ಪುತ್ತೂರು: ಮಂಗಳೂರಿನ ಸಹಕಾರಿ ಸಂಸ್ಥೆ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ ವತಿಯಿಂದ 2021 -22 ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ ಅತ್ಯುನ್ನತ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳಿಗೆ ಸ್ಥಾಪಕಾಧ್ಯಕ್ಷ ಕೆ.ಬಿ. ಜಯಪಾಲ ಶೆಟ್ಟಿ ಸ್ಮರಣಾರ್ಥ ಪ್ರತಿಭಾಪುರಸ್ಕಾರ ನೀಡಿ ಗೌರವಿಸಲಾಯಿತು.
ಮಂಗಳೂರಿನ ಮಕ್ಕಳ ತಜ್ಞ ಹಾಗೂ ಶ್ರೀರಾಮಕೃಷ್ಣ ವಿದ್ಯಾ ಸಂಸ್ಥೆಯ ಸಂಚಾಲಕ ಡಾ. ಬಿ ಸಂಜೀವರೈಯವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇಂದು ಮಕ್ಕಳ ವಿದ್ಯಾಭ್ಯಾಸಕ್ಕೆ ಪೋಷಕರು ತುಂಬಾ ಹಣ ವೆಚ್ಚ ಮಾಡುತ್ತಾರೆ. ಸಂಘವು ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಈ ಕೆಲಸಕ್ಕೆ ಅಭಿನಂದನೆ ತಿಳಿಸಿದರು. ಸಹಕಾರಿ ಸಂಸ್ಥೆಗಳು ಆರೋಗ್ಯ ರಕ್ಷಣಾ ಸೇವೆಯನ್ನು ಅನುಷ್ಠಾನಗೊಳಿಸಿದೆ. ಈ ಸೇವೆಯ ಲಾಭವನ್ನು ಸಂಘದ ಸದಸ್ಯ ಗ್ರಾಹಕರು ಸದುಪಯೋಗಪಡಿಸಬೇಕೆಂದು ತಿಳಿಸಿದರು.
ಸಂಘದ ನಿರ್ದೇಶಕ ರಾಮಯ ಶೆಟ್ಟಿ ಮತ್ತು ಪಿ.ಬಿ. ದಿವಾಕರ ರೈ ಶುಭ ಹಾರೈಸಿದರು. ಸಂಘದ ಅಧ್ಯಕ್ಷ ಕೆ. ಜೈರಾಜ್ ಬಿ. ರೈ ಪ್ರಾಸ್ತಾವಿಕ ಮಾತನಾಡಿ ಸಂಘವು ಕಳೆದ 5 ವರ್ಷಗಳಿಂದ ಸಿಬ್ಬಂದಿಗಳ ಮಕ್ಕಳಿಗೆ ಸಂಘದ ಸ್ಥಾಪಕಾಧ್ಯಕ್ಷ ಕೆ.ಬಿ. ಜಯಪಾಲ ಶೆಟ್ಟಿಯವರ ಸ್ಮರಣಾರ್ಥ ನೀಡಲಾಗುತ್ತಿದೆ. ಇದೀಗ ಅದನ್ನು ಸಂಘದ ಸದಸ್ಯರ ಮಕ್ಕಳಿಗೆ ವಿಸ್ತರಿಸಿ ಸಂಘದ ಸ್ಥಾಪಕಾಧ್ಯಕ್ಷರ ನೆನಪನ್ನು ಅಜರಾಮರವಾಗಿ ಉಳಿಸಿಕೊಳ್ಳಲು ಹಾಗೂ ಸಂಘದ ಸದಸ್ಯರು ವ್ಯವಹರಿಸುವ ಸಂಸ್ಥೆಯನ್ನು ಅವರ ಮಕ್ಕಳಿಗೆ ಪರಿಚಯಿಸುವ ನಿಟ್ಟಿನಲ್ಲಿ ಹಾಗೂ ಸಹಕಾರಿ ಸಂಸ್ಥೆಗಳು ಸಾಮಾಜಿಕ ಕಳಕಳಿಯ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದೆ ಎಂಬುದನ್ನು ತಿಳಿ ಹೇಳುವ ಒಂದು ಸಣ್ಣ ಪ್ರಯತ್ನ ನಮ್ಮದು. ಮುಂದಿನ ವರ್ಷಗಳಲ್ಲಿ ಕನಿಷ್ಟ ಓರ್ವ ಪ್ರತಿಭಾನ್ವಿತ ವಿದ್ಯಾರ್ಥಿಯನ್ನು ಆಯ್ಕೆ ಮಾಡಿ ಅವರ ವರ್ಷದ ಶೈಕ್ಷಣಿಕ ಖರ್ಚನ್ನು ಭರಿಸುವ ಯೋಜನೆ ಸಂಸ್ಥೆಗಿದೆ ಎಂದು ತಿಳಿಸಿ ಸ್ವಾಗತಿಸಿದರು.
2020-21 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ 10 ಮಕ್ಕಳಿಗೆ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ೭ ಮಕ್ಕಳಿಗೆ ಪ್ರತಿಭಾಪುರಸ್ಕಾರ ನೀಡಲಾಯಿತು.
ಮಹಾಪ್ರಬಂಧಕ ಗಣೇಶ್ ಜಿ. ಕೆ. ಕಾರ್ಯಕ್ರಮ ನಿರೂಪಿಸಿದರು. ಹಿರಿಯ ವ್ಯವಸ್ಥಾಪಕಿ ಜ್ಯೋತಿ ಪುರಾಣಿಕ್ ಪ್ರಾರ್ಥಿಸಿ ಸಹಾಯಕ ಮಹಾಪ್ರಬಂಧಕ ಮೋಹನ್ದಾಸ್ ಶೆಟ್ಟಿ ವಂದಿಸಿದರು.