ಪುತ್ತೂರು: ಸರ್ವೆ ಗ್ರಾಮದ ಕಾಡಬಾಗಿಲು ಬಾವಾ – ಅಲೇಕಿ ಪಂಚಾಯತ್ ರಸ್ತೆ ವಿವಾದಕ್ಕೆ ಸಂಬಂಧಿಸಿ ಸಹಾಯಕ ಆಯುಕ್ತರ ನ್ಯಾಯಾಲಯದ ಆದೇಶದಂತೆ ರಸ್ತೆ ದುರಸ್ಥಿ ಮಾಡುವ ಸಂದರ್ಭ ತಂಡವೊಂದು ಅಡ್ಡಿಪಡಿಸಿದೆ ಎಂದು ಮುಂಡೂರು ಗ್ರಾ.ಪಂ ಪಿಡಿಒ ಗೀತಾ ಬಿ.ಎಸ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಮತ್ತೊಂದು ಕಡೆ ರಸ್ತೆ ಮಾಡದಂತೆ ದಲಿತ್ ಸೇವಾ ಸಮಿತಿ ಧರಣಿ ಕೈಗೊಂಡ ಘಟನೆಯೂ ನಡೆದಿದೆ.
ಸರ್ವೆ ಗ್ರಾಮದ ಕಾಡಬಾಗಿಲು- ಬಾವಾ -ಅಲೇಕಿ ಪಂಚಾಯತ್ ರಸ್ತೆ ವಿವಾದ ಪ್ರಕರಣವು ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿತ್ತು. ಈ ಕುರಿತು ಸಹಾಯಕ ಆಯುಕ್ತರು ನ.೧ಕ್ಕೆ ಅಂತಿಮ ಆದೇಶ ನೀಡಿದಂತೆ ಡಿ.9ಕ್ಕೆ ಸದ್ರಿ 10 ಅಡಿ ರಸ್ತೆಯನ್ನು ಪಂಚಾಯತ್ ಸ್ವಾಧೀನಕ್ಕೆ ಪಡಕೊಂಡು ಜೆ.ಸಿ.ಬಿ. ಸಹಾಯದಿಂದ ದುರಸ್ತಿಪಡಿಸುವ ಸಂದರ್ಭದಲ್ಲಿ ಆರೋಪಿಗಳಾದ ಬಾಬು, ಗುರುವ, ಗೀತಾ, ಸೀತಾ, ಮೋಹನ, ಯತೀಶ, ಬೇಬಿ, ದೇವಪ್ಪರವರು ಜೆ.ಸಿ.ಬಿ.ಗೆ ಅಡ್ಡ ನಿಂತು ರಸ್ತೆ ದುರಸ್ತಿ ಮಾಡದಂತೆ ತಡೆ ಒಡ್ಡಿದ್ದಲ್ಲದೇ, ಅವರ ಪೈಕಿ ಆರೋಪಿ ಗೀತಾರವರು ಕಲ್ಲಿನಿಂದ ಹಲ್ಲೆ ನಡೆಸಲು ಯತ್ನಿಸಿ ಸರಕಾರಿ ಅಧಿಕಾರಿಯಾದ ನನಗೆ ಮತ್ತು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿಯವರ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಅದರಂತೆ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದಲಿತ್ ಸೇವಾ ಸಮಿತಿಯಿಂದ ಧರಣಿ:
ಸರ್ವೆ ಗ್ರಾಮದ ಸರ್ವೆ ನಂಬರ್ 51 /1ಬಿ ರಲ್ಲಿ 4.99 ಎಕರೆ ಜಮೀನು ಬೈರ ಎಂಬವರಿಗೆ ಮಂಜೂರಾಗಿದ್ದು ಈಗಾಗಲೇ ಐದು ಜನ ಅಣ್ಣತಮ್ಮಂದಿರು ಒಂದೊಂದು ಎಕರೆಯಂತೆ ಜಾಗ ವಿಭಜಿಸಿಕೊಂಡಿರುತ್ತಾರೆ. ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬರಿಗೆ ರಸ್ತೆ ಕೊಡಬೇಕೆಂದು ಒತ್ತಡ ಹೇರಿದ್ದಲ್ಲದೆ ಅದಕ್ಕೆ ಒಪ್ಪದ ಕಾರಣ ಅವರನ್ನು ಬೆದರಿಸಿ ಕಾನತ್ತೂರು ದೈವಸ್ಥಾನಕ್ಕೆ ದೂರು ನೀಡಿ ಬೈರರವರ ಮಕ್ಕಳಿಗೆ ನೋಟಿಸ್ ಅನ್ನು ನೀಡಿ ಸುಮಾರು ೩೫ ವರ್ಷಗಳಿಂದ ತೊಂದರೆ ಕೊಡುತ್ತಿದ್ದಾರೆ.
ಇದರ ಜೊತೆಗೆ ಹೊಸಮ್ಮ ದೈವಸ್ಥಾನದಿಂದ ನೋಟಿಸನ್ನು ಕಳುಹಿಸಿರುತ್ತಾರೆ. ಜಾಗದ ವಿಚಾರ ಎಸಿ ಕೋರ್ಟ್ನಲ್ಲಿ ಇದೆ. ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡದೆ ಹಾಗೂ ಯಾವುದೇ ಸುಳಿವು ಇಲ್ಲದೆ ಪಿಡಿಒರವರು ಸಂಪ್ಯ ಪೊಲೀಸ್ರ ಸಹಕಾರ ಪಡೆದು ಅಕ್ರಮ ಮಾರ್ಗ ಮಾಡಲು ಮುಂದಾಗಿರುತ್ತಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ನಾವು ಸತ್ಯಾಂಶ ತಿಳಿಸಿದ್ದೇವೆ. ಆದರೆ ಒಪ್ಪದಾಗ ನಾವು ಧರಣಿ ನಡೆಸಿದ್ದೆವೆ ಎಂದು ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ತಾಲೂಕು ಅಧ್ಯಕ್ಷ ಬಿ.ಕೆ ಅಣ್ಣಪ್ಪ ಕಾರೆಕಾಡುರವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ನಮ್ಮೊಂದಿಗೆ ಬೈರರವರ ಮಕ್ಕಳು, ದಲಿತ್ ಸೇವಾ ಸಮಿತಿಯ ಉಪಾಧ್ಯಕ್ಷ ಮನೋಹರ್ ಕೋಡಿಜಾಲ್ ಮತ್ತು ಮಹಿಳೆಯರು, ಮತ್ತಿತರರು ಉಪಸ್ಥಿತರಿದ್ದರು ಎಂದು ಅವರು ತಿಳಿಸಿದ್ದಾರೆ.