ಆಲಂಕಾರು: ಭೈರವೈಕ್ಯ ಶ್ರೀ ಡಾ| ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ 78ನೇ ಜಯಂತ್ಯೋತ್ಸವದ ಪೂರ್ವಭಾವಿ ಸಭೆ

0

ಒಕ್ಕಲಿಗರ ವಿರಾಟ ಸ್ವರೂಪ ಪ್ರದರ್ಶನಗೊಳ್ಳಬೇಕು; ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿ

ರಾಮಕುಂಜ: ಜ.22ರಂದು ಪುತ್ತೂರಿನಲ್ಲಿ ನಡೆಯಲಿರುವ ಆದಿಚುಂಚನಗಿರಿ ಮಠದ ಭೈರವೈಕ್ಯ ಜಗದ್ಗುರು ಶ್ರೀ ಡಾ| ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ 78ನೇ ಜಯಂತ್ಯೋತ್ಸವದ ಕುರಿತ ಆಲಂಕಾರು ವಲಯದ ಪೂರ್ವಭಾವಿ ಸಭೆ ಡಿ.12ರಂದು ಸಂಜೆ ಆಲಂಕಾರು ಶ್ರೀ ಭಾರತಿ ಶಾಲೆಯ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಕುರಿತು ಮಾತನಾಡಿದ ಶ್ರೀ ಕ್ಷೇತ್ರ ಆದಿಚುಂಚನಗಿರಿಯ ಮಂಗಳೂರು ಶಾಖಾ ಮಠದ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿಯವರು, 2 ಸಾವಿರ ವರ್ಷಗಳ ಇತಿಹಾಸಹೊಂದಿರುವ ಆದಿಚುಂಚನಗಿರಿ ಮಠದ 71ನೇ ಪೀಠಾಧಿಪತಿಯಾಗಿದ್ದ ಶ್ರೀ ಡಾ| ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ ಆದಿಚುಂಚನಗಿರಿಯಲ್ಲಿ ಪವಾಡವೇ ನಡೆದಿದೆ. ಲಕ್ಷಾಂತರ ಮಂದಿಗೆ ವಿದ್ಯಾದಾನ ಮಾಡಲಾಗಿದೆ. ಮಠವು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಗೋ ಸಂರಕ್ಷಣೆ ಮೂಲಕ ವಿಶ್ವದ ಭೂಪಟದಲ್ಲಿ ಗುರುತಿಸುವಂತೆ ಆಗಿದೆ. ಅತ್ಯಧ್ಬುತ ಸಾಧನೆ ಮಾಡಿರುವ ಭೈರವೈಕ್ಯ ಶ್ರೀ ಡಾ| ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ 78ನೇ ಜಯಂತ್ಯೋತ್ಸವ ಪುತ್ತೂರಿನಲ್ಲಿ ನಡೆಯುತ್ತಿದೆ. ಒಕ್ಕಲಿಗ ಸಮಾಜದ ಪ್ರತಿ ಮನೆಯವರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಒಕ್ಕಲಿಗರ ವಿರಾಟ ಸ್ವರೂಪವನ್ನು ರಾಜ್ಯಕ್ಕೆ ತೋರಿಸುವ ಕೆಲಸ ಮಾಡಬೇಕು. ಇಲ್ಲಿನ ಜನರ ಸಂಸ್ಕೃತಿ, ಆಚಾರ, ವಿಚಾರ, ಶಿಸ್ತುಬದ್ಧ ಜೀವನ ಪ್ರದರ್ಶನಗೊಳ್ಳಬೇಕೆಂದು ಹೇಳಿದರು. ಆದಿಚುಂಚನಗಿರಿ ಮಠದ ಈಗಿನ ಪೀಠಾಧಿಪತಿ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರ ಬೆಳ್ಳಿತುಲಾಭಾರ, ಮಠದ ವತಿಯಿಂದ ಪೆರಿಯಡ್ಕದಲ್ಲಿ ನಡೆಯುತ್ತಿರುವ ಸಿಬಿಎಸ್‌ಇ ವಿದ್ಯಾಸಂಸ್ಥೆಯ ಕಟ್ಟಡಕ್ಕೂ ಶಿಲಾನ್ಯಾಸ ನೆರವೇರಲಿದೆ. ಈ ಧರ್ಮಜಾಗೃತಿ ಕಾರ್ಯದಲ್ಲಿ ಸಮಾಜಬಾಂಧವರೆಲ್ಲರೂ ಕೈಜೋಡಿಸಬೇಕೆಂದು ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿ ಹೇಳಿದರು.

ಪುತ್ತೂರು ಶಾಸಕ ಸಂಜೀವ ಮಠಂದೂರುರವರು ಮಾತನಾಡಿ, ಕೆಂಪೇಗೌಡ, ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಅನಾವರಣಗೊಳಿಸುವ ಮೂಲಕ ಒಕ್ಕಲಿಗ ಸಮಾಜದಿಂದ ಇತಿಹಾಸದ ನೆನಪು ಮಾಡುವ ಕೆಲಸ ಆಗಿದೆ. ಈಗ ಭೈರವೈಕ್ಯ ಜಗದ್ಗುರು ಶ್ರೀ ಡಾ| ಬಾಲಗಂಗಾಧರನಾಥ ಸ್ವಾಮೀಜಿಯವರ 78ನೇ ಜಯಂತ್ಯೋತ್ಸವವನ್ನು ಪುತ್ತೂರಿನಲ್ಲಿ ಆಚರಿಸುವ ಅವಕಾಶ ಒದಗಿಬಂದಿದೆ. ಈ ಕಾರ್ಯಕ್ರಮದಲ್ಲಿ ಒಕ್ಕಲಿಗರ ಶಕ್ತಿಪ್ರದರ್ಶನದ ಮೂಲಕ ರಾಜ್ಯಕ್ಕೆ ಸಂದೇಶ ಕೊಡುವ ಕೆಲಸ ಆಗಬೇಕೆಂದು ಹೇಳಿದರು. ಸ್ವಾಗತ ಸಮಿತಿ ಉಪಾಧ್ಯಕ್ಷ, ಕಡಬ ಒಕ್ಕಲಿಗರ ಸಂಘದ ಅಧ್ಯಕ್ಷರೂ ಆದ ಸುರೇಶ್ ಬೈಲು, ಸ್ವಾಗತ ಸಮಿತಿ ಸಂಚಾಲಕ ಪ್ರವೀಣ್ ಕುಂಟ್ಯಾನರವರು ಸಂದರ್ಭೋಚಿತವಾಗಿ ಮಾತನಾಡಿದರು. ಸ್ವಾಗತ ಸಮಿತಿ ಉಪಾಧ್ಯಕ್ಷರೂ, ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷರೂ ಆದ ವಿಶ್ವನಾಥ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುತ್ತೂರು ತಾಲೂಕು ಯುವ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ನಾಗೇಶ್ ಕೆಡೆಂಜಿ, ಸ್ವಾಗತ ಸಮಿತಿ ಸಂಚಾಲಕ ಕಿರಣ್ ಬುಡ್ಲೇಗುತ್ತು ಮಂಗಳೂರು, ಆಲಂಕಾರು ವಲಯ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರಾಮಣ್ಣ ಗೌಡ ಸುರುಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ನಿರ್ದೇಶಕಿ ತೇಜಸ್ವಿನಿಶೇಖರ ಗೌಡ ಸ್ವಾಗತಿಸಿ, ಚಕ್ರಪಾಣಿ ಬಾಕಿಲ ವಂದಿಸಿದರು. ಆಲಂಕಾರು ವಲಯ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರಾಮಣ್ಣ ಗೌಡ ದೋಳ ಕಾರ್ಯಕ್ರಮ ನಿರೂಪಿಸಿದರು. ಇಂಡೋ ಟಿಬೆಟಿಯನ್ ಬೋರ್ಡರ್ ಪೊಲೀಸ್ ಪಡೆಗೆ ಆಯ್ಕೆಗೊಂಡಿರುವ ರಾಮಕುಂಜ ಹಲ್ಯಾರ ನಿವಾಸಿ ಗಿರೀಶ್ ಪಿ.ಹಾಗೂ ಜ್ಯೋತಿ ದಂಪತಿಯ ಪುತ್ರಿ ಅನುಪ್ರಿಯಾರನ್ನು ಸ್ವಾಮೀಜಿ ಗೌರವಿಸಿದರು. 78ನೇ ಜಯಂತ್ಯೋತ್ಸವದ ನಿವೇದನಾ ಪತ್ರವನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.

LEAVE A REPLY

Please enter your comment!
Please enter your name here