ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ವಾರ್ಷಿಕೋತ್ಸವ ಸಂಭ್ರಮ-ಪ್ರತಿಭಾ ಪುರಸ್ಕಾರ

0

  • ಹಣ ಗಳಿಸುವುದನ್ನು ಬದಿಗಿಟ್ಟು ಉತ್ತಮ ಜೀವನ ರೂಪಿಸಲು ಪ್ರಯತ್ನಿಸಬೇಕು – ಉ.ರಾ ನಾಗೇಶ್
  • ಪೋಷಕರ ನಿರಂತರ ಪ್ರೋತ್ಸಾಹದಿಂದ ಸಂಸ್ಥೆ ಸಮಾಜಮುಖಿಯಾಗಿ ಬೆಳೆಯುತ್ತಿದೆ – ಜಯಸೂರ್ಯ ರೈ ಮಾದೋಡಿ
  • ಮೌಲ್ಯ ತುಂಬಿದ ಜೀವನದ ಪಾಠ ಕಲಿತು ಸಮಾಜಕ್ಕೆ ಮಾದರಿಯಾಗಬೇಕು – ನಾರಾಯಣ ಭಟ್ ರಾಮಕುಂಜ
  • ಬಾಲ್ಯದ ನೆನಪುಗಳು ಜೀವಮಾನದ ಶ್ರೇಷ್ಠ ಸಾಧನೆಗೆ ಶಾಲಾ ವಾರ್ಷಿಕೋತ್ಸವಗಳು ಸ್ಪೂರ್ತಿ- ಗಿರಿಶಂಕರ ಸುಲಾಯ
  • ಪ್ರಗತಿ ವಿದ್ಯಾಸಂಸ್ಥೆ ಕಲಿಕೆಗೆ ಪೂರಕ ವಾತವರಣ ಸೃಷ್ಠಿಸಿದೆ – ಉಮೇಶ್ ಕೆ.ಎಂ.ಬಿ

ಕಾಣಿಯೂರು : ನಾವು ವಿಜ್ಞಾನದಲ್ಲಿ ಮುಂದುವರಿದಿದ್ದೇವೆ, ಆದರೆ ಶಿಕ್ಷಣದಲ್ಲಿ ನೈತಿಕತೆ ಮರೆಯಾಗುತ್ತಿದೆ. ಮೊಬೈಲ್ ಬಳಕೆ, ದೃಶ್ಯ ಮಾಧ್ಯಮಗಳ ಕಳಪೆ ಪ್ರದರ್ಶನದಿಂದಾಗಿ ಮಕ್ಕಳಲ್ಲಿ ಗುಣಮಟ್ಟದ ಸಂಸ್ಕಾರಗಳು ಕಡಿಮೆಯಾಗುತ್ತಿದೆ. ಹಣ ಗಳಿಸುವ ನಿಟ್ಟಿನಲ್ಲಿ ಶಿಕ್ಷಣ ಎಂಬ ವಿಚಾರವನ್ನು ಬದಿಗಿಟ್ಟು ಉತ್ತಮವಾದ ಜೀವನ ರೂಪಿಸಲು ಶಿಕ್ಷಣದ ಅಗತ್ಯತೆಯನ್ನು ಕಾಣಬೇಕಾಗಿದೆ. ನಮ್ಮ ಮಾತೃ, ಪಿತೃಗಳು ಹಾಗೂ ಗುರುಗಳಲ್ಲಿ ಭಯ ಭಕ್ತಿ ಇಟ್ಟು ಕೊಂಡರೆ ಮುಂದೆ ಜೀವನದಲ್ಲಿ ನಮಗೆ ಶ್ರೀರಕ್ಷೆಯಾಗುತ್ತದೆ ಎಂದು ಕೊಡಗು ಕುಶಾಲನಗರ ಸರಕಾರಿ ಪದವಿ ಪೂರ್ವ ಕಾಲೇಜಿನ ಶಿಕ್ಷಣ ಚಿಂತಕರು, ಚಿತ್ರಕಲಾ ಶಿಕ್ಷಕ ಉ.ರಾ. ನಾಗೇಶ್ ಹೇಳಿದರು. ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಡಿ 9ರಂದು ನಡೆದ ಪ್ರತಿಭಾ ಪುರಸ್ಕಾರ ಮತ್ತು ಶಾಲಾ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಸಂಸ್ಕಾರವೆಂಬುದು ನಮ್ಮ ಹಿರಿಯರಿಂದ ಬಂದ ಮೌಲ್ಯಯುತವಾದ ಜೀವನದ ಕ್ರಮ, ನಾವು ಒತ್ತಡ ಹಾಕಿ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಹೇರುವ ಬದಲು ಅವರ ಆಸಕ್ತಿ ಪ್ರತಿಭೆಗಳಿಗೆ ಹೆತ್ತವರು ಮತ್ತು ಶಿಕ್ಷಕರು ಪ್ರೋತ್ಸಾಹದಿಂದ ವಿದ್ಯೆಯನ್ನು ಕೊಡಬೇಕು. ಶಿಕ್ಷಣದ ಜೊತೆಗೆ ಸಂಸ್ಕಾರ ಕೊಡಬೇಕು. ಸಂಸ್ಕಾರ ಮನೆಯಿಂದ ಬರಬೇಕು. ಮಕ್ಕಳ ಹೆತ್ತವರು ಮತ್ತು ಶಿಕ್ಷಕರು ಉತ್ತಮ ರೀತಿಯ ಸಂಸ್ಕಾರ ಮತ್ತು ಶಿಕ್ಷಣವನ್ನು ಕೊಟ್ಟರೆ, ಆ ವಿದ್ಯಾರ್ಥಿ ಉತ್ತಮ ಪ್ರಜೆಯಾಗಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ, ಸಮಾಜಮುಖಿಯಾಗಿ ಸಂಸ್ಥೆ ಬೆಳೆಯಲು ಕಾರಣಕರ್ತರಾದ ಪೋಷಕರು ಸಂಸ್ಥೆಯ ಬೆನ್ನೆಲುಬು. ಎಲ್ಲರ ಕೂಡುವಿಕೆಯಿಂದ ಸಂಸ್ಥೆಯ ಎಲ್ಲಾ ಕಾರ್ಯಕ್ರಮಗಳು ಉತ್ತಮ ರೀತಿಯಲ್ಲಿ ನಡೆಯುತ್ತಿವೆ. ಸಾಧನೆಯನ್ನು ಹುಡುಕಿಕೊಂಡಾಗ ಜೀವನ ಸಾರ್ಥಕವಾಗುತ್ತದೆ. ಪೋಷಕರ ನಿರಂತರ ಪ್ರೋತ್ಸಾಹದಿಂದ ಪ್ರಗತಿ ವಿದ್ಯಾಸಂಸ್ಥೆ ಹೆಜ್ಜೆ ಹಜ್ಜೆಗಳನ್ನು ಇಡುತ್ತಾ ಪ್ರಗತಿಯ ಪಥದತ್ತ ಸಾಗುತ್ತಿದೆ ಎಂದರು. ರಾಜ್ಯ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನಾರಾಯಣ ಭಟ್ ಟಿ.ರಾಮಕುಂಜ ಮಾತನಾಡಿ, ವಿದ್ಯಾರ್ಥಿಗಳು ಅಂಕ ಗಳಿಸುವ ಯಂತ್ರಗಳಾಗದೆ, ಮೌಲ್ಯ ತುಂಬಿದ ಜೀವನದ ಪಾಠ ಕಲಿತು ಸಮಾಜಕ್ಕೆ ಮಾದರಿಯಾಗಬೇಕು. ಹಲವು ಭಾಷೆಗಳನ್ನು ಕಲಿತವನು ಜೀವನದಲ್ಲಿ ಯಶಸ್ಸನ್ನು ಕಾಣುತ್ತಾನೆ. ಪ್ರಪಂಚವನ್ನು ಜ್ಞಾನದ ಬೆಳಕಿನಲ್ಲಿ ಕೊಂಡೊಯ್ಯುವ ಗುರುಗಳ ಕಾರ್ಯ ಗೌರವಿಸುವಂತಹದ್ದು ಎಂದರು. ಮಕ್ಕಳ ಸಚ್ಚಾರಿತ್ರ್ಯದ ಬದುಕಿನಲ್ಲಿ ತಾಯಿಯ ಪಾತ್ರ ಮಹತ್ವದ್ದು. ಸಣ್ಣ ಪ್ರಾಯದಲ್ಲೇ ಮಕ್ಕಳು ತಪ್ಪು ಮಾಡಿದಾಗ ತಿದ್ದಿದಲ್ಲಿ ಮುಂದೆ ಸಮಾಜದಲ್ಲಿ ದುಷ್ಕೃತಗಳನ್ನು ತಡೆಯಬಹುದು. ಮಕ್ಕಳ ಅಭಿರುಚಿಗೆ, ಪ್ರತಿಭೆಗೆ ತಕ್ಕ ಹಾಗೇ ಅವರಿಗೆ ವಿದ್ಯಾಭ್ಯಾಸ ಒದಗಿಸುವುದು ಪೋಷಕರ ಕರ್ತವ್ಯವಾಗಿದೆ. ಶಿಕ್ಷಕರಾದವರು ಮಕ್ಕಳಲ್ಲಿ ಪ್ರೀತಿಯಿಂದ ವಿದ್ಯೆಯನ್ನು ಕಲಿಸಿದಾಗ ವಿದ್ಯಾರ್ಥಿಗಳು ಗುರುಗಳನ್ನು ಸದಾ ನೆನಪಿನಲ್ಲಿರಿಸಿಕೊಳ್ಳುತ್ತಾರೆ. ವಿದ್ಯಾರ್ಥಿಗಳು ಗುರಿ ತಲುಪುವಲ್ಲಿ ಶಿಕ್ಷಕರಷ್ಟೆ ಪೋಷಕರ ಪಾತ್ರವು ಅತೀ ಅಗತ್ಯವಾಗಿದೆ ಎಂದ ಅವರು, ನಮಗೆಲ್ಲರಿಗೂ ಸರಕಾರಿ ಕೆಲಸವೇ ಸಿಗುತ್ತೆ ಎಂಬ ಕನಸು ಬೇಡ, ನಾವು ಮುಂದೆ ಜಯಸೂರ್ಯ ರೈ ಮಾದೋಡಿರವರ ಹಾಗೇ ಉದ್ಯೋಗ ನೀಡುವ ವ್ಯಕ್ತಿಗಳಾಗಿ ಬೆಳೆಯೋಣ ಎಂದರು.

ಸವಣೂರು ಗ್ರಾಮ ಪಂಚಾಯತ್ ಸದಸ್ಯ ಗಿರಿಶಂಕರ ಸುಲಾಯ ಮಾತನಾಡಿ, ಸಾವಿರ ಸಾವಿರ ವರುಷಗಳ ಕಾಲ ಇತಿಹಾಸದ ಪುಟಗಳನ್ನು ತೆರೆದು ನೋಡಿದರೆ ಯಾವುದೋ ನೆನಪುಗಳು ನಮ್ಮನ್ನು ಉದ್ಧಿಪನಗೊಳಿಸುವ ಕೆಲಸ ಮಾಡುವಂತೆಯೋ ನಮ್ಮ ಬಾಲ್ಯದ ನೆನಪುಗಳು ಜೀವಮಾನದ ಶ್ರೇಷ್ಠ ಸಾಧನೆಗೆ ಇಂತಹ ಶಾಲಾ ವಾರ್ಷಿಕೋತ್ಸವಗಳು ಸ್ಪೂರ್ತಿಯಾಗುತ್ತದೆ ಎಂದರು. ಸಂಸ್ಥೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಉಮೇಶ್ ಕೆ.ಎಂ.ಬಿ ಮಾತನಾಡಿ, ಪ್ರಕೃತಿಯ ಮಡಿಲಲ್ಲಿ ತಲೆ ಎತ್ತಿ ನಿಂತಿರುವ ಪ್ರಗತಿ ವಿದ್ಯಾಸಂಸ್ಥೆ ಕಲಿಕೆಗೆ ಪೂರಕ ವಾತವರಣ ಸೃಷ್ಠಿಸಿದೆ. ಒಳ್ಳೆಯ ಪರಂಪರೆ, ಸಂಸ್ಕೃತಿ, ಆಚಾರ ವಿಚಾರಗಳನ್ನು ಬೋಧಿಸುತ್ತಿರುವ ಸಂಸ್ಥೆಗಳು ಪ್ರಸ್ತುತ ದಿನಗಳಲ್ಲಿ ಅಗತ್ಯ. ಸಮಾಜಕ್ಕೆ ಸೇವಾ ಮನೋಭಾವ ನೀಡುವ ಗುಣ, ಬೆಳೆಸುವ ಪ್ರಕ್ರಿಯೆ ಶಿಕ್ಷಣದಿಂದ ಆಗಬೇಕು. ಆ ಕೆಲಸವನ್ನು ಪ್ರಗತಿ ವಿದ್ಯಾಸಂಸ್ಥೆ ನಿರಂತರವಾಗಿ ಮಾಡುತ್ತಿದೆ ಎಂದರು.

ಶಿಕ್ಷಕ ರಕ್ಷಕ ಸಂಘದ ಸ್ಥಾಪಕಾಧ್ಯಕ್ಷ ಪದ್ಮನಾಭ ರೈ ಎಂಜೀರು, ಶಾಲಾ ಆಡಳಿತ ಸಮಿತಿ ಉಪಾಧ್ಯಕ್ಷ ವಿಶ್ವನಾಥ ರೈ ಮಾದೋಡಿ, ಸದಸ್ಯರಾದ ನಾಗೇಶ್ ರೈ ಮಾಳ, ಚಂದ್ರಹಾಸ ರೈ ಅಗಲ್ಪಾಡಿ, ವೃಂದಾ ಜೆ. ರೈ ಮಾದೋಡಿ, ಹರಿಚರಣ್ ರೈ ಮಾದೋಡಿ, ಶಾಲಾ ವಿದ್ಯಾರ್ಥಿ ನಾಯಕ ಸನ್ಮಿತ್ ರೈ, ಜಯಸೂರ್ಯ ರೈ ಮಾದೋಡಿಯವರ ಮಾತೃಶ್ರೀ ಲಕ್ಷ್ಮೀ ರೈ ಮಾದೋಡಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಪ್ರತೀತ, ರಾಶಿ, ಮಾನ್ವಿ ಜಿಎಸ್, ಈಶಿತ, ಹಿತಶ್ರೀ ಪ್ರಾರ್ಥಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ವಸಂತ ರೈ ಕಾರ್ಕಳ ಸ್ವಾಗತಿಸಿ, ಮುಖ್ಯಗುರು ಸರಸ್ವತಿ ಎಂ ವಂದಿಸಿದರು. ಶಿಕ್ಷಕಿಯರಾದ ಅನಿತಾ ಜೆ. ರೈ, ವಿನಯ ವಿ.ಶೆಟ್ಟಿ, ನಾರಾಯಣ ಭಟ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಇಂದು ಸಂಸ್ಥೆಯಲ್ಲಿ ಎರಡನೇ ದಿನದ ಸಂಭ್ರಮ..

ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಲರವ

ಡಿ. 10ರಂದು ಎರಡನೇ ದಿನದ ವಾರ್ಷಿಕೋತ್ಸವದ ಸಂಭ್ರಮ, ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ನಡೆಯಲಿದ್ದು, ಬೆಳಿಗ್ಗೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಸಮಿತಿ ಅಧ್ಯಕ್ಷರು, ನಿವೃತ್ತ ಡಿವೈಎಸ್‌ಪಿ ಜಗನ್ನಾಥ ರೈ ನುಳಿಯಾಲುರವರು ವಹಿಸಲಿದ್ದು, ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನ ಪ್ರಾಂಶುಪಾಲರಾದ ಗಣರಾಜ ಕುಂಬ್ಳೆ, ಮಂಗಳೂರು ಕಣಚೂರು ವೈದ್ಯಕೀಯ ಕಾಲೇಜಿನ ಎಂ.ಡಿ ಡಾ| ವಿಶಾಲ್ ಯಂ.ಪಡೀಲ್, ಪ್ರಗತಿ ವಿದ್ಯಾಸಂಸ್ಥೆಯ ಶಿಕ್ಷಕ ರಕ್ಷಕ ಸಂಘದ ಗೌರವಾಧ್ಯಕ್ಷ ಸಂಪತ್ ಕುಮಾರ್ ರೈ ಪಾತಾಜೆ, ಶಾಲಾ ಆಡಳಿತ ಸಮಿತಿ ಉಪಾಧ್ಯಕ್ಷ ವಿಶ್ವನಾಥ ರೈ ಮಾದೋಡಿ, ಸದಸ್ಯ ಉದಯ ರೈ ಮಾದೋಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ 2021-22ನೇ ಸಾಲಿನ ಹಿರಿಯ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ, ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ನಡೆಯಲಿದೆ.

LEAVE A REPLY

Please enter your comment!
Please enter your name here