ಬಡ ಕುಟುಂಬಕ್ಕೆ ಆಸರೆಯಾದ ವಿಜಯ ಸಾಮ್ರಾಟ್ ತಂಡ

0

ಸೂರಿಲ್ಲದೆ ಕಂಗಾಲಾಗಿದ್ದ ಕುಟುಂಬಕ್ಕೆ ಮನೆ ನಿರ್ಮಾಣ-ಹಸ್ತಾಂತರ

ಪುತ್ತೂರು: ಕೋವಿಡ್ ಸಂದರ್ಭದಲ್ಲಿ ಅಸ್ತಿತ್ವಕ್ಕೆ ಬಂದು ಹಲವಾರು ಸಮಾಜಸೇವಾ ಚಟುವಟಿಕೆಗಳನ್ನು ಮಾಡಿರುವ, ಯುವ ಉದ್ಯಮಿ ಸಹಜ್ ರೈ ಬಳಜ್ಜ ನೇತೃತ್ವದ ವಿಜಯ ಸಾಮ್ರಾಟ್ ತಂಡ ಬಡ ಕುಟುಂಬವೊಂದರ ಪಾಲಿಗೆ ಬೆಳಕಾಗಿದೆ. ತಲೆಯ ಮೇಲೊಂದು ಭದ್ರವಾದ ಸೂರಿಲ್ಲದೆ ಪರಿತಪಿಸುತ್ತಿದ್ದ ಬಡ ಕುಟುಂಬಕ್ಕೆ ಭದ್ರವಾದ ಮನೆಯೊಂದನ್ನು ನಿರ್ಮಿಸಿಕೊಟ್ಟಿದೆ. ಮಾತ್ರವಲ್ಲ ನಿರ್ಮಾಣಗೊಂಡ ಮನೆಯನ್ನು ಶಾಸಕರು, ಗಣ್ಯರ ಸಮ್ಮುಖದಲ್ಲಿ ಕುಟುಂಬಕ್ಕೆ ಹಸ್ತಾಂತರಿಸಿ ಸಾರ್ಥಕ್ಯ ಕಂಡುಕೊಂಡಿದೆ.


ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ಕುಂಬ್ರುಗ ಎಂಬಲ್ಲಿ ವಾಸವಾಗಿದ್ದ ಗೋಪಾಲಶೆಟ್ಟಿಯವರ ಕುಟುಂಬಕ್ಕೆ ಭದ್ರವಾದ ಮನೆ ಇರಲಿಲ್ಲ. ಇದರಿಂದ ಈ ದಂಪತಿಯ ಪುತ್ರಿಯ ವಿದ್ಯಾಭ್ಯಾಸಕ್ಕೆ ಸಮಸ್ಯೆಯಾಗಿದ್ದು, ಬಡ ಕುಟುಂಬದ ಸಂಕಷ್ಟದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ವರದಿಯನ್ನು ಗಮನಿಸಿದ ಟೀಂ ವಿಜಯಸಾಮ್ರಾಟ್‌ನ ಪದಾಧಿಕಾರಿಗಳು ಶಾಸಕರ ಜೊತೆಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ಅದರಂತೆ ಈ ಕುಟುಂಬಕ್ಕೆ ಮನೆ ನಿರ್ಮಿಸಿಕೊಡಬೇಕೆಂಬ ಸಂಕಲ್ಪ ಮಾಡಿದ ವಿಜಯ ಸಾಮ್ರಾಟ್ ಸ್ಥಾಪಕಾಧ್ಯಕ್ಷ ಸಹಜ್ ರೈ ಬಳಜ್ಜ ಮತ್ತು ತಂಡದ ಸದಸ್ಯರು ತಮ್ಮ ಕೈಯಲ್ಲಾದಷ್ಟು ನೆರವು ನೀಡಿ ಸುಂದರ ಮನೆಯೊಂದನ್ನು ನಿರ್ಮಿಸಿದ್ದಾರೆ. ಈ ಮನೆಯ ಹಸ್ತಾಂತರ ಕಾರ್ಯಕ್ರಮ ಡಿ.10ರಂದು ನಡೆಯಿತು.

ಗೋಪಾಲ ಶೆಟ್ಟಿ ದಂಪತಿ ದೀಪ ಬೆಳಗಿಸಿದರು. ಶಾಸಕ ಸಂಜೀವ ಮಠಂದೂರು ಮತ್ತು ಗಣ್ಯರು ಮಹಾಲಿಂಗೇಶ್ವರ ದೇವರ ಭಾವಚಿತ್ರ ನೀಡಿ ಶುಭಹಾರೈಸಿದರು. ಶಾಸಕ ಸಂಜೀವ ಮಠಂದೂರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿಯವರು ಬಡ ಕುಟುಂಬಕ್ಕೆ ಆಸರೆಯಾಗಿ ನಿಂತ ವಿಜಯಸಾಮ್ರಾಟ್ ತಂಡದ ಯುವಕರ ಪರಿಶ್ರಮವನ್ನು ಶ್ಲಾಸಿದರು.

ಬನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯ ಏಕ, ಪಿಡಿಒ ಚಿತ್ರಾ, ಕೋಡಿಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಚಂದ್ರ ಪೂಜಾರಿ, ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ನಾಗೇಶ್, ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಪುತ್ತೂರು ಗ್ರಾಮಾಂತರ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ನವೀನ್ ಪಡ್ನೂರು, ಮಾಜಿ ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಬಿಜೆಪಿ ಮುಖಂಡ ರಾಮ್‌ದಾಸ್ ಸಹಿತ ವಿಜಯ ಸಾಮ್ರಾಟ್ ತಂಡದ ಪದಾಧಿಕಾರಿಗಳು, ಸದಸ್ಯರು ಈ ವೇಳೆ ಉಪಸ್ಥಿತರಿದ್ದರು.

ವಿಜಯಸಾಮ್ರಾಟ್ ಕೋವಿಡ್ ಸಮಯದಲ್ಲಿ ಸ್ಥಾಪನೆಗೊಂಡ ಸಂಘಟನೆ. ಅಂದು ಸುಮಾರು ೧೦-೨೦ ಸಮಾನಮನಸ್ಕ ಯುವಕರು ಸೇರಿಕೊಂಡು ಆರಂಭಿಸಿದ ವಿಜಯ ಸಾಮ್ರಾಟ್‌ನಲ್ಲಿ ಈಗ ನೂರಕ್ಕೂ ಅಧಿಕ ಜನ ಯುವಕರ ತಂಡವಿದೆ. ಕೋವಿಡ್ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು, ನೇಪಥ್ಯಕ್ಕೆ ಸರಿದ ಕಲಾವಿದರ ಸಹಿತ ಸುಮಾರು ೧೮೦೦ ಕುಟುಂಬಗಳಿಗೆ ಕಿಟ್ ವಿತರಣೆ ಮಾಡಲಾಗಿದೆ. ಈ ಕುಟುಂಬದ ಸಂಕಷ್ಟವನ್ನು ನೋಡಿ ಜೂನ್‌ನಲ್ಲಿ ಮನೆ ನಿರ್ಮಾಣ ಕೆಲಸ ಆರಂಭಗೊಂಡಿದ್ದು, ಈಗ ಪೂರ್ಣಗೊಂಡಿದೆ. ಶಾಸಕರ ಪ್ರಯತ್ನ ಪಂಚಾಯತ್‌ನ ಸಹಕಾರದಿಂದ ಹಕ್ಕುಪತ್ರ ಒದಗಿಸುವ ಕೆಲಸ ಮಾಡಲಾಗಿದೆ.
-ಸಹಜ್ ರೈ ಬಳಜ್ಜ, ಸ್ಥಾಪಕಾಧ್ಯಕ್ಷರು, ವಿಜಯ ಸಾಮ್ರಾಟ್

ವಿಜಯ ಸಾಮ್ರಾಟ್‌ನಿಂದ ತಮಗೊಂದು ಭದ್ರವಾದ ಸೂರು ನಿರ್ಮಾಣಗೊಂಡಿದೆ. ಹಲವರು ಬಂದು ನಮ್ಮ ಕಷ್ಟ ನೋಡಿ ಹೋಗಿದ್ದರು. ಆದರೆ ನಮಗೆ ಕೊನೆಯವರೆಗೂ ನಿಂತು, ಮನೆ ನಿರ್ಮಿಸಿಕೊಟ್ಟವರು ಸಹಜ್ ರೈ ನೇತೃತ್ವದ ವಿಜಯ ಸಾಮ್ರಾಟ್ ಸಂಘಟನೆ. ಈ ಪುಣ್ಯದ ಫಲ ಅವರಿಗೆ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ.
– ಗೋಪಾಲ ಶೆಟ್ಟಿ ದಂಪತಿ, ಮನೆ ಪಡೆದುಕೊಂಡವರು

LEAVE A REPLY

Please enter your comment!
Please enter your name here