ಜೇಸಿಐ ವಲಯ-15 ನೂತನ ಪದಾಧಿಕಾರಿಗಳ ಪದಗ್ರಹಣ: ವಲಯದ 32ನೇ ಅಧ್ಯಕ್ಷರಾಗಿ ಪುರುಷೋತ್ತಮ ಶೆಟ್ಟಿ ಅಧಿಕಾರ ಸ್ವೀಕಾರ

0

ಪುತ್ತೂರು:ಜೇಸಿಐ ಭಾರತದ ಪ್ರತಿಷ್ಠಿತ ವಲಯಾಗಿರುವ ವಲಯ-15ರ 2023ನೇ ಸಾಲಿನ ನೂತನ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ನೇತೃತ್ವದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಡಿ.೧೦ರಂದು ಜೇಸಿಐ ಪುತ್ತೂರು ಘಟಕದ ಆತಿಥ್ಯದಲ್ಲಿ ಸಂಜೆ ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಸಿಲ್ವರ್ ಜ್ಯುಬಿಲಿ ಹಾಲ್‌ನಲ್ಲಿ ಜರುಗಿತು.


ಪದಗ್ರಹಣ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸುಕುಮಾರ್ ಮಾತನಾಡಿ, ಜೇಸಿಐಯ ವಲಯ-15    ಬಹಳಷ್ಟು ಅಗಾಧವಾಗಿ ಬೆಳೆದಿದೆ. ವಲಯಾಧ್ಯಕ್ಷರ ನೇತೃತ್ವದಲ್ಲಿ ಮುಂದಿನ ವಲಯಾಧಿಕಾರಿಗಳು ನೇಮಕ ಮಾಡಲಾಗಿದೆ. ವಲಯದಲ್ಲಿ ಜವಾಬ್ದಾರಿ ಹೊತ್ತುಕೊಂಡ ಬಳಿಕ ತಮ್ಮ ಹುದ್ದೆಗೆ ಪೂರಕವಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ತಮ್ಮ ಮೇಲೆ ವಿಶ್ವಾಸವಿಟ್ಟು ಜವಾಬ್ದಾರಿ ನೀಡಲಾಗಿದ್ದು ಅದಕ್ಕೆ ನ್ಯಾಯ ಒದಗಿಸುವ ಕೆಲಸ ನಿರ್ವಹಿಸಿದಾಗ ನಾಯಕನಾಗಿ ಬೆಳೆಯಲು ಸಾಧ್ಯ. ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಚುನಾವಣೆ ಸಾಮಾನ್ಯ. ಚುನಾವಣೆ ಮುಗಿದ ಬಳಿಕ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಜೇಸಿಐ ನಿಯಮವನ್ನು ಪಾಲಿಸಬೇಕು ಎಂದರು.


ಮುಖ್ಯ ಅತಿಥಿಯಾಗಿದ್ದ ಜೇಸಿಐ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ, ಜೇಸಿಐ ಸೆನೆಟರ್ ಆಗಿರುವ ಸದಾನಂದ ನಾವಡ ಮಾತನಾಡಿ, ಜೇಸಿಐ ಎಂಬುದು ಜಿಮ್‌ಗೆ ಸೇರಿದಂತೆ. ಜಿಮ್‌ಗೆ ಸೇರಿ ಶುಲ್ಕ ಪಾವತಿಸಿ, ಹಾಗೇ ನಿಂತುಕೊಂಡರೆ ಬಾಡಿ ಫಿಟ್ ಆಗುವುದಿಲ್ಲ. ಅದೇ ರೀತಿ ಜೇಸಿಐ ಸೇರಿದ ಬಳಿಕ ಸುಮ್ಮನಿರಬಾರದು. ಸೇರಿದ ಬಳಿಕ ಯಾವುದೇ ಪ್ರಯೋಜನವಿಲ್ಲ ಎನ್ನುಬಾರದು. ಜೇಸಿಐಯ ಎಲ್ಲಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಾಗ ಅದರ ಪ್ರಯೋಜನ ದೊರೆತು ಅಭಿವೃದ್ಧಿ ಸಾಧ್ಯ ಎಂದರು. ಪ್ರತಿ ಹಂತದಲ್ಲಿ ನೀವು ಕಲಿತುಕೊಳ್ಳುವ ವಿಚಾರಗಳು ಅದು ಮುಂದೆ ಜೀವನದಲ್ಲಿ ಪ್ರಯೋಜನಕಾರಿಯಾಗುತ್ತದೆ. ವ್ಯಕ್ತಿತ್ವ ವಿಕಸನಕ್ಕೆ ನಾನು, ನನ್ನದು ಎನ್ನುವುದು ಮಾರಕ, ಅವನಿಗೆ ಜಯ ದೊರೆಯುವುದಿಲ್ಲ. ಜೇಸಿಐಯಿಂದ ಪಡೆದನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಅಭಿವೃದ್ಧಿ ಸಾಧ್ಯ ಎಂದರು.

ವಲಯ-೧೫ರ ನಿಕಟಪೂರ್ವ ಅಧ್ಯಕ್ಷ ರಾಯನ್ ಉದಯ್ ಕ್ರಾಸ್ತಾ ಮಾತನಾಡಿ, ವಲಯ ೧೫ರ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪುರುಷೋತ್ತಮ ಶೆಟ್ಟಿಯವರು ಯಾವುದೇ ಕಪ್ಪು ಚುಕ್ಕೆಯಿಲ್ಲದ ವ್ಯಕ್ತಿ. ಇವರ ಸಾಧನೆ, ವ್ಯಕ್ತಿತ್ವ ಅದ್ಬುತ ರೀತಿಯಲ್ಲಿ ತೋರಿಸಿಕೊಟ್ಟಿದೆ. ಹೀಗಾಗಿ ನಾನು ವಲಯಾಧ್ಯಕ್ಷ ಸ್ಥಾನದಿಂದ ಸಂತೋಷದಿಂದ ನಿರ್ಗಮಿಸುತ್ತಿದ್ದೇನೆ. ೨೦೨೩ನೇ ಸಾಲಿನಲ್ಲಿ ವಲಯ ೧೫. ಯಾವುದೇ ಸಮಸ್ಯೆ ಇಲ್ಲದೆ ಉತ್ತಮ ರೀತಿಯಲ್ಲಿ ಮುಂದುವರಿಯಲಿದೆ. ಪ್ರತಿಯೊಬ್ಬ ಸದಸ್ಯರು ವಲಯಾಧ್ಯಕ್ಷರಿಗೆ ಸಹಕಾರ ನೀಡುತ್ತಾರೆ. ಪೂರ್ವಾಧ್ಯಕ್ಷರ ಸಹಕಾರದೊಂದಿಗೆ ಸಹಕಾರ ನೀಡಲಾಗುವುದು. ಇಡೀ ತಂಡ ಅವರಿಗೆ ಬೆನ್ನೆಲುಬಾಗಿ ಸಹಕಾರ ನೀಡಬೇಕು ಎಂದರು.
ನೂತನ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ಮಾತನಾಡಿ, ಜೇಸಿಐ ಆದರ್ಶ, ತತ್ವ ಗಳನ್ನು ಸಮಾಜದಲ್ಲಿ ಪಸರಿಸುವ, ಹೊಸ ಯುವಕರನ್ನು ಸಂಸ್ಥೆಗೆ ಆಕರ್ಷಿಸಿ, ದೇಶ ಅಭಿವೃದ್ಧಿಗೆ ಬಳಸಿಕೊಳ್ಳುವ ಯುವ ಜನತೆಯಲ್ಲಿ ಸಕರಾತ್ಮಕ ಭಾವನೆಗಳನ್ನು ಬೆಳೆಸಿಕೊಳ್ಳಲು ಪೂರಕವಾದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಈ ವರ್ಷ ಕಾರ್ಯಕ್ರಮಗಳು ಅಚ್ಚಲಿಯದೇ ಉಳಿಯುವಂತಾಗಬೇಕು ಎಂದರು. ಹಲವು ಕನಸುಗಳನ್ನು ಹೊತ್ತುಕೊಂಡು ಜೇಸಿಐಯನ್ನು ಸ್ಥಾಪಿಸಲಾಗಿದೆ. ಅವುಗಳನ್ನು ನನಸು ಮಾಡಲು ನಾವೇಲ್ಲಾ ಶ್ರಮಿಸುವ. ಇದಕ್ಕಾಗಿ ಪ್ರತಿಯೊಬ್ಬರು ಸಹಕರಿಸುವಂತೆ ಅವರು ಮನವಿ ಮಾಡಿದರು.


ಸಮಾರಂಭದ ಪ್ರಾರಂಭದಲ್ಲಿ ನೂತನ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ಹಾಗೂ ವಲಯದ ಪ್ರಥಮ ಮಹಿಳೆ ಶಿಲ್ಪಾ ಪುರುಷೋತ್ತಮ ಶೆಟ್ಟಿಯವರನ್ನು ನಿಕಟಪೂರ್ವ ಅಧ್ಯಕ್ಷ ರಾಯನ್ ಉದಯ್ ಕ್ರಾಸ್ತಾ ಹಾಗೂ ಮರಿಯಮ್ಮ ಜೇಸಿಐ ಕಾಲರ್ ತೊಡಿಸಿ ವೇದಿಕೆ ಕರೆತರಲಾಯಿತು. ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಿಗೆ ಪುಷ್ಪಾರ್ಚನೆ ಸಲ್ಲಿಸಿದರು.

ಸನ್ಮಾನ:
ವಲಯದ ನಿಕಟಪೂರ್ವ ಅಧ್ಯಕ್ಷ ರಾಯನ್ ಉದಯ್ ಕ್ರಾಸ್ತಾ ಹಾಗೂ ನೂತನ ಅಧ್ಯಕ್ಷ ಪುರುಷೋತ್ತಮ ಶೆಟ್ಟಿಯವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಋತ್ವಿಕಾ ಜೇಸಿ ವಾಣಿ ವಾಚಿಸಿದರು. ಪುತ್ತೂರು ಘಟಕದ ಅಧ್ಯಕ್ಷ ಶಶಿರಾಜ್ ರೈ ಸ್ವಾಗತಿಸಿದರು. ಶರತ್ ಕುಮಾರ್ ರೈ, ಸುಪ್ರೀತ್ ಕೆ.ಸಿ., ನಿರೋಷ್, ಸಹಾಸ್ ಮರಿಕೆ, ಅಜಿತ್ ಕುಮಾರ್ ರೈ, ಮಂಜುನಾಥ್ ದೇವಾಡಿಗ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ವಲಯದ ಕಾರ್ಯದರ್ಶಿ ಕಾಶಿನಾಥ್ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ ನೆರವೇರಿತು. ಕಾರ್ಯಕ್ರಮದಲ್ಲಿ ಮುರಳಿ ಬ್ರದರ್‍ಸ್ ತಂಡದವರಿಂದ ಮನೋರಂಜನಾ ಕಾರ್ಯಕ್ರಮಗಳು ನಡೆಯಿತು. ವಲಯ-೧೫ರ ಪೂರ್ವಾಧ್ಯಕ್ಷರು, ವಲಯದ ವಿವಿಧ ಘಟಕಗಳ ಅಧ್ಯಕ್ಷರು, ರಾಷ್ಟ್ರೀಯ ಪೂರ್ವ ಉಪಾಧ್ಯಕ್ಷರು, ವಿವಿಧ ಘಟಕಗಳ ಪೂರ್ವಾಧ್ಯಕ್ಷರು ಸೇರಿದಂತೆ ನೂರಾರು ಮಂದಿ ಸಮಾರಂಭದಲ್ಲಿ ಭಾಗವಹಿಸಿದ್ದರು

LEAVE A REPLY

Please enter your comment!
Please enter your name here