ಪುತ್ತೂರು: ವಿಶ್ವಕರ್ಮ ಯುವ ಸಮಾಜದ ವತಿಯಿಂದ ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ಜನವರಿ ೮ರಂದು ನಡೆಯಲಿರುವ ವಿಶ್ವಕರ್ಮ ಸಮಾಜದ ವಟುಗಳ 8 ನೇ ಬಾರಿಯ ಉಚಿತ ಸಾಮೂಹಿಕ ಬ್ರಹ್ಮೋಪದೇಶ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯ ಬಿಡುಗಡೆ ಡಿ. 11 ರಂದು ನಡೆಯಿತು. ಸಮಾಜದ ಹಿರಿಯರು, ಕೂಡುವಳಿಕೆ ಮೊಕ್ತೇಸರ ಕೆ. ಕೃಷ್ಣ ಆಚಾರ್ಯ ದೀಪ ಬೆಳಗಿಸಿ, ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು.
ವಿಶ್ವಕರ್ಮ ಯುವ ಸಮಾಜದ ಅಧ್ಯಕ್ಷ ಪ್ರಕಾಶ ಆಚಾರ್ಯ ಕೆ. ಮಾತನಾಡಿ, ಜ. 8 ರಂದು ವಿಶ್ವಕರ್ಮ ಯುವ ಸಮಾಜ ಪುತ್ತೂರು, ವಿಶ್ವಬ್ರಾಹ್ಮಣ ಸೇವಾ ಸಂಘ ಪುತ್ತೂರು ಮತ್ತು ವಿಶ್ವಕರ್ಮ ಮಹಿಳಾ ಮಂಡಲಿ ಪುತ್ತೂರು ಇದರ ಸಹಕಾರದೊಂದಿಗೆ ವಿಶ್ವಕರ್ಮ ಸಮಾಜದ ವಟುಗಳಿಗೆ ೮ನೇ ಬಾರಿಗೆ ಉಚಿತ ಸಾಮೂಹಿಕ ಬ್ರಹ್ಮೋಪದೇಶ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.
ಹಾಸನ ಅರೆಮಾದನಹಳ್ಳಿ ಶ್ರೀ ವಿಶ್ವಕರ್ಮ ಪೀಠದ ಜಗದ್ಗುರು ಅನಂತಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಮಹಾಸ್ವಾಮಿಗಳು ಆಶೀರ್ವಚನ ನೀಡಲಿದ್ದಾರೆ. ಬಂಟ್ವಾಳ ವಿಶ್ವಕರ್ಮ ಸೇವಾ ಸಂಘದ ಅಧ್ಯಕ್ಷ ಸುಧಾಕರ ಆಚಾರ್ಯ ಮಾರ್ನಬೈಲು ಹಾಗೂ ಪುತ್ತೂರಿನ ನಿವೃತ್ತ ಉಪಖಜಾನಾಧಿಕಾರಿ ವಿಠಲಾಚಾರಿ ಬಿ. ಮುಖ್ಯಅತಿಥಿಯಾಗಿರುವರು. ಈಗಾಗಲೇ ವಟುಗಳ ನೋಂದಾವಣಿ ಕಾರ್ಯ ಆರಂಭವಾಗಿದ್ದು ವಿವಿಧ ಜಿಲ್ಲೆಗಳಿಂದ ಸುಮಾರು 25 ಕ್ಕೂ ಹೆಚ್ಚು ವಟುಗಳು ಭಾಗವಹಿಸುವ ನೀರಿಕ್ಷೆಯಿದೆ ಎಂದರು.
ವಿಶ್ವಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಎಸ್.ಎನ್. ಜಗದೀಶ ಆಚಾರ್ಯ ಮಾತನಾಡಿ, ಉಚಿತ ಸಾಮೂಹಿಕ ಬ್ರಹ್ಮೋಪದೇಶ ಕಾರ್ಯಕ್ರಮ ಯಶಸ್ವಿಯಾಗುವಂತೆ ಶುಭಹಾರೈಸಿದರು. ವಿಶ್ವಬ್ರಾಹ್ಮಣ ಸೇವಾ ಸಂಘದ ಕಾರ್ಯದರ್ಶಿ ಶ್ರೀಧರ ಆಚಾರ್ಯ ಕೊಕ್ಕಡ ಅವರು ವಿವಿಧ ಸಮಿತಿಗಳ ರಚನೆ ಹಾಗೂ ಜವಾಬ್ದಾರಿಗಳ ಹಂಚಿಕೆಯ ಬಗ್ಗೆ ತಿಳಿಸಿದರು.
ಸಲಹಾ ಸಮಿತಿ ಸದಸ್ಯರಾದ ಭುಜಂಗ ಆಚಾರ್ಯ, ರಮೇಶ ಆಚಾರ್ಯ ಮಾಮೇಶ್ವರ, ಮಹಿಳಾ ಮಂಡಳಿ ಕಾರ್ಯದರ್ಶಿ ಭವ್ಯಶ್ರೀ ವಾದಿರಾಜ್, ಉಷಾ ಸದಾನಂದ ಆಚಾರ್ಯ ಉಪಸ್ಥಿತರಿದ್ದರು. ಕಾರ್ಯದರ್ಶಿ ಮಹೇಶ್ ಆಚಾರ್ಯ ವರದಿ ಮಂಡಿಸಿದರು. ಸಂಘಟನಾ ಕಾರ್ಯದರ್ಶಿ ಆನಂದ ಆಚಾರ್ಯ ಪ್ರಾರ್ಥಿಸಿ, ಖಜಾಂಚಿ ವಸಂತ ಆಚಾರ್ಯ ಬಿ. ವಂದಿಸಿದರು.