ಆನೆಗಳ ಹಾವಳಿಗೆ ತಿಂಗಳೊಳಗೆ ಶಾಶ್ವತ ಪರಿಹಾರ ಮಾಡದಿದ್ದರೆ ಅರಣ್ಯ ಇಲಾಖೆಯ ವಿರುದ್ದ ಪ್ರತಿಭಟನೆಗೆ ನಿರ್ಧಾರ
ಸಂತ್ರಸ್ಥರ ಹೋರಾಟ ಸಮಿತಿ ರಚನೆ
ಕಡಬ: ಐತ್ತೂರು ಗ್ರಾಮದ 1ನೇ ವಾರ್ಡಿಗೆ ಒಳಪಡುವ ವ್ಯಾಪ್ತಿಯಲ್ಲಿ ಆನೆಗಳ ಹಾವಳಿ ನಿರಂತರವಾಗಿದ್ದು ಕೃಷಿಗಳನ್ನು ನಾಶಗೊಳಿಸಿದೆ ಇದರಿಂದ ಬೇಸತ್ತ ಗ್ರಾಮಸ್ಥರು ಆನೆಗಳ ಹಾವಳಿಯನ್ನು ತಡೆಗಟ್ಟದಿದ್ದರೆ ಅರಣ್ಯ ಇಲಾಖೆಯ ವಿರುದ್ದ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.
ಆನೆಗಳ ಹಾವಳಿಯಿಂದ ಬೇಸತ್ತಿರುವ ಐತ್ತೂರು ಗ್ರಾಮದ 1ನೇ ವಾರ್ಡಿನ ಆಜನ, ಆರಡ್ಕ, ಕೇನ್ಯ, ಕೋಕಳ, ಸುಳ್ಯ, ಗೇರ್ತಿಲ, ಕೈಕುರೆ, ಮಲೆಕಾಯಿ, ಬೆತ್ತೋಡಿ, ಮಾಳ, ಎಡೆಂಜೆ, ಅಮುನಿಪಾಲ್, ಅತ್ಯಡ್ಕ, ಕುದುರೆಡ್ಕ, ಕೊಡಂದೂರು, ಮೇಪತ್‌ಪಾಲ್ ಎಡೆಚ್ಚಾರು ಬೈಲುಗಳಲ್ಲಿ ನಿವಾಸಿಗಳು ಸುಳ್ಯ ತಮ್ಮಯ್ಯ ಗೌಡ ಅವರ ಮನೆಯಲ್ಲಿ ಡಿ.12ರಂದು ರಾತ್ರಿ ಸಭೆ ಸೇರಿದ್ದು, ಈ ಸಂದರ್ಭದಲ್ಲಿ ಹೋರಾಟ ಸಮಿತಿಯೊಂದನ್ನು ರಚಿಸಿಕೊಂಡು ಒಂದು ತಿಂಗಳೊಳಗೆ ಶಾಶ್ವತ ಪರಿಹಾರ ಸಿಗದಿದ್ದರೆ ವಲಯಾರಣ್ಯ ಕಛೇರಿ ಎದುರು ಪ್ರತಿಭಟನೆ ಮಾಡುವುದಾಗಿ ಮತ್ತೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ತಮ್ಮಯ್ಯ ಗೌಡ ಅವರು, ಕಳೆದ ಐದು ವರ್ಷಗಳಿಂದ ಕಾಡಾನೆಗಳು ದಾಳಿ ಮಾಡಿ ನಮ್ಮ ಕೃಷಿಗಳನ್ನು ನಾಶ ಮಾಡಿದ್ದು ಅಪಾರ ನಷ್ಟವುಂಟಾಗಿದೆ, ಪ್ರಸ್ತುತ ದಿನಗಳಲ್ಲಿ ದಿನಂಪ್ರತಿ ಅಡಿಕೆ, ತೆಂಗು, ಬಾಳೆ ಹಾಗೂ ಇನ್ನಿತರ ವಸ್ತುಗಳನ್ನು ನಾಶ ಮಾಡುತ್ತಿವೆ. ಅಲ್ಲದೆ ತೋಟದಲ್ಲಿ ಅಳವಡಿಸಿದ ನೀರಾವರಿ ಸಂಬಂಧಿತ ಸಲಕರಣೆಗಳನ್ನು ಆನೆಗಳು ನಾಶ ಮಾಡಿವೆ. ಈಗಾಗಲೇ ರಾತ್ರಿ, ಬೆಳಿಗ್ಗೆ ವೇಳೆಯಲ್ಲಿ ಆನೆಗಳು ರಸ್ತೆಯಲ್ಲಿ ಕಾಣಸಿಗುತ್ತದೆ, ಇದರಿಂದ ವಾಹನ ಸವಾರರಿಗೂ ಸಂಚರಿಸಲು ತೊಂದರೆಯಾಗಿದೆ. ರಾತ್ರಿ ಮನೆಯಿಂದ ಹೊರಬಾರದ ಸ್ಥಿತಿ ನಿರ್ಮಾಣವಾಗಿದೆ. ಮುಂಜಾನೆ ವೇಳೆ ರಬ್ಬರ್ ಟ್ಯಾಪಿಂಗ್ ಮಾಡುವವರಿಗೂ ತೊಂದರೆಯಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅರಣ್ಯ ಇಲಾಖಾ ಸಿಬ್ಬಂದಿಗಳಿಗೆ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ ಎಂದು ಹೇಳಿದರು.
ಬಳಿಕ ಈ ಬಗ್ಗೆ ಚರ್ಚಿಸಿ ಸಂತ್ರಸ್ಥರ ಹೋರಾಟ ಸಮಿತಿಯೊಂದನ್ನು ರಚಿಸಲಾಯಿತು. ಅಧ್ಯಕ್ಷರಾಗಿ ನಾರಾಯಣ ಶೆಟ್ಟಿ ಅತ್ಯಡ್ಕ, ಕಾರ್ಯದರ್ಶಿಯಾಗಿ ತಮ್ಮಯ್ಯ ಗೌಡ ಸುಳ್ಯ, ಸಂಚಾಲಕರಾಗಿ ರೋಹಿತ್ ಸುಳ್ಯ, ಸದಸ್ಯರುಗಳಾಗಿ ಮೇದಪ್ಪ ಗೌಡ ಮಾಳ, ಪೂವಪ್ಪ ಗೌಡ ಮಲೆಕಾ, ಆಂತೋನಿ ಮಲೆಕಾ,ಸಿ.ಪಿ. ಜಾನ್ ಬೆತ್ತೋಡಿ, ಫಿಲಪ್ ಕೆ.ಟಿ, ಎಡೆಚಾರು, ಶೇಷಪ್ಪ ಗೌಡ ಮೆಪತಪಾಲು, ಭರತ ಅಮುನಿಪಾಲ್, ಚಂದನ್ ಕೆ.ಕೆ. ಕೈಕುರೆ, ಜನಾರ್ದನ ಕುದುರೆಡ್ಕ,, ಬಾಬು ನಾಕ್ ಕೋಡಂದೂರು,ವಿನೋದ್ ಗೇರ್ತಿಲ, ಪೂವಪ್ಪ ಗೌಡ ಸುಳ್ಯ, ನಾಗೇಶ್ ಗೌಡ ಕೋಕಳ, ಪ್ರಶಾಂತ್ ರೈ ಆಜನ ಮೊದಲಾದವರನ್ನು ನೇಮಿಸಿಕೊಳ್ಳಲಾಗಿದೆ.