ಆರ್ಥಿಕ ಸಬಲತೆಗೆ ಸರಕಾರದಿಂದ ಪ್ರೇರಣೆ – ಸಂಜೀವ ಮಠಂದೂರು
ಪುತ್ತೂರು: ಪೌಷ್ಟಿಕತೆ ಹಾಗೂ ರುಚಿಯ ಜತೆಗೆ ರೋಗ ನಿರೋಧಕ ಶಕ್ತಿ ಹೊಂದಿರುವ ನಾಟಿ ಕೋಳಿ ಮರಿಗಳನ್ನು ಸಾಕಲು ಕರ್ನಾಟಕ ಸಹಕಾರ ಕುಕ್ಕುಟ ಮಹಾ ಮಂಡಳಿ ನಿಗಮ ಬೆಂಗಳೂರು ಮತ್ತು ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಪುತ್ತೂರು ಇದರ ವತಿಯಿಂದ 2022-23ನೇ ಸಾಲಿನ ಗ್ರಾಮೀಣ ಅರ್ಹ ರೈತ ಮಹಿಳೆಯರಿಗೆ ಉಚಿತ ನಾಟಿ ಕೋಳಿಮರಿಗಳ ವಿತರಣಾ ಕಾರ್ಯಕ್ರಮ ಡಿ.8ರಂದು ಪುತ್ತೂರು ಪಶುಸಂಗೋಪನಾ ಇಲಾಖೆಯಲ್ಲಿ ನಡೆಯಿತು. ಶಾಸಕ ಸಂಜೀವ ಮಠಂದೂರು ಕೋಳಿ ಮರಿಗಳನ್ನು ಅರ್ಹ ಫಲಾನುಭವಿಗಳಿಗೆ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.
ಆರ್ಥಿಕ ಸಬಲತೆಗೆ ಸರಕಾರದಿಂದ ಪ್ರೇರಣೆ:
ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಗ್ರಾಮೀಣ ಭಾಗದ ರೈತ ಮಹಿಳೆಯರ ಆದಾಯ ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಸರಕಾರ ಅನೇಕ ಕಾರ್ಯಕ್ರಮ ಹಾಕಿಕೊಂಡಿದೆ. ಇವತ್ತು ಐದತ್ತೂ ಸಾವಿರ ಕೋಳಿ ಮರಿಗಳ ಸಾಕಾಣಿಕೆ ನೋಡಿದ್ದೇವೆ. ಆದರೆ ನೂರಿನ್ನೂರು ಕೋಳಿ ಮರಿಗಳನ್ನು ಸಾಕಿಯೂ ಜೀವನ ಸಾಗಿಸಬಹುದು ಎಂಬುದಕ್ಕೆ ಸರಕಾರ ಪ್ರೋತ್ಸಾಹ ಮತ್ತುಪ್ರೇರಣೆ ನೀಡುತ್ತಿದೆ ಎಂದರು.
ಪುತ್ತೂರು ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಪ್ರಸನ್ನ ಹೆಬ್ಬಾರ್ ಸ್ವಾಗತಿಸಿ, ಜಾನುವಾರು ಅಭಿವೃದ್ಧಿ ಅಧಿಕಾರಿ ವಂದಿಸಿದರು. ಈ ಸಂದರ್ಭದಲ್ಲಿ ಡಾ.ಪ್ರಕಾಶ್, ಜಾನುವಾರು ಅಭಿವೃದ್ಧಿ ಅಧಿಕಾರಿ ಶಿವಪ್ರಸಾದ್, ಮೈಸೂರು ಕರ್ನಾಟಕ ಸಹಕಾರ ಕುಕ್ಕುಟ ಮಹಾ ಮಂಡಳಿ ನಿಗಮದ ಜಾನುವಾರು ಅಭಿವೃದ್ಧಿ ಅಧಿಕಾರಿ ಶಿವಮೂರ್ತಿ, ಕಚೇರಿ ಸಿಬ್ಬಂದಿ ಅಮೃತ್ ಉಪಸ್ಥಿತರಿದ್ದರು.