ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ ಪ್ರತಿಭಾ ಪುರಸ್ಕಾರ

0

ಶಿಕ್ಷಣದಲ್ಲಿ ಭಾರತೀಯ ಕೌಶಲ್ಯಗಳಿಗೆ ಒತ್ತು ನೀಡಿ-ಶ್ರೀ ವಿದ್ಯಾ ಪ್ರಸನ್ನ ಸ್ವಾಮೀಜಿ

ಕಡಬ: ಪ್ರತಿಯೊಂದು ಮಗುವಿನಲ್ಲೂ ಪ್ರತಿಭೆ ಇದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವಂತಹ ಕೆಲಸ ಶಿಕ್ಷಕರಿಂದ ಹಾಗೂ ಹೆತ್ತವರಿಂದ ಆಗಬೇಕು. ಪ್ರತಿಭೆಯ ಅನಾವರಣ ಆಗಬೇಕಾದರೆ ಸತತ ಸಾಧನೆ ಅಗತ್ಯ. ಶಿಕ್ಷಣದಲ್ಲಿ ಭಾರತೀಯ ಕೌಶಲ್ಯಗಳಿಗೆ ಹೆಚ್ಚು ಒತ್ತು ನೀಡಬೇಕು ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾ ಪ್ರಸನ್ನ ಸ್ವಾಮೀಜಿ ನುಡಿದರು.

ಅವರು ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆ ಹಾಗೂ ಶ್ರೀ ವೇದವ್ಯಾಸ ವಿದ್ಯಾಲಯ ಇವುಗಳ ಜಂಟಿ ಆಶ್ರಯದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಬಾಲ್ಯದಿಂದಲೇ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡಿ ಬೆಳೆಸಿದಾಗ ಶೈಕ್ಷಣಿಕವಾಗಿ ಕೂಡ ಮಕ್ಕಳ ಏಳಿಗೆಯನ್ನು ಕಾಣಬಹುದು ಎಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಾರವಾರದ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾಟ ವೆಂಕಟೇಶ್ ಮಂಜಳಗಿರಿಯವರು ಮಾತನಾಡಿ, ತಂದೆ, ತಾಯಿ, ಗುರು, ಹಿರಿಯರಿಗೆ ಗೌರವ ಕೊಡುವ ಮನೋಭಾವವನ್ನು ಬಾಲ್ಯದಿಂದಲೇ ಬೆಳೆಸಿಕೊಳ್ಳಬೇಕು ಆಗ ಮಾತ್ರ ಜೀವನದಲ್ಲಿ ಸಾರ್ಥಕತೆಯನ್ನು ಕಾಣಬಹುದು. ಋಷಿ, ಮುನಿಗಳ ಸನಾತನ ಪರಂಪರೆ ಇರುವ ಈ ದೇಶದಲ್ಲಿ ಅವರು ಹಾಕಿಕೊಟ್ಟ ಹಾದಿಯಲ್ಲಿ ಬದುಕಿದಾಗ ಯಶಸ್ಸು ಸುಲಭ ಸಾಧ್ಯ. ಸಾಧಕರ ಸಾಧನೆಯನ್ನು ಅರಿತುಕೊಂಡು ಪ್ರಯತ್ನ ಪಟ್ಟಾಗ ಕೀರ್ತಿಯ ಮೆಟ್ಟಲನ್ನು ಏರಬಹುದು. ಶಿಕ್ಷಣದಲ್ಲಿ ದೈವತ್ವವಿದೆ ಛಲದಿಂದ ಮುನ್ನಡೆದಾಗ ಶೈಕ್ಷಣಿಕವಾಗಿ ಪ್ರಗತಿಯನ್ನು ಕಾಣಬಹುದು ಎಂದರು.

ಆಡಳಿತ ಮಂಡಳಿಯ ಕಾರ್ಯದರ್ಶಿ ಕೃಷ್ಣಶರ್ಮ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಗಿರೀಶ್ ಕಳಿಗೆ, ಶ್ರೀ ವೇದವ್ಯಾಸ ವಿದ್ಯಾಲಯದ ಎಸ್.ಡಿ.ಎಂ.ಸಿ ಅಧ್ಯಕ್ಷ ಕೇಶವ ಗೌಡ, ಪ್ರಾಕ್ತನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ಬೈಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರೌಢಶಾಲಾ ಮುಖ್ಯ ಗುರುಗಳಾದ ಗಣಪತಿ ಭಟ್ ಪಿ ಹಾಗೂ ವೇದವ್ಯಾಸ ವಿದ್ಯಾಲಯದ ಮುಖ್ಯ ಗುರುಗಳಾದ ಪ್ರಶಾಂತ್ ಇವರು ಈ ಶೈಕ್ಷಣಿಕ ವರ್ಷದ ವರದಿಯನ್ನು ವಾಚಿಸಿದರು. ಈ ಸಂದರ್ಭದಲ್ಲಿ ಶೈಕ್ಷಣಿಕವಾಗಿ ಹಾಗೂ ಕ್ರೀಡಾ ಸಾಧನೆ ಮಾಡಿದ ವಿದ್ಯಾರ್ಥಿಗಳಿಗಾಗಿ ನೀಡುವ ದತ್ತಿ ನಿಧಿ ಬಹುಮಾನಗಳ ವಿವರವನ್ನು ಆಧ್ಯಾಪಕರಾದ ಯತೀಶ್, ಕ್ರೀಡಾ ಬಹುಮಾನಗಳ ವಿವರವನ್ನು ದೈಹಿಕ ಶಿಕ್ಷಣ ಶಿಕ್ಷಕ ವಿನಯ, ಸಾಂಸ್ಕೃತಿಕ ಸ್ಪರ್ಧೆಗಳ ಬಹುಮಾನಗಳ ವಿವರವನ್ನು ದಿನೇಶ್ ಕುಂದರ್ ವಾಚಿಸಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಶ್ರೀ ವೇದವ್ಯಾಸ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಂತಹ ಸ್ಪರ್ಧೆಗಳಲ್ಲಿ ವಿಜೇತರಾದವರ ವಿವರವನ್ನು ಅಧ್ಯಾಪಕರಾದ ಕಾರ್ತಿಕ್ ಹಾಗೂ ಅಧ್ಯಾಪಿಕೆ ಸತ್ಯಶೀಲ ವಾಚಿಸಿದರು. ಪ್ರವೀಣ್ ಸ್ವಾಗತಿಸಿದರು. ಗುರುಪ್ರಸಾದ್ ವಂದಿಸಿದರು. ಸತ್ಯಶಂಕರ ಭಟ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here