ಪುತ್ತೂರು: ಆಕಸ್ಮಿಕವಾಗಿ ಬಾವಿಗೆ ಬಿದ್ದ ವೃದ್ಧೆಯೊಬ್ಬರನ್ನು ಪುತ್ತೂರು ಅಗ್ನಿಶಾಮಕದಳದವರು ರಕ್ಷಣೆ ಮಾಡಿದ ಘಟನೆ ಡಿ.13 ರಂದು ಬಲ್ನಾಡಿನಲ್ಲಿ ನಡೆದಿದೆ.
ಬಲ್ನಾಡು ನಿವಾಸಿ ಬಾಲಕ್ಕ(76 ವ)ರವರು ಬಾವಿಗೆ ಬಿದ್ದ ವೃದ್ದೆ. ಅವರು ಮಧ್ಯಾಹ್ನ ಊಟ ಮಾಡಿದ ಬಳಿಕ ನಾಪತ್ತೆಯಾಗಿದ್ದು, ಮನೆ ಮಂದಿ ಹುಡುಕಾಡಿದಾಗ ಬಾವಿಯ ಹಗ್ಗ ಕೆಳಗೆ ಬಿದ್ದಿರುವುದನ್ನು ಗಮನಿಸಿ ಬಾವಿಯನ್ನು ನೋಡಿದಾಗ ಬಾವಿಯೊಳಗೆ ಅವರು ಬಿದ್ದಿರುವುದು ಬೆಳಕಿಗೆ ಬಂದಿತ್ತು. ತಕ್ಷಣ ಅಗ್ನಿಶಾಮಕದಳದವರಿಗೆ ಮನೆ ಮಂದಿ ಕರೆ ಮಾಡಿದ್ದರು.
ಅಗ್ನಿಶಾಮಕದಳದ ಠಾಣಾಧಿಕಾರಿ ವಿ.ಸುಂದರ್ ಅವರ ನೇತೃತ್ವದಲ್ಲಿ ಪ್ರಮುಖ ಅಗ್ನಿಶಾಮಕ ಲೀಲಾಧರ್, ಅಗ್ನಿಶಾಮಕ ವಾಹನ ಚಾಲಕ ರಾಜೇಶ್ ಕೆ, ಸಿಬ್ಬಂದಿಗಳಾದ ಅಬ್ದುಲ್ ಅಜೀಜ್, ಮಂಜುನಾಥ್ ಪಾಟೀಲ್, ಗೃಹರಕ್ಷಕ ದಳ ಸಿಬ್ಬಂದಿಗಳಾದ ವಿನಯ್ ಕೆ ಮತ್ತು ನಿಖಿಲ್ ರಾಜ್ ಅವರು ಸುಮಾರು 30 ಅಡಿ ಆಳದ ಬಾವಿಯಿಂದ ಬಾಲಕ್ಕ ಅವರನ್ನು ಮೇಲೆತ್ತುವ ಮೂಲಕ ರಕ್ಷಣೆ ಮಾಡಿದ್ದಾರೆ. ಬಳಿಕ ಬಾಲಕ್ಕ ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.