತೂರು ವಿಷಯಕ್ಕೆ ಕೈ ಹಾಕಬೇಡಿ ಎನ್ನುವ ಕಿವಿ ಮಾತು ಬಂದಿದ್ದವು. ಆದರೆ ಸಂಘದ ತೆಕ್ಕೆಯಲ್ಲಿ ಎಲ್ಲರನ್ನೂ ಒಟ್ಟುಗೂಡಿಸಿ ಚುನಾವಣೆ ನಡೆಸುವುದು ಸವಾಲಾಗಿತ್ತು. ಆ ಕಾರಣದಿಂದ ಮೂರು ಬಾರಿ ಪುತ್ತೂರಿಗೆ ಭೇಟಿ ನೀಡಿ ನಡೆಸಿದ ಸಭೆಗಳು ಫಲಪ್ರದವಾದವು. ಇಂತಹ ಎಲ್ಲಾ ಸವಾಲುಗಳು ಈಗ ಹೂ ಎತ್ತಿದಷ್ಟೆ ಸಲೀಸಾಗಿ ಇಂದಿಗೆ ಇತ್ಯರ್ಥಗೊಂಡಿವೆ ಎಂದು ತಿಳಿಸಲು ಖುಷಿಯಾಗುತ್ತಿದೆ.
ಪುತ್ತೂರು ತಾಲ್ಲೂಕಿನ ಎಲ್ಲಾ ಪತ್ರಕರ್ತರೊಂದಿಗೆ ಸಂವಾದಿಸುವ ಮೂಲಕ ಎಲ್ಲರಲ್ಲೂ ವಿಶ್ವಾಸ ಮೂಡಿಸಿದ ಫಲವೆ ಇಂದು ಪ್ರಜಾಸತ್ತಾತ್ಮಕ ಹಾದಿಯಲ್ಲಿ ಚುನಾವಣೆ ನಡೆದು ಕೆಯುಡಬ್ಲ್ಯುಜೆ ತಾಲ್ಲೂಕು ಶಾಖೆ ಅಸ್ತಿತ್ವಕ್ಕೆ ಬಂದಿದೆ. ಇದರ ಯಶಸ್ಸು ಪುತ್ತೂರು ತಾಲ್ಲೂಕಿನ ಎಲ್ಲಾ ಕಾರ್ಯನಿರತ ಪತ್ರಕರ್ತರಿಗೆ ಸಲ್ಲಬೇಕು. ಚುನಾವಣೆಯನ್ನು ನಿಯಮಬದ್ದ ಮತ್ತು ನ್ಯಾಯ ಸಮ್ಮತವಾಗಿ ನಡೆಸಿದ ಕೆಯುಡಬ್ಲ್ಯುಜೆಯ ರಾಜ್ಯ ಸಮಿತಿ ಸದಸ್ಯರೂ ಚುನಾವಣಾಧಿಕಾರಿಗಳೂ ಆದ ಇಬ್ರಾಹಿಂ ಅಡ್ಕಸ್ಥಳ, ಚುನಾವಣಾ ಮೇಲುಸ್ತುವಾರಿಯಾಗಿ ಸ್ಥಳದಲ್ಲೇ ಮೊಕ್ಕಾಂ ಹೂಡಿ ಸಹಕರಿಸಿದ ರಾಜ್ಯಸಮಿತಿ ಸದಸ್ಯರಾದ ಎನ್. ರವಿಕುಮಾರ್, ರಾಜ್ಯ ಉಪಾಧ್ಯಕ್ಷ ಅಜ್ಜಮಾಡ ರಮೇಶಕುಟ್ಟಪ್ಪ ಅವರುಗಳಿಗೆ ಸಂಘವು ಆಭಾರಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಶ್ರೀನಿವಾಸ್ ನಾಯಕ್ ಇಂದಾಜೆ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಪದಾಧಿಕಾರಿಗಳಾದ ಪುಷ್ಪರಾಜ್, ಭಾಸ್ಕರ ರೈ ಅವರುಗಳ ನೇತೃತ್ವದ ತಂಡದ ಮುತುವರ್ಜಿ ಸಂಘಟನಾ ಶಕ್ತಿಯನ್ನು ಇಮ್ಮಡಿಗೊಳಿಸಿದೆ. ಅವರು ಕೂಡ ಅಭಿನಂದನಾರ್ಹರು.
ಮುಖ್ಯವಾಗಿ ಕೆಯುಡಬ್ಲ್ಯುಜೆಯ ಪುತ್ತೂರು ಶಾಖೆಯ ಕಾರ್ಯಕಾರಿ ಮಂಡಳಿಗೆ ಆಯ್ಕೆಯಾದ ಪದಾಧಿಕಾರಿಗಳಿಗೆ, ಸದಸ್ಯರಿಗೆ, ಚುನಾವಣಾ ಪ್ರಕ್ರಿಯೆಯಲ್ಲಿ ಸಹಭಾಗಿಗಳಾಗಿ ಸಂಘದ ಘನತೆಯನ್ನು ಎತ್ತಿ ಹಿಡಿದ ಎಲ್ಲಾ ಸದಸ್ಯರುಗಳಿಗೆ ರಾಜ್ಯ ಸಮಿತಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತದೆ. ಚುನಾವಣೆಯಲ್ಲಿ ಸೋಲು ಗೆಲುವು ಇದ್ದದ್ದೆ. ಇಂದಿನ ಸೋಲು ನಾಳೆ ಗೆಲುವಾಗಬಹುದು. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣಾ ಪ್ರಕ್ರಿಯೆಗೆ ಒಡ್ಡಿಕೊಳ್ಳುವ ಮೂಲಕ ಆಡಳಿತ ಮಂಡಳಿ ಅಸ್ಥಿತ್ವಕ್ಕೆ ಬರುವುದು ಸರಿಯಾದ ಕ್ರಮ. ಅದು ಈಗ ಪುತ್ತೂರಿನಲ್ಲಿ ಆಗಿದೆ ಎನ್ನುವುದು ಸಮಾಧಾನ. ಪತ್ರಕರ್ತರ ಕ್ಷೇಮಾಭಿವೃದ್ಧಿಯ ಸಂಘದ ಆಶಯಗಳಿಗೆ ಇನ್ನಷ್ಟು ಬಲ ಬಂದಂತಾಗಿದೆ. ಪುತ್ತೂರಿನ ಸಾರ್ವಜನಿಕರಲ್ಲೂ ಒಂದು ಚರ್ಚೆಯ ಮಹತ್ವ ಪಡೆದುಕೊಂಡಿದ್ದ ಈ ಚುನಾವಣೆ ಒಂದು ಮಾದರಿಯಾಗಿ ದಾಖಲಾಗಿದೆ.
-ಶಿವಾನಂದ ತಗಡೂರು, ಅಧ್ಯಕ್ಷರು, ಕೆಯುಡಬ್ಲ್ಯುಜೆ