ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಪ್ರಗತಿ ಹಬ್ಬ -2022

0

ವಿಜ್ಞಾನ ಅನ್ವೇಷನಾ ಪ್ರದರ್ಶನ, ಆಹಾರ ಹಬ್ಬ, ತರಕಾರಿ ಸಂತೆ, ಸಾಂಸ್ಕೃತಿಕ ಕಾರ್ಯಕ್ರಮ

ಪ್ರಗತಿಯಿಂದ ಬಂದವರು ಪ್ರಗತಿಯನ್ನು ಕಾಣುತ್ತಾರೆ – ಡಾ.ಯು.ಪಿ.ಶಿವಾನಂದ
ಸೋಲಿಗೆ ಸವಾಲನ್ನು ನೀಡುವ ಶಿಕ್ಷಣ ಸಂಸ್ಥೆ – ನಾರಾಯಣ ರೈ ಕುಕ್ಕುವಳ್ಳಿ
ಮೊದಲ ಅವಕಾಶದಲ್ಲಿ ವಂಚಿತರಾದರೆ ಜೀವನ ಕೊನೆಗೊಳ್ಳುವುದಿಲ್ಲ – ಸೀತಾರಾಮ ಕೇವಳ
ಪ್ರಗತಿ ವಿದ್ಯಾಸಂಸ್ಥೆ ವಿಸ್ತಾರವಾಗಿದೆ – ಪಿ.ವಿ ಗೋಕುಲ್‌ನಾಥ್

ಪುತ್ತೂರು: ಪುತ್ತುರು ಧರ್ಮಸ್ಥಳ ಕಟ್ಟಡದಲ್ಲಿರುವ ಪ್ರಗತಿ ಸ್ಟಡಿ ಸೆಂಟರ್‌ನ ವಾರ್ಷಿಕೋತ್ಸವ ‘ಪ್ರಗತಿ ಹಬ್ಬ-2022’ ಡಿ.12 ರಂದು ನಡೆಯಿತು. ವಿಜ್ಞಾನ ಅನ್ವೇಷನಾ ಪ್ರದರ್ಶನ, ಆಹಾರ ಹಬ್ಬ, ತರಕಾರಿ ಸಂತೆಯ ಮೂಲಕ ವಾರ್ಷಿಕೋತ್ಸವ ವಿಶೇಷತೆಯನ್ನು ಕಂಡಿದೆ.


ಬೆಳಿಗ್ಗೆ ವಿಜ್ಞಾನ ಅನ್ವೇಷನಾ ಪ್ರದರ್ಶನ ಮತ್ತು ಆಹಾರ ಹಬ್ಬ ಹಾಗು ತರಕಾರಿ ಸಂತೆಯ ಕಾರ್ಯಕ್ರಮಕ್ಕೆ ನಿವೃತ್ತ ಶಿಕ್ಷಕ ನಾರಾಯಣ ಕುಕ್ಕುವಳ್ಳಿ ಚಾಲನೆ ನೀಡಿದರು. ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮವನ್ನು ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ.ಶಿವಾನಂದ ಅವರು ಉದ್ಘಾಟಿಸಿದರು.

ಪ್ರಗತಿಯಿಂದ ಬಂದವರು ಪ್ರಗತಿಯನ್ನು ಕಾಣುತ್ತಾರೆ:
ಕಾರ್ಯಕ್ರಮ ಉದ್ಘಾಟಿಸಿದ ಸುದ್ದಿ ಬಿಡುಗಡೆ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ.ಶಿವಾನಂದ ಅವರು ಮಾತನಾಡಿ ರಾಜಕೀಯ, ಅಧಿಕಾರಿಗಳ ಕ್ಷೇತ್ರದಲ್ಲಿ ಹುದ್ದೆಯಲ್ಲಿರುವಾಗ ಗೌರವ ಅದೇ ಶಿಕ್ಷಕರ ಕ್ಷೇತ್ರದಲ್ಲಿ ಹುದ್ದೆಯಿಂದ ನಿವೃತ್ತಿಯಾದರೂ ಗೌರವ ಸಿಗುತ್ತದೆ. ಹಾಗಾಗಿ ಶಿಕ್ಷಣ ಹೆಚ್ಚು ಗೌರವ ಕೊಡುವ ಕ್ಷೇತ್ರ. ಈ ನಿಟ್ಟಿನಲ್ಲಿ ಪ್ರಗತಿ ವಿದ್ಯಾಸಂಸ್ಥೆಯಿಂದ ಬಂದವರು ಪ್ರಗತಿಯನ್ನು ಕಾಣುತ್ತಾರೆ. ಸಮಾಜದಲ್ಲಿ ಬೆರೆಯುತ್ತಾರೆ. ಒಳ್ಳೆಯ ಮನಸ್ಥಿತಿ ಉಳ್ಳವರಾಗುತ್ತಾರೆ. ಸಂಸ್ಥೆಯ ವಿದ್ಯಾರ್ಥಿಗಳಿಗೆ ಸಾಧಿಸಿ ತೋರಿಸುವ ಛಲ, ಶಕ್ತಿ ಉಂಟಾಗಲಿ ಎಂದು ಹಾರೈಸಿದರು.


ಸೋಲಿಗೆ ಸವಾಲನ್ನು ನೀಡುವ ಶಿಕ್ಷಣ ಸಂಸ್ಥೆ:
ನಿವೃತ್ತ ಶಿಕ್ಷಕರಾಗಿರುವ ಮಧು ಪ್ರಪಂಚದ ಮುಖ್ಯಸಂಪಾದಕ ನಾರಾಯಣ ರೈ ಕುಕ್ಕುವಳ್ಳಿ ಅವರು ಮಾತನಾಡಿ ಪುತ್ತೂರು ಸೋಲಿಗೆ ಸವಾಲನ್ನು ನೀಡುವ ತಾಲೂಕು. ಶಿಕ್ಷಣದಲ್ಲೂ ಹಿಂಜರಿಕೆಯಾದಾಗ ಶಿಕ್ಷಣ ಮಹತ್ವವನ್ನು ಸಾರುವಂತಹ ಶಿಕ್ಷಣ ಕೊಡುವ ಆದರ್ಶದ ಹಿಂದೆ ಇರುವುದು ಪ್ರಗತಿ ವಿದ್ಯಾಸಂಸ್ಥೆ. ಈ ಸಂಸ್ಥೆ ವಿದ್ಯಾರ್ಥಿಗಳ ಬದುಕಿನಲ್ಲಿ ತಿರುವನ್ನು ಕೊಡುತ್ತದೆ. ವಿದ್ಯಾಭ್ಯಾಸದಲ್ಲಿ ಸೋಲನ್ನು ಕಂಡರೂ ಅದನ್ನು ಸವಾಲಾಗಿ ಸ್ವೀಕರಿಸಿ ಬದುಕನ್ನು ಕಟ್ಟಿಕೊಳ್ಳುವ ಶಿಕ್ಷಣವನ್ನು ಸಂಸ್ಥೆಯ ಅಧ್ಯಕ್ಷ ಗೋಕುಲನಾಥ್ ದಂಪತಿ ನೀಡುತ್ತಿದ್ದಾರೆ ಎಂದರು.

ಮೊದಲ ಅವಕಾಶದಲ್ಲಿ ವಂಚಿತರಾದರೆ ಜೀವನ ಕೊನೆಗೊಳ್ಳುವುದಿಲ್ಲ:
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ಅವರು ಮಾತನಾಡಿ ಏಕಾಗ್ರತೆ ಇಲ್ಲದಾಗ ಜೀವನದಲ್ಲಿ ಸೋಲು ಕಾಣುತ್ತದೆ. ಆದರೆ ಮೊದಲ ಅವಕಾಶದಲ್ಲಿ ವಂಚಿತರಾದರೆ ಜೀವನ ಕೊನೆಗೊಳ್ಳುವುದಿಲ್ಲ. ಅವಕಾಶಗಳು ಅನೇಕ ಇದೆ. ಆದರೆ ಸೋತವರೊಂದಿಗೆ ನಾವಿದ್ದೇವೆ ಎಂಬವರು ಬಹಳ ವಿರಳ. ಅಂತವರಲ್ಲಿ ಸೋತವರೊಂದಿಗೆ ನಾವಿದ್ದೇವೆಂಬ ಸಂದೇಶವನ್ನು ಪ್ರಗತಿ ವಿದ್ಯಾಸಂಸ್ಥೆ ಕೊಟ್ಟಿದೆ. ನಿಮ್ಮನ್ನು ಪರಿಪೂರ್ಣ ಮನುಷ್ಯನನ್ನಾಗಿ ಪ್ರಗತಿ ಮಾಡುತ್ತಿರುವ ಕೆಲಸ ಮುಖ್ಯ. ಎಲ್ಲರ ಪರಿಶ್ರಮದಲ್ಲೂ ನೀವು ನಿಮ್ಮನ್ನು ಕಾಣಬೇಕು. ಆಗ ಅಭಿವೃದ್ದಿಯ ಕಡೆ ಹೋಗಲು ಸಾಧ್ಯ ಎಂದರು.


ಪ್ರಗತಿ ವಿದ್ಯಾಸಂಸ್ಥೆ ವಿಸ್ತಾರವಾಗಿದೆ:
ಅಧ್ಯಕ್ಷತೆ ವಹಿಸಿದ್ದ ಪ್ರಗತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಪಿ.ವಿ ಗೋಕುಲ್‌ನಾಥ್ ಅವರು ಮಾತನಾಡಿ ಹರಿಯುವ ನೀರಿನಂತೆ ಪ್ರಗತಿ ವಿದ್ಯಾಸಂಸ್ಥೆ ವಿಸ್ತಾರವಾಗಿ ಬೆಳೆದಿದೆ. ಯಾಕೆಂದರೆ ಜೀವನದಲ್ಲಿ ಎಡವಿದವರು, ಸೋಲು ಕಂಡವರು ಸಮಾಜದ ಮುಖ್ಯವಾಹಿನಿಂದ ಹೊರಗೆ ಹೋಗಿರುತ್ತಾರೆ. ಅಂತಹ ಸಂದರ್ಭದಲ್ಲಿ ಅವರನ್ನು ಮುಖ್ಯವಾಹಿನಿಗೆ ತರಲು ಪ್ರಾರಂಭದಲ್ಲಿ ಅವರಿಗೆ ಧೈರ್ಯ ತುಂಬಬೇಕು. ಈ ಧೈರ್ಯದ ಕೆಲಸವನ್ನು ಪ್ರಗತಿ ಮಾಡುತ್ತಿದೆ. ಪ್ರತಿ ಭಾರಿ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಉತ್ತಮ ಅಂಕ ತರುತ್ತಾರೆ. ಈ ಭಾರಿಯೂ ಶೇ.100 ಅಂಕ ಗಳಿಸುವ ಗುರಿ ಹೊಂದಿದ್ದೇವೆ ಎಂದರು.

ಶೈಕ್ಷಣಿಕ ಕ್ಷೇತ್ರದ ಸಾಧಕರಿಗೆ ಪ್ರಮಾಣ ಪತ್ರ:
ಸಂಸ್ಥೆಯಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳಿಗೆ ಗಣ್ಯರ ಮೂಲಕ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು. ವಿದ್ಯಾರ್ಥಿ ಮೊಹಮ್ಮದ್ ಸ್ವಾಗತಿಸಿದರು. ಚಂದನ್ ವಂದಿಸಿದರು. ವಿವೇಕ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಲಂಚ ಭ್ರಷ್ಟಾಚಾರದ ವಿರುದ್ಧ ಘೋಷಣೆ, ಪ್ರತಿಜ್ಞೆ ಸ್ವೀಕಾರ
ಸುದ್ದಿ ಜನಾಂದೋಲನ ವೇದಿಕೆಯ ಮೂಲಕ ನಡೆಯುತ್ತಿರುವ ಲಂಚ ಭ್ರಷ್ಟಾಚಾರ ವಿರೋಧಿ ಆಂದೋಲನದ ಬಗ್ಗೆ ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ಘೋಷಣೆ ಕೂಗಿದರು. ಈ ಕುರಿತು ಸಭೆಯಲ್ಲಿ ಪ್ರತಿಜ್ಞೆ ಸ್ವೀಕರಿಸಲಾಯಿತು.

LEAVE A REPLY

Please enter your comment!
Please enter your name here