ಸೈಂಟ್ ಫಿಲೋಮಿನಾ ಕಾಲೇಜು-ಕೆದಂಬಾಡಿ ಗ್ರಾಮ ಪಂಚಾಯತ್

0

ಕೆದಂಬಾಡಿ ಗ್ರಾಮ ದತ್ತು ಸ್ವೀಕಾರ ಒಪ್ಪಂದ ವಿನಿಮಯ ಕಾರ್ಯಕ್ರಮ
5 ವರ್ಷಗಳ ಒಪ್ಪಂದ  ಸಮಾಜಮುಖಿ ಕಾರ್ಯಕ್ರಮಗಳು

ಪುತ್ತೂರು: ಸಂತ ಫಿಲೋಮಿನಾ ಕಾಲೇಜು ಪುತ್ತೂರು ರಾಷ್ಟ್ರೀಯ ಸೇವಾ ಯೋಜನೆ ಮತ್ತು ಕೆದಂಬಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇವರ ನಡುವೆ ಕೆದಂಬಾಡಿ ಗ್ರಾಮದ ಸಾಮಾಜಿಕ ಉನ್ನತೀಕರಣ ಹಾಗೂ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಕಳಕಳಿ ಮತ್ತು ಸಾಮಾಜಿಕ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಕೆದಂಬಾಡಿ ಗ್ರಾಮವನ್ನು ದತ್ತು ತೆಗೆದುಕೊಳ್ಳುವ ಬಗ್ಗೆ ಒಪ್ಪಂದ ನಡೆದಿದ್ದು ಇದರ ವಿನಿಯಮ ಕಾರ್ಯಕ್ರಮ ದ.13  ರಂದು ಕೆದಂಬಾಡಿ ಗ್ರಾಪಂ ಸಭಾಂಗಣದಲ್ಲಿ ನಡೆಯಿತು.

ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ರೆ.ಫಾ. ಡಾ.ಆಂಟನಿ ಪ್ರಕಾಶ್ ಮೊಂತೆರೋ, ಕೆದಂಬಾಡಿ ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರ, ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆ, ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜಕ ವಾಸುದೇವ ಎನ್, ಐಕ್ಯೂಎಸಿ ಸಂಯೋಜಕ ಡಾ.ಎ.ಪಿ ರಾಧಾಕೃಷ್ಣರವರುಗಳು ಒಡಂಬಡಿಕೆಗೆ ಸಹಿ ಹಾಕುವ ಮೂಲಕ ಒಪ್ಪಂದ ವಿನಿಮಯ ಮಾಡಿಕೊಳ್ಳಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಂಶುಪಾಲ ಡಾ.ಆಂಟನಿ ಪ್ರಕಾಶ್ ಮೊಂತೆರೋರವರು, ಕೆದಂಬಾಡಿ ಗ್ರಾಮದ ಸನ್ಯಾಸಿಗುಡ್ಡೆಯಲ್ಲಿ ನಮ್ಮ ಕಾಲೇಜಿನ ಎನ್‌ಎಸ್‌ಎಸ್ ಕಾರ್ಯಕ್ರಮ ಮಾಡಿದ್ದ ಸಂದರ್ಭದಲ್ಲಿ ಅಲ್ಲಿನ ಜನರು ತೋರಿದ ಪ್ರೀತಿ , ಆತಿಥ್ಯ, ಗೌರವಾದರಗಳನ್ನು ಕಂಡು ಮನಸ್ಸಿಗೆ ತುಂಬಾ ಖುಷಿ ಆಗಿತ್ತು. ಇಂತಹ ಗ್ರಾಮವನ್ನು ನಾವು ಯಾಕೆ ದತ್ತು ತೆಗೆದುಕೊಳ್ಳಬಾರದು ಎಂದು ಯೋಚಿಸಿ ಈ ನಿರ್ಧಾರಕ್ಕೆ ಬಂದಿದ್ದೇವೆ. ಕಾಲೇಜಿನ ನಿಯಮದ ಚೌಕಟ್ಟು ಹಾಗೂ ಪಂಚಾಯತ್ ನಿಯಮಗಳ ಅಡಿಯಲ್ಲಿ ಕಾರ್ಯಕ್ರಮಗಳನ್ನು ಮಾಡಲಿದ್ದೇವೆ. ಇದರಿಂದ ವಿದ್ಯಾರ್ಥಿಗಳಿಗೆ ಗ್ರಾಮದ ಪರಿಚಯದೊಂದಿಗೆ ಅಲ್ಲಿನ ಜನರ ಜೀವನ ಕ್ರಮ ಹಾಗೂ ಪರಿಸರ ಪ್ರೇಮದಂತಹ ಅನೇಕ ವಿಷಯಗಳನ್ನು ಕಲಿತುಕೊಳ್ಳಲು ಸಾಧ್ಯವಾಗಲಿದೆ ಎಂದ ಪ್ರಕಾಶ್ ಮೊಂತೆರೋರವರು, ನಾವು ಮಣ್ಣಿನ ಹೂಡಿಕೆದಾರರಾಗದೆ, ಮಣ್ಣಿನ ವಾಸನೆಯನ್ನು ಸಂಭ್ರಮಿಸುವ ಮಣ್ಣಿನ ಮಕ್ಕಳಾಗಿ ಬಾಳಬೇಕು, ಮನುಷ್ಯ ಪ್ರಕೃತಿಯಿಂದ ದೂರವಾಗುತ್ತಿದ್ದಾನೆ, ಪ್ರಕೃತಿಯನ್ನು ಪ್ರೀತಿಸುತ್ತಿಲ್ಲ ಆದ್ದರಿಂದ ಇಂದಿನ ದಿನಗಳಲ್ಲಿ ಹವಾಮಾನಗಳಲ್ಲಿ ವೈಪರಿತ್ಯ ಕಾಣುತ್ತಿದೆ. ನಮ್ಮ ಬದುಕು ಖುಷಿಯಿಂದಿರಬೇಕಾದರೆ ನಾವು ಪ್ರಕೃತಿಯನ್ನು ಪ್ರೀತಿಸುವ ವ್ಯಕ್ತಿಗಳಾಗಬೇಕು ಎಂದು ಹೇಳಿದರು.

ಕ್ಯಾಂಪಸ್ ನಿರ್ದೇಶಕ ರೆ.ಫಾ.ಸ್ಟ್ಯಾನಿ ಪಿಂಟೋರವರು ಮಾತನಾಡಿ, ವಿದ್ಯಾರ್ಥಿಗಳಿಗೆ ಗ್ರಾಮದ ಅರಿವಿನೊಂದಿಗೆ ಗ್ರಾಮದ ಜನರೊಂದಿಗೆ ಬೆರೆಯುವ ಮೂಲಕ ಮಾಹಿತಿ ಪಡೆದುಕೊಳ್ಳಲು ಕಾರ್ಯ ಇದರಿಂದ ಆಗಲಿದೆ. ಇದಲ್ಲದೆ ಗ್ರಾಮದ ಜನರಿಗೆ ಮಾಹಿತಿಯನ್ನು ಕೊಡುವ ಕೆಲಸವೂ ನಡೆಯಲಿದೆ ಎಂದರು. ಕೆದಂಬಾಡಿ ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರರವರು ಮಾತನಾಡಿ, ಸರಕಾರದ ಸೌಲಭ್ಯಗಳ ಮಾಹಿತಿಯನ್ನು ಜನರಿಗೆ ನೀಡುವ ಕೆಲಸದೊಂದಿಗೆ ಗ್ರಾಮದ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳುವ ಕೆಲಸ ಈ ಕಾರ್ಯಕ್ರಮದಿಂದ ಆಗಲಿದೆ. ಪ್ರತಿಷ್ಠಿತ ಸಂತ ಫಿಲೋಮಿನಾ ಕಾಲೇಜು ನಮ್ಮ ಗ್ರಾಪಂನೊಂದಿಗೆ ಕೈಜೋಡಿಸಿರುವುದು ನಮಗೆ ಹೆಮ್ಮೆ ತಂದಿಗೆ ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು. ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆರವರು ಮಾತನಾಡಿ, ಸರಕಾರದ ಸವಲತ್ತುಗಳ ಮಾಹಿತಿಯನ್ನು ಗ್ರಾಮಸ್ಥರಿಗೆ ತಲುಪಿಸುವ ಕಾರ್ಯ ಕೂಡ ನಡೆಯಲಿದ್ದು ನಮ್ಮ ಪಂಚಾಯತ್‌ನೊಂದಿಗೆ ಕೈಜೋಡಿಸಿ ಗ್ರಾಮವನ್ನು ದತ್ತು ಪಡೆದುಕೊಂಡು ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.

ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಭಾಸ್ಕರ ರೈ ಮಿತ್ರಂಪಾಡಿ ಉಪಸ್ಥಿತರಿದ್ದರು. ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ವಾಸುದೇವ ಸ್ವಾಗತಿಸಿದರು. ಯಕ್ಷ ಕಲಾ ಕೇಂದ್ರದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ವಿನಯಚಂದ್ರ 5 ವರ್ಷಗಳ ಒಡಂಬಡಿಕೆಯನ್ನು ವಾಚಿಸಿದರು. ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಪುಷ್ಪಾ ಎನ್ ವಂದಿಸಿದರು. ಯಕ್ಷ ಕಲಾ ಕೇಂದ್ರ ಸಂಯೋಜಕ ಪ್ರಶಾಂತ್ ರೈ ಮುಂಡಾಳಗುತ್ತು ಕಾರ್ಯಕ್ರಮ ನಿರೂಪಿಸಿದರು. ವ್ಯವಹಾರ ಆಡಳಿತ ವಿಭಾಗದ ಉಪನ್ಯಾಸಕ ಅಭಿಷೇಕ್ ಸುವರ್ಣ, ಗ್ರಾಪಂ ಕಾರ್ಯದರ್ಶಿ ಸುನಂದ ರೈ ಹಾಗೂ ಗ್ರಾಪಂ ಸಿಬ್ಬಂದಿ ವರ್ಗದವರು, ಕಾಲೇಜು ವಿದ್ಯಾರ್ಥಿಗಳು ಸಹಕರಿಸಿದ್ದರು. ಸಭೆಯಲ್ಲಿ ಗ್ರಾಪಂ ಸದಸ್ಯರುಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕಿಯರು ಭಾಗವಹಿಸಿದ್ದರು.

5 ವರ್ಷಗಳ ಒಡಂಬಡಿಕೆಯ ಉದ್ದೇಶಗಳು
ಗ್ರಾಮೀಣ ಸಮುದಾಯಗಳ ಸಾಮಾಜಿಕ ಆರ್ಥಿಕ ಅಭಿವೃದ್ಧಿ, ನೈಸರ್ಗಿಕ ಸಂಪನ್ಮೂಲಗಳ ಸಮರ್ಪಕ ಬಳಕೆ, ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಅವರ ಅರ್ಹತೆಗೆ ಅನುಗುಣವಾಗಿ ಅವಕಾಶಗಳು ದೊರೆಯುವಂತೆ ಮಾಡುವುದು, ಎಲ್ಲಾ ಸಮುದಾಯದ ಜನರಲ್ಲಿ ಪ್ರಗತಿಪರ ಬದಲಾವಣೆಗಳನ್ನು ಹುಟ್ಟು ಹಾಕಲು, ಸುಸ್ಥಿರ ಅಭಿವೃದ್ಧಿಗಾಗಿ ಸಹಕಾರಿ ಮನೋಭಾವನೆಯನ್ನು ಹೆಚ್ಚಿಸುವ ಮೂಲಕ ಸಮುದಾಯಕ್ಕೆ ಸೇವೆ ಸಲ್ಲಿಸುವುದು, ವಯೋವೃದ್ದರು, ಮಹಿಳೆಯರು, ಮಕ್ಕಳು ಹಾಗೂ ಯುವಕರನ್ನು ಸಬಲೀಕರಣಗೊಳಿಸುವುದು, ಗ್ರಾಮದ ಅಭಿವೃದ್ಧಿಯಲ್ಲಿ ಸುತ್ತುಮುತ್ತಲಿನ ಸಂಸ್ಥೆಗಳೊಂದಿಗೆ ಕೈಜೋಡಿಸುವುದು, ಗ್ರಾಮದ ಅಭಿವೃದ್ಧಿಯ ಹೊಸ ಮಾರ್ಗಗಳನ್ನು ಹಾಗೂ ಮಾದರಿಗಳನ್ನು ದಾಖಲಿಸಲು ಹಾಗೂ ಗ್ರಾಮೀಣ ಸಮಸ್ಯೆಗಳ ಬಗ್ಗೆ ಅನ್ವೇಶಿಸುವುದು ಮೊದಲಾದ ಉದ್ದೇಶಗಳಿವೆ. ಮೂಲಭೂತ ಸೌಕರ್ಯಗಳು ಹಾಗೂ ಸೇವೆಗಳ ಲಭ್ಯತೆಯ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವುದು, ಮಹಿಳೆಯರ, ಮಕ್ಕಳ ಸಮಸ್ಯೆಗಳು, ಸಾಕ್ಷರತೆ, ಆರೋಗ್ಯ ಮುಂತಾದ ವಿಷಯಗಳ ಬಗ್ಗೆ ಅರಿವು ಮೂಡಿಸುವುದು, ಹಕ್ಕುಗಳು ಮತ್ತು ಅರ್ಹತೆಗಳ ಬಗ್ಗೆ ಅರಿವು, ದತ್ತು ಗ್ರಾಮವನ್ನು ಅದರ ಸುತ್ತುಮುತ್ತಲಿನ ಇತರ ಗ್ರಾಮಗಳ ಅಭಿವೃದ್ಧಿಗೆ ಸಂಪನ್ಮೂಲಗಳನ್ನು ಆಕರ್ಷಿಸುವ ಜ್ಞಾನಕೇಂದ್ರ ಅಥವಾ ಮಾದರಿ ಗ್ರಾಮವನ್ನಾಗಿ ಮಾಡುವುದು ಅಲ್ಲದೆ ವೈಯುಕ್ತಿಕ ಅಭಿವೃದ್ಧಿಗಳಲ್ಲಿ ವ್ಯಕ್ತಿಗತ ನೈರ್ಮಲ್ಯಗಳ ಬಗ್ಗೆ ಅರಿವು, ದೈಹಿಕ ಕ್ಷಮತೆಯನ್ನು ಕಾಪಾಡಿಕೊಳ್ಳುವುದು, ಮದ್ಯಪಾನ, ಧೂಮಪಾನ ಇತ್ಯಾದಿ ದುಶ್ಚಟಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದು, ಮೈಕ್ರೋ ಫೈನಾನ್ಸ್ ಮುಂತಾಹ ಹಣಕಾಸು ಸೇವೆಗಳ ಬಗ್ಗೆ ಅರಿವು ಮೂಡಿಸುವುದು ಹಾಗೂ ಸಮುದಾಯ ಅಭಿವೃದ್ಧಿಯಲ್ಲಿ ಕೃಷಿ ಪದ್ದತಿಗಳಲ್ಲಿ ಕೌಶಲ್ಯ ಅಭಿವೃದ್ಧಿ ವೃತ್ತಿಪರ ಮತ್ತು ತಾಂತ್ರಿಕ ತರಬೇತಿ, ನೀರು ಮತ್ತು ನೈರ್ಮಲ್ಯ ನಿರ್ವಹಣೆಯಲ್ಲಿ ಸಮುದಾಯ ಭಾಗವಹಿಸುವುದು, ತಂತ್ರಜ್ಞಾನದ ಸಕ್ರೀಯ ಬಳಕೆಯ ಬಗ್ಗೆ ಅರಿವು ಇತ್ಯಾದಿ ಹಲವು ಉದ್ದೇಶಗಳನ್ನು ಈ ಒಡಂಬಡಿಕೆಯಲ್ಲಿದೆ.

ಕಾರ್ಯಕ್ರಮ ಹೇಗೆ ನಡೆಯುತ್ತದೆ
ಇದು 5 ವರ್ಷಗಳ ಒಪ್ಪಂದ ಆಗಿದ್ದು ಕೆದಂಬಾಡಿ ಗ್ರಾಪಂ, ಎನ್‌ಎಸ್‌ಎಸ್ ಸ್ವಯಂ ಸೇವಕರು ಮತ್ತು ಸಂತ ಫಿಲೋಮಿನಾ ಕಾಲೇಜಿನ ಇತರ ಘಟಕಗಳೊಂದಿಗೆ ಸೇರಿಕೊಂಡು ಸಮಾಜದ ಅಭಿವೃದ್ಧಿಗೋಸ್ಕರ ಹತ್ತು ಹಲವು ಕಾರ್ಯಕ್ರಮಗಳು ನಡೆಯಲಿದೆ. ಇತ್ತಂಡಗಳಲ್ಲಿ ಹಣಕಾಸಿನ ಬಾದ್ಯತೆಗಳು ಇರುವುದಿಲ್ಲ, ಪ್ರತಿಯೊಂದು ಕಾರ್ಯಕ್ರಮಗಳು ಜಂಟಿಯಾಗಿ ಆಯೋಜಿಸಲ್ಪಡುತ್ತದೆ. ತಾರೀಖು 13.12.2022 ರಿಂದ 2.12.2027 ರವರೇಗೆ ಈ ಒಪ್ಪಂದ ಇರಲಿದೆ. 90 ದಿನಗಳ ನೋಟೀಸ್ ಮುಖೇನ ಈ ಒಪ್ಪಂದದಿಂದ ಹಿಂದೆ ಸರಿಯಬಹುದಾಗಿದೆ.

`ಪ್ರತಿಷ್ಠಿತ ಸಂತ ಫಿಲೋಮಿನಾ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಕೆದಂಬಾಡಿ ಗ್ರಾಪಂ ನಡುವೆ ಗ್ರಾಮವನ್ನು ದತ್ತು ತೆಗೆದುಕೊಳ್ಳುವ ಒಪ್ಪಂದ ನಡೆದಿದ್ದು ಖುಷಿ ತಂದಿದೆ. ಇದು 5ವರ್ಷಗಳ ಒಪ್ಪಂದ ಆಗಿದ್ದು ಗ್ರಾಮದ ಅಭಿವೃದ್ಧಿಯೊಂದಿಗೆ ವಿದ್ಯಾರ್ಥಿಗಳ ಜ್ಞಾನಕ್ಕೆ ಪೂರಕವಾಗುವ ಕಾರ್ಯಕ್ರಮಗಳು ನಡೆಯಲಿದೆ. ಫಿಲೋಮಿನಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ತಂಡಕ್ಕೆ ಕೃತಜ್ಞತೆಗಳನ್ನು ಅರ್ಪಿಸುತ್ತೇವೆ.’
ರತನ್ ರೈ ಕುಂಬ್ರ, ಅಧ್ಯಕ್ಷರು ಕೆದಂಬಾಡಿ ಗ್ರಾಪಂ

LEAVE A REPLY

Please enter your comment!
Please enter your name here